ತುಳುವನ್ನು ರಾಜ್ಯ ಭಾಷೆಯನ್ನಾಗಿಸಲು ಪ್ರಯತ್ನ : ವೇದವ್ಯಾಸ ಕಾಮತ್

ವಿದ್ಯಾಲಯ

ತುಳು ಸಾಹಿತ್ಯ ಆಕಾಡೆಮಿ ರೂಪಿಸಿದ ವಿವಿಧ ಯೋಜನೆಗಳಿಗೆ ಸರಕಾರ ಬೆಂಬಲ ನೀಡಲಿದೆ. ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿಸುವ ಬಗ್ಗೆ ಸರಕಾರ ಅನುಮೋದಿಸಲಿದೆ. ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಸಮಯವೂ ಹತ್ತಿರ ಬಂದಿದೆ. ತುಳು ಭಾಷೆಯ ಬೆಳವಣಿಗೆಗೆ ಸರ್ವರ ಸಹಕಾರ ಬೇಕು. ಸಂಪ್ರದಾಯಗಳನ್ನು, ತುಳು ನಾಡಿನ ಸಾಧಕ ಮಹನೀಯರ ಹೆಸರನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

 

ಅವರು ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ರಂಗ ಮಂದಿರದಲ್ಲಿ ಉದಿಪು 2020 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.

 

ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುಳುನಾಡ ಉತ್ಸವವನ್ನು ನಡೆಸಲು ಒಪ್ಪಿದ್ದಾರೆ. ಇನ್ನು ಮುಂದೆ ಕರಾವಳಿ ಉತ್ಸವದ ಬದಲಾಗಿ ತುಳುನಾಡ ಉತ್ಸವವೇ ನಡೆಯಲಿದೆ. ಈ ಬಾರಿ ಪ್ರಾಕೃತಿಕ ವಿಕೋಪಕ್ಕೆ ಅನುದಾನ ನೀಡಬೇಕಾಗಿದ್ದುದರಿಂದ ಅಕಾಡೆಮಿಗೆ ಒದಗಿಸಬೇಕಾದ 80 ಲಕ್ಷ ರೂ ಅನುದಾನವನ್ನು ಕಡಿತಗೊಳಿಸಿ 50 ಲಕ್ಷಕ್ಕಿಳಿಸಲಾಗಿದೆ. ಮುಂದಿನ ಸಾಲಿನಲ್ಲಿ ಅಕಾಡೆಮಿಗೆ 1 ಕೋಟಿ ರೂ.ಅನುದಾನ ನೀಡಬೇಕೆಂದು ವಿನಂತಿಸಿದ್ದೇವೆ. ಶಾಲೆಗಳಲ್ಲಿ ತುಳು ಲಿಪಿ ಕಲಿಸಲು ವ್ಯವಸ್ಥೆ ಮಾಡಲಾಗಿದೆ. ತುಳು ಭಾಷೆಯನ್ನು ರಾಜ್ಯ ಭಾಷೆಯನ್ನು ಮಾಡಬೇಕೆಂದು ಒತ್ತಾಯಿಸಲಾಗಿದೆ. ಗೋವು ಇಲ್ಲದಿದ್ದರೆ ಸಂಸ್ಕೃತಿ ನಾಶವಾಗುತ್ತದೆ. ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗೋವನ್ನು ಉಳಿಸುವ ನಿಟ್ಟಿನಲ್ಲಿ ಮಹತ್ತರ ಕಾರ್ಯ ಮಾಡಿರುವುದು ಶ್ರೇಷ್ಠವಾಗಿದೆ  ಎಂದು ಹೇಳಿದರು.

 

ಲಿಪಿ ಇದ್ದರೂ ತುಳು ರಾಜ್ಯ ಭಾಷೆಯಾಗಲಿಲ್ಲ :

ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅವರು ಮಾತನಾಡಿ, ಇಂಗ್ಲಿಷ್ ಭಾಷೆಗೆ ಲಿಪಿಯಿಲ್ಲ. ರೋಮನ್ ಲಿಪಿಯಿದ್ದರೂ ಜಗತ್ತಿನಲ್ಲೇ ಮಾತನಾಡುಲಾಗುತ್ತದೆ. ಕನ್ನಡಕ್ಕೆ ಲಿಪಿಯಿದೆ. ಕ್ಯಾಲೆಂಡರ್ ಭಾಷೆ ಇಲ್ಲ. ಆದರೆ ರಾಜ್ಯಭಾಷೆಯಾಗಿದೆ. ಕೊಂಕಣಿಗೆ ಲಿಪಿಯಿಲ್ಲ. ರಾಜ್ಯ ಭಾಷೆಯಾಗಿದೆ. ದೇವನಾಗರಿ ಲಿಪಿಯಿದೆ, ಕ್ಯಾಲೆಂಡರ್ ಭಾಷೆಯಿಲ್ಲ. ಆದರೂ ನಾವೆಲ್ಲರೂ ಈ ಭಾಷೆಗಳ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ತುಳುವಿಗೆ ಲಿಪಿಯಿದ್ದರೂ ರಾಜ್ಯ ಭಾಷೆಯಾಗಲಿಲ್ಲ. ೮ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಹೋರಾಟ ಮಾಡಬೇಕಾಗಿ ಬಂದಿರುವುದು ದುರಂತ ಎಂದರು.

 

ಮಂಗಳೂರು ಮಹಾನಗರಪಾಲಿಕೆ ಸದಸ್ಯೆ ಶಕೀಲಾ ಕಾವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಉದಿಪು ಕಾರ್ಯಕ್ರಮ ಭಾಷೆಯ ಉಳಿವಿಗಾಗಿ ಅತ್ಯಂತ ಮುಖ್ಯವಾಗಿದೆ. ಶ್ರೀ ಭಾರತೀ ಸಮೂಹ ಸಂಸ್ಥೆಯು ಈ ಬಗ್ಗ್ಗೆ ವಿಶೇಷ ಕಾಳಜಿ ವಹಿಸಿರುವುದು ವಿಶೇಷವಾವಾಗಿದೆ. ಇದು ಅನುಕರಣೀಯ. ತುಳು ಅಕಾಡೆಮಿಯ ಸಹಕಾರ ನೀಡಿದ್ದು ಅರ್ಥಪೂರ್ಣ. ಮುಂದಿನ ವರ್ಷ ಇದನ್ನು ನಡೆಸಬೇಕು. ನಾವೆಲ್ಲರೂ ಇದಕ್ಕೆ ಹೆಚ್ಚಿನ ಸಹಕಾರ ನೀಡಲು ಸಿದ್ಧ ಎಂದರು.

 

ಹುಬ್ಬಳ್ಳಿ ಅನನ್ಯ ಫೀಡ್ಸ್ ಮಾಲಕ ದಿವಾಣ ಗೋವಿಂದ ಭಟ್, ತುಳು ಅಕಾಡೆಮಿ ಸದಸ್ಯ ನಾಗೇಶ್ ಕುಲಾಲ್, ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಆಡಳಿತಾಧಿಕಾರಿ ಪ್ರೊ.ಕೆ.ಶಂಕರ ಭಟ್ ಉಪಸ್ಥಿತರಿದ್ದರು.

 

ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್‌ದಾಸ್ ಸ್ವಾಗತಿಸಿದರು. ಕಲಾಭಾರತಿ ಸಂಯೋಜಕ ಪ್ರವೀಣ್ ಪಿ. ಪ್ರಸ್ತಾಪಿಸಿದರು. ಉಪಪ್ರಾಂಶುಪಾಲರಾಧ ಗಂಗಾರತ್ನ ಮುಗುಳಿ ಮತ್ತು ಉಪನ್ಯಾಸಕ  ಅಶೋಕ್ ಎಸ್. ನಿರೂಪಿಸಿದರು. ಕಲಾಭಾರತಿ ಕಾರ್ಯದರ್ಶಿ ಮಿಥುನ್‌ರಾಜ್ ವಂದಿಸಿದರು.

 

ಬಳಿಕ ಜಿಲ್ಲೆಯ 30 ಪದವಿ ಕಾಲೇಜುಗಳ 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತುಳುನಾಡ ಐಸಿರೊ, ಪದರಂಗೀತ, ಸಬಿಸವಾಲ್, ಚಿತ್ರಮಂಟಮೆ ಮತ್ತು ಬಿರ್ಸಾದಿಗೆದ ಕಜ್ಜೊ ಎಂಬ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪೂರ್ಣಕುಂಭ, ಚೆಂಡೆ ಮತ್ತು ನಾಸಿಕ್ ವಾದನಗಳೊಂದಿಗೆ ಆಕರ್ಷಕ ಮೆರವಣಿಗೆ, ಸೆಲ್ಫಿ ಕಾರ್ನರ್, ಸಿರಿಗಳಿಂದ ಅಲಂಕೃತ ದ್ವಾರಗಳು, ಶುಚಿರುಚಿಯಾದ ತುಳು ಸಂಸ್ಕೃತಿ ಆಹಾರಗಳನ್ನೊಳಗೊಂಡ ಊಟ, ತಿಂಡಿ, ಉಪಾಹಾರ ಅತಿಥಿ ಅಭ್ಯಾಗತರ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳ ಹೃಣ್ಮನವನ್ನು ಗೆದ್ದಿತು.

Author Details


Srimukha

Leave a Reply

Your email address will not be published. Required fields are marked *