ಮಾತೆಯರು ಗೋಸ್ವರ್ಗದ ಆಧಾರಸ್ಥಂಭವಾಗಬೇಕು ; ಶ್ರೀಸಂಸ್ಥಾನ

ಶ್ರೀಸಂಸ್ಥಾನ

ಸಿದ್ದಾಪುರ : ಯಾರೋ ಮೂರುಜನ ಕೋಟ್ಯಧೀಶರಿಂದ ಗೋಸ್ವರ್ಗವನ್ನು ನಡೆಸುವಂತಾಗಬಾರದು. ಗೋಸೇವೆಯಲ್ಲಿ ಹಣದ ಅಪೇಕ್ಷೆಗಿಂತ ಎಲ್ಲರ ಸಹಭಾಗಿತ್ವ ಮುಖ್ಯವಾಗಿರಬೇಕು. ಗೋಸ್ವರ್ಗ ನಿರ್ಮಾಣದಲ್ಲಲ್ಲದೇ ಅದರ ನಿರ್ವಹಣೆಯಲ್ಲೂ ಮಾತೆಯರು ಪಾಲ್ಗೊಳ್ಳುವ ಮೂಲಕ ಗೋಮಾತೆಯ ಸೇವೆಗೆ ಅಣಿಯಾಗಬೇಕು, ಗೋಸ್ವರ್ಗದ ಆಧಾರಸ್ಥಂಭ ಮಾತೆಯರಾಗಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಶ್ರೀಗಳು ಹೇಳಿದ್ದಾರೆ.

 

ತಾಲೂಕಿನ ಭಾನ್ಕುಳಿಯ ಗೋಸ್ವರ್ಗದಲ್ಲಿ ಸಿದ್ದಾಪುರ, ಸಾಗರ, ರಾಮಚಂದ್ರಾಪುರ, ಕುಮಟಾ ಹಾಗೂ ಹೊನ್ನಾವರ ಮಂಡಲಗಳ ಸುರಭಿ ಸೇವಿಕೆಯರ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾರ್ಗದರ್ಶನ, ಆಶೀರ್ವಚನ ನೀಡುತ್ತಿದ್ದರು.

 

ಗೋವುಗಳು ಸ್ವಚ್ಛಂದವಾಗಿ ಬದುಕುವ ಜಗತ್ತಿನ ಏಕಮೇವ ಗೋಸ್ವರ್ಗವಾಗಿ ಈ ತಾಣ ತಲೆಯೆತ್ತಿದೆ. ಇಲ್ಲಿ ಇರುವುದು ಉಳಿದರೆ ಕ್ಷೇಮ, ಹೊಸದು ಬಂದರೆ ಯೋಗ. ಹೀಗಾಗಿ ಗೋಸ್ವರ್ಗಕ್ಕೆ ಸ್ಪಂದಿಸುತ್ತಿರುವವರನ್ನು ಉಳಿಸಿಕೊಳ್ಳಿ, ಹೊಸಬರನ್ನು ಸೇರಿಸಿಕೊಳ್ಳಿ. ಹೆಚ್ಚಿನ ಶಿಷ್ಯ ಭಕ್ತರನ್ನು, ಸಮಾಜವನ್ನು ಸಂಪರ್ಕಿಸಿ. ಅವರಲ್ಲಿ ಹಣ ಕೇಳಬೇಡಿ. ಅವರು ಸ್ವತ: ಬಂದು ಇಲ್ಲಿಯ ದಿವ್ಯತೆ ಅನುಭವಿಸುವಂತಾಗಲಿ. ಹಣ ಸಂಗ್ರಹದಷ್ಟೇ ಅವರ ಆಗಮನವೂ ಮುಖ್ಯ. ಈ ಹಿನ್ನೆಲೆಯಲ್ಲಿ ಮಾತೆಯರು ಸಂಪರ್ಕ ಸೇತುವಾಗಬೇಕು ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು. ಇನ್ನು ಕೆಲವೇ ದಿವಸಗಳಲ್ಲಿ ಗೋಸ್ವರ್ಗ ತುಂಬಿ ತುಳುಕುವುದು ನಿಶ್ಚಿತ. ಇಲ್ಲಿ ಉಳಿದಿದ್ದನ್ನು ಹೊಸಾಡ ಗೋಶಾಲೆ ಹಾಗೂ ಇನ್ನಿತರ ಗೋ ಶಾಲೆಗಳಿಗೆ ಹಂಚೋಣ. ಒಟ್ಟಾರೆ ಎಲ್ಲೆಡೆಯೂ ಗೋ ಸೇವೆ ನಡೆಯಬೇಕು, ಸಹಸ್ರ ಸುರಭಿ ಸೇವಕಿಯರು ಈ ಕಾರ್ಯಕ್ಕೆ ಸನ್ನದ್ಧರಾಗಬೇಕು ಎಂದು ಕರೆನೀಡಿದ ಶ್ರೀಗಳು ಸಕಲರಿಗೂ ಒಳಿತಾಗಲೆಂದು ಹರಸಿದರು.

 

ಈ ಸಂದರ್ಭದಲ್ಲಿ ಗೋಸ್ವರ್ಗದಲ್ಲಿ ವಿ|| ಅಡವಿತೋಟ ಕೃಷ್ಣ ಭಟ್ಟರ ಅಧ್ವರ್ಯದಲ್ಲಿ, ಸಹಋತ್ವಿಜರ ಸಹಕಾರದಲ್ಲಿ ನವಚಂಡಿ ಹವನ ಜರುಗಿತು. ಕಾರ್ಯಕ್ರಮಗಳಲ್ಲಿ ಮಹಾಮಂಡಲದ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಗೋಸ್ವರ್ಗ ಸಂಸ್ಥಾನದ ಆರ್.ಎಸ್.ಹೆಗಡೆ ಹರಗಿ, ಗಣಪತಿ ಹೆಗಡೆ ಮೂಗಿಮನೆ, ಮಹಾಮಂಡಲ ಮಾತೃಪ್ರಧಾನೆ ಕಲ್ಪನಾ ತಲವಾಟ, ಸಿದ್ದಾಪುರ ಮಂಡಲ ಮಾತೃಪ್ರಧಾನೆ ವೀಣಾ ಭಟ್ಟ ಶಿರಸಿ, ಅನುರಾಧಾ ಪಾರ್ವತಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸುರಭಿ ಸೇವಕಿಯರು, ಶಿಷ್ಯ ಭಕ್ತರು ಪಾಲ್ಗೊಂಡಿದ್ದರು.

Author Details


Srimukha

Leave a Reply

Your email address will not be published. Required fields are marked *