ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೧

ಅರಿವು-ಹರಿವು
ಅರಿವಿನ ಅವಿಚ್ಛಿನ್ನ ಹರಿವಿಗೆ ಪೂರಕವಾದ ಗುರುಪರಂಪರೆಯ ಮುಂದುವರಿಕೆಗೆ ಸಾಧನಾ ತಂತಿಯಾಗಿ ಶಿಷ್ಯಶ್ರೇಷ್ಠರನ್ನು ಆಚಾರ್ಯ ಶಂಕರರು ಆಯ್ದು ಸಮಾಜಕ್ಕೆ ಅವರನ್ನು ಗುರುವಾಗಿ ಒದಗಿಸಿಕೊಟ್ಟಿದ್ದನ್ನು ಈ ಹಿಂದಿನ ಸಂಚಿಕೆಗಳಲ್ಲಿ ಅವಲೋಕಿಸಿದೆವು. ಇಂದು, ಅರಿವಿನ ಪರಂಜ್ಯೋತಿ ಪ್ರಾಪ್ತಿಗೆ ನೇರವಾಗಿ ಸಮಾಜದ ಎಲ್ಲ ವರ್ಗಗಳಿಗೂ, ಪ್ರತಿಯೊಬ್ಬನಿಗೂ ಅನುಕೂಲವಾಗುವಂತೆ  ಸಾಧನಾ ಮಾರ್ಗವಾಗಿ ಶಂಕರರು ರಚಿಸಿಕೊಟ್ಟ ರಚನೆಗಳನ್ನು ನೋಡೋಣ.
ಬಹುಕಷ್ಟಸಾಧ್ಯ ಗ್ರಾಹ್ಯವಾದ ಅದ್ವೈತಸಿದ್ಧಾಂತವನ್ನು ಅರ್ಥೈಸಿ ಸಾಕ್ಷಾತ್ಕಾರಗೊಳಿಸಲು ಯೋಗ್ಯವಾದ ರಚನೆಗಳನ್ನು ರಚಿಸಿದರು. ಬ್ರಹ್ಮಸೂತ್ರ ಭಾಷ್ಯ, ಭಗವದ್ಗೀತೆಗೆ ಭಾಷ್ಯ ಮಹಾಮೇರು ರಚನೆಗಳಾದರೆ ಇನ್ನೂ
ಕೆಲವಾದ ಅದ್ವೈತ ಪಂಚರತ್ನಂ ( ಆತ್ಮ ಪಂಚಕ),  ಅದ್ವೈತಾನುಭೂತಿ, ಅನಾತ್ಮ ಶ್ರೀ ನಿಗರ್ಹಣಂ, ಅಪರೋಕ್ಷಾನುಭೂತಿಃ, ನಿರ್ವಾಣಾಷ್ಟಕಂ, ಜೀವನ್ಮುಕ್ತಾನಂದ ಲಹರೀ, ತತ್ವಬೋಧ, ತತ್ವೋಪದೇಶ, ನಿರ್ಗುಣ ಮಾನಸಪೂಜಾ, ನಿರ್ವಾಣ ಮಂಜರೀ, ಪಂಚೀಕರಣಂ, ಪ್ರಬೋಧ ಸುಧಾಕರ,  ಭಜಗೋವಿಂದಂ,  ಮುಖ್ಯವಾದವುಗಳು.
ಮುಕ್ತಿಗೆ [ ಅರಿವಿನ(ಆನಂದದ) ಪ್ರಾಪ್ತಿಗೆ] ಜ್ಞಾನವೇ ಕಾರಣವಾದರೂ, ಭಕ್ತಿ ಕರ್ಮಗಳು ಸಹ ಒಂದೊಂದು ತರಹದ ಸಾಧನಾ ಪಥವೇ.. ಆದರೆ ಭಕ್ತಿಮಾರ್ಗ, ಕರ್ಮಮಾರ್ಗವು ಜ್ಞಾನಮಾರ್ಗದಲ್ಲೇ ಪರ್ಯವಸಾನವಾಗಿ ಪರಬ್ರಹ್ಮ ನಿರಾಮಯತ್ವಕ್ಕೆ ಕರೆದೊಯ್ಯುವುದರಿಂದ ರಜ-ತಮ ಪ್ರಕೃತಿಂಗಳಿಗೂ ಸುಖಸಾಧ್ಯವಾಗಲಿ ಎಂಬಂತೆ  ಭಕ್ತಿಭಾವ ಪ್ರಚೋದಕ ಹಲವು ರಚನೆಗಳನ್ನು ರಚಿಸಿದರು. ಈ ಹಲವುಗಳಲ್ಲಿ ಕೆಲವುಗಳನ್ನು ನಾವು ಉಲ್ಲೇಖಿಸುತ್ತಿದ್ದೇವೆ. ಅಚ್ಯುತಾಷ್ಟಕ, ಅನ್ನಪೂರ್ಣಾ ಕವಚ, ಅನ್ನಪೂರ್ಣಾ ಸ್ತೋತ್ರ, ಅರ್ಧನಾರೀಶ್ವರ ಸ್ತೋತ್ರ, ಆಂಜನೇಯ ಭುಜಂಗ ಪ್ರಯಾತ ಸ್ತೋತ್ರ, ಆದಿಶಂಕರ ಪೂಜಾವಿಧಿ, ಉಮಾಮಹೇಶ್ವರ ಸ್ತೋತ್ರ, ಕನಕಧಾರಾ ಸ್ತೋತ್ರ, ಕಾಮಾಕ್ಷಿ ಸ್ತೋತ್ರ, ಕಾಲಭೈರವಾಷ್ಟಕ, ಕಾಳಿಕಾಷ್ಟಕ, ಕಾಶಿ ವಿಶ್ವನಾಥ ಸ್ತೋತ್ರ, ಕೃಷ್ಣಾಷ್ಟಕಂ ಶ್ರೀಕೃಷ್ಣತಾಂಡವ ಸ್ತೋತ್ರಂ ಕೃಷ್ಣಕೃಪಾಕಟಾಕ್ಷ ಸ್ತೋತ್ರಂ ಚ , ಗಂಗಾಷ್ಟಕಂ, ಗಣಪತಿ ಸ್ತೋತ್ರಂ, ಗಣೇಶ ಪಂಚರತ್ನ ಸ್ತೋತ್ರಂ, ಗಣೇಶ ಭುಜಂಗಂ, ಗೀತಾರಹಸ್ಯಂ, ಗುರುಭುಜಂಗ ಸ್ತೋತ್ರಂ, ಗುರ್ವಷ್ಟಕಂ, ಗೋವಿಂದಾಷ್ಟಕಂ, ಗೌರೀದಶಕಂ, ಸೌಂದರ್ಯ ಲಹರೀ, ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ ಇತ್ಯಾದಿಗಳು… ಬದುಕಿನಲ್ಲಿ ಬರುವ ಕರ್ತವ್ಯ – ಅಕರ್ತವ್ಯಗಳ ಸಂದಿಗ್ಧತೆಯನ್ನು ನಿವಾರಿಸುವ ಅರಿವನ್ನೀಯುವ ಸಾಧನಾ ಪಂಚಕವನ್ನೂ ರಚಿಸಿದರು.
ತ್ರಿಕಾಲ ಜ್ಞಾನಿಗಳಾದ, ದೂರದರ್ಶಿಗಳಾದ ಶಂಕರರಿಗೆ ಕಲಿಗಾಲದ ಮುಂದುಮುಂದಿನ ದಿನಗಳ ಅವಸ್ಥೆಯ ಅರಿವಿದ್ದಿದ್ದರಿಂದ ಅರಿವಿನ ಅವಿಚ್ಛಿನ್ನ ಹರಿವಿಗೆ ಹೆಚ್ಚು ತಡೆ ಬರಬಾರದು ಎಂಬಂತೆ ಮತ್ತು ಸಮಾಜವು ಒಂದು ಗುರುತ್ವದಡಿಯ ಶಿಷ್ಯತ್ವದಲ್ಲಿನ ಸುವ್ಯವಸ್ಥಿತ ಚೌಕಟ್ಟಿನೊಳಗೆ ಬೆಳೆದು ಸದಾ ಹಸಿರಾಗಿರಲಿಕ್ಕೋಸ್ಕರ ಮಠ ಎಂಬ ವ್ಯವಸ್ಥೆಯನ್ನು ಸ್ಥಾಪಿಸಿದ್ದಲ್ಲದೇ ಅದರ ಸರಾಗ ನೆಡಿಗೆಗೆ ಪೂರಕವಾಗಿ ಮಠಾಮ್ನಾಯ ಎಂಬ ಕೃತಿಯನ್ನು ರಚಿಸಿದರು. ಒಟ್ಟಿನಲ್ಲಿ  ‘ಏಕೋಬ್ರಹ್ಮ ದ್ವಿತೀಯೋರ್ನಾಸ್ತಿ’ ಎಂದು ಪ್ರತಿಪಾದಿಸುವ ಅದ್ವೈತ ಸಿದ್ಧಾಂತದಿಂದ ಅರಿವನ್ನು  ಪ್ರಚೋದಿಸಿದರು. ‘ಅಹಂ ಬ್ರಹ್ಮಾಸ್ಮಿ’ (ಯಜುರ್ವೇದದಿಂದ), ‘ಪ್ರಜ್ಞಾನಂ ಬ್ರಹ್ಮ’ (ಋಗ್ವೇದದಿಂದ), ‘ಅಯಮಾತ್ಮಾ ಬ್ರಹ್ಮ’ (ಅಥರ್ವವೇದದಿಂದ)  ಎತ್ತಿಹಿಡಿದರು. ಹೀಗೆ ಆಚಾರ್ಯ ಶಂಕರರು ಅರಿವಿನ ಬೆಳಕನ್ನು ಸುಸ್ಪಷ್ಟವಾಗಿ ತೋರುವಂತೆ ಮಾಡಿದರು ಎಂಬಲ್ಲಿಗೆ  ಆಚಾರ್ಯ ಶಂಕರರ ಕುರಿತ ವಿಷಯಗಳನ್ನು ಈ ಸಂಚಿಕೆಯೊಂದಿಗೆ ಸಮಾಪ್ತಿಗೊಳಿಸುತ್ತಿದ್ದೇವೆ.

Author Details


Srimukha

Leave a Reply

Your email address will not be published. Required fields are marked *