ಕೇಳಿದಿರಾ ಸ್ವಾತಂತ್ಯಕ್ಕಾಗಿನ ಮೊದಲ ಹೋರಾಟದ ಯಶೋಗಾಥೆಯನ್ನು

ಅಂಕಣ ಜಾಗೃಯಾಮ : ಶಿಶಿರ ಅಂಗಡಿ

ಸುಮಾರು 25-30 ವರ್ಷದ ಸ್ನಿಗ್ಧ ಸೌಂದರ್ಯದ 20 ಮಹಿಳೆಯರು ತನ್ನತ್ತ ಬರುವುದನ್ನು ಆ ಕಾವಲುಗಾರ ಗಮನಿಸಿದ. ಅವನಿಗೆ ಯಾವ ಅನುಮಾನವೂ ಬರಲಿಲ್ಲ. ಎರಡು ಮಹಿಳೆಯರು ದೊಡ್ಡ ದೊಡ್ಡ ಮಡಿಕೆಗಳನ್ನೂ, ಎರಡು ಮಹಿಳೆಯರು ಹತ್ತಿಯ ಮುದ್ದೆಯನ್ನೂ, ಕೆಲವರು ಹೂವಿನ ಬುಟ್ಟಿಗಳನ್ನು ಮತ್ತು ಕೆಲವರು ದೀಪ ಹಚ್ಚುವ ಹಣತೆಗಳನ್ನು ಹಿಡಿದುಕೊಂಡು ಬಂದಿದ್ದರು. ಹತ್ತಿರ ಬಂದ ಕೂಡಲೇ ಕಣ್ಣಿನಲ್ಲೇ ಅವರ ಸೌಂದರ್ಯವನ್ನು ಸವಿದ ಕಾವಲುಗಾರ, ಅವರನ್ನು ತಡೆಯಲು ಪ್ರಯತ್ನಿಸಿದಾಗ, ಕದ್ದುಮುಚ್ಚಿ ತಂದಿದ್ದ ಶಸ್ತ್ರಾಸ್ತ್ರಗಳಿಂದ ಕಾವಲುಗಾರನನ್ನು ಬಡಿದು ದೇವಸ್ಥಾನದ ಒಳ ಬರುತ್ತಾರೆ. ಆ ಮಹಿಳೆಯರ ತಂಡದಲ್ಲಿ ಒಬ್ಬಳು ನಾಯಕಿ ಇದ್ದಳು. ಆ ನಾಯಕಿಯ ಹಿನ್ನೆಲೆಯನ್ನು ಮೊದಲು ನೋಡಿ ಮತ್ತೆ ದೇವಸ್ಥಾನದ ಕಡೆ ಬರೋಣ.

 


1770ರ ಸಮಯವದು. ತಮಿಳುನಾಡಿನ ಶಿವಗಂಗೈ ಪ್ರಾಂತ್ಯವನ್ನು ಮುತ್ತು ವಡಗುನಾಥ ತೇವರ್ ಎಂಬ ರಾಜ ಆಳುತ್ತಿದ್ದ. ಬ್ರಿಟೀಷರು ಮತ್ತು ಆರ್ಕೋಟದ‌ ನವಾಬರು ಸೇರಿ ಆ ರಾಜನನ್ನು ಕೊಲ್ಲುತ್ತಾರೆ. ಆ ಶಿವಗಂಗೈ ಪ್ರಾಂತ್ಯವನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಾರೆ. ಮಂತ್ರಿಗಳು, ಸೈನಿಕರು ಚಿಂತಾಕ್ರಾಂತರಾಗಿರುತ್ತಾರೆ. ಅಂತಹ ಸಂದರ್ಭದಲ್ಲೂ ಧೃತಿಗೆಡದೆ ರಾಣಿ ವೇಲು ನಾಚಿಯಾರ್ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಿ, ಆ ಕೂಡಲೇ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಗೆಲ್ಲಬೇಕು ಎಂದು ನಿರ್ಧರಿಸುತ್ತಾರೆ.

 


ರಾಣಿ ವೇಲು‌ ನಾಚ್ಚಿಯಾರ್ ಮತ್ತು ಮಗಳು ವೆಳ್ಳಾಚ್ಚಿ ಇಬ್ಬರೂ ದಿಂಡುಗಲ್ ಪಕ್ಕ ವಿರೂಪಾಚ್ಚಿ ಎಂಬಲ್ಲಿ ಅಜ್ಞಾತವಾಸದಲ್ಲಿ ಇರುತ್ತಾರೆ. ಒಂದು ಕಡೆ ರಾಜ್ಯ ಮತ್ತು ಗಂಡನನ್ನು ಕಳೆದುಕೊಂಡ ದುಃಖ ಇನ್ನೊಂದು ಕಡೆ ತನ್ನದೇ ರಾಜ್ಯದಲ್ಲಿ ತಲೆಮರೆಸಿಕೊಂಡು ಇರಬೇಕು ಎಂಬ ಕ್ರೋಧಗಳಿಂದ ಕುದ್ದು ಹೋದ ಬ್ರಿಟಿಷರ ಮತ್ತು ನವಾಬರ ಮೇಲೆ ಯುದ್ಧ ಮಾಡಿ ಗೆದ್ದು ತನ್ನ ಪ್ರಾಂತ್ಯವನ್ನು ಮರಳಿ ಪಡೆಯುವ ಯೋಜನೆ ಹಾಕುತ್ತಾಳೆ. ಅಜ್ಞಾತವಾಸದಲ್ಲಿ ಇದ್ದುಕೊಂಡೇ ಒಂದು ಮಹಿಳಾ ಸೈನ್ಯವನ್ನು ಕಟ್ಟುತ್ತಾರೆ ಮತ್ತು ಅದಕ್ಕೆ ಯುದ್ಧಕಲೆಗಳ‌ ತರಬೇತಿ ನೀಡುತ್ತಾರೆ ಜೊತೆಗೆ ಯುದ್ಧವೊಂದಕ್ಕೆ‌ ಸನ್ನದ್ಧುಗೊಳಿಸುತ್ತಾರೆ.

 


ರಾಣಿಯನ್ನು ಕೊಲ್ಲಬೇಕು ಎಂಬ ಬ್ರಿಟೀಷರ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇತ್ತು.   ಎರಡು ಬಾರಿ ಅಂತೂ ರಾಣಿಯ ಮೇಲೆ ನೇರವಾಗಿ ಆಕ್ರಮಣವೂ ಆಗಿತ್ತು. ಎಲ್ಲ ಸಲವೂ ತನ್ನ ಜೀವದ ಹಂಗು ತೊರೆದು ರಾಣಿಯ ಜೀವವನ್ನು ಕಾಪಾಡಿದ್ದು ಕುಯಿಲಿ ಎಂಬ ಹೆಣ್ಣುಮಗಳು‌. ಅಂದಿನಿಂದ ಕುಯಿಲಿಯು ರಾಣಿಯ ಅಂಗರಕ್ಷಕಳಾಗಿ ನೇಮಕವಾಗುತ್ತಾಳೆ.

 


ಕುಯಿಲಿ ರಾಣಿಯ ಜೊತೆಗೆ ಇರುವವರೆಗೂ ರಾಣಿಯನ್ನು ಕೊಲ್ಲಲಾಗುವುದಿಲ್ಲ ಎಂಬುದನ್ನು ಅರಿತ ಬ್ರಿಟಿಷರು, ಕುಯಿಲಿಯನ್ನು ತಮ್ಮತ್ತ ಸೆಳೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಅವಳಿಗೆ ಮತ್ತು ಅವಳ ಸಮಾಜಕ್ಕೆ ತೊಂದರೆ ಕೊಡುವ ಮೂಲಕ ಅವಳನ್ನು ಬೆದರಿಸುವ ಪ್ರಸಂಗವೂ ನಡೆಯಿತು.‌ ಆದರೆ ಇದ್ಯಾವುದಕ್ಕೂ ಕುಯಿಲೆಯ ನಿಷ್ಠೆ ಬದಲಾಗಲಿಲ್ಲ ಯಾವುದೇ ಕಾರಣಕ್ಕೂ ರಾಣಿಯನ್ನು ಬಿಟ್ಟು ಕದಲಲಿಲ್ಲ. ಅಷ್ಟು ಮಾತ್ರ ಅಲ್ಲ ಇನ್ನೂ ಹೆಚ್ಚಿನ ವೀರಾವೇಶದಿಂದ ಬ್ರಿಟೀಷರ ವಿರುದ್ಧ ಹೋರಾಡುತ್ತಾಳೆ.  ಈ ಸ್ವಾಮಿನಿಷ್ಠೆ ಮತ್ತು ಅವಳ ವೀರತ್ವವನ್ನು ಗಮನಿಸಿ ರಾಣಿ ತನ್ನ ಮಹಿಳಾ ಸೈನ್ಯದ ಸೇನಾಧಿಪತಿಯನ್ನಾಗಿ ಕುಯಿಲಿಯನ್ನು ನಿಯೋಜಿಸಿಕೊಳ್ಳುತ್ತಾಳೆ. ಪಾಂಡ್ಯ ರಾಜರು, ಅಕ್ಕ ಪಕ್ಕ ಪ್ರಾಂತ್ಯದ ದೊರೆಗಳು, ಗೋಪಾಲ್ ರಾಯ್ಕರ ಅವರ ಸೈನ್ಯದ ನೆರವು ಪಡೆದು ಬ್ರಿಟಿಷರೊಂದಿಗೆ ಅನೇಕ ಯುದ್ಧಗಳನ್ನು ಮಾಡಿ ಗೆಲ್ಲುತ್ತಾರೆ.

 


ಬ್ರಿಟಿಷರ ಕೈಯಿಂದ ಕೋಟೆಯೊಂದನ್ನು ವಶಪಡಿಸಿಕೊಂಡರೆ ಪ್ರಾಂತ್ಯವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಆಗುತ್ತದೆ ಹಾಗಾಗಿ ಯುದ್ಧ ಸಾರೋಣ ಎಂದು ಚಿಂತಿಸದರು. ಆದರೆ ಅಲ್ಲೊಂದು ಸಮಸ್ಯೆ ಇತ್ತು. ಬ್ರಿಟಿಷರ ಬಳಿ ಇರುವ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಬಂದೂಕುಗಳು. ನಮ್ಮ ಬಳಿ ಇರುವುದು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು. ನಮ್ಮ ಸೈನಿಕರು ಅವರನ್ನು ನೋಡಿ ಗುರಿ ಬಿಡುವುದರೊಳಗೆ ಅವರು ನಮ್ಮ ಹತ್ತು ಜನ ಸೈನಿಕರನ್ನು ಕೊಲ್ಲುವ ಸಾಮಾರ್ಥ್ಯದ ಬಂದೂಕುಗಳು ಅವರ ಬಳಿ ಇದ್ದವು. ಹಾಗಾಗಿ ಆ ರೀತಿಯ ಶಸ್ತ್ರಸ್ಥಳಗಳನ್ನು ಎದುರಿಸಿ ನಾವು ಅಂತಿಮ ಯುದ್ಧವನ್ನು ಗೆಲ್ಲುವುದು ಸಾಧ್ಯವಿಲ್ಲ ಎಂಬುದನ್ನು ಅರಿತ ಕುಯಿಲಿ ಒಂದು ಕ್ರಾಂತಿಕಾರಿ ಅಷ್ಟೇ ಅಪಾಯಕಾರಿ ಯುದ್ಧವ್ಯೂಹವನ್ನು ರಚಿಸುತ್ತಾಳೆ.

 


ಶಿವಗಂಗೈ ಕೋಟೆಯೊಳಗೆ ಇದ್ದ ಮದ್ದುಗುಂಡುಗಳ ದಾಸ್ತಾನು,‌ಆಯುಧ ಶಾಲೆಯನ್ನು ಧ್ವಂಸಗೊಳಿಸಿ ಆಮೇಲೆ ಬ್ರಿಟಿಷರ ಮೇಲೆ ಮುನ್ನುಗ್ಗಿದರೆ ಬ್ರಿಟೀಷರ ಬಳಿ ಯಾವುದೇ ಶಸ್ತ್ರ ಇರುವುದಿಲ್ಲ ನಾವು ಯುದ್ಧವನ್ನು ಗೆಲ್ಲಬಹುದು, ಆ ಮೂಲಕ ಪ್ರಾಂತ್ಯ ವಾಪಸ್ ರಾಣಿಯ ಕೈಸೇರುತ್ತದೆ ಎಂದು ರಾಣಿಯ ಸೇನಾಧಿಪತಿ ಕುಯಿಲಿ‌ ಚಿಂತನೆ ಮಾಡಿದಳು.

 


ಅದು ವಿಜಯದಶಮಿಯ ಸಮಯವಾಗಿತ್ತು ತನ್ನ 19 ಜನ ಮಹಿಳಾ ಸೈನಿಕರೊಡನೆ ಕುಯಿಲಿಯು ಶಿವಗಂಗೈ ಕೋಟೆಯ ರಾಜೇಶ್ವರಿ ಅಮ್ಮನವರ ದೇವಾಲಯಕ್ಕೆ ಹೊರಟಳು. ಈ ಮಹಿಳಾ‌ ಸೇನಾಧಿಪತಿಯೇ ಮೇಲೆ ಹೇಳಿದ ಮಹಿಳಾ ತಂಡದ ನಾಯಕಿ, ಈ ಸೈನಿಕರ‌ ದಂಡೇ ಆ ಮಹಿಳಾ ತಂಡ. ತನ್ನ ಪ್ರಾಣವನ್ನೇ ಒತ್ತೆ ಇಟ್ಟು ರಾಣಿಯನ್ನು ರಕ್ಷಿಸಿದ್ದ ಕುಯಿಲಿ, ರಾಜ್ಯದ ಸ್ವಾತಂತ್ರ್ಯಕ್ಕಾಗಿ ಮಹತ್ತನ್ನು ತ್ಯಾಗ ಮಾಡಲು ಮುಂದಾಗಿದ್ದಳು.

 

ಹಲವು ಗಂಟೆಗಳ ಕಾಲ 19 ಮಹಿಳಾ ಸೈನಿಕರು ಹಣತೆಗಳನ್ನು ಇಡುವುದರಲ್ಲಿ, ದೀಪ‌ ಹಚ್ಚುವ ಕೆಲಸಗಳಲ್ಲಿ ತಲ್ಲೀನರಾಗಿದ್ದರೆ, ಒಬ್ಬಳು, ಆ ಸೇನಾಧಿಪತಿ ಮಾತ್ರ ದೇವರ ಎದುರು ತಾನು ಮುಂದೆ ಮಾಡಲಿರುವ ಅಪರಾಧಕ್ಕಾಗಿ ಕ್ಷಮೆಯಾಚಿಸುತ್ತಿದ್ದಳು. ಪ್ರಾರ್ಥನೆಯ‌ ನಂತರ ಇವಳು ಗರ್ಭಗುಡಿಯ ಎದುರು ಬಂದು ಮಂಡಿಯೂರಿ ಕುಳಿತಳು. ಮೊದಲಿಗೆ ಬಂದ ಇಬ್ಬರು ಸೈನಿಕರು ಆಕೆಯ ದೇಹ ಸಂಪೂರ್ಣ‌‌ ಆವೃತವಾಗುವಂತೆ ತುಪ್ಪವನ್ನು ಆಕೆಯ ದೇಹದ ಮೇಲೆ ಸುರಿದರು. ನಂತರ ಬಂದ ನಾಲ್ವರು ಮಹಿಳಾ ಸೈನಿಕರು ಗರ್ಭಗುಡಿ ಒಳಗೆ ಹೋಗಿ ಬಂದು, ಈ ಕುಯಿಲಿಯ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾ ಒಬ್ಬೊಬ್ಬರಾಗಿ ಹೊರಗೆ ಹೊರಡರು‌.



ಎಲ್ಲ 19 ಮಹಿಳಾ‌ ಸೈನಿಕರು ಹೊರಹೋದದ್ದು ಖಚಿತ‌‌ ಪಡಿಸಿಕೊಂಡ ಈ ಕುಯಿಲಿ,‌ತನ್ನ ಸೀರೆಯ ಸೇರಗಿಗೆ ಬೆಂಕಿಯನ್ನು ಹೊತ್ತಿಸಿಕೊಂಡು, ಗನ್ ಪೌಡರ್ ಇರುವಲ್ಲಿಗೆ ಹೋಗಿ ಅದರ ಮೇಲೆ ಹೊರಳಾಡಿ, ಬಂದೂಕುಗಳ‌ ಮೇಲೆ‌ ಧುಮುಕಿದಳು, ನೋಡನೋಡುತ್ತಿದ್ದಂತೆಯೆ‌ ದೇವಸ್ಥಾನ ಹೊತ್ತಿ ಉರಿದುಹೋಯಿತು. ಜೊತೆಗೆ ಆಕೆಯೂ ಕೂಡ. ತನ್ನ ರಾಣಿ ಗೆಲ್ಲಬೇಕು,  ತನ್ನ ಸೈನಿಕರು ಗೆಲ್ಲಬೇಕು ಎಂಬ‌ ಕಾರಣಕ್ಕೆ ಜೀವ ಹಾಗೂ ಜೀವನ‌ ಎರಡನ್ನೂ ತ್ಯಾಗಮಾಡಿದ್ದಳಾಕೆ.

 


ದೂರದಿಂದಲೇ‌ ದೇವಸ್ಥಾನ ಹೊತ್ತಿ ಉರಿದಿದ್ದನ್ನ ನೋಡಿದ‌ ರಾಣಿ ವೇಲು ಮುಂದಿನ ಕಾರ್ಯತಂತ್ರಗಳ ಕುರಿತು ಚಿಂತಿಸಿ ಅನಂತರ ಸೇನೆಯನ್ನು‌ ಕರೆದುಕೊಂಡು ಹೋಗಿ  ಶಿವಗಂಗೈ ಕೋಟೆಯ ಒಳಗೆ ನುಗ್ಗಿಸಲಾಯಿತು. ಶಸ್ತ್ರಾಸ್ತ್ರಗಳಿಲ್ಲದೆ ಬರಿ ಕೈಯಲ್ಲಿ ಬಂದ ಬ್ರಿಟೀಷರನ್ನು ಸೋಲಿಸಿ ಪ್ರಾಂತ್ಯವನ್ನು ಪುನಃ ವಶಕ್ಕೆ ತೆಗೆದುಕೊಂಡು. ಅಲ್ಲಿಂದ ಹತ್ತು ವರ್ಷಗಳ ಕಾಲ‌ ಅತ್ಯುತ್ತಮ ಆಡಳಿತ ನೀಡಿದರು.

ಆತ್ಮಾಹುತಿ ದಾಳಿಯನ್ನು ಪರಿಚಯಿಸಿದ ಮೊದಲ ಹೋರಾಟಗಾರ್ತಿ ರಾಣಿ ವೆಚ್ಚು ನಾಚ್ಚಿಯರ್
ಹಾಗೆಯೇ ಆತ್ಮಾಹುತಿ ದಾಳಿ‌ ನಡೆಸಿದ ಮೊದಲ‌ ಭಾರತೀಯ ಮಹಿಳೆ, ರಾಣಿ ಸೈನ್ಯದ ಸೇನಾಧಿಪತಿಯಾಗಿದ್ದ ಕುಯಿಲಿ.

 


ಮಹಿಳಾ ದಿನದ ಕುರಿತು ಬೇಕೋ ಬೇಡವೋ,‌  ಹೇಗೆ, ಏಕೆ, ಏನು ಎಂಬಿತ್ಯಾದಿ ಚರ್ಚೆಗಳನ್ನು ಮಾಡುವುದಕ್ಕಿಂತ, ಇತಿಹಾಸದಲ್ಲಿ‌ ಮುಚ್ಚಿಹೋದ ಇಂತಹ  ಮಹಿಳೆಯರ ಸಾಧನೆಯ ಕಥೆಗಳನ್ನು ಓದುವ ಮೂಲಕ‌ ನಾವೆಲ್ಲರೂ ಒಂದಷ್ಟು ಸ್ಪೂರ್ತಿ ಪಡೆಯೋಣ.

Author Details


Srimukha

Leave a Reply

Your email address will not be published. Required fields are marked *