ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಬಾಲ್ಯವೇ ವ್ಯಕ್ತಿತ್ವದ ಅಡಿಪಾಯ

ಅಂಕಣ ಬಗೆಯೆಷ್ಟೋ ಮೊಗವಷ್ಟು : ಗಜಾನನ ಶರ್ಮಾ ಹುಕ್ಕಲು

ಗರ್ಭಾಂಕುರವಾದಾಗ ಅಣುಗಾತ್ರದಲ್ಲಿರುವ ವ್ಯಕ್ತಿಯ ಭ್ರೂಣ ಪ್ರಸವದ ವೇಳೆಗೆ ತೂಕದಲ್ಲಿ ಸುಮಾರು ಹನ್ನೊಂದು ದಶಲಕ್ಷ ಪಟ್ಟು ಬೆಳೆದಿರುತ್ತದೆ. ಜನನಾನಂತರವೂ ಈ ದೈಹಿಕ ಬೆಳವಣಿಗೆ ಸಾಕಷ್ಟು ವೇಗವಾಗಿಯೇ ಮುಂದುವರೆಯುತ್ತದೆ. ಕ್ರಮೇಣ ನಿಧಾನವಾಗುತ್ತ ಸಾಗುವ ಈ ದೈಹಿಕ ಬೆಳವಣಿಗೆ ತಾರುಣ್ಯದ ನಂತರ ಬಹುತೇಕ ತಟಸ್ಥವಾಗುತ್ತದೆ ಎಂಬುದು ವೈಜ್ಞಾನಿಕ ವಿಶ್ಲೇಷಣೆ. ಶರೀರದ  ಗಾತ್ರ ಮತ್ತು ಕ್ರಿಯೆಗಳಲ್ಲಿ ಮಾರ್ಪಾಡುಗಳು ಉಂಟಾಗುವಂತೆಯೇ ಮನೋಸಾಮರ್ಥ್ಯದಲ್ಲಿಯೂ ಬದಲಾವಣೆಗಳು ಸಂಭವಿಸುತ್ತದೆ. ಆಯುರವಧಿಯ ಮೊದಲರ್ಧ ಕಾಲ ವೃದ್ಧಿಯಾದರೆ , ಕ್ರಮೇಣ ಶಕ್ತಿಯು ಕುಂದುತ್ತಾ ಕ್ಷೀಣಿಸುತ್ತಾ ಸಾಗುತ್ತದೆ. ಈ ಕ್ಷೀಣವಾಗುವ ಪ್ರಕ್ರಿಯೆಯಲ್ಲಿ ಕೂಡ ಮನಸ್ಸಿಗಿಂತ ದೇಹ ಬೇಗ ಕ್ಷೀಣವಾಗುತ್ತದೆ. ವ್ಯಕ್ತಿಗೆ ಅರಿವಾಗದಂತೆ, ಈ ಭೌತಿಕ, ಮಾನಸಿಕ ಪರಿವರ್ತನೆಗಳು ನಿತ್ಯ ನಿರಂತರವಾಗಿ ನಡೆಯುತ್ತಲೇ ಸಾಗುತ್ತವೆ. ಪರಿವರ್ತನೆಗಳ ವೇಗ, ಬಾಲ್ಯ ಮತ್ತು ತಾರುಣ್ಯದಲ್ಲಿ  ಅಧಿಕವಾಗಿದ್ದರೆ ವೃದ್ದಾಪ್ಯದಲ್ಲಿ ನಿಧಾನವಾಗಿ, ಅಲ್ಪ ಪ್ರಮಾಣದಲ್ಲಿ ಸಾಗುತ್ತದೆ.

        

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಹಾಗೂ ಪರಿವರ್ತನೆ ಆಶ್ಚರ್ಯವಾಗುವ ವೇಗದಲ್ಲಿ ಸಂಭವಿಸುತ್ತ ಸಾಗುತ್ತವೆ. ಸಾಕಷ್ಟು ಪರಿಶ್ರಮದ ಅಧ್ಯಯನದ ನಂತರ ಮನೋವಿಶ್ಲೇಷಕರು, “ಬಾಲ್ಯ ಎಂದರೆ ಜನನಾನಂತರದಿಂದ ಯೌವನೋದಯದವರೆಗಿನ ಅವಧಿ” ಎಂದು ಗುರುತಿಸಿದ್ದಾರೆ. ಈ ಅಭಿಪ್ರಾಯದಂತೆ ಮಕ್ಕಳೆಂದರೆ ಹುಟ್ಟಿನಿಂದ ಹದಿನಾಲ್ಕು ವರ್ಷದವರೆಗಿನ ಗಂಡು ಮಕ್ಕಳು ಮತ್ತು ಹದಿಮೂರರವರೆಗಿನ ಹೆಣ್ಣುಮಕ್ಕಳು.
        

ನವಜಾತ ಶಿಶುವಿಗೆ ಯಾವ ವ್ಯಕ್ತಿತ್ವವೂ ಇರುವುದಿಲ್ಲ. ಆದರೆ ಜನ್ಮತಃ ಬಂದ ಸ್ವಭಾವವಿರುತ್ತದೆ. ಇದನ್ನೇ ಮನೋಧರ್ಮ (Temparament) ಎನ್ನಲಾಗುವುದು.ಈ ಸ್ವಭಾವ ಅದರ ಚಟುವಟಿಕೆಗಳಲ್ಲಿ ಮತ್ತು ಸಂವೇದನಾಶೀಲತೆಗಳಲ್ಲಿ ವ್ಯಕ್ತವಾಗುತ್ತವೆ. ಜನನವಾದಾಗಲೇ ಈ ಸ್ವಭಾವಗಳಲ್ಲಿ ವ್ಯಕ್ತಿಬೇಧಗಳು ಕಂಡುಬರುತ್ತವೆ ಎಂಬುದು ಮನೋವಿಜ್ಞಾನಿಗಳ ಅಭಿಪ್ರಾಯ. ಇದನ್ನೇ ಅನುವಂಶೀಯತೆ ಎಂದು ಹೇಳಬಹುದಾಗಿದೆ.
      

ವ್ಯಕ್ತಿತ್ವದ ರೂಪುಗೊಳ್ಳುವಿಕೆಯಲ್ಲಿ ಈ ಅನುವಂಶೀಯತೆ ಮೊದಲನೆಯ ಕಾರಣವಾದರೆ, ಕುಟುಂಬದಲ್ಲಾಗುವ ಎಳೆತನದ ಅನುಭವಗಳು ಎರಡನೆಯ ಕಾರಣವಾಗಿಯೂ, ಮುಂದೆ ಬಾಳಿನಲ್ಲಿ ಸಂಭವಿಸುವ ಅನ್ಯ ಅನುಭವಗಳು ಮೂರನೆಯ ಕಾರಣವಾಗಿಯೂ ನಿಲ್ಲುತ್ತವೆ. ಈ ಮೂರು ಅಂಶಗಳು ಮೊದಲೇ ಅಂಕುರವಾಗಿದ್ದ ವ್ಯಕ್ತಿತ್ವ ರಚನೆಯ ಪ್ರಕ್ರಿಯೆಯ ಮೇಲೆ ತಮ್ಮ ಪ್ರಭಾವ ಬೀರಿ ಅದಕ್ಕೊಂದು ನಿಖರ ರೂಪವನ್ನು ಕೊಡುತ್ತವೆ.
    

ವ್ಯಕ್ತಿತ್ವದ ವಿಕಾಸದ ದೃಷ್ಟಿಯಿಂದ ಹೇಳುವುದಾದರೆ ಮಗುವಿದ್ದಾಗ ಹಾಕಲ್ಪಟ್ಟ ತಳಹದಿಯ ಮೇಲೆಯೇ ಮುಂದಿನ ವ್ಯಕ್ತಿತ್ವದ ಕಟ್ಟಡ  ನಿರ್ಮಾಣವಾಗುತ್ತದೆ. ಎಳೆತನದ ಸಿಹಿಕಹಿ ಅನುಭವಗಳು ದೊಡ್ಡವರಾದ ಮೇಲೆ ನೆನಪಿಗೆ ಬರದಿರಬಹುದು. ಆದರೆ ಅವು ಆಂತರಿಕವಾಗಿ ವ್ಯಕ್ತಿತ್ವದ ಮೇಲೆ ಅಚ್ಚಳಿಯದ ಗುರುತು ಮೂಡಿಸಿರುತ್ತವೆ. ಹಾಗಾಗಿಯೇ  ‘ಮನೆಯೇ ಮೊದಲ ಪಾಠಶಾಲೆ’ ಎಂಬ ನಾಣ್ನುಡಿ ಮನಃಶಾಸ್ತ್ರೀಯವಾಗಿ ಕೂಡ ಸತ್ಯ.
      

ಎಳೆಯ ಮಕ್ಕಳ ಪರಿಸರವೆಂದರೆ ಮನೆಯ ವಾತವರಣವಷ್ಟೇ. ಅದರಲ್ಲೂ ದಿನದ ಬಹಳಷ್ಟು ವೇಳೆ ಮಗುವಿನ ಜೊತೆಗಿರುವ ತಾಯಿಯ ವರ್ತನೆ ಮಗುವಿನ ಮೇಲೆ ಬಹಳ ಪ್ರಭಾವ ಬೀರುತ್ತದೆ. ಬಾಲ್ಯದಲ್ಲಿ ವ್ಯಕ್ತಿತ್ವ ವಿಕಾಸದ ಪ್ರಾಥಮಿಕ ಅಂಶಗಳು ಹೇಗೆ ಸಮಾಯೋಜಿತವಾಗುತ್ತದೆ ಎಂಬುದನ್ನು ಆಧರಿಸಿಯೇ ವ್ಯಕ್ತಿಯ ಮುಂದಿನ ಬದುಕು ನಿರ್ಮಾಣಗೊಳ್ಳುತ್ತದೆ. ಎಳೆತನದಲ್ಲಿ ವ್ಯಕ್ತಿ  ಅನೇಕ ಅಭ್ಯಾಸ, ಅಭಿರುಚಿ ವರ್ತನಾರೂಪಗಳನ್ನು ಬೆಳಸಿಕೊಳ್ಳುತ್ತಾನೆ. ತನ್ನ ಮನೋಭಾವಕ್ಕೊಂದು ರೂಪ ಕಟ್ಟಿಕೊಳ್ಳುತ್ತಾನೆ. ಇವೇ ಆತ ಮುಂದೆ ಬದುಕಿಗೆ ಹೇಗೆ ಹೊಂದಿಕೊಳ್ಳಬಲ್ಲ ಎಂಬುದನ್ನು ನಿರ್ಧರಿಸುತ್ತವೆ.
     

ಮಾನವ ಶಿಶುವಿನ ದೇಹ , ಮೆದುಳು ಮತ್ತು ನರಮಂಡಲಗಳ ರಚನೆ ಹೇಗೆಂದರೆ ಹಾಗೆ ಹೊಂದಿಕೊಳ್ಳುವ ನಮ್ಯತೆ ( flexibility) ಹೊಂದಿರುವುದರಿಂದಲೇ ಮಾನವ ಶಿಶುವು ಪ್ರಾಣಿಗಳಿಗಿಂತ  ಚೆನ್ನಾಗಿ ಕಲಿಯಬಲ್ಲದು ಮತ್ತು ವಿವಿಧ ಸನ್ನಿವೇಶ, ಸಂದರ್ಭಗಳಿಗೆ ಅನುಗುಣವಾಗಿ ಹೊಂದಿಕೊಳ್ಳಬಲ್ಲದು. ತರುಣರು, ಹಿರಿಯರು ಮತ್ತು ವಯಸ್ಕರ ಮೇಲೆ ನಡೆದ ಅನೇಕ ಸಂಶೋಧನೆಗಳನ್ನು ಆಧರಿಸಿ ಹೇಳುವುದಾದರೆ ವ್ಯಕ್ತಿಯ ವ್ಯಕ್ತಿತ್ವದ ರೂಪರೇಷೆಗಳು ಎಳೆತನದಲ್ಲೇ ಬಿತ್ತಲ್ಪಡುತ್ತವೆ. ಸಮವಯಸ್ಕರ ನಡುವೆ ಮಕ್ಕಳಿಗೆ ಸಿಗುವ ಮಾನ್ಯತೆ, ಅವರು ಮುಂದೆ ತಮ್ಮ ಬದುಕಿನಲ್ಲಿ ಎಷ್ಟು ಸಮರ್ಪಕವಾಗಿ ಹೊಂದಿಕೊಳ್ಳಬಲ್ಲರು ಎಂಬುದರ ಮುನ್ಸೂಚನೆ. ನಡುವಯಸ್ಸಿನಲ್ಲಿ ಮತ್ತು ವೃದ್ದಾಪ್ಯದಲ್ಲಿ ಕೆಲವರ ಅಭಿರುಚಿಗಳು ಮಿತವಾಗಿರುವುದಕ್ಕೆ ಕಾರಣ ಅವರ ಮಾನಸಿಕ ಕ್ಷೀಣತೆಗಿಂತ, ಅವರು ಬಾಲ್ಯದಲ್ಲಿ ವೈವಿಧ್ಯಮಯ ಅಭಿರುಚಿಗಳನ್ನು ಬೆಳಸಿಕೊಳ್ಳಲು ಅವಕಾಶ ದೊರೆಯದಿರುವುದು ಎಂಬುದು ಮನೋವೈಜ್ಞಾನಿಕ ಅಧ್ಯಯನಗಳಿಂದ ಸ್ಥಿರಪಟ್ಟಿವೆ.

Author Details


Srimukha

Leave a Reply

Your email address will not be published. Required fields are marked *