ಹೊಸನಗರ ಶ್ರೀರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕದಲ್ಲಿರುವ ಶ್ರೀಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಾಲಯದ ವಾರ್ಷಿಕೋತ್ಸವ ಹಾಗೂ ಛತ್ರ ಸಮರ್ಪಣಾ ಸಮಾರಂಭ

ಉಪಾಸನೆ

ಕೃಷ್ಣನಿಗೆ ಸ್ವರ್ಣಛತ್ರ ಸಮರ್ಪಣೆ – ಸಹಸ್ರ ವಿಷ್ಣು ಸಹಸ್ರನಾಮ, ಸಹಸ್ರಛತ್ರ ಸಮರ್ಪಣೆ

* ಛತ್ರ ಸಮರ್ಪಿಸಿ ರಕ್ಷಣೆಗೆ ಹರಕೆ ಮಾಡಿಕೊಳ್ಳಲು ಗೋವರ್ಧನಗಿರಿಧಾರಿ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಅವಕಾಶ

ತನ್ನನ್ನು ನಂಬಿದವರಿಗೆ ಸೋಲಿಲ್ಲ – ಸಾವಿಲ್ಲ ಎಂದು ಕೃಷ್ಣ ಅಂದು ಗೋವರ್ಧನಗಿರಿಯನ್ನು ಎತ್ತಿ ಭಕ್ತರನ್ನು ಕಾಪಾಡುವ ಮೂಲಕ ತೋರಿಸಿಕೊಟ್ಟಿದ್ದ. ಅದರ ಪ್ರತೀಕವಾಗಿ ಈ ಗೋವರ್ಧನಗಿರಿಧಾರಿ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಕಷ್ಟ- ನಷ್ಟದಲ್ಲಿ ಇರುವವರಿಗೆ ಛತ್ರ ಸಮರ್ಪಣೆಯ ಸೇವೆಯನ್ನು ಮಾಡಿ ಹರಕೆ ಮಾಡಿಕೊಳ್ಳಲು ಅವಕಾಶಕಲ್ಪಿಸಲಾಗಿದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

 

ಹೊಸನಗರ ಶ್ರೀರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕದಲ್ಲಿರುವ ಶ್ರೀಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಾಲಯದ ವಾರ್ಷಿಕೋತ್ಸವ ಹಾಗೂ ಛತ್ರ ಸಮರ್ಪಣಾ ಸಮಾರಂಭದ ಅಂಗವಾಗಿ ಶನಿವಾರ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಮಾತನಾಡಿ, ಪುರಾಣ ಕಾಲದಲ್ಲಿ ಕೃಷ್ಣ ಪರಮಾತ್ಮ ದುಷ್ಟ ಶಕ್ತಿಗಳಿಂದ ಗೋವು ಮತ್ತು ಗೋಪಾಲಕರನ್ನು ರಕ್ಷಿಸಲು ಗಿರಿಯನ್ನು ಎತ್ತಿ ಹಿಡಿದಿದ್ದರ ಸಂಕೇತವಾಗಿ ಇಂದು ಸ್ವರ್ಣಛತ್ರ ಸಮರ್ಪಣೆ ಮಾಡಲಾಗಿದೆ. ಗೋವರ್ಧನಗಿರಿಧಾರಿ ದೇವಾಲಯವನ್ನು ಕಟ್ಟುವ ಮೊದಲು, ಕಟ್ಟುವ ಸಮಯದಲ್ಲಿ, ಹಾಗೂ ಆನಂತ ಮಠ ಬೆಂಕಿಯ ಮಧ್ಯದಲ್ಲಿ ಇತ್ತು, ಮಹದಾಪತ್ತುಗಳು ಎದುರಾಗಿದ್ದವು. ಆದರೆ ದೇವರ ದಯೆಯಿಂದ ಅವೆಲ್ಲ ಮಹದಾಪತ್ತುಗಳಿಂದ ಹೊರಬಂದು ಮಠ ಸುರಕ್ಷಿತವಾಗಿದೆ. ಮಾತ್ರವಲ್ಲ ಊರ್ಜಿತವಾಗಿ ಧಾರ್ಮಿಕ – ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಕೃಷ್ಣನ ಹಾಗೂ ಗೋವುಗಳ ದಯೆಯಿಂದ ಮಠ ಸುರಕ್ಷಿತವಾಗಿದೆ. ಗೋವು ಹಾಗೂ ಭಕ್ತಿ ಇದ್ದಲ್ಲಿ ದೇವರ ರಕ್ಷಣೆ ಖಚಿತ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

 

ಅರಳುಮಲ್ಲಿಗೆ ಪಾರ್ಥಸಾರಥಿಯವರ ನೇತೃತ್ವದಲ್ಲಿ ಸಮರ್ಪಣೆಯಾದ ವಿಷ್ಣುಸಹಸ್ರನಾಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ವಿಷ್ಣುಸಹಸ್ರನಾಮಕ್ಕೆ ಅದ್ಭುತವಾದ ಶಕ್ತಿ ಇದೆ. ಇಂಥಹಾ ಧಾರ್ಮಿಕ ಕಾರ್ಯ ಮತ್ತೆ ಮತ್ತೆ ನಡೆಯಲಿ ಎಂದು ಆಶಿಸಿದರು.

 

ಎಲ್ಲಾ ತಳಿಗಳಿರುವ ವಿಶ್ವದ ಏಕೈಕ ಗೋಶಾಲೆ:
ನಾವು ದೇಶಿ ಗೋವನ್ನು ಸಾಕಲು ಆರಂಭಿಸಿದಾಗ, ಮಠದ ಹಲವು ಹಿತೈಷಿಗಳೇ ಈ ಕಾರ್ಯವನ್ನು ಯಾಕೆ ಮಾಡುತ್ತಿದ್ದೀರೀ? ಇದು ನಷ್ಟದ – ಕಷ್ಟದ ಕೆಲಸ ಎಂದು ಕಿವಿ ಮಾತು ಹೇಳಿದ್ದರು. ಆಗ ಅವರಿಗೆ ಅದರ ಅಗತ್ಯತೆಯನ್ನು ತಿಳಿಸಿ ಗೋರಕ್ಷಣಾ ಕಾರ್ಯಕ್ಕೆ ಮುಂದಾದೆವು. ಇಂದು ಮಹಾನಂದಿ ಗೋಲೋಕವು ದೇಶದಲ್ಲಿರುವ ಎಲ್ಲಾ ದೇಶೀ ತಳಿಗಳನ್ನು ಹೊಂದಿರುವ ಏಕೈಕ ಗೋಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 32+ ಗೋತಳಿಗಳನ್ನು ಹೊಂದಿರುವ ಕೀರ್ತಿ ಮಹಾನಂದಿ ಗೋಲೋಕದ್ದು ಎಂದು ಶ್ರೀಗಳು ತಿಳಿಸಿದರು.

 

ಪ್ರದಕ್ಷಿಣ ಪಥ, ನೀರಿನ ಆಸರೆ, ಗೋವುಗಳಿಗೆ ಸ್ವತಂತ್ರವಾಗಿ ಸುತ್ತಾಡಲು ಅವಕಾಶ ಸೇರಿದಂತೆ ಸರ್ವಸುಸಜ್ಜಿತವಾದ ವೃಂದಾವನವನ್ನು ಮರು ನಿರ್ಮಿಸುವ ಯೋಜನೆಗಳಿದ್ದು, ದ್ವಾಪರ ಯುಗದಲ್ಲಿದ್ದಂತೆ ಪುನಃ ವೃಂದಾವನವನ್ನು ನಿರ್ಮಿಸಬೇಕಿದೆ. ಗೋವುಗಳಿಗೆ ಇನ್ನಷ್ಟು ಉತ್ತಮ ವಾತಾವರಣ ಕಲ್ಪಿಸಬೇಕಿದೆ. ಅವುಗಳಿಗೆ ಧರ್ಮ ಪ್ರೇಮಿಗಳು, ಗೋಪ್ರೇಮಿಗಳು ಕೈಜೋಡಿಸಬೇಕು ಎಂದು ಕರೆನೀಡಿದರು.

 

ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಯಾಂತ್ರಿಕ ಜೀವನದಲ್ಲಿ ನಮಗೆ ದಿನದ 24 ನಿಮಿಷಗಳೂ ದೇವರ ಪ್ರಾರ್ಥನೆಗೆ ಸಾಲುವುದಿಲ್ಲ. ದಿನ ನಿತ್ಯ ವಿಷ್ಣು ಸಹಸ್ರನಾಮ ಪಠಣದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಅಂಕ ಗಳಿಕೆಯತ್ತ ಕೇಂದ್ರೀಕೃತವಾಗಿದೆ. ದೇಶದ ಸಂಸ್ಕೃತಿ, ಪುರಾಣಗಳಲ್ಲಿನ ಸಾರವನ್ನು ವಿದ್ಯಾರ್ಥಿಗಳಿಗೆ ನೀಡಲು ವಿಫಲವಾಗಿವೆ ಎಂದರು. ಶ್ರೀಗಳ ಧಾರ್ಮಿಕ – ಸಾಮಾಜಿಕ ಕಾರ್ಯಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ಅವರು, ಗೋಲೋಕವನ್ನು ಮರುಸೃಷ್ಟಿಸಿದ ಹಿರಿಮೆ ರಾಘವೇಶ್ವರ ಶ್ರೀಗಳದ್ದು ಎಂದರು.

 

ಇದೇ ವೇಳೆ ಅವರು ರುಚಿ ಗ್ರೂಪ್‌ ಸಂಸ್ಥೆಯ ಮುಖ್ಯಸ್ಥ ದಿನೇಶ್‌ ಸಹರಾ ಬರೆದ ‘ಸಿಂಪ್ಲಿಸಿಟಿ ಮತ್ತು ವಿಸ್ಡಮ್‌’ ಎಂಬ ಕೃತಿಯನ್ನು ಶ್ರೀಗಳು ಬಿಡುಗಡೆ ಮಾಡಿದರು. ಡಾ| ಅಲ್ಕಾ ಪಟೇಲ್, ಉದ್ಯಮಿ ಬಿ. ರವಿ, ಹವ್ಯಕ ಮಹಾಮಂಡಳದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕೆ.ಪಿ ಎಡಪ್ಪಾಡಿ, ಡಾ| ಸೀತಾರಾಮಪ್ರಸಾದ್‌ ಮತ್ತಿತರರು ಇದ್ದರು.

 

ಶ್ರೀಮಠದಿಂದ ಗೋಲೋಕದವರೆಗೆ ಛತ್ರ ಸಮರ್ಪಣೆಯ ವಿಶೇಷ ಮೆರವಣಿಗೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು, ರಜತ – ತಾಮ್ರದ ಛತ್ರಗಳನ್ನು ಗೋವರ್ಧನಗಿರಿಧಾರಿ ಗೋಪಾಲಕೃಷ್ಣನಿಗೆ ಸಮರ್ಪಿಸಿ ಆಪತ್ತು ವಿಪತ್ತುಗಳಿಂದ ರಕ್ಷಿಸುವಂತೆ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಅರಳುಮಲ್ಲಿಗೆ ಪಾರ್ಥಸಾರತಿ ಅವರ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಧರ್ಮ ರಕ್ಷಣೆ – ಯೋಧರ ಕ್ಷೇಮ – ದೇಶ ಸಂರಕ್ಷಣೆಯನ್ನು ಪ್ರಾರ್ಥಿಸಿ ವಿಷ್ಣುಸಹಸ್ರನಾಮವನ್ನು ಪಠಿಸಿದ್ದು ವಿಶೇಷವಾಗಿತ್ತು.

 

 

Author Details


Srimukha

Leave a Reply

Your email address will not be published. Required fields are marked *