ಭರವಸೆಯು ಬಾಡದಿರಲಿ,ನಂಬುಗೆ ಬಗೆ ತುಂಬಲಿ

ಅಂಕಣ ಬಗೆಯೆಷ್ಟೋ ಮೊಗವಷ್ಟು : ಗಜಾನನ ಶರ್ಮಾ ಹುಕ್ಕಲು

ಬೆಳ್ಳಂಬೆಳಿಗ್ಗೆ ಮನೆಯ ಮೂಲೆಯಲ್ಲಿದ್ದ ತನ್ನ ಉಳಿತಾಯದ ಮಣ್ಣಿನ ಗೋಲಕವನ್ನು ಎತ್ತಿಹಾಕಿ‌, ಚದುರಿ ಬಿದ್ದ ಚಿಲ್ಲರೆ ಕಾಸನ್ನೆಲ್ಲ ಹೆಕ್ಕಿ ಎಣಿಸಿ, ಬೊಗಸೆಗೂಡಿಸಿಕೊಂಡು, ಓಡಿಬಂದು ಊರ ದೇಗುಲದ ದೇವರಮೂರ್ತಿಯೆದುರು  ನಿಂತಿದ್ದಳು ಆ ಆರರ ಪುಟ್ಟಬಾಲೆ. ಎಳೆನೀರ ತಿರುಳಿನಂತಿದ್ದ ಆಕೆಯ ಮೃದುಕಪೋಲದ ಮೇಲೆ ಕಂಬನಿ, ಧಾರೆ ಧಾರೆಯಾಗಿ ಜಾರುತ್ತಿತ್ತು. ಜಗತ್ತಿನ ಆತಂಕವೆಲ್ಲ ಆಕೆಯ ಪುಟ್ಟ ಬಟ್ಟಲುಗಣ್ಣುಗಳಲ್ಲಿ ಮನೆ ಮಾಡಿಕೊಂಡಿತ್ತು. ಏನನ್ನೋ ಕೇಳಲು ಆಕೆ ಅರ್ಚಕರ ಮುಖವನ್ನೇ ನೋಡುತ್ತ ಕ್ಷಣಕಾಲ ನಿಲ್ಲುತ್ತಾಳೆ. ಊಹುಂ, ಅರ್ಚಕರು ಮಂತ್ರ ಹೇಳುವುದರಲ್ಲಿ ತನ್ಮಯರು. ಯಾರೋ ಶ್ರೀಮಂತರು ಅರ್ಚನೆ ಮಾಡಿಸುತ್ತಿದ್ದರು. ಅಸಹಾಯಕ ಪುಟ್ಟಬಾಲೆ ಒಮ್ಮೆ ಸುತ್ತಲೂ ನೋಡಿ, ವಿಗ್ರಹವನ್ನು ನೋಡುತ್ತ  ಕೈಮುಗಿದು, “ದೇವರೇ, ನನ್ನ ಪುಟ್ಟ ತಂಗಿಯ ಖಾಯಿಲೆ ವಾಸಿ ಮಾಡು. ಅವಳೆಂದರೆ ನನಗೆ ಪ್ರಾಣ. ಅವಳಿಲ್ಲದಿದ್ದರೆ ನಾನೂ ಬದುಕಿರಲಾರೆ. ಅಪ್ಪ ಅಮ್ಮ ಮಾತನಾಡುತ್ತಿದ್ದರು, ನನ್ನ ತಂಗಿ ಉಳಿಯುವುದಾದರೆ ಪವಾಡವೇ ನಡೆಯಬೇಕಂತೆ. ಇದೋ, ನಾನು ಕೂಡಿಟ್ಟ ಹಣವನ್ನೆಲ್ಲ ತಂದಿದ್ದೇನೆ. ನನ್ನ ಎಣಿಕೆ ಸರಿಯಿದ್ದರೆ ಒಟ್ಟು ಐವತ್ತಾರು ರುಪಾಯಿಗಳಿವೆ. ಈ ಹಣವನ್ನೆಲ್ಲ ಹುಂಡಿಗೆ ಹಾಕುತ್ತೇನೆ, ನನ್ನ ತಂಗಿಯನ್ನು ಬದುಕಿಸುವ ಆ ಪವಾಡ ನಡೆಸಿಕೊಡು. ದೇವಾ, ನಾವು ಬಡವರಂತೆ. ಆಕೆಯ ಚಿಕಿತ್ಸೆಗೆ ತಗಲುವಷ್ಟು ಹಣ ನಮ್ಮ ಬಳಿ ಇಲ್ಲವಂತೆ. ಸ್ವಾಮೀ, ಹೇಗಾದರೂ ಮಾಡಿ ನನ್ನ ತಂಗಿಯನ್ನು ಉಳಿಸಿಕೊಡು.”

ಉದ್ವೇಗ ಆಕೆಯ ಸ್ವರವನ್ನು ತಾರಕಕ್ಕೇರಿಸಿತ್ತು. ಅವಳು ಬಿಕ್ಕಳಿಸುತ್ತ ಗಟ್ಟಿಯಾಗಿ ಬೇಡುತ್ತಲೇ ಇದ್ದಳು. ಅವಳಿಗೆ ಸುತ್ತಲಿನ ಪರಿವೆಯಿರಲಿಲ್ಲ. ಆಕೆಯ ಜಗತ್ತಿನಲ್ಲೀಗ ದೇವರು ಮತ್ತು ಆಕೆ ಇಬ್ಬರೇ. ಆರ್ತಳಾಗಿ ಪ್ರಾರ್ಥನೆ ಸಲ್ಲಿಸಿ,  ಕಣ್ಮುಚ್ಚಿ ಕಣ್ಣೀರಿಡುತ್ತ ಆ ಬಾಲಕಿ ಕೈಮುಗಿದು ನಿಂತೇ ಇದ್ದಳು- ಇನ್ನೊಂದು ಪುಟ್ಟ ಪ್ರತಿಮೆಯಂತೆ!

 


                  ಅರ್ಚನೆ ಮಾಡಿಸುತ್ತಿದ್ದ ಶ್ರೀಮಂತರು ಆ ಪುಟ್ಟ ಮುಖವನ್ನು ದಿಟ್ಟಿಸುತ್ತಾರೆ. ಎಳೆಯ ಕೆನ್ನಗಳ ಮೇಲೆ ಗೆರೆ ಎಳೆದಂತೆ ಇಳಿಯುತ್ತಿದ್ದ ಕಣ್ಣೀರ ಧಾರೆ ಅವರ ಕರುಳನ್ನು  ಇರಿಯುತ್ತದೆ. ಪುಟ್ಟ ಕಣ್ಣುಗಳಲ್ಲಿ ಹೆಪ್ಪುಗಟ್ಟಿದ್ದ ಆತಂಕ, ಮೊರೆ ಇಡುತ್ತಿದ್ದ ಸ್ವರದಲ್ಲಿ ಅಡಗಿದ್ದ ದುಗುಡ ಅವರನ್ನು ಕರಗಿಸುತ್ತದೆ. ಅವರು ಹನಿಗಣ್ಣಾಗಿ, “ಮಗೂ” ಎಂದು ಕರೆಯುತ್ತಾರೆ ಮೃದುವಾಗಿ. ಊಹುಂ, ಆಕೆಯ ಚಿತ್ತೈಕಾಗ್ರತೆ ಕಿಂಚಿತ್ತೂ ಕದಲಲಿಲ್ಲ! ವಿಗ್ರಹದ ಮೇಲೇ ನೆಟ್ಟಿದ್ದ ನೋಟ ಅಲುಗಾಡಲಿಲ್ಲ! ಶ್ರೀಮಂತರು ತಾವು ನಿಂತಲ್ಲಿಂದ ಈಚೆ ಬಂದು ಆಕೆಯನ್ನು ಹಾಗೇ ಎತ್ತಿ ಎದೆಗೊತ್ತಿಕೊಂಡು ಮುದ್ದಿಸಿ, ತಲೆ ನೇವರಿಸುತ್ತ,  “ಮಗೂ, ನಿನ್ನ ತಂಗಿಗೆ ನಾನು ಸಹಾಯ ಮಾಡುತ್ತೇನೆ ನಡೆ, ನಿಮ್ಮ ಮನೆ ಎಲ್ಲಿದೆ ತೋರಿಸು” ಎಂದರು. ಆಕೆ ಕೊಸರಿ ಅವರ ಅಪ್ಪುಗೆಯಿಂದ ಬಿಡಿಸಿಕೊಂಡು, ಕೆಳಗಿಳಿದು, “ಇಲ್ಲ, ಅದು ನಿಮ್ಮಿಂದ ಆಗುವುದಿಲ್ಲ. ನಿಮ್ಮಿಂದಲ್ಲ, ಯಾರಿಂದಲೂ ಆಗುವುದಿಲ್ಲ, ಅದು ಕೇವಲ ಪವಾಡದಿಂದ ಮಾತ್ರ ಸಾಧ್ಯ. ಪವಾಡ ಮಾಡಲು ನೀವೇನು ದೇವರೇ!?” ಶ್ರೀಮಂತರಿಗೆ ಮುಗ್ಧಬಾಲೆಯ ಮನಃಸ್ಥಿತಿ ಅರ್ಥವಾಗುತ್ತದೆ.

ಅವರು ಮೊಣಕಾಲೂರಿ ಕುಳಿತು ಅವಳನ್ನು ಬಳಿಗೆಳೆದುಕೊಂಡು, ಅವಳ ಆರ್ದ್ರ ಕಣ್ಣುಗಳನ್ನೇ ನೋಡುತ್ತ, “ಅರ್ಚಕರು ಮಂಗಳಾರತಿ ಮಾಡುವಾಗ ದೇವರು ಹೇಳಿದ್ದು ನಿನಗೆ ಕೇಳಿಸಲಿಲ್ಲವೇ? ಆತನಿಗೀಗ ಬಿಡುವಿಲ್ಲವಂತೆ, ಅದಕ್ಕೆ ಪವಾಡ ನಡೆಸಲು ನನಗೆ ಹೇಳಿದ್ದು ನಿನಗೆ ತಿಳಿಯಲಿಲ್ಲವೇ?”
  “ಹೌದಾ!? ದೇವರು ಪವಾಡ ಮಾಡಲು ನಿಮಗೆ ಹೇಳಿದ್ದಾನಾ? ಅದಕ್ಕೆ ಎಷ್ಟು ಖರ್ಚು ತಗಲುತ್ತದೆ. ನಾವು ಬಡವರು. ನಮ್ಮ ಬಳಿ ಹೆಚ್ಚು ಹಣವಿಲ್ಲ”
   “ಪವಾಡ ನಡೆಸಲು ಹೆಚ್ಚೆಂದರೆ ಐವತ್ತಾರು ರೂಪಾಯಿ ಖರ್ಚು ತಗಲಬಹುದು.”
“ಆಂ! ಐವತ್ತಾರು ರುಪಾಯಿ! ಅಷ್ಟೆಯಾ!?”
ಅವಳ ಕಣ್ಣು ಮಿನುಗುತ್ತದೆ. ಧ್ವನಿಯಲ್ಲಿದ್ದ ನಡುಕ ತಗ್ಗುತ್ತದೆ. ಆಕೆ ಧೃಢವಾಗಿ ಹೇಳುತ್ತಾಳೆ, “ಇಗೊಳ್ಳಿ, ಅಷ್ಟು ಹಣ ನನ್ನ ಬಳಿ ಇದೆ, ಈಗ ನೀವು ಪವಾಡ ಮಾಡಬಹುದು” ಎನ್ನುತ್ತ ತನ್ನ ಮುಷ್ಟಿಯಲ್ಲಿದ್ದ ಅಷ್ಟೂ ಚಿಲ್ಲರೆಯನ್ನು ಅವರ ಬೊಗಸೆಗೆ ಹಾಕಿ, “ನಿಮ್ಮ ಪವಾಡದಿಂದ ನನ್ನ ತಂಗಿ ಗುಣವಾಗುತ್ತಾಳಾ? ದೇವರು ನಿಮಗೆ ಪವಾಡ ಮಾಡುವುದು ಹೇಗೆಂದು  ಹೇಳಿಕೊಟ್ಟಿದ್ದಾನೆ ತಾನೆ?”
“ಅವನು ಹೇಳದಿದ್ದರೆ ನಾನೇಕೆ ನಿನ್ನ ತಂಗಿಯನ್ನು ಗುಣಪಡಿಸುವ ಪವಾಡಕ್ಕೆ ಮುಂದಾಗಲಿ? ನಡೆ, ನಿನ್ನ ಮನೆ ತೋರಿಸು”
          

 

ಅವರು ಅವಳೊಂದಿಗೆ ಮನೆಗೆ ಹೋಗಿ ಅವಳ ತಂಗಿಯನ್ನು ತಮ್ಮ ಒಡೆತನದಲ್ಲಿದ್ದ ನಗರದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಸೇರಿಸಿ, ವಿಶೇಷ ಚಿಕಿತ್ಸೆ ಕೊಡಿಸುತ್ತಾರೆ. ಮರಣೋನ್ಮುಖಿಯಾಗಿದ್ದ ಮಗು ಗುಣವಾಗಿ, ಅದು ಡಿಸ್ಚಾರ್ಜ್ ಆಗುವ ಸಂದರ್ಭದಲ್ಲಿ ಆಕೆಯ ತಾಯಿ, “ ಪಾಪ, ಚಿಕಿತ್ಸೆಗೆ ತಗುಲಿದ ಅಷ್ಟೂ ಹಣವನ್ನು  ಆ ಶ್ರೀಮಂತರೇ ಕೊಟ್ಟಿದ್ದಾರೆ. ಅವರ ಋಣ ತೀರಿಸುವುದು ಹೇಗೋ? ಒಟ್ಟು ಬಿಲ್ಲು ಕೆಲವು ಲಕ್ಷಗಳಾದರೂ ಆಗಿದ್ದೀತು” ಎಂದು ತಂದೆಯ ಬಳಿ ಹೇಳುತ್ತಿದ್ದುದನ್ನು ಕೇಳಿಸಿಕೊಂಡ ಆಕೆ, “ಅಮ್ಮಾ, ನೀನೇನೂ ಚಿಂತಿಸಬೇಡ, ಅವರಿಗೆ ಹಣವನ್ನು ಆಗಲೇ ಕೊಟ್ಟಾಗಿದೆ. ಚಿಕಿತ್ಸೆಯ ಖರ್ಚು ಕೆಲವು ಲಕ್ಷಗಳೇನಲ್ಲ. ಎಲ್ಲ ವೆಚ್ಚ ಸೇರಿ ಅದು ಒಟ್ಟು ಐವತ್ತಾರು ರುಪಾಯಿ. ಅದನ್ನು ನಾನು ಆ ದಿನವೇ ಅವರಿಗೆ ಕೊಟ್ಟಿದ್ದೇನೆ. ಅವರು ದೇವರು ಹೇಳಿದ ಪವಾಡ ಮಾಡಿದ್ದಾರೆ, ಅಷ್ಟೇ” ಎನ್ನುತ್ತಾಳೆ.

 


             ಕತೆಯ ಮುಂದಿನ ಭಾಗ ನಮಗಿಲ್ಲಿ ಬೇಡ. ನಮ್ಮ ಆಸಕ್ತಿ ಆ ಪುಟ್ಟ ಮಗುವಿನ ‘ಧೃಢ  ನಂಬಿಕೆ’ ಆ ಶ್ರೀಮಂತರಿಂದ ಎಂತಹ ಪವಾಡ ಮಾಡಿಸಿತು ಎಂಬುದರ ಬಗ್ಗೆ ಮಾತ್ರ. ಹೌದು, ಸಾಮಾನ್ಯ ಮನುಷ್ಯ ಪವಾಡ ಮಾಡಲಾರ. ಆದರೆ ಆತನ ಅಚಲ ನಂಬಿಕೆ ಅಸಾಮಾನ್ಯ ಪವಾಡಗಳನ್ನು ಮಾಡಬಲ್ಲದು.

ಹಾಗಲ್ಲದಿದ್ದರೆ ರಾಮನಿಗೆ ಅರಣ್ಯಮಧ್ಯದ ಆಶ್ರಮದಲ್ಲಿ ವೃದ್ಧೆ ಶಬರಿ ಕಾಯುತ್ತಿರುವಳೆಂದು ಹೇಳಿದವರು ಯಾರು? ಮತಂಗ ಮುನಿಯ ಆಶ್ರಮವೇನು ಗೋಲ್ಡನ್ ಕ್ವಾಡ್ರಿಲ್ಯಾಟರಲ್ ನ್ಯಾಶನಲ್ ಹೈವೇ ಪಕ್ಕದಲ್ಲಿತ್ತೇ ಅಥವಾ ಶಬರಿಯೇನು ನಿತ್ಯ ಧ್ವನಿವರ್ಧಕ ಹಾಕಿಕೊಂಡು ಪ್ರಾರ್ಥಿಸುತ್ತಿದ್ದಳೇ?

            ಆತನನ್ನು ಅಲ್ಲಿಗೆ ಸೆಳೆದದ್ದು ಆಕೆಯ ನಂಬಿಕೆ. ಅಲ್ಲಿ ಫಲಿಸಿದ್ದು ಆಕೆಯ ವಿಶ್ವಾಸ. ಅದು ತನ್ನ ಗುರುವಿನ ಮಾತಿನ ಮೇಲೆ ಆಕೆಗಿದ್ದ ಅತೀವ ಶ್ರದ್ಧೆಗೆ ಸಂದ ವರ. ಬಡಮುದುಕಿಯ ಅಸೀಮ ಶ್ರದ್ಧೆ ಮತ್ತು ಅಚಂಚಲ ನಂಬಿಕೆ ರಾಮನಂತಹ ರಾಮನನ್ನೇ ಅವಳಿರುವಲ್ಲಿಗೇ ಎಳೆದು ತಂದಿತು.
             ‘ಒಂದಲ್ಲ ಒಂದು ದಿನ ರಾಮ ಬಂದೇ ಬರುವ’ ಎಂಬ ಗುರುವಿನ ನುಡಿಯ ಮೇಲಿದ್ದ ಆಕೆಯ ನಂಬುಗೆಯ  ಫಲಿತಾಂಶವನ್ನು ನೋಡಿ! ಆಶ್ರಮಕ್ಕೆ ಆತ ಬರುವ ದಿನದವರೆಗೂ ಆಕೆಯ ಪಾಲಿಗೆ ಪ್ರತಿನಿತ್ಯ ಹಬ್ಬ! ಪ್ರತಿಕ್ಷಣ ನಿರೀಕ್ಷೆ! ಬಹುತೇಕ ಸಂದರ್ಭದಲ್ಲಿ  ಕಾಯುವಿಕೆ ಎಂಬುದೊಂದು ಘೋರ ಶಿಕ್ಷೆ. ಆದರೆ ಬರುವವರಲ್ಲಿ ನಮ್ಮ ನಂಬಿಕೆ ಗಟ್ಟಿಯಾಗಿದ್ದರೆ, ಅವರಲ್ಲಿ ನಮಗೆ ನಿಷ್ಕಳಂಕ ಪ್ರೀತಿ ಇದ್ದರೆ, ನಿರೀಕ್ಷೆ ಕೂಡ ನಲಿವಿನ ನಿತ್ಯೋತ್ಸವವಲ್ಲವೇ?
           ತನ್ನ ಗುರುವಿನ ಮಾತಿನಲ್ಲಿ ಆಕೆಗಿದ್ದ ವಿಶ್ವಾಸ ಅವಳ ಬದುಕಿಗೊಂದು ನಿಶ್ಚಿತ ಗುರಿ ಕೊಟ್ಟಿತ್ತು. ರಾಮನ ಬರುವಿಕೆಯನ್ನು ಕಾಯುವುದೇ ಅವಳ ಬದುಕಿನ ಏಕಮೇವ ತಪವಾಗಿತ್ತು. ಒಲವಿನ ಕಾಯಕವಾಗಿತ್ತು. ಪ್ರತಿನಿತ್ಯ ಅರುಣ ಕಿರಣ ಅಂಗಳಕ್ಕಿಳಿಯುವ ಮುನ್ನವೇ ಮೇಲೆದ್ದು, ಸ್ನಾನ ಮುಗಿಸಿ, “ಇಂದು ಬಂದೇ ಬರುವ”ನೆಂಬ ಭರವಸೆಯಲ್ಲಿ,  ನಡುಗುವ ನಡುವಿನ ಮೇಲೆ ಕೊಡವಿಟ್ಟುಕೊಂಡು ಕೊಳಕ್ಕೆ ಹೋಗಿ ಬಿಂದಿಗೆ ತುಂಬ ನೀರು ತಂದು ಅಂಗಳ ಸಾರಿಸುವಳು. ಅಂದದ ರಂಗವಲ್ಲಿಯ ಚಿತ್ತಾರವಿಕ್ಕಿ, ರಾಮನಿಗೆ ಕುಡಿಯಲು ಕೊಡಲು ಹಸುವಿನ ನೊರೆಹಾಲು ಕರೆದಿಕ್ಕುವಳು. ಕಾಡಲ್ಲಿ ಅಲೆದು ಮಾಮರದ ಹಸಿರೆಲೆಯನ್ನು ಹುಡುಕಿ ತಂದು ತೋರಣ ನೆಯ್ಯುವಳು. ಕಾಡುಮಲ್ಲಿಗೆಯ ಹೂಮಾಲೆ ಕಟ್ಟಿ ಕಾಯುವಳು. ಯಾಕೆಂದರೆ ಅಂದು ಹಬ್ಬ! ಅಂದು ಹೇಗೂ ರಾಮ ಬಂದೇ ಬರುವನಲ್ಲ!
    ಆಕೆಯ ಗಮನವೆಲ್ಲ ರಾಮಾಗಮನದ ಗಳಿಗೆಯ ನಿರೀಕ್ಷೆಯಲ್ಲಿ. ಅವಳದು ಒಂದೇ ತಪಸ್ಸು. ಅದು ರಾಮದರ್ಶನದ ಮಹತ್ತ್ವಾಕಾಂಕ್ಷೆ. ಹಾಗಾಗಿ ಎಲೆಯ ಸಪ್ಪುಳಾದರೆ ಅದು ರಾಮನ ಹೆಜ್ಜೆಯ ಸದ್ದು. ಟೊಂಗೆ ಅಲ್ಲಾಡಿದರೆ ಅದು ರಾಮನ ಸುಳಿವು. ಆಕೆಯ ಕಿವಿಗೆ ಕೇಳುವುದೆಲ್ಲ ರಾಮನ ಶಬ್ಧ. ಕಾಣುವುದೆಲ್ಲ ರಾಮನ ಚಿತ್ರ. ಮೂಗಿಗೆ ತಾಕುವುದೆಲ್ಲ ರಾಮನ ಕಂಪು, ನಾಲಗೆ ಒದ್ದೆ ಮಾಡುವುದೆಲ್ಲ ರಾಮರುಚಿ. ರಾಮನ ನೆನಹೊಂದಲ್ಲದಿದ್ದರೆ  ಅವಳಿಗೆ ಕಣ್ಣು ಮಬ್ಬು. ಕಿವಿ ಮಂದ. ನಾಲಗೆ ಜಡ್ಡು, ಬೆನ್ನುಗೂನು, ಮಂಡಿ ನೋವು, ಮೈತುಂಬ ಜಾಡ್ಯ. ರಾಮನ ವಿಷಯದಲ್ಲಿ ಸಕಲೇಂದ್ರಿಯಗಳೂ ಸರ್ವಶಕ್ತ.
     ಹಾಗಾಗಿ ಅವಳು ಸಮೀಪದ ಬೋರೆ ಗಿಡದ ಬಳಿ ಸಾಗಿ, ಮಾಗಿ ಉದುರಿದ ಹಣ್ಣನ್ನು ತಡತಡವಿ ಆಯ್ದು ಬುಟ್ಟಿಯಲ್ಲಿ ತಂದಿಟ್ಟುಕೊಂಡು ಕಾಯುತ್ತಿದ್ದಾಳೆ…. ಆತ ಬಾರನೇ!? ಶಬರಿಯ ಜೀವನದಿ ಕೊನೆಗೂ ರಾಮಸಾಗರವನ್ನು ಸೇರಲಾರದೇ?  ಗುರುವಿನ ಮಾತು ಹುಸಿಯಾಗಿ ಹೋದೀತೇ?
      

 

ಇಲ್ಲ, ಆತ ಬಂದ!  ಬತ್ತಿದ ಕಣ್ಣಿಗೆ ಬೆಳಕು ಬಿತ್ತು! ಆತ ದರ್ಶನವಿತ್ತ! ನಡುಗುವ ಕೈಯ್ಯಲ್ಲಿ ಬಡವಿಯಿತ್ತ ಎಂಜಲು ಬೋರೆಹಣ್ಣನ್ನು ಬಯಸಿ ತಿಂದ!!
     ಕಣ್ಣು ಕಾಣದ ಮುದುಕಿ
     ಮಣ್ಣು ಮರಳಲಿ ಹುಡುಕಿ
     ತಂದ ಹಣ್ಣುಗಳಲ್ಲಿ ಹುಳುಕು ಕೊಳಕೆಷ್ಟೋ?
     ಹುಚ್ಚು ಮುದುಕಿಯು ಕಚ್ಚಿ
     ಕೊಟ್ಟ ಹಣ್ಣಿನ ರುಚಿಯ
     ಮೆಚ್ಚಿ ತಿಂದೆಯೋ ತಂದೆ ಪ್ರೀತಿ ನಿನಗೆಷ್ಟೋ
     ಹಣ್ಣ ರುಚಿ ಹೆಚ್ಚೋ ಪ್ರೀತಿ ರುಚಿ ಹೆಚ್ಚೋ
     ಹಣ್ಣುಮುದುಕಿಯ ಹುಚ್ಚುಪ್ರೀತಿ ಹೆಚ್ಚೋ?
     ಪ್ರೀತಿ ಹೆಚ್ಚೋ? ಪ್ರೀತಿ ಹುಚ್ಚೋ?

 


‘ಹಣ್ಣು’ ಮುದುಕಿ ಎಂದು ಹೆಸರು ಬರಲು ಪ್ರಾಯಶಃ ಶಬರಿಯೇ ಕಾರಣವೋ ಏನೋ?  ತನ್ನ ನಂಬಿದವರ ಮೇಲೆ ರಾಮನ ಪ್ರೀತಿ ನೋಡಿ! ಆಕೆ ಕಚ್ಚಿ ಕೊಟ್ಟ ಹಣ್ಣನ್ನು ಎಂಜಲೆಂದು ನೋಡದೆ ಮೆಚ್ಚಿ, ಕಚ್ಚಿ ಕಚ್ಚಿ ಚಪ್ಪರಿಸಿ ತಿಂದ.  ಕುರುಡು ಮುದುಕಿ ತಡವಿ ಆಯ್ದ ತಂದ ಉದುರಿಬಿದ್ದ ಹಣ್ಣುಗಳವು! ಲಕ್ಷ್ಮಣನಿಗೆ ಹೇಳಿದರೆ ಸುಪಕ್ವ ಫಲಗಳನ್ನು ಆಯ್ದು ಕೊಯ್ದು ತಂದು ಕೊಡುತ್ತಿರಲಿಲ್ಲವೇ? ಆದರೆ  ಭಾವಕ್ಕಿಂತ ಭಗವಂತನಿಗೆ ಸ್ವಾದವುಂಟೆ? ಪ್ರೀತಿಗಿಂತ ಮಿಗಿಲುಂಟೆ? ಹಾಗಾಗಿಯೇ ನಮ್ಮ ನೆಲದಲ್ಲಿ ನಂಬಿಕೆಗೆ, ನಿರೀಕ್ಷೆಗೆ ಶಬರಿಯೊಂದು ರೂಪಕ! ಪ್ರೀತಿಗೆ, ಭರವಸೆಗೆ ರಾಮನೊಂದು ಪ್ರತಿಮೆ!     

 


      ಇಂತಹುದೇ ಒಂದು ಧೃಡ ನಂಬಿಕೆಯೇ ವೈಕುಂಠದ ವಿಷ್ಣುವನ್ನು ವಸುಂಧರೆಗೆ ಎಳೆದುತಂದು ರಾಮನನ್ನಾಗಿಸಿದ್ದಲ್ಲವೇ? ಸಮರಭೂಮಿಯಲ್ಲಿ ಸಾವು ಸನಿಹವಾಗಿದ್ದ  ಸಂಕಷ್ಟದ ಘಳಿಗೆಯಲ್ಲೂ ಸೂರ್ಯವಂಶದ ಚಕ್ರವರ್ತಿ ಅನರಣ್ಯನಿಗಿದ್ದದ್ದೂ ಅಂತಹುದೇ ಒಂದು ಅಚಲ ನಂಬಿಕೆ. ಹಾಗಾಗಿಯೇ ಅವನು ರಾವಣನೆಸಗುತ್ತಿದ್ದ ಕ್ರೌರ್ಯವನ್ನು ಲೆಕ್ಕಿಸದೇ ಆತನಿಗೆ  ಪೂರ್ಣ ಭರವಸೆಯಿಂದ ನುಡಿದದ್ದು,

“ಒಂದಲ್ಲ ಒಂದು ದಿನ ಬರುವ, ಬಂದೇ ಬರುವ
ನೊಂದವರ ಕಂಬನಿಯ ತೊಡೆಯೆ ರಾಮ
ಕುಲತಿಲಕ ನೆಲಕಿಳಿವ, ಸಕಲ ವ್ಯಾಕುಲ ತೊಳೆವ
ದುರುಳರನು ದಂಡಿಸುವ ಕೋದಂಡ ರಾಮ”


       ಮುಂದೆ ನಡೆದದ್ದೇ ರಾಮಾಯಣ! ಎಷ್ಟೋ ತಲೆಮಾರುಗಳ ಅನಂತರ ಅದೇ ಸೂರ್ಯವಂಶದಲ್ಲೇ ಹುಟ್ಟಿಬಂದ ರಾಮ, ದುರುಳ ರಾವಣನನ್ನು ಕೊಂದು ಭುವಿಯ ಭಾರ ಕಳೆಯಲಿಲ್ಲವೇ? ಇದೇ ತಾನೆ, ದೇಶಕಾಲಗಳಾಚೆಗೂ ಚಾಚುವ ನಂಬಿಕೆಯೆಂಬ ಗುರುತ್ವಾಕರ್ಷಕ ಶಕ್ತಿ? ಹಾಗಾಗಿಯೇ ಗುರುದೇವ ರವೀಂದ್ರನಾಥ್ ಟಾಗೋರರು ಹೇಳಿದ್ದು,


“Faith is the bird that feels the light when the dawn is still dark”


“ನಂಬುಗೆಯೆಂಬುದು ಮುಂಬೆಳಗು ಮೂಡುವ ಮುನ್ನವೇ ಶುಭೋದಯವನ್ನು ಸಾರುವ ಪಕ್ಷಿ”

Author Details


Srimukha

Leave a Reply

Your email address will not be published. Required fields are marked *