ಶಿಕ್ಷಣ ಮತ್ತು ಸಾಂಸ್ಕೃತಿಕ ಸಾಧಕ ಶ್ರೀಗಣೇಶ ಹೆಗಡೆ

ಅಂಕುರ

 

ಶಿಕ್ಷಣ, ಯಕ್ಷಗಾನ, ಸಾಹಿತ್ಯ, ಭಾಷಣ, ಚರ್ಚಾಕೂಟ ಹೀಗೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಎನಿಸಿಕೊಂಡವರು ಶ್ರೀಗಣೇಶ ಹೆಗಡೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡಿನ ಕೃಷಿ ಕುಟುಂಬದ ಹಿನ್ನೆಲೆಯ ಸುಬ್ರಾಯ ಹೆಗಡೆ ಮತ್ತು ಮಹಾಲಕ್ಷ್ಮೀ ದಂಪತಿಗಳ ಪುತ್ರ ಶ್ರೀಗಣೇಶ ಹೆಗಡೆ ಅಪರೂಪದ ಸಾಧಕರಲ್ಲೊಬ್ಬರು.

ಕುಮಟಾದ ಡಾ.ಎ.ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಬಿಎ‌ಸ್ಸಿ ಪದವಿ ಪಡೆದ ಇವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ (IISER PUNE) ರಸಾಯನಶಾಸ್ತ್ರ ವಿಭಾಗದಲ್ಲಿ ಭಾರತ ಸರ್ಕಾರದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸೂಪರ್ ಕೆಪಾಸಿಟರ್ (super capacitor) ಕುರಿತು ಸಂಶೋಧನೆ ನಡೆಸಲು ಯುವ ಸಂಶೋಧಕ ಮತ್ತು ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರಸ್ತುತ ಪಿಎಚ್‌ಡಿ ಸಂಶೋಧಕನಾಗಿ ಆಯ್ಕೆಯಾಗಿರುವುದು ಇವರ ಹೆಗ್ಗಳಿಕೆ. ಅಲ್ಲದೇ ಆಸಿಯಾನ್ ಒಕ್ಕೂಟದ 10 ರಾಷ್ಟ್ರಗಳ ಜೊತೆ ಭಾರತದ ಸಹಭಾಗಿತ್ವದಲ್ಲಿ ಡೆಂಗ್ಯೂ ವೈರಸ್‌ನ Biosensor ನ ಸಂಶೋಧಕನಾಗಿ ಫಿಲಿಪೈನ್ಸ್ ಹಾಗೂ ಬ್ರೂನೈ ದಾರುಸಲೆಮ್ ರಾಷ್ಟ್ರಗಳಲ್ಲಿನ ಶ್ರೇಷ್ಠ ಪ್ರಯೋಗಾಲಯಗಳಲ್ಲಿ ಸಂಶೋಧನೆ ನಡೆಸಲು ಆಯ್ಕೆಯಾಗಿದ್ದಾರೆ.

ಶಿಕ್ಷಣದ ಜೊತೆಗೆ ಯಕ್ಷಗಾನದಲ್ಲೂ ಆಸಕ್ತಿ ಹೊಂದಿರುವ ಇವರು ಯಕ್ಷಗಾನದ ವೀಕ್ಷಣೆ ಜೊತೆಗೆ ಸ್ವತಃ ಪಾತ್ರವನ್ನು ನಿಭಾಯಿಸಲೂ ಸಿದ್ಧಹಸ್ತರು. ಜೊತೆಗೆ ಲೇಖನ ಬರವಣಿಗೆ, ಸಾಹಿತ್ಯ ಓದು, ಕವನ ರಚನೆ, ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳಲ್ಲಿನ ನಿಗೂಢ ವೈಜ್ಞಾನಿಕ ಸತ್ಯವನ್ನು ಅನ್ವೇಷಣೆ ನಡೆಸುವುದು, ಭಾಷಣ, ಚರ್ಚಾಕೂಟ, ಯೋಗ, ಧ್ಯಾನ, ಚೆಸ್ ಹೀಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

ಪ್ರತಿಯೊಬ್ಬರಿಗೂ ಜೀವನದಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳು, ಉತ್ತಮ ಹವ್ಯಾಸಗಳು ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಣ, ಸಂಶೋಧನೆ ಜೊತೆಗೆ ಬೇರೆ ಬೇರೆ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ ಶ್ರೀಗಣೇಶ ಹೆಗಡೆ.

ಶ್ರೀಮಠದ ಸಂಪರ್ಕ:
ರಾಮಚಂದ್ರಾಪುರ ಮಠದ ಶಾಸನತಂತ್ರದಲ್ಲಿ ಸಂಶೋಧನಾ ಖಂಡದ ಅನುಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರು ಇದೊಂದು ಶ್ರೀಸಂಸ್ಥಾನದವರು ಕರುಣಿಸಿರುವ ವಿಶೇಷ ಅವಕಾಶ ಎನ್ನುತ್ತಾರೆ ಶ್ರೀಗಣೇಶ.

ಭಾರತ ಸ್ಕೌಟ್ಸ್ & ಗೈಡ್ಸ್ ನೀಡುವ ರಾಜ್ಯಮಟ್ಟದ ಅತ್ಯುನ್ನತ ಪ್ರಶಸ್ತಿ “ರೋವರ್ ರಾಜ್ಯ ಪುರಸ್ಕಾರ” ವನ್ನು ರಾಜ್ಯಪಾಲ ವಿ.ಆರ್.ವಾಲಾ ಅವರಿಂದ ಪಡೆದಿದ್ದಲ್ಲದೇ ಈ ಪ್ರಶಸ್ತಿ ಪಡೆದ ಉತ್ತರಕನ್ನಡ ಜಿಲ್ಲೆಯ ಪ್ರಪ್ರಥಮ ಹವ್ಯಕ ಪ್ರತಿಭೆ ಎಂಬ ಅಭಿದಾನವನ್ನೂ ಪಡೆದಿದ್ದಾರೆ. ಭಾರತ ಸ್ಕೌಟ್ಸ್ & ಗೈಡ್ಸ್‌ನ ಜಿಲ್ಲಾಮಟ್ಟದ ನಿಪುಣ್ ಪುರಸ್ಕಾರ, NSS ನ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಅಭಿನಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ದ್ವಿತೀಯ ಸ್ಥಾನ, ಸಹ್ಯಾದ್ರಿ ಯುವ ಪರಿಸರ ವಿಜ್ಞಾನಿ, ಸರ್ವೋತ್ತಮ ವಿದ್ಯಾರ್ಥಿ ಪ್ರಶಸ್ತಿ, ಜಿಲ್ಲಾ ಯುವಜನ ಮೇಳ ಪ್ರಶಸ್ತಿ, ಶರಾವತಿ ಉತ್ಸವ ಸಾಧನಾ ಸಮ್ಮಾನ, ರಾಮಚಂದ್ರಾಪುರ ಮಠದ ಶೀರಾಘವೇಶ್ವರ ಶ್ರೀಗಳಿಂದ ಎರಡು ಬಾರಿ ಪ್ರತಿಭಾ ಪುರಸ್ಕಾರ, ಡಾ.ಎ.ವಿ.ಬಾಳಿಗಾ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಂದರ್ಭದಲ್ಲಿ ನಾಲ್ಕು ಬಾರಿ ಗೌರವ ಸನ್ಮಾನ ಹೀಗೆ ಹಲವಾರು ಪ್ರಶಸ್ತಿ- ಗೌರವಗಳು ಇವರಿಗೆ ಸಂದಿವೆ.

Author Details


Srimukha

Leave a Reply

Your email address will not be published. Required fields are marked *