ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ ೧

ಅರಿವು-ಹರಿವು
ನಮ್ಮ ತಾಯ್ನಾಡು ಭಾರತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾರತಾಂಬೆಯ ಮಕ್ಕಳಾದ ನಮಗೆ ನಮ್ಮ ಶ್ರೇಷ್ಠತೆ ಯಾವುದರಿಂದ ಎಂಬ ಸ್ವಸ್ವರೂಪದ ಅರಿವು ಅತ್ಯಮೂಲ್ಯವಲ್ಲವೇ? ಈ  ಸ್ವಸ್ವರೂಪದ ಅರಿವು ಮೂಡಬೇಕಾದರೆ ಗುರುವೊಬ್ಬ ಬೇಕು ಎಂಬುದು ನಮಗೆಲ್ಲ ಅರಿತ ವಿಚಾರ. ಈ ಒಬ್ಬ ಗುರುವಿನಿಂದ *ಅರಿವು* ಪರಂಪರಾನುಗತವಾಗಿ ತನ್ನ ಪರ್ಯಾಯವೇ ಎಂಬಂತೆ ಮತ್ತೊಂದು ದೇಹ, ಜೀವದ ಮುಖಾಂತರ ಹೇಗೆ ಹರಿದು ಭಾರತೀಯರನ್ನು  ‘ಭಾ'(ಬೆಳಕು)ದೆಡೆಗೆ ನಡೆಸುತ್ತಿದೆ ಎಂದು ಅವಲೋಕಿಸುವುದಕ್ಕಾಗಿ ನಮ್ಮದೊಂದು ಪುಟ್ಟ ಪ್ರಯತ್ನ  *”ಅವಿಚ್ಛಿನ್ನ ಗುರುಪರಂಪರೆಯ ಅರಿವು –  ಹರಿವು”*
ಈ ಅರಿವು ಹೇಗೆ ಅವಿಚ್ಛಿನ್ನವಾಗಿ ಹರಿಯುತ್ತಾ ಬಂದಿತು ಎಂದು ಅವಲೋಕಿಸುವಾಗ ಅರಿವಿನ ಹರಿವಿನ ಆದಿ ಎಲ್ಲಿಂದಾಯಿತು ಮತ್ತು ಯಾವ ಮಹಾಪುರುಷನಿಂದ ಆಯಿತು ಎಂಬೆಲ್ಲ ಪ್ರಶ್ನೆಗಳು ಉದ್ಭವಿಸುವುದು ಸಹಜವಲ್ಲವೇ? ಹೌದು,
ಎಲ್ಲಕ್ಕೂ ಒಂದು ಆರಂಭ ಇರಲೇಬೇಕು… ಅದೇ ಆ ಕೊಂಡಿಯ ಆದಿ ಎಂದು ಕರೆಸಿಕೊಳ್ಳುತ್ತದೆ. ಸಾಮಾನ್ಯ ವಿಷಯಗಳಿಗೂ ಮೂಲ ಎನ್ನುವುದು ಇದ್ದೇ ಇರಬೇಕು. ಮೂಲವನ್ನು ಮರೆಯದೇ  ಮರಳಿ ಅಲ್ಲಿಗೇ ತಲುಪಿದರೆ ಅದು ಪೂರ್ಣವಾದಂತೆ.
ಹಾಗೆ ಮೂಲವೆಂದರೆ ‘ಅರಿವು’ ಎಂದರ್ಥ. ಗುರುಪರಂಪರೆಗೂ ಹಾಗೆಯೇ… ಎಲ್ಲ ಗುರುಗಳೂ ಒಂದೇ ನಾರಾಯಣ ಸ್ವರೂಪವೇ ಆಗಿದ್ದಾರೆ. ಹಾಗಾಗಿ ಗುರುಪರಂಪರೆಯ ಮೊದಲ ಕೊಂಡಿಯಾದ ಆದಿ ಮೂಲನಾದ ಅನಾದಿಮಧ್ಯನಿಧನನಾದ ಪರಮ ಪುರುಷನಾದ ಶ್ರೀಮನ್ನಾರಾಯಣನೇ ಮೊದಲ ಸ್ಮರಣೆಗೆ ಕಾರಣನಾಗುತ್ತಾನೆ. ಇದಕ್ಕೆ ಕಾರಣ  ಶ್ವೇತಾಶ್ವತರೋಪನಿಷತ್ತಿನಲ್ಲಿ ಉಲ್ಲೇಖಿಸಿರುವಂತೆ “यो ब्रह्माणं विदधाति पूर्वं
यो वै वेदांश्च प्रहिणोति तस्मै “
 ಹೀಗೆ ಶ್ರೀಮನ್ನಾರಾಯಣನು ವೇದರಾಶಿಯನ್ನು ಬ್ರಹ್ಮನಿಗೆ ನೀಡಿ ಗುರುವಾದ. ವೇದವೆಂದರೆ ಅರಿವು, ಜ್ಞಾನ. ಅದೇ ಪೂರ್ಣದಿಂದ ಬೇರ್ಪಟ್ಟ ನಮ್ಮನ್ನು ಧರ್ಮವೆಂಬ ಸರಿದಾರಿಯಲ್ಲಿ ನಡೆದು ಮರೆತ ಅರಿವನ್ನು ಹುಡುಕಿ ಕೊಡುವ ದಾರಿದೀವಿಗೆ. ಈ ದಾರಿದೀವಿಗೆ, ವೇದ ಅಥವಾ ಬೆಳಕು ಅಥವಾ ಜ್ಞಾನ ಅಥವಾ ಅರಿವು ಅವಿಚ್ಛಿನ್ನವಾಗಿ ವಸಿಷ್ಠರ ರೂಪದಲ್ಲಿ ನಂತರ ಶಕ್ತಿ, ಪರಾಶರ, ವ್ಯಾಸ, ಶುಕ, ಗೌಡಪಾದರು ಅವರ ತರುವಾಯು ಗೋವಿಂದ ಭಗವತ್ಪಾದರು, ಶಂಕರಾಚಾರ್ಯರು ನಂತರದಲ್ಲಿ ಇದು ಬಹುಸಂಖ್ಯೆಯ ಮುನಿಶ್ರೇಷ್ಠರ ಮುಖಾಂತರ ಕವಲುಗಳಾದರೂ ಅವಿಚ್ಛಿನ್ನವಾಗಿ  ಹರಿಯುತ್ತಾ ಇಂದಿಗೂ ಪ್ರಸ್ತುತವಾಗಿ ಭಾರತೀಯರಿಗೆ ವರದಾನವಾಗಿದೆ. ಈ ಅವಿಚ್ಛಿನ್ನ ಗುರುಪರಂಪರೆಯ ಅರಿವಿನ ಹರಿವನ್ನು ಮುಂದಿನ ಸಂಚಿಕೆಯಲ್ಲಿ ಹರಿಸುವ…

Author Details


Srimukha

Leave a Reply

Your email address will not be published. Required fields are marked *