ನಿಮಗೊಂದು ಕರೆ ಮಾಡಿ

ಚಿತ್ತ~ಭಿತ್ತಿ : ಡಾ. ಸುವರ್ಣಿನೀ ಕೊಣಲೆ

90ರ ದಶಕ ಅದು. ಟೆಲಿಫೋನು ಎಲ್ಲ ಮನೆಗಳಿಗೂ ಬಂದಿರಲಿಲ್ಲ. ಪತ್ರ ಬರೆಯುವುದೇ ಸಂಭ್ರಮ ಅಂದು. ಇಂದು ಬರೆದರೂ ಅಷ್ಟೇ ಪ್ರೀತಿಯಿಂದ ಬರೆಯಬಲ್ಲೆನೇ? ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುತ್ತೇನೆ. ಪತ್ರ ಬರೆಯುವುದಕ್ಕೆ ವಿಷಯವಾದರೂ ಎಲ್ಲಿದೆ ಈಗ? ಎಂದು ಕೇಳುತ್ತದೆ ಬುದ್ಧಿ. ಆ ಕ್ಷಣದಲ್ಲಿ ವಾಟ್ಸಾಪ್ ಪಾರಿವಾಳದ ಮೂಲಕ ಹಾರಿಸಿಬಿಡುತ್ತೇವೆಲ್ಲ! ಅಷ್ಟಕ್ಕೂ ಬರೆಯುವುದಕ್ಕೆ ಸಮಯವಾದರೂ ಎಲ್ಲಿದೆ ಇಂದು? ಬರೆಯುವುದಕ್ಕಿರಲಿ, ಬಂದ ಸಂದೇಶಗಳನ್ನು ಓದುವುದಕ್ಕೂ ನಮಗಿಂದು ಸಮಯವಿಲ್ಲ. ಅಂದೂ ಇದ್ದುದು 24 ಗಂಟೆಗಳು. ಇಂದಿರುವುದೂ ಅಷ್ಟೇ. ಗಡಿಯಾರದ ಮುಳ್ಳುಗಳನ್ನು ಮೀರಿಸಿ ನಾವು ಬೆಳೆದಿದ್ದೇವೆ ಎಂಬ ಭ್ರಮೆಯಲ್ಲಿದ್ದೇವೆ ಅಷ್ಟೇ. ನಮ್ಮ ಭ್ರಮೆ ಕಳಚುವುದಕ್ಕೆ ಸಮಯಕ್ಕೆ ಒಂದು ಕ್ಷಣ ಸಾಕು ಎನ್ನುವ ಸತ್ಯಕ್ಕೆ ಮುಖ ತಿರುಗಿಸಿ ನಿಂತಿದ್ದೇವೆ.

 

ಮೊದಲು ಎಲ್ಲೋ ಕೆಲವರ ಮನೆಗಳಲ್ಲಿ, ಸಿನೆಮಾಗಳಲ್ಲಿ, ಎಸ್ಟಿಡಿ ಬೂತುಗಳಲ್ಲಿ ನೋಡಿದ್ದ ಟೆಲಿಫೋನು ನಮ್ಮ ಮನೆಗೂ ಬಂತು. ಅರ್ಧ ಕೆಂಪು, ಅರ್ಧ ಕಪ್ಪು ಬಣ್ಣದ ಫೋನು. ಸಿಕ್ಕಿದ್ದನ್ನು ಬಳಸಬೇಕಿತ್ತು. ಯಾವ ಬಣ್ಣದ ಫೋನು ಬೇಕು, ಯಾವ ನಂಬರ್ ಬೇಕು ಎಂಬ ಆಯ್ಕೆಗೆ ಅವಕಾಶವಿರಲಿಲ್ಲ. ಇಂದಿನಂತೆ. ಹಾಗಾಗಿ ಆ ಕಪ್ಪು-ಕೆಂಪು ಫೋನು ತುಂಬ ಚಂದವೆನಿಸಿತ್ತು. ಹೊಸದಾಗಿ ಬಂದ ಫೋನೊಂದು ಸಂಭ್ರಮ. ನೆಂಟರಿಗೆ, ಸ್ನೇಹಿತರಿಗೆ ಕರೆ ಮಾಡಿ ‘ನಮ್ಮ ಮನೆಗೆ ಫೋನು ಬಂತು’ ಎಂದು ಹೇಳಿ ನಂಬರ್ ಕೊಡುವುದೇ ಆರಂಭದ ಒಂದಷ್ಟು ದಿನಗಳ ಮುಖ್ಯ ಕಾರ್ಯ. ಇಂದು ಹೊಸ ಸಿಮ್ ಖರೀದಿಸಿದಾಗ ಎಷ್ಟು ಮಂದಿಗೆ ತಿಳಿಸುತ್ತೇವೆ? ನಮ್ಮ ಆತ್ಮೀಯರ ಬಳಗ ಚಿಕ್ಕದಾಗಿದೆಯೇ? ಅಥವಾ ಇಂದಿನ ದಿನಕ್ಕೆ ಇಷ್ಟೇ ಅಗತ್ಯವೇನೋ.

ಆ ಟೆಲಿಫೋನುಗಳಲ್ಲಿ ಈಗಿನ ಫೋನುಗಳಲ್ಲಿ ಇರದ ಒಂದು ಫೀಚರ್ ಇತ್ತು. 616ಕ್ಕೆ ಡಯಲ್ ಮಾಡಿ ರಿಸೀವರನ್ನು ಇಟ್ಟರೆ ನಮ್ಮ ಫೋನೇ ರಿಂಗಾಗುತ್ತಿತ್ತು. ಆ ಸೌಲಭ್ಯ ಯಾಕಾಗಿ ಇತ್ತು ಅನ್ನುವುದು ಸರಿಯಾಗಿ ತಿಳಿದಿಲ್ಲ. ಬಹುಶಃ ಫೋನು ರಿಂಗಾಗುತ್ತಿದೆಯೇ ಇಲ್ಲವೇ, ಸರಿ ಇದೆಯೇ ಇಲ್ಲವೇ ಎಂದು ಪರೀಕ್ಷಿಸಲು ಇರಬಹುದು. ಈಗಿನ ಮಕ್ಕಳು ಫೋನಿನಲ್ಲಿ ಆಡುತ್ತವೆ ಎನ್ನುವ ನಾವು ಈ 616 ಸಂಖ್ಯೆ ಬಳಸಿ ಆಡುತ್ತಿದ್ದೆವು. ಸುಮ್ಮನೇ 616 ಒತ್ತಿ ಏನೂ ಗೊತ್ತಿಲ್ಲ ಎಂಬಂತೆ ಕೂತುಬಿಡುವುದು. ದೂರದಲ್ಲೆಲ್ಲೋ ಇದ್ದ ದೊಡ್ಡವರು ಓಡಿ ಬಂದು, ರಿಸೀವ್ ಮಾಡಿ, ಆ ಕಡೆಯಿಂದ ಮಾತು ಕೇಳುತ್ತಿಲ್ಲ ಎಂದು ತಲೆಕೆಡಿಸಿಕೊಂಡಾಗ ನಗುವುದು. ಅಥವಾ ನಾವೇ ರಿಸೀವ್ ಮಾಡಿ, ಯಾರ ಬಳಿಯೋ ಮಾತನಾಡಿದಂತೆ ನಟಿಸಿ ಏಮಾರಿಸುವುದು. ಇಷ್ಟೆಲ್ಲ ಮಾಡಿ ಬೈಸಿಕೊಂಡರೂ ಮತ್ತೆ ಮತ್ತೆ ಅದನ್ನು ಮಾಡುತ್ತಲೇ ಇರುತ್ತಿದ್ದೆವು. ಬಾಲ್ಯದ ಪುಟದಲ್ಲಿ ಅಚ್ಚಾದ ಕಥೆ ಇದು. ಈ ಫೀಚರ್ ಈಗಲೂ ಇದೆಯೇ ಎಂದು ಗೊತ್ತಿಲ್ಲ. ಮನೆಯಲ್ಲೀಗ ಲ್ಯಾಂಡ್ಲೈನ್ ಫೋನಿಲ್ಲ.

 

ಅದನ್ನೆಲ್ಲ ಹಿಂದೆ ಬಿಟ್ಟು ಮುಂದೆ ನಡೆದಿದ್ದೇವೆ ನಾವು. ಕೋಣೆಯ ಮೂಲೆಯಲ್ಲಿಯೇ ನಿಲ್ಲುವ ಫೋನು ನಮಗೆ ಅಗತ್ಯವಲ್ಲ. ಹೊರಗೆ ಸುತ್ತುವವರು ನಾವು. ಹಾಗಾಗಿ ಅಂಗೈಯಲ್ಲಿಯೇ ಜಗತ್ತು ಕಾಣಿಸುವ ಕೈಗಂಟಿದ ಫೋನು. ಜಗತ್ತನ್ನು ಒಂದಾಗಿಸುತ್ತಿದೆ ಎಂಬ ಭ್ರಮೆ ಹುಟ್ಟಿಸುವ ಜಾಗತೀಕರಣ. ಯಾಕೆ ಓಡುತ್ತಿದ್ದೇವೆ ಎಂಬುದರ ಅರಿವಿಲ್ಲದೆಯೇ ರೇಸಿನಲ್ಲಿ ಓಡುವ ಧಾವಂತ. ಯಾರನ್ನೋ ಮೆಚ್ಚಿಸಲು ಅನಗತ್ಯ ವೆಚ್ಚ. ಆ ವೆಚ್ಚ ಭರಿಸಲು ಮತ್ತೆ ಓಟ. ನಮ್ಮ ಬದುಕು ನಮ್ಮ ಹಿಡಿತದಲ್ಲಿಲ್ಲ. ನಮ್ಮ ಮನಸ್ಸೂ ನಮ್ಮ ಹಿಡಿತದಲ್ಲಿಲ್ಲ. ನಾವು ಹೇಳಿದಂತದು ಕೇಳುವುದಿಲ್ಲ. ಇಂತಹ ಈ ಹೊತ್ತಿನ ಅಗತ್ಯವೆಂದರೆ ನಮ್ಮ ಮನಸ್ಸಿಗೊಂದು 616 ಕರೆ ಮಾಡುವುದು. ನಮ್ಮೊಡನೆ ಒಂದಷ್ಟು ಸಮಯ ಕಳೆಯುವುದು. ಭಾನುವಾರ ಮನೆಯಲ್ಲಿಯೇ ಇದ್ದು ಮನೆಯ ಎಲ್ಲ ಕೆಲಸ ಪೂರೈಸುವಂತೆ, ಮನಸ್ಸಿನ ಬೇಕುಬೇಡಗಳನ್ನು ಕೇಳಬೇಕು. ಸಿನೆಮಾ ನಾಟಕ ನೋಡಿ ಮನಸ್ಸು ಹಗುರಾಗಿಸಿಕೊಳ್ಳುವಂತೆ ಒಂದಷ್ಟು ಭಾರ ಕಳೆದು ಹಗುರಾಗಬೇಕು. ಮನೆಯವರೊಟ್ಟಿಗೆ ಸಮಯ ಕಳೆಯುವಂತೆ ನಮ್ಮ ಒಳಗಿನವನೊಂದಿಗೆ ಸಮಯ ಕಳೆಯಬೇಕು. ಮನಸ್ಸಿಗೂ ಒಂದು ಭಾನುವಾರ ಬೇಕು. ಮನದೊಳಗೇ ಸಮಯ ಕಳೆಯಬೇಕು. ಮನಸ್ಸಿನ ಕೊಳೆ ತೊಳೆಯಬೇಕು. ಸರಿ-ತಪ್ಪುಗಳ ವಿಮರ್ಶೆ ನಡೆಯಬೇಕು. ಒಳಗಿನ ಬೆಳಕು ಕರಗದಂತೆ ಎಣ್ಣೆ ಎರೆಯಬೇಕು. ನಡೆದ ದಾರಿಯನ್ನೊಮ್ಮೆ ತಿರುಗಿ ನೋಡಬೇಕು. ಎಡವಿದ್ದೇಕೆಂದು ಅರಿಯಬೇಕು. ಮುಂದಿನ ಹಾದಿಯೆಡೆಗೊಂದು ಪಕ್ಷಿನೋಟ ಬೀರಬೇಕು. ತಪ್ಪಿದ್ದನ್ನು ತಿದ್ದಬೇಕು. ಸಾಮರ್ಥ್ಯ-ದೌರ್ಬಲ್ಯಗಳನ್ನು ಅರಿಯಬೇಕು. ಆಹ್ಲಾದ ಮನಸ್ಸನ್ನು ತುಂಬಬೇಕು. ಒಟ್ಟಿನಲ್ಲಿ ನಮ್ಮನ್ನು ನಾವು ಅರಿಯಬೇಕು. ನಮ್ಮನ್ನೇ ಅರಿಯದ ನಾವು ಯಾರನ್ನು ಹೇಗೆ ಅರಿತೇವು?

 

2010ರಲ್ಲಿ ‘ಕಾರ್ತಿಕ್ ಕಾಲಿಂಗ್ ಕಾರ್ತಿಕ್’ ಎಂಬ ಹಿಂದಿ ಭಾಷೆಯ ಸಿನೆಮಾವೊಂದು ಬಂದಿತ್ತು. ಅದರಲ್ಲಿ ನಾಯಕ ಕಾರ್ತಿಕ್ ದುರ್ಬಲ ಮನಸ್ಸಿನವನು. ಅವನು ಬದುಕಿನಲ್ಲಿ ಏನೂ ಸಾಧಿಸಲು ಸಾಧ್ಯವಾಗದೇ ಸೋತು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ಹೀಗಿರುವಾಗ ಇದ್ದಕ್ಕಿದ್ದಂತೆ ಪ್ರತಿ ದಿನ ಬೆಳಗ್ಗೆ ಐದು ಗಂಟೆಗೆ ಅವನ ಮನೆಯ ಫೋನು ರಿಂಗಾಗುತ್ತಿತ್ತು. ಅತ್ತ ಕಡೆಯಿಂದ ಕಾರ್ತಿಕ್ ಎಂಬ ವ್ಯಕ್ತಿ ಮಾತನಾಡುತ್ತಿದ್ದ. ನಾಯಕನನ್ನು ಸಂತೈಸುತ್ತಿದ್ದ. ಸಮಸ್ಯೆಗಳನ್ನು ಪರಿಹರಿಸುವ ದಾರಿ ತೋರಿಸುತ್ತಿದ್ದ. ಈ ಕರೆಗಳು ಬರಲು ಆರಂಭವಾದಂದಿನಿಂದ ನಾಯಕನ ಬದುಕು ಬದಲಾಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಸಮಸ್ಯೆಗಳನ್ನು ಆತ ಪರಿಹರಿಸಿಕೊಳ್ಳುತ್ತಾನೆ. ಮುಂದೆ ಕಥೆ ಬೇರೆ ತಿರುವು ಪಡೆಯುತ್ತದೆ. ಆತ ಮಾನಸಿಕ ಅಸ್ವಸ್ಥನಾಗಿರುತ್ತಾನೆ. ಆತ ಒಡಕು ವ್ಯಕ್ತಿತ್ವ (split personality) ಹೊಂದಿರುತ್ತಾನೆ. ಸೋಲುತ್ತಿದ್ದ, ದುರ್ಬಲವಾದ ಅವನನ್ನು ಗೆಲ್ಲಿಸಲು ಅವನೊಳಗಿನ ಸಾಮರ್ಥ್ಯಶಾಲಿ ಹೊರಬರುತ್ತಾನೆ. ಮಧ್ಯರಾತ್ರಿಯಲ್ಲಿ ದೂರವಾಣಿಯಲ್ಲಿ ಮಾತುಗಳನ್ನು ರೆಕಾರ್ಡ್ ಮಾಡಿ ತನ್ನದೇ ನಂಬರಿಗೆ ಕರೆ ಬರುವಂತೆ ವ್ಯವಸ್ಥೆ ಮಾಡಿರುತ್ತಾನೆ.  

ಮಾನಸಿಕ ಅಸ್ವಸ್ಥತೆ ಅನ್ನುವುದನ್ನು ಹೊರತುಪಡಿಸಿ ನೋಡಿದರೆ, ಇಲ್ಲೊಂದು ಸಂದೇಶವನ್ನು ಕಾಣಬಹುದು. ತನ್ನೊಂದಿಗೆ ತಾನು ನಡೆಸಿದ ಸಂಭಾಷಣೆ ಆತನ ಗೆಲುವಿಗೆ ಕಾರಣವಾಗುತ್ತದೆ.

 

ನಾವೂ ಹಾಗೆಯೇ. ಕತ್ತಲೆಯ ದಾರಿಯೂ ಬೆಳಕಿನ ಪಥವೂ ನಮ್ಮೊಳಗಿದೆ. ಕಂಡುಕೊಳ್ಳಲು ನಮಗೊಂದು ಕರೆ ಮಾಡಬೇಕು ನಾವು. ಆಧುನಿಕ ಮನಃಶಾಸ್ತ್ರವೂ ಇದನ್ನೇ ಹೇಳುತ್ತದೆ. ನಮ್ಮನ್ನು ನಾವು ವಿಶ್ಲೇಷಿಸಿಕೊಳ್ಳಬೇಕು. ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಇರುವ ಅತ್ಯುತ್ತಮ ಮತ್ತು ಒಂದೇ ದಾರಿ ಇದು.

 

ನಾವು ಮುನ್ನಡೆಯಬೇಕು, ನಡೆಯುತ್ತಲೇ ಇರಬೇಕು. ಆದರೆ ಆಗೊಮ್ಮೆ ಈಗೊಮ್ಮೆ ಹಿಂದಿರುಗಿ ನೋಡಬೇಕು. ಸವೆಸಿದ ಹಾದಿಯನ್ನು. ಎಡವಿದ ಕಲ್ಲುಗಳನ್ನು. ಜಾರಿಸಿದ ಇಳಿಜಾರನ್ನು. ಏರಿದ ಮೆಟ್ಟಿಲುಗಳನ್ನು. ತಲುಪಿದ ಗುರಿಗಳನ್ನು. ಅದು ನಮ್ಮನ್ನು ಬಲಗೊಳಿಸುತ್ತದೆ. Humbleಗೊಳಿಸುತ್ತದೆ. ನಮ್ಮೊಳಗು ಬೆಳಗದಿದ್ದರೆ ಜಗತ್ತು ಕತ್ತಲೆನಿಸುತ್ತದೆ. ಒಳಗೊಂದು ದೀಪ ಹಚ್ಚೋಣ.

 

Author Details


Srimukha

Leave a Reply

Your email address will not be published. Required fields are marked *