ದಶರೂಪಕ

ಸಂಗೀತಸುಧೆ : ಕಾಂಚನ ರೋಹಿಣಿ ಸುಬ್ಬರತ್ನಂ

 

ದಶರೂಪ ಅಥವಾ ದಶರೂಪಕವೆಂದು ಕರೆಯಲ್ಪಡುವ ಈ ಗ್ರಂಥವು ನಾಟ್ಯಶಾಸ್ತ್ರದಲ್ಲಿಯೇ ಒಂದು ಮಹತ್ತ್ವಪೂರ್ಣವಾದ, ಭರತಮುನಿ ಕೃತವಾದ ನಾಟ್ಯಶಾಸ್ತ್ರವನ್ನು ಆಧರಿಸಿದ, ಸರ್ವಾಂಗೀಯ ವಿವೇಚನೆಯುಳ್ಳ ಗ್ರಂಥವಾಗಿದೆ. ಇದನ್ನು ರಚಿಸಿದವನು ಧಾರಾನಗರಿಯಲ್ಲಿದ್ದ, ಭೋಜರಾಜನ ಚಿಕ್ಕಪ್ಪನಾಗಿದ್ದ, ಮಾಳವದ ಪರಮಾರ ವಂಶದ, ವಾಕ್ಪತಿ ಮುಂಜರಾಜನ ಆಸ್ಥಾನದಲ್ಲಿದ್ದ ಧನಂಜಯ. ಗ್ರಂಥದ ರಚನಾಕಾಲವು ಕ್ರಿ. ಶ. ಸುಮಾರು 950 ರಿಂದ 1000ರ ವರೆಗೆ.

 

ಸಂಸ್ಕೃತ ಭಾಷೆಯ ಈ ಗ್ರಂಥವು ಸಂಸ್ಕೃತದಲ್ಲಿ ದೃಶ್ಯಕಾವ್ಯ, ಎಂದರೆ ನಾಟಕದ ಲಕ್ಷಣಗಳನ್ನು ನಿರೂಪಿಸುವುದಾಗಿದ್ದು, ಶಾಸ್ತ್ರಕಾರರರು ಸಂಸ್ಕೃತದಲ್ಲಿ ಮುಖ್ಯವಾಗಿ ಹತ್ತು ರೂಪಕಗಳು, ಹದಿನೆಂಟು ಉಪರೂಪಕಗಳನ್ನು ಇವೆಯೆಂದು ಹೇಳಿದ್ದಾರೆ. ಅದರಲ್ಲಿ ಹತ್ತು ಬಗೆಯ ರೂಪಕಗಳನ್ನು ಈ ಗ್ರಂಥವು ಒಳಗೊಂಡಿದೆ. ಗ್ರಂಥವು ಪದ್ಯಸೂತ್ರವಾದ ಕಾರಿಕೆಗಳಲ್ಲಿ ಇದ್ದು, ಒಟ್ಟು 302 ಕಾರಿಕೆಗಳನ್ನೊಳಗೊಂಡ ನಾಲ್ಕು ಅಧ್ಯಾಯಗಳಲ್ಲಿ ಇವೆ. ಧನಂಜಯನು ‘ರಸ’ತತ್ತ್ವ ನಿರೂಪಣೆಗೆ ಹೆಚ್ಚು ಪ್ರಾಧಾನ್ಯವನ್ನಿತ್ತಿದ್ದು ಗ್ರಂಥವು ಮುಖ್ಯವಾಗಿ ನಾಟ್ಯ – ನಾಟಕಾದಿಗಳನ್ನು ನಿರೂಪಿಸಲು ಹೊರಟಿದ್ದರೂ ಅದರ ಪ್ರಕಾಶಗಳು ಕಾವ್ಯಲಕ್ಷಣಗಳನ್ನೂ ಹೇಳಿ, ದಶರೂಪಕಗಳ ಕಥಾವಸ್ತು ಹಾಗೂ ಅವುಗಳ ವಿನ್ಯಾಸದ ಕ್ರಮಗಳು, ನಾಯಕ-ನಾಯಿಕಾ ಭೇದಗಳು ಹಾಗೂ ಗುಣಲಕ್ಷಣಗಳು, ದಶರೂಪಕಗಳಲ್ಲಿ ರಸಪ್ರಯುಕ್ತಿ, ಹಾಗೂ ಅವುಗಳ ಅಭಿವ್ಯಕ್ತಿ, ರಸಗಳ ಪ್ರಕಾರಗಳು ಮುಂತಾದುವುಗಳನ್ನು ಒಳಗೊಂಡಿದೆ. ಅವನ್ನು ಎರಡು ಮುಖ್ಯವಾದ ಪದ್ಧತಿಗಳಾದ ಮಾರ್ಗ ಮತ್ತು ದೇಶೀಗಳ ರೂಪಕಗಳಿಗೆ ಅನ್ವಯಿಸಿದೆ.

 

ನಾಟ್ಯ ನೃತ್ಯ ನೃತ್ತಗಳಿಗೆ ಸರಳವಾದ, ಸೂತ್ರರೂಪದ ನಿರೂಪಣೆಯನ್ನು ಧನಂಜಯನು ನೀಡಿದ್ದಾನೆ. ‘ಅವಸ್ಥಾನುಕೃತಿರ್ನಾಟ್ಯಂ’ ಎಂದರೆ ಭಾವದ ವಿವಿಧ ಅವಸ್ಥೆಗಳ (ಅವಸ್ಥೆ = ಭಾವದ ಕ್ರಿಯಾರೂಪ) ಅನುಕರಣವೇ ನಾಟ್ಯ. ‘ಅನ್ಯದ್ ಭಾವಾಶ್ರಯಂ ನೃತ್ಯಂ’ ಎಂದರೆ ಭಾವವನ್ನು ಆಶ್ರಯಿಸಿರುವ ನೃತ್ಯವು ನಾಟ್ಯದಿಂದ ಭಿನ್ನವಾಗಿದೆ. ಏಕೆಂದರೆ ನಾಟ್ಯವು ರಸಾಶ್ರಯವಾದರೆ ನೃತ್ಯವು ಭಾವಾಶ್ರಯ, ನೃತ್ತವು ‘ತಾಲಲಯಾಶ್ರಯಂ’ ಎಂದರೆ ರಸಭಾವಗಳನ್ನು ಆಶ್ರಯಿಸದೆ ತಾಲ, ಲಯ ಎರಡನ್ನೇ ಅಂಗವಿಕ್ಷೇಪ ವಿಶೇಷತೆಗಾಗಿ ಆಶ್ರಯಿಸುವಂತಹದು, ಅಭಿನಯ ರಹಿತವಾದುದು ಎಂದು ಈ ಸೂತ್ರವು ಹೇಳಿದೆ. ನೃತ್ಯವು ಮಾರ್ಗನೃತ್ಯಕ್ಕೆ ಪೂರಕವೆಂದೂ, ನೃತ್ತವಾದರೆ ಆಂಗಿಕ ಚಲನೆಗಳನ್ನು ಹೊಂದಿದ್ದು ಲಯ – ಗತಿಗಳನ್ನು ಅವಲಂಬಿಸಿದೆಯೆಂದೂ, ಇದು ದೇಶೀನೃತ್ಯಕ್ಕೆ ಪೂರಕವೆಂದೂ ಧನಂಜಯನು ಹೇಳಿದ್ದಾನೆ. ಭರತನು ನಾಟ್ಯಶಾಸ್ತ್ರದಲ್ಲಿ ಹೇಳಿದ ರೂಪಕಗಳಿಗೆ ದಶರೂಪಕ ಗ್ರಂಥವು ನಾಯಿಕಾಭೇದ ಮುಂತಾದ ಕೆಲವು ವಿವರಗಳಲ್ಲಿ ಬೇರೆಯಾಗಿದ್ದರೂ ದಶರೂಪಕವು ನಾಟ್ಯಶಾಸ್ತ್ರದ ರೂಪಕಗಳಿಗೆ ಸರಳ ಕೈಪಿಡಿಯಾಗಿದೆ. ಗ್ರಂಥದಲ್ಲಿ ಶಾಂತರಸವನ್ನು ಹೊರತುಪಡಿಸಿ ಉಳಿದ ಎಲ್ಲ ರಸಗಳನ್ನು ಹೇಳಿದೆ.

 

ಧನಂಜಯನು ಹೇಳಿರುವ ದಶರೂಪಕಗಳು ಇಂತಿವೆ. ನಾಟಕ, ಪ್ರಕರಣ, ಭಾಣ, ಪ್ರಹಸನ, ಡಿಮ, ವ್ಯಾಯೋಗ, ಸಮವಾಕಾರ, ವೀಥಿ, ಅಂಕ (ಇದಕ್ಕೆ ಉತ್ಸೃಷ್ಟಿಕಾಂಕ ಎಂದು ಪೂರ್ಣ ಹೆಸರು), ಈಹಾಮೃಗ. ಮೊದಲನೆಯ ‘ನಾಟಕ’ವೆಂಬ ರೂಪಕಕ್ಕೆ ಶಾಕುಂತಲ, ಉತ್ತರರಾಮಚರಿತ, ನಾಗಾನಂದಗಳನ್ನು ಉದಾಹರಣೆಗಳನ್ನಾಗಿ ಕೊಟ್ಟಿದೆ. ಪ್ರಖ್ಯಾತ, ಧೀರೋದಾತ್ತ ವೀರ, ಶೃಂಗಾರ, ಕರುಣ ಮುಂತಾದ ರಸಗಳಲ್ಲಿ ಯಾವುದಾದರೂ ಒಂದು ಮುಖ್ಯವಾಗಿದ್ದು ಮಿಕ್ಕವು ಅದಕ್ಕೆ ಪೋಷಕವಾಗಿರುತ್ತವೆ. ಎರಡನೆಯ ಪ್ರಕರಣ ರೂಪಕಕ್ಕೆ ಮೃಚ್ಛಕಟಿಕ, ಮಾಲತೀಮಾಧವ ಕಾವ್ಯಗಳ ಪಾತ್ರಗಳನ್ನು ಉದಾಹರಣೆಯಾಗಿ ನೀಡಿದೆ. ಮೂರನೆಯದು ಭಾಣ. ಭಾಣದಲ್ಲಿ ಯುದ್ಧ, ಜಯಾಪಜಯಾದಿಗಳು ಬರಿಯ ಮಾತಿನಿಂದ ವರ್ಣಿಸಲ್ಪಡಬೇಕು. ನಾಲ್ಕನೆಯ ಪ್ರಸಹನರೂಪದ ಪಾತ್ರಗಳು ಕೀಳುಜನರ ಚರಿತ್ರೆ ಪಾಷಂಡ, ಬ್ರಾಹ್ಮಣ, ಚೇಟ ಇತ್ಯಾದಿಗಳಿರುತ್ತವೆ. ಐದನೆಯ ಡಿಮದಲ್ಲಿ ತ್ರಿಪುರ ಸಂಹಾರವು ಉದಾಹರಣೆಯಾಗಿ ಮಾಯೆ, ಇಂದ್ರಜಾಲ, ಕೋಪ, ಜಗಳ ಮುಂತಾದವುಗಳ ಕೋಲಾಹಲದಿಂದ ಕೂಡಿದ್ದು ದೇವ, ಗಂಧರ್ವ, ಯಕ್ಷ, ರಾಕ್ಷಸ, ಭೂತಪ್ರೇತಾದಿ ಉದ್ಧತರಾದ ಹದಿನಾರು ಪಾತ್ರಗಳನ್ನು ಹೇಳುತ್ತದೆ. ಆರನೆಯ ವ್ಯಾಯೋಗವು ಉದಾಹರಣೆಯಾಗಿ ನರಕಾಸುರ ಪಾತ್ರವನ್ನು ನೀಡಿದೆ ಮತ್ತು ಉದ್ಧತ (ಉದಾ:ಪರಶುರಾಮನಂತೆ ). ಏಳನೆಯ ಸಮವಾಕಾರದಲ್ಲಿ ಪ್ರಖ್ಯಾತವಾದ ದೇವಾಸುರ ವಿಚಾರಗಳೂ ಪ್ರಖ್ಯಾತರೂ ಉದಾತ್ತರೂ ಆದ ಹನ್ನೆರಡು ದೇವದಾನವರುಗಳನ್ನು ಹೇಳಿದೆ. ಎಲ್ಲ ವೃತ್ತಿಗಳೂ ಇದರಲ್ಲಿರಬೇಕು. ಎಂಟನೆಯದು ವೀಥಿ. ಇದರಲ್ಲಿ ಒಂದೆರಡು ಪಾತ್ರಗಳು ಶೃಂಗಾರರಸದ್ದಾಗಿದ್ದು ಇತರ ರಸಗಳೂ ಸ್ವಲ್ಪಸ್ವಲ್ಪ ಇರುತ್ತವೆ. ಒಂಬತ್ತನೆಯ ಅಂಕ (= ಉತ್ಸೃಷ್ಟಿಕಾಂತ)ವು ಸ್ತ್ರೀ ದುಃಖ ಸಂದರ್ಭಗಳಿಂದ ಕೂಡಿರುತ್ತದೆ. ಕರುಣಾರಸನ್ನು ಪ್ರಧಾನ ವಾಗಿದೆ. ಹತ್ತನೆಯ ಈಹಾಮೃಗ ಮಿಶ್ರರಸಗಳನ್ನುಳ್ಳದ್ದಾಗಿದೆ. ದಿವ್ಯಸ್ತ್ರೀಯನ್ನು ಅವಳ ಇಷ್ಟಕ್ಕೆ ವಿರುದ್ಧವಾಗಿ ಹೊತ್ತು ಕೊಂಡು ಹೋಗುವುದು ಇತ್ಯಾದಿಗಳಿದ್ದು ಧೀರೋದ್ಧಾತರಾದ ನಾಯಕ ಪ್ರತಿನಾಯಕರು ಇರುತ್ತಾರೆ. ಈ ರೂಪಕದಲ್ಲಿ ಬೇಕಾದಷ್ಟು ಕೋಪವಿದ್ದರೂ ಯುದ್ಧವನ್ನು ತರದೆ ಅದನ್ನು ಉಪಾಯವಾಗಿ ನಿವಾರಣೆಮಾಡಬೇಕು, ಮಹಾತ್ಮನ ವಧೆ ಸನ್ನಿವೇಶವಿದ್ದರೂ ಅದನ್ನು ಪ್ರದರ್ಶಿಸಬಾರದು. ಮುಂತಾದ ಈ ವಿವರಗಳೊಂದಿಗೆ, ರೂಪಕಗಳಿಗೆ ಇರಬೇಕಾದ ವೃತ್ತಿ, ಸಂಧಿ ಇತ್ಯಾದಿ ಅನೇಕ ವಿವರಗಳೂ ಇವೆ.

 

ಧನಂಜಯನು ಹದಿನೆಂಟು ಉಪರೂಪಕಗಳನ್ನು ಹೇಳಿದ್ದಾನೆ. ಅವು: ನಾಟಿಕಾ, ತ್ರೋಟಕ, ಗೋಷ್ಠೀ, ಸಟ್ಟಕ, ನಾಟ್ಯರಾಸಕ, ಪ್ರಸ್ಥಾನ, ಉಲ್ಲಾಪ್ಯ, ಕಾವ್ಯ, ಪ್ರೇಂಖಣ, ರಾಸಕ, ಸಂಲಾಪಕ, ಶ್ರೀಗದಿತ, ಶಿಲ್ಪಕ, ವಿಲಾಸಿಕ, ದುರ್ಮಲ್ಲಿಕಾ, ಪ್ರಕರಣಿ, ಹಲ್ಲೀಶ, ಭಾಣಿಕ. ‘ದಶರೂಪ’ದಲ್ಲಿ ಧನಂಜಯನು ನಾಟ್ಯ, ನೃತ್ಯ, ನೃತ್ತಗಳ ಪ್ರಭೇದಗಳು, ರೂಪಕಭೇದಗಳಿಗೆ ಕಾರಣಗಳು, ವಸ್ತುಭೇದಗಳು – ಅವುಗಳ ಲಕ್ಷಣ, ಪ್ರಾಸಂಗಿಕ ಲಕ್ಷಣ ಹಾಗೂ ಭೇದಗಳು, ಮುಂದೆ ನಡೆಯಲಿರುವ ಘಟನೆಯನ್ನು ಸೂಚಿಸುವ ರೂಪವಾದ ‘ಪತಾಕಾಸ್ಥಾನ’ದ ಲಕ್ಷಣ, ಇತಿವೃತ್ತದ ಫಲ, ಫಲಸಾಧನ, ಬಿಂದು ಲಕ್ಷಣ, ಐದು ಅರ್ಧಪ್ರಕೃತಿಗಳು, ಪಂಚಾವಸ್ಥೆಗಳ ಆರಂಭ, ಪ್ರಯತ್ನಗಳು, ಪ್ರಾಪ್ಯತೆ, ನಿಯತಾತ್ರಿ, ಸಭಾಗಮಗಳ ಲಕ್ಷಣಗಳು, ಸಂಧಿಗಳ ಉತ್ಪತ್ತಿ ಹಾಗೂ ಲಕ್ಷಣ, ಯುಕ್ತಿ ಲಕ್ಷಣ, ಪ್ರತಿಮುಖ ಸಂಧಿಯ ಹದಿಮೂರು ಅಂಗಗಳು, ಗರ್ಭಸಂಧಿ ಮತ್ತು ಅದರ ಅಂಗಗಳು, ಅವಮರ್ಶ ಸಂಧಿ ಮತ್ತು ಅದರ ಅಂಗಗಳು, ನಿರ್ವಹಣ ಸಂಧಿ ಹಾಗೂ ಈ ಸಂಧ್ಯಂಗಗಳ ಪ್ರಯೋಜನಗಳು, ವಸ್ತುವಿನ ಎರಡು ವಿಭಾಗಗಳು, ಐದು ಅರ್ಥೋಪಕ್ಷೇಪಗಳು ಇತ್ಯಾದಿಗಳನ್ನು ಹೊಂದಿವೆ. ರೂಪಕಭೇದಗಳು, ಭಾರತೀ ಮುಂತಾದ ವೃತ್ತಿಗಳು, ‘ಆಮುಖ’ದ ವಿವರಗಳು, ವೀಥಿಯ ಅಂಗಗಳು, ಪ್ರಕರಣ ಲಕ್ಷಣ, ನಾಟಿಕಾ ಲಕ್ಷಣ, ಭಾಣದ ಲಕ್ಷಣಗಳು ಇವೆ.

 

ಧನಂಜಯನ ತಮ್ಮನೆಂದು ಹೇಳಲಾದ ಧನಿಕನು ಮುಂಜರಾಜನ ಕಾಲಾನಂತರ ‘ದಶರೂಪಾವಲೋಕ’ವೆಂಬ ವ್ಯಾಖ್ಯೆಯನ್ನು ಬರೆದಿದ್ದಾನೆ. ಈ ವ್ಯಾಖ್ಯೆಯು ದಶರೂಪಕ ಗ್ರಂಥದ ಕಾರಿಕೆಗಳಿಗೆ ಬಹಳವಾಗಿ ಹೊಂದಿಕೊಂಡು ಅನೇಕ ಉದಾಹರಣೆಗಳನ್ನುಳ್ಳದ್ದಾಗಿ ಸಹಜವೂ, ಉಪಯುಕ್ತವೂ ಆಗಿವೆ. ಬಹುರೂಪ ಮಿಶ್ರ, ಭಟ್ಟನೃಸಿಂಹ, ಸಾಹಸಾಂಕ, ದೇವಪಾಣಿ, ಕುರವಿರಾಮ ಮುಂತಾದವರು ದಶರೂಪಕಗಳ ಮೇಲೆ ವ್ಯಾಖ್ಯಾನವನ್ನು ಬರೆದಿದ್ದಾರೆ. ಈ ಗ್ರಂಥದ ಅನಂತರ ರಚಿತವಾದ ಪ್ರತಾಪರುದ್ರೀಯ, ಏಕಾವಲೀ, ಸಾಹಿತ್ಯದರ್ಪಣ, ರಸಮಂಜರೀ ಎಂಬ ಗ್ರಂಥಗಳು ‘ದಶರೂಪಕ’ವನ್ನು ಆಶ್ರಯಿಸಿವೆ. ಈ ಗ್ರಂಥದಲ್ಲಿರುವ ಉದಾಹರಣೆಗಳು ಧನಂಜಯನಿಂದ ರಚಿತವಾದವುಗಳಲ್ಲ. ಅನೇಕ ಪ್ರಸಿದ್ಧ ನಾಟಕಗಳಿಂದ ಆರಸಿಕೊಂಡವುಗಳು. ಅವುಗಳಲ್ಲಿಯೂ ವೇಣೀಸಂಹಾರ ಮತ್ತು ರತ್ನಾವಳಿಯ ಉದಾಹರಣೆಗಳನ್ನು ಹೆಚ್ಚು ಹೊಂದಿದೆ. ದಶರೂಪಕವು ನೀಡಿದ ಈ ರೀತಿಯಾದ ಕಾವ್ಯಗಳ ಉದಾಹರಣೆಗಳು ಆಗಿನ ಕಾಲದಲ್ಲಿ ಇದ್ದ ರಂಗಭೂಮಿಯ ರೂಪವನ್ನು ಅರ್ಥೈಸಿಕೊಳ್ಳಲು ಹೆಚ್ಚು ಉಪಯುಕ್ತವಾಗಿವೆ. ಈಗಿನ ನೃತ್ಯ ಹಾಗೂ ಯಕ್ಷಗಾನ ಕಲಾವಿದರೂ ಧನಂಜಯನ ದಶರೂಪಕ ಗ್ರಂಥ ಲಕ್ಷಣಗಳನ್ನು ಅನ್ವಯಿಸಿಕೊಂಡಲ್ಲಿ ಪ್ರಾಚೀನ ರಂಗಭೂಮಿಯನ್ನು ಪುನಃ ಉಜ್ಜೀವಿಸಬಹುದು. ಸಂಗೀತಸುಧಾಕರವನ್ನು ಬರೆದ ಸಿಂಹಭೂಪಾಲನು ತಾನು ಕ್ರಿ. ಶ. 1332 – 33ರಲ್ಲಿ ರಸಾರ್ಣವ ಸುಧಾಕರವೆಂಬ ಗ್ರಂಥವನ್ನೂ ರಚಿಸಿದ್ದಾನೆ. ಈ ಗ್ರಂಥದಲ್ಲಿ ಸಿಂಹಭೂಪಾಲನು ಎಂಟು ರಸಗಳನ್ನೂ, ದಶರೂಪಕಗಳನ್ನೂ, ಪಂಚಛೇದಗಳು ನಾಟಕಲಕ್ಷಣ ಇತ್ಯಾದಿ ಲಕ್ಷಣಗಳನ್ನೂ ಹೇಳಿದ್ದಾನೆ. ಭಾರತೀಯ ಕಾವ್ಯಮೀಮಾಂಸೆಗೆ ಇರುವಂತೆಯೇ ನಾಟ್ಯಮೀಮಾಂಸೆಗೂ ಭಾರತೀಯ ಸಂಸ್ಕೃತಿ, ಸಮಾಜ ಹಾಗೂ ವೇದಾಂತಗಳ ಹಿನ್ನೆಲೆಯಿದೆಂಬುದನ್ನು ತನ್ನ ‘ದಶರೂಪಕ’ದಲ್ಲಿ ಧನಂಜಯನು ತೋರಿಸಿಕೊಟ್ಟಿದ್ದಾನೆ.

(ವಿವಿಧ ಆಕರಗಳಿಂದ)

Author Details


Srimukha

Leave a Reply

Your email address will not be published. Required fields are marked *