ಇಲ್ಲಿ ಯಾರೂ ಅಮುಖ್ಯರಲ್ಲ

ಅಂಕಣ ಭಾವ~ಬಂಧ : ಮಂಗಲಾ ಯಶಸ್ವಿ ಭಟ್.

ಮನೆಯಲ್ಲಿ ಒಂದು ಮದುವೆಯಿದೆ ಅಂದುಕೊಳ್ಳಿ. ಕೆಲಸಗಳು ಒಂದೇ ಎರಡೇ? ಪಟ್ಟಿ ಮಾಡಿದರೂ ಮುಗಿಯದ ಕೆಲಸ. ಮನೆ ತುಂಬಾ ನೆಂಟರು, ಗ್ರಾಮಸ್ಥರು. ಮನೆಯ ಯಜಮಾನನಿಂದ ಹಿಡಿದು, ಊರಿನ ಕೊನೆ ಮನೆಯವರೆಗೆ ಎಲ್ಲರೂ ಒಂದಿಲ್ಲೊಂದು ಕೆಲಸ ಮಾಡುವವರೇ. ಬಣ್ಣ ಬಳಿಯುವ ಕೆಲಸ, ಅಂಗಳ ಸಾರಿಸುವ ಕೆಲಸ, ಚಪ್ಪರ ಹಾಕುವ ಕೆಲಸ, ತೋರಣ ಕಟ್ಟುವ ಕೆಲಸ, ಅಡುಗೆ ಕೆಲಸ, ತರತರದ ತಿಂಡಿಗಳನ್ನು ಮಾಡುವ ಕೆಲಸ, ಬೇಕಾದಷ್ಟು ಹಾಲು, ಮೊಸರು, ತುಪ್ಪ, ಮಜ್ಜಿಗೆಗಳ ವ್ಯವಸ್ಥೆ ಮಾಡುವ ಕೆಲಸ, ತರಕಾರಿ ಹೆಚ್ಚುವ ಕೆಲಸ, ಹೂವು ಕೊಯ್ದು ಕಟ್ಟುವ ಕೆಲಸ. ಮದುಮಕ್ಕಳನ್ನು ಅಲಂಕರಿಸುವ ಕೆಲಸ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯದಷ್ಟು. ಪುರುಷರು, ಮಹಿಳೆಯರು, ಮಕ್ಕಳು, ಕೆಲಸದವರು ಒಟ್ಟಿನಲ್ಲಿ ಎಲ್ಲರೂ ಪುರುಸೊತ್ತಿಲ್ಲದಂತೆ ಯಾವುದಾದರೂ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ.

 

ಮೊನ್ನೆ ಮೊನ್ನೆ ಒಂದು ಮದುವೆಗೆ ಹೋಗಿದ್ದಾಗ ಅದೇಕೋ ‘ಇಲ್ಲಿ ಯಾರೂ ಅಮುಖ್ಯರಲ್ಲ. ಯಾವುದೂ ಯಃಕಶ್ಚಿತವಲ್ಲ’ ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳು ನೆನಪಾದವು. ಮದುವೆಗೂ, ಕುವೆಂಪು ಅವರ ಸಾಲುಗಳಿಗೂ ಏನು ಸಂಬಂಧ ಎಂದು ಯೋಚಿಸಬಹುದು. ಮದುವೆಯಾಗಲಿ ಅಥವಾ ಯಾವುದೇ ದೊಡ್ಡ ಕಾರ್ಯಕ್ರಮವಾಗಲಿ ಅದನ್ನು ಯಶಸ್ವಿಯಾಗಿ ನಡೆಸಲು ಕೈಜೋಡಿಸಿದ ಪ್ರತಿಯೊಬ್ಬರೂ ಮುಖ್ಯರೇ ಅಲ್ಲವೇ? ಮದುವೆಯ ಕೇಂದ್ರಬಿಂದುಗಳು ಮದುಮಕ್ಕಳಾದರೂ, ಒಂದು ಚಂದದ ಮದುವೆಯ ಹಿಂದೆ ಅದೆಷ್ಟೋ ಕಾಣದ ಕೈಗಳು ಕೆಲಸ ಮಾಡಿರುತ್ತವೆ. ಒಬ್ಬರನ್ನೇ ಬೊಟ್ಟು ಮಾಡಿ, ‘ಇವರು ತುಂಬಾ ಮುಖ್ಯ’ ಎಂದು ತೋರಿಸುವುದು ಅಸಾಧ್ಯ. ಹಾಗೆಯೇ  ಕಾರ್ಯಕ್ರಮದಲ್ಲಿ ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ಇರುತ್ತಾರೆ ನಿಜ. ಆದರೆ ಅದಕ್ಕಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಕಾರ್ಯಕ್ರಮಕ್ಕೆ ಬಂದ ಜನರೂ ಅಷ್ಟೇ ಮುಖ್ಯವಲ್ಲವೇ? ಒಬ್ಬರು ಮಾಡುವ ಕೆಲಸವನ್ನು ಇನ್ನೊಬ್ಬರು ಮಾಡಲಾರರು. ಅವರವರ ವ್ಯಾಪ್ತಿಯಲ್ಲಿ ಎಲ್ಲರೂ ಮುಖ್ಯರೇ ಅನ್ನಿಸಿತು. ಮೊದಲು ತಮಾಷೆಯಾಗಿ ನೆನಪಾದ ಆ ಸಾಲುಗಳು ಮನಸ್ಸನ್ನು ಬದುಕಿನೆಡೆಗೆ, ಸೃಷ್ಟಿಯೆಡೆಗೆ ಕೊಂಡೊಯ್ದವು.

 

ಬದುಕಿಗೆ ಉಸಿರು ಮುಖ್ಯ. ಉಸಿರಿಗೆ ಗಾಳಿ ಮುಖ್ಯ. ಗಾಳಿಗೆ ಹಸಿರು ಮುಖ್ಯ. ಹಸಿರಿಗೆ ನೀರು ಮುಖ್ಯ. ನೀರಿಗೆ ಬೆಳಕು ಮುಖ್ಯ. ಸಕಲ ಚರಾಚರ ವಸ್ತುಗಳಿಗೂ ಸೂರ್ಯನ ಬೆಳಕು ಅತಿಮುಖ್ಯ ಹಾಗೂ ಅತ್ಯಗತ್ಯ. ಅವನಿಲ್ಲದೇ ಬದುಕು ಅಸಾಧ್ಯ. ಆದರೆ ಅವನೊಬ್ಬನೇ ಸಾಕೇ? ಪ್ರಪಂಚಕ್ಕೆಲ್ಲ ಸವಿನಿದ್ರೆ ಕೊಡುವ ಚಂದ್ರನೂ ಬೇಕು. ಸಿಹಿನೀರಿಗಾಗಿ ನದಿಗಳು ಬೇಕು. ಉಪ್ಪಿಗಾಗಿ ಸಮುದ್ರ ಬೇಕು. ಸೃಷ್ಟಿಯ ಅಣುಅಣುವೂ, ಕ್ರಿಮಿ-ಕೀಟಗಳೂ, ಖಗ-ಮೃಗಗಳೂ, ತರು-ಲತೆಗಳೂ, ಹಳ್ಳ-ಕೊಳ್ಳಗಳೂ, ನದಿ-ನದಗಳೂ, ವಿಶಾಲ ಸಾಗರಗಳೂ, ಕಣಿವೆ-ಪರ್ವತಗಳೂ ಹೀಗೆ ಸೃಷ್ಟಿಯಲ್ಲಿ ಅಪ್ರಯೋಜಕ ಅಥವಾ ಯಃಕಶ್ಚಿತ್ ಎಂಬ ವಸ್ತು-ವಿಷಯಗಳೇ ಇಲ್ಲ. ಒಂದು ಮನೆ ಕಟ್ಟುವಾಗ ಅಡಿಪಾಯದಷ್ಟೇ ಗೋಡೆಗಳು, ಬಾಗಿಲುಗಳು ಮುಖ್ಯ. ಒಂದೊಂದು ಇಟ್ಟಿಗೆಯೂ, ಮರಳಿನೊಂದೊಂದು ಕಣಗಳದ್ದೂ ಪ್ರಮುಖ ಪಾತ್ರವಿರುತ್ತದೆ. ಮನೆಯ ಯೋಜನೆ ತಯಾರಿಸಿ, ರೂಪುರೇಷೆ ಮಾಡಿಕೊಡುವ ಇಂಜಿನಿಯರ್ ನಷ್ಟೇ ಬೆವರು ಸುರಿಸಿ, ಒಂದೊಂದೇ ಇಟ್ಟಿಗೆ ಪೇರಿಸಿ, ಕಟ್ಟಡವನ್ನು ಎಬ್ಬಿಸಿದ ಕಾರ್ಮಿಕರು ಕೂಡ ಮುಖ್ಯ. ಸುಭಾಷಿತವೊಂದು ಹೇಳುವ ಮಾತು,  ಅಮಂತ್ರಮಕ್ಷರಂ ನಾಸ್ತಿ ನಾಸ್ತಿಮೂಲಮನೌಷಧಮ್ । ಅಯೋಗ್ಯಃ ಪುರುಷೋ ನಾಸ್ತಿ. ಯೋಚಿಸುತ್ತಾ ಹೋದರೆ ಈ ಮಾತುಗಳು ನೂರಕ್ಕೆ ನೂರು ಸತ್ಯ.     

 

ಒಂದು ಕುಟುಂಬದಲ್ಲಿ ತಮ್ಮ ಕೆಲಸವನ್ನು ಕೂಡ ಮಾಡಿಕೊಳ್ಳಲು ಆಗದಷ್ಟು ವಯಸ್ಸಾದವರು ಇರಬಹುದು. ಆದರೆ ಅವರನ್ನು ತಾತ್ಸಾರ ಮಾಡುವುದು ಎಷ್ಟು ಸರಿ? ಅವರ ಬದುಕಿನ ಅನುಭವಗಳು ಇಂದಿನ ಪೀಳಿಗೆಗೆ ಪಾಠವಾಗುತ್ತದೆ. ಒಂದೊಂದು ಮನೆಯಲ್ಲಿ ಗಂಡಸು ಮಾತ್ರ ಹೊರಗೆ ಹೋಗಿ ದುಡಿದು ಬರುತ್ತಾನೆ. ಹೆಂಗಸು ಮನೆಯಲ್ಲಿಯೇ ಇರುತ್ತಾಳೆ. ಒಂದೊಂದು ಮನೆಯಲ್ಲಿ ಒಬ್ಬ ಮಗ ದೊಡ್ಡ ಕೆಲಸದಲ್ಲಿದ್ದಾನೆ. ಇನ್ನೊಬ್ಬ ಓದದೇ ಮನೆಕೆಲಸಗಳನ್ನು ನೋಡಿಕೊಳ್ಳುತ್ತಾನೆ. ಅವರಲ್ಲಿ ಯಾರು ಮುಖ್ಯ ಎಂಬ ಹೋಲಿಕೆ ಸಲ್ಲ. ಸಂಸಾರ ಸಸಾರವಾಗಿ ಸಾಗಲು ಎಲ್ಲರೂ ಮುಖ್ಯರೇ. ಕಗ್ಗದ ಕವಿ ಈ ಭಾವದಲ್ಲಿಯೂ ಹೇಳಿರಬೇಕು,

ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು ।

ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ।।

ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ।

ಜಸವು ಜನಜೀವನಕೆ ಮಂಕುತಿಮ್ಮ  ।।

ಎಂದು.

  

 

ಎಲ್ಲರೂ ಜೀವನದಲ್ಲಿ ಕೆಲವು ವಿಷಯಗಳನ್ನು ತುಂಬ ಮುಖ್ಯ ಎಂದು ಅಂದುಕೊಂಡಿರುತ್ತಾರೆ.

ಒಬ್ಬ ರಾಜನಿಗೆ ತನ್ನ ರಾಜ್ಯದ ಸುಭಿಕ್ಷತೆ, ಪ್ರಜೆಗಳ ಸುಖ ಮುಖ್ಯ. ಸಾಮಾನ್ಯ ವ್ಯಕ್ತಿಗೆ ತನ್ನ ಮನೆ, ಮನೆಯವರು, ತನ್ನ ವೃತ್ತಿ ಮುಖ್ಯ. ದೇಶ ಕಾಯುವ ಯೋಧನಿಗೆ ದೇಶದ ಜನರ ಸುರಕ್ಷತೆ ಮುಖ್ಯ. ಒಬ್ಬ ಯತಿಗೆ ಇಡೀ ಸಮಾಜದ ಒಳಿತು ಮುಖ್ಯ.  

 

ಇನ್ನೂ ಕೆಲವರಿರುತ್ತಾರೆ. ಸಮಾಜ ಸುಧಾರಣೆಯ ಹೆಸರಿನಲ್ಲಿ ತಮ್ಮ ಬೊಕ್ಕಸ ತುಂಬಿಸಿಕೊಳ್ಳುವವರು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವವರು. ಜೀವನದಲ್ಲಿ ಕೇವಲ ಸ್ವಾರ್ಥಸಾಧನೆಯೇ ಮುಖ್ಯವೆಂದುಕೊಂಡಿರಬಹುದು ಅವರು. ತನ್ನನ್ನು ಹೊರತುಪಡಿಸಿ, ಬೇರೆಯವರನ್ನೆಲ್ಲ ಕೇವಲವಾಗಿ ಕಾಣುವವರು. ಅಂತಹವರ ಬಗ್ಗೆ ಮಾತನಾಡುವುದು ನನಗೆ ಈಗ ಮುಖ್ಯವೆನಿಸುತ್ತಿಲ್ಲ.

 

ಒಂದೊಂದು ವಯಸ್ಸಿನಲ್ಲಿ, ಒಂದೊಂದು ಕಾಲದಲ್ಲಿ, ಒಂದೊಂದು ಜಾಗದಲ್ಲಿ ಬೇರೆ ಬೇರೆ ಸಂಗತಿಗಳು ಮುಖ್ಯವೆನಿಸುತ್ತವೆ. ನಮ್ಮ ಜೀವನದುದ್ದಕ್ಕೂ ಹಲವು ಅಂಶಗಳು, ಹಲವು ವ್ಯಕ್ತಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ನಾವು ಮುಖ್ಯವೆಂದು ಅಂದುಕೊಂಡ ಅಂಶಗಳು ಅಥವಾ ವ್ಯಕ್ತಿಗಳು ನಮ್ಮ ಏಳ್ಗೆಗೂ ಕಾರಣವಾಗಬಹುದು. ಪತನಕ್ಕೂ ಕಾರಣವಾಗಬಹುದು. ಪತನವೂ ಪಾಠವೇ. ಪಾಠವೂ ಮುಖ್ಯವೇ. ಇದು ನನಗೆ, ‘ನನ್ನ ಜೀವನದಲ್ಲಿ ಏನು ಮುಖ್ಯ? ನನ್ನ ಜೀವನದಲ್ಲಿ ಯಾರದು ಪ್ರಮುಖ ಪಾತ್ರ?’ ಎಂದು ಯೋಚಿಸಿದಾಗ ಸಿಕ್ಕ ಉತ್ತರ.

 

ರಾಮನಂತಹ ಪುರುಷೋತ್ತಮನು ಕಲ್ಲಾದ ಅಹಲ್ಯೆಯನ್ನು, ಗುಹನನ್ನು, ಜಟಾಯುವನ್ನು,  ವಾನರರರನ್ನು, ಸೇತುವೆ ನಿರ್ಮಾಣಕ್ಕೆ ಮರಳಸೇವೆ ಒದಗಿಸಿದ ಅಳಿಲುಗಳನ್ನು, ಪ್ರಜೆಗಳನ್ನು ತುಂಬಾ ಗೌರವದಿಂದ ಕಂಡ. ಅಷ್ಟೇ ಅಲ್ಲ, ರಾವಣ ಮರಣಾವಸ್ಥೆಯಲ್ಲಿದ್ದಾಗ, ಅವನಲ್ಲಿದ್ದ ವಿದ್ಯೆಗಳನ್ನು ಕಲಿಯುವಂತೆ ಲಕ್ಷ್ಮಣನಿಗೆ ರಾಮನು ಹೇಳಿದ್ದ ಎಂದೂ ಒಂದು ಕಡೆ ಹೇಳಲಾಗುತ್ತದೆ. ಈ ಕಥೆಯನ್ನು ಕೇಳಿದಾಗ ರಾಮನು ರಾವಣನನ್ನೂ ಕೇವಲವಾಗಿ ಕಾಣದೇ, ಅವನ ದುಷ್ಟತನವನ್ನು ಶಿಕ್ಷಿಸಿ, ಅವನ ಮೇಧಾವಿತನವನ್ನು ಗೌರವಿಸಿರಬೇಕು ಅನ್ನಿಸಿತು. ಯಾರನ್ನೇ ಆಗಲೀ, ಯಃಕಶ್ಚಿತ್ ಎಂಬ ಭಾವದಿಂದ ನೋಡದೇ ಇದ್ದರೆ, ಅಲ್ಲಿ ಗೌರವಾದರಗಳು ಸಹಜವಾಗಿ ಮೂಡುತ್ತವೆ.     

     

 

‘ಇಲ್ಲಿ ಯಾರೂ ಅಮುಖ್ಯರಲ್ಲ. ಯಾವುದೂ ಯಃಕಶ್ಚಿತವಲ್ಲ’ ಈ ಸಾಲುಗಳನ್ನು ಅರ್ಥ ಮಾಡಿಕೊಂಡರೆ ಮಾತ್ರ ಸೃಷ್ಟಿಯ ಸೊಬಗನ್ನು ಅನುಭವಿಸಲು ಸಾಧ್ಯ. ಗೌರವಿಸಲು ಸಾಧ್ಯ.

ಭಗವಂತ ತುಂಬ ಜಾಣ. ಸೃಷ್ಟಿಯ ಕಣಕಣದಲ್ಲಿ ಕಾಣದಂತೆ ಅಡಗಿದ್ದಾನೆ. ಅವನದೇ ಸೃಷ್ಟಿಯಲ್ಲಿ, ಅವನದೇ ಅಂಶಗಳಾದ ಜೀವಗಳು ಅಮುಖ್ಯರಾಗಲು ಹೇಗೆ ಸಾಧ್ಯ?  

 

ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ |

ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಮ್ ||

 

‘ಅರ್ಜುನ, ಸಮಸ್ತ ಜೀವಿಗಳಲ್ಲಿ ಏನೆಲ್ಲ ವಿಶಿಷ್ಟ ಗುಣವಿದೆಯೋ, ಅವುಗಳಲ್ಲಿ ನಾನೇ ಇದ್ದು ಆ ಶಕ್ತಿ ನೀಡಿದ್ದೇನೆ. ನನ್ನನ್ನು ಹೊರತುಪಡಿಸಿ ಈ ಚರಾಚರದಲ್ಲಿ ಯಾವುದೂ ತಾನೇ ತಾನಾಗಿ ಇಲ್ಲ’ ಎಂಬ ಸ್ವತಃ ಕೃಷ್ಣನ ಉಪದೇಶವಾಕ್ಯವೇ ಇದಕ್ಕೆ ಪ್ರಮಾಣ.   

 

ಕೊನೆಹನಿ – ದೇವನ ಸೃಷ್ಟಿಯಲ್ಲಿ ಎಲ್ಲದಕ್ಕೂ ಅದರದೇ ಆದ ಮೌಲ್ಯವಿದೆ. ಎಲ್ಲರೂ ಪರಮಾತ್ಮನ ತೇಜೋಂಶಸಂಭವರೇ. ಅದನ್ನರಿತುಕೊಂಡು, ಸೃಷ್ಟಿಯ ಸಕಲವನ್ನೂ ಗೌರವಿಸೋಣ. ಸಕಲರನ್ನೂ ಆದರಿಸೋಣ.  

 

 

 

Author Details


Srimukha

Leave a Reply

Your email address will not be published. Required fields are marked *