ಸ್ವಾನುಭವ – ಶ್ರೀಮತಿ ಅನ್ನಪೂರ್ಣಾ ಕುಳಮರ್ವ

ಸ್ವಾನುಭವ

ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ಚ ಸಖಾ ತ್ವಮೇವ|
ತ್ವಮೇವ‌ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ||

ಮೊಟ್ಟಮೊದಲು ಗುರುವೂ ರಾಮನೂ ಅದ್ವೈತವಾದ ಶ್ರೀಪೀಠಕ್ಕೆ ಕೋಟಿ ಕೋಟಿ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಗುರುಕರುಣಾವರಣದೊಳಿರುವ ಅನ್ನಪೂರ್ಣಾ ಆದ ನಾನು ಮತ್ತೊಮ್ಮೆ ಗುರುಪದಕ್ಕೆ ಬರೆಯುತ್ತಿದ್ದೇನೆ. ಈ ಬರಹದಿಂದ ಗುರುಪೀಠಕ್ಕೆ ಸಂತೋಷ ಆಗಬಹುದೆಂಬ ವಿಶ್ವಾಸ ನನ್ನದು. ಇಲ್ಲಿಯವರೆಗೂ ನನ್ನ ಜೀವನದಲ್ಲಿ ಏನೇನೆಲ್ಲ ಘಟಿಸಿವೆಯೋ ಅವೆಲ್ಲವನ್ನೂ ಶ್ರೀಪೀಠದಲ್ಲಿ‌ ಕಾಲಕಾಲಕ್ಕೆ‌ ಭಿನ್ನವಿಸಿಕೊಂಡಿದ್ದೇನೆ. ಶ್ರೀರಾಮನನ್ನು, ಶ್ರೀಶಂಕರರನ್ನು ನಾವು ಕಂಡಿಲ್ಲ, ಆದರೆ ಶಂಕರರ ಪಾದುಕೆ‌ಗಳ‌ ಧರಿಸಿ ಶ್ರೀರಾಮನ ಹೆಜ್ಜೆಗಳನ್ನು ಹಾಕುತ್ತಿರುವ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಎಂತಹ ಕರುಣಾಮೂರ್ತಿಗಳು, ಭಕ್ತಕೋಟಿಯ ಅಳಲನ್ನು ಶಾಂತಚಿತ್ತದಿಂದ‌ ಆಲಿಸಿ, ನೋವುಗಳನ್ನು ಅಳಿಸಿ ನೆಮ್ಮದಿಯ ಗೆಲುವನ್ನು ಕರುಣಿಸುವವರು ಎಂಬುದನ್ನು ನಾನು ಪ್ರತ್ಯಕ್ಷ ಅನುಭವಿಸಿದ್ದೇನೆ. ಹಿಂದಿಗಿಂತ ನನ್ನ ಆರೋಗ್ಯ ಬಹಳವೇ ಸುಧಾರಣೆ ಆಗಿದ್ದು, ಇನ್ನೂ ದಿನದಿಂದ ದಿನಕ್ಕೆ ನಾನು ಸುಧಾರಣೆಗೊಳ್ಳುತ್ತಲೇ ಇದೆ. ಔಷಧಗಳ ಸೇವನೆ ಗಣನೀಯವಾಗಿ ಕಡಿಮೆ ಆಗಿದೆ. ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದೇನೆ.

ಗುರುಗಳೇ, ನನಗೆ ಒಬ್ಬ ತಮ್ಮ ಇದ್ದಾನೆ. ಹುಟ್ಟಿನಿಂದಲೂ ಅವನೆಂದರೆ ನನಗೆ ತುಂಬಾ ಪ್ರೀತಿ,‌ ಬಹಳವೇ ಹಚ್ಚಿಕೊಂಡಿದ್ದೆ ಅವನನ್ನು. ಸನ್ಮಾರ್ಗದಲ್ಲಿ ಜೀವನ ನಡೆಸುತ್ತಿದ್ದ ನನ್ನ ತಮ್ಮ ಇತ್ತೀಚಿನ ವರ್ಷಗಳಲ್ಲಿ ದಾರಿ ತಪ್ಪಿದ್ದ. ಕಳೆದ 10-15 ವರ್ಷಗಳಲ್ಲಿ ನನ್ನ ತಮ್ಮ ತೀರಾ ಎಂಬಷ್ಟು ಮದ್ಯವ್ಯಸನಿಯಾಗಿ ಹೋಗಿದ್ದ. ನನ್ನ ಅಮ್ಮ ಬಹಳ ಸಂಸ್ಕಾರವಂತೆ. ಅವಳಿಗೆ ಇದು ದೊಡ್ಡ ಆಘಾತವನ್ನು ಉಂಟುಮಾಡಿತ್ತು‌. ಇದನ್ನೇ ಮನಸಲ್ಲಿಟ್ಟುಕೊಂಡು ಕೊರಗಿ ಕೊರಗಿ ನನ್ನ ಅಮ್ಮ ಅಂತ್ಯವಾದಳು. ಆತ ಮಾಡಿದ ಒಳ್ಳೆಯ ಕೆಲಸವೆಂದರೆ ಅಮ್ಮ ಅನಾರೋಗ್ಯದಿಂದ ಹಾಸಿಗೆ ಹಿಡಿದ ಸಂದರ್ಭದಲ್ಲಿ ಅಮ್ಮನ ಸೇವೆಯನ್ನು ನನ್ನಷ್ಟೇ ಅವನೂ ಮಾಡಿದ್ದ. ಆದರೆ ಈ ಮದ್ಯವ್ಯಸನ ಎಂಬ ದುಶ್ಚಟ ಅವನ ಬದುಕಿಗೆ ಶಾಪದಂತೆ ತಟ್ಟಿತ್ತು. ನಾನು ಮತ್ತು ನನ್ನ ಯಜಮಾನರು ಅವನನ್ನು ಈ ದುಶ್ಚಟದಿಂದ ಮುಕ್ತಮಾಡಿ ಸರಿದಾರಿಗೆ ತರಲು ಪ್ರಯತ್ನ ಮಾಡಿ-ಮಾಡಿ ಸೋತೆವು. ಅವನು ಮದ್ಯದ ಅಮಲಿನಲ್ಲಿ ಬೀದಿಯಲ್ಲಿ ಅದೆಲ್ಲಿಯೋ ಬೀಳುವುದು, ಹಾದಿ ಬೀದಿಯಲ್ಲಿ ನೋಡಿದವರ್ಯಾರೋ ನಮಗೆ ಫೋನ್ ಮಾಡಿ ಹೇಳುವುದು, ನಾವು ಎದ್ದೆವೋ ಬಿದ್ದೆವೋ ಎಂದು ಓಡೋಡಿ ಹೋಗಿ ಅವನನ್ನು ಕರೆತರುವುದು, ಇನ್ಯಾರೋ ಅವನನ್ನು ಮನೆಗೆ ತಂದು ಬಿಡುವುದು, ಹೀಗೇ ಹಲವು ವರ್ಷಗಳು ಕಳೆದವು. ನನ್ನ ಇಬ್ಬರು ಚಿಕ್ಕ ಮಕ್ಕಳೂ ದಿನಾ ಇದನ್ನೇ‌ ನೋಡುತ್ತಾ ನೋಡುತ್ತಾ ಹೆದರಿ ಕಂಗಲಾಗುತ್ತಿದ್ದವು. ದೇವರ ಕೋಣೆಗೆ ಓಡಿ ಹೋಗಿ “ಕೃಷ್ಣ ಕಾಪಾಡು” ಎಂದು ಬೇಡುತ್ತಿದ್ದವು. ನಾನು ಅಸಹಾಯಕಳಾಗಿದ್ದೆ. ಕೊನೆಗೊಮ್ಮೆ ಒಂದು ದಿನ ಗುರು-ರಾಮರಲ್ಲಿ “ಒಂದೋ ನನ್ನ ತಮ್ಮನನ್ನು ಸರಿದಾರಿಗೆ ತಂದು ನನಗೆ ಕೊಡು ಇಲ್ಲವೆಂದರೆ ಆ ಸಂಬಂಧವನ್ನೇ ದೂರ ಮಾಡು, ನಾನು ತಬ್ಬಲಿ ಎಂದು ತಿಳಿಯುತ್ತೇನೆ. ನನಗೆ ಸಾಕುಸಾಕಾಗಿ ಹೋಗಿದೆ, ಇನ್ನು ನನ್ನಿಂದ ಸಾಧ್ಯವಿಲ್ಲ ಪರಮಾತ್ಮಾ, ದಾರಿ ತೋರಿಸು” ಎಂದು ಪ್ರಾರ್ಥಿಸಿಕೊಂಡೆ.

ಮುಂದೆ ನಡೆದದ್ದು ಕಲ್ಪನಾತೀತ. ಹೌದು ಈ ಗುರುಪೀಠ, ಶ್ರೀಸಂಸ್ಥಾನದವರು ಎಂದಿಗೂ ಸಂಬಂಧಗಳ ಬಂಧವನ್ನು ಭದ್ರಗೊಳಿಸುವವರೇ ಹೊರತು ಎಂದಿಗೂ ದೂರ ಮಾಡುವವರಲ್ಲ. ನನಗೇ ಆಶ್ಚರ್ಯವಾಗುವ ರೀತಿಯಲ್ಲಿ ನನ್ನ ತಮ್ಮ ಕಳೆದ ಒಂದು ಒಂದೂವರೆ ವರ್ಷದಲ್ಲಿ ಸಂಪೂರ್ಣವಾಗಿ ಬದಲಾದ! ಪರಮ ಸಾತ್ತ್ವಿಕನಾದ. ಅತ್ಯಂತ ಸ್ವಚ್ಛ ಜೀವನವನ್ನು ನಡೆಸುತ್ತಿದ್ದಾನೆ. ಎರಡೂ ಹೊತ್ತು ಸರಿಯಾಗಿ ಸಂಧ್ಯಾವಂದನೆ ಮಾಡುತ್ತಿದ್ದಾನೆ. ಗಾಯತ್ರಿ ಜಪಾನುಷ್ಠಾನ ಮಾಡುತ್ತಾನೆ. ನಿತ್ಯವೂ ಭಕ್ತಿಯಿಂದ ಭಗವದ್ಗೀತೆಯನ್ನು ಓದುತ್ತಾನೆ. ರಾಮನಾಮ ಜಪವನ್ನು ಬರೆಯುತ್ತಾನೆ. ಮುಷ್ಠಿ ಭಿಕ್ಷೆ, ಬಿಂದು ಸಿಂಧು ಯೋಜನೆಯಲ್ಲಿ ತೊಡಗಿಸಿಕೊಂಡಿರುತ್ತಾನೆ. ಇದೆಲ್ಲಕಿಂತಲೂ ಹೆಚ್ಚಾಗಿ ವಾಲ್ಮೀಕಿ ರಾಮಾಯಣ ಗ್ರಂಥವನ್ನು ತರಿಸಿಕೊಂಡು ಒಂದು ದಿನವೂ ಬಿಡದಂತೆ ಪಾರಾಯಾಣ ಮಾಡುತ್ತಿದ್ದಾನೆ. ಪಶ್ಚಾತ್ತಾಪದ ಬೇಗೆಯಲ್ಲಿ ಬೆಂದು ಪರಿಶುದ್ಧನಾಗಿದ್ದಾನೆ.

ಈಗ 3 ತಿಂಗಳ ಹಿಂದೆ ನಮ್ಮ 93 ವರ್ಷದ ತಂದೆ ರಾಮಸಾಯುಜ್ಯವನ್ನು ಹೊಂದಿದರು‌. ಅಪ್ಪ ತಮ್ಮ ಕೊನೆಯ ಕಾಲವನ್ನು ಆರೋಗ್ಯದಿದ, ಅದಕ್ಕಿಂತ ಮುಖ್ಯವಾಗಿ ಮಗನ ಕುರಿತು ಅತ್ಯಂತ ನೆಮ್ಮದಿಯಲ್ಲಿ ಕಳೆದರು. ಉತ್ತರಾದಿ ಕ್ರಿಯೆಗಳನ್ನೆಲ್ಲ ಅತ್ಯಂತ ಶ್ರದ್ಧೆಯಿಂದ ಮಾಡಿದ ನನ್ನ ತಮ್ಮ. ಅಂತೂ ನನ್ನ 51ನೇ ವರ್ಷದಲ್ಲಿ ನನ್ನ ಒಡಹುಟ್ಟಿದವ ನನಗೆ ಮರಳಿ ಸಿಕ್ಕಿದ್ದಾನೆ. ಯಾವುದೇ ಔಷದೋಪಚಾರ‌ ಇಲ್ಲದೇ, ಕೌನ್ಸಿಲಿಂಗ್ ಇಲ್ಲದೆಯೇ, ಏನೂ ಇಲ್ಲದೆಯೇ ಇವನು ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿದ್ದಾನೆ ಎಂದರೆ ಅದು ಗುರುವಿನ ಅನುಗ್ರಹ, ರಾಮನ ಕರುಣೆ ಅಲ್ಲದೇ ಬೇರೇನಿರಲು ಸಾಧ್ಯ!

 

ಯಾವ ನೆಲದಲ್ಲಿ, ಯಾವ ಜನರ ಮಧ್ಯೆ ಅತ್ಯಂತ ಹೀನ ಬಾಳು ಬಾಳಿದ್ದನೋ, ಅದೇ ನೆಲದಲ್ಲಿ ಅದೇ ಜನಗಳ ಮಧ್ಯೆ ಆತನನ್ನು ಕ್ರಮವಾಗಿ ವಲಯ ಹಾಗೂ ಮಂಡಲಗಳ ವತಿಯಿಂದ ರಾಮಾಯಣ ಪಾರಾಯಣ ಮಾಡಿದ್ದಕ್ಕೆ ಸನ್ಮಾನವನ್ನೂ ಮಾಡಿಸಿಕೊಂಡಿದ್ದಾನೆ. ಇದಲ್ಲವೇ ಪರಿವರ್ತನೆ ಎಂದರೆ! ಅಕ್ಕನಾಗಿ ಇದಕ್ಕಿಂತ ಸಾರ್ಥಕ್ಯ ಭಾವ ಇನ್ನೇನಿದೆ ಹೇಳಿ. ಜನ್ಮಜನ್ಮಕ್ಕೂ ಆ ರಾಮನೇ ಗುರುರೂಪಿಯಾಗಿ ನಮ್ಮ ಹೃನ್ಮಂದಿರದಲ್ಲಿ ದೃಢವಾಗಿ‌ ನೆಲೆಸಲಿ ಎಂಬುದೊಂದೆ ಪ್ರಾರ್ಥನೆ ಗುರುಚರಣಗಳಲ್ಲಿ.

 

ಮತ್ಸರಿಸುವರೆಲ್ಲ ಕೂಡಿ ಮಾಡುವುದೇನು?
ಅಚ್ಯುತ ನಿನ್ನ ದಯೆಯು ಒಂದಿರಲು
ವಾತ್ಸಲ್ಯ ಬಿಡದಿರು ನಿನ್ನ ನಂಬಿದೆನೋ ದೇವ
ಕಿಚ್ಚಿಗೆ ಇರುವೆ ಮುಚ್ಚುವುದೇ
ಕೇಳೆಲೋ ರಂಗ
ನಾ ನಿನ್ನ ಧ್ಯಾನದೊಳಿರಲು ಸದಾ
ಹೀನ ಮಾನವರೇನು ಮಾಡುವರೋ ||

Author Details


Srimukha

Leave a Reply

Your email address will not be published. Required fields are marked *