ಪೂರ್ಣ ಜೀವನದ ಪುಣ್ಯವಂತ ನೆಬ್ಬೂರು ನಾರಾಯಣ ಭಾಗವತ

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

ನೆಬ್ಬೂರು ಮತ್ತು ಯಕ್ಷಗಾನ, ನೆಬ್ಬೂರು ಮತ್ತು ಕೆರೆಮನೆ ಈ ಎರಡು ಪದಪುಂಜಗಳು ಅವಿನಾಭಾವವಾದ ಸಂಬಂಧವನ್ನು ಹೊಂದಿವೆ. ಇದನ್ನು ನೋಡುತ್ತ ಹೋಗುವಾಗ ಒಂದು ವಿಸ್ಮಯ ಲೋಕ ನಮ್ಮ ಕಣ್ಣೆದುರು ಕಂಡು ಬರುತ್ತದೆ. ನೆಬ್ಬೂರು ಎನ್ನುವುದು ಶಿರಸಿಯ ಸಮೀಪದ ಒಂದು ಸಣ್ಣ ಹಳ್ಳಿ. ಶಿರಸಿ-ಕುಮಟಾ ಮಾರ್ಗದಲ್ಲಿ ಅಮ್ಮಿನಳ್ಳಿಯಲ್ಲಿ ಎಡಕ್ಕೆ ಅರ್ಧ ಕಿ.ಮೀ. ನಲ್ಲಿ ಇರುವ ಐದಾರು ಮನೆಯ ಒಂದು ಸಣ್ಣ ಪ್ರದೇಶ. ಆದರೆ ಈಗ ಅದು ಸಣ್ಣ ಪ್ರದೇಶವಾಗಿ ಉಳಿದಿಲ್ಲ. ಯಾವಾಗ ನೆಬ್ಬೂರು ಭಾಗವತರು ಪ್ರಸಿದ್ಧರಾದರೋ ಆಗ ಎಲ್ಲೆಲ್ಲಿ ಯಕ್ಷಗಾನ ವ್ಯಾಪಿಸಿತೋ ಅಲ್ಲೆಲ್ಲ ನೆಬ್ಬೂರರು ವ್ಯಾಪಿಸಿಕೊಂಡರು. ಯಕ್ಷಗಾನಕ್ಕೆ ತನ್ನನ್ನು ಸಮರ್ಪಿಸಿಕೊಂಡ ಕಲಾವಿದರಲ್ಲಿ ನೆಬ್ಬೂರರ ಹೆಸರು ಕೂಡ ಸೇರಿಕೊಂಡಿದೆ.

 

ನಮ್ಮ ತಂದೆಯವರು ನೆಬ್ಬೂರರ ಒಡನಾಡಿಗಳು. ಅವರು ನೆಬ್ಬೂರು, ಶಂಭು ಹೆಗಡೆಯವರು, ಮಹಾಬಲ ಹೆಗಡೆಯವರು ಇವರುಗಳಿಗೆಲ್ಲ ಬಹಳ ಹತ್ತಿರದವರು ಹಾಗೂ ಪ್ರೀತಿಪಾತ್ರರಾಗಿದ್ದವರು. ಅವರು ಒಮ್ಮೆ ನೆನಪಿಸಿಕೊಳ್ಳುತ್ತಿದ್ದರು. ಕೊಡಗಿಪಾಲ ಶಿವರಾಮಹೆಗಡೆಯವರು ತಮ್ಮ ಮನೆಯ ಅಂಗಳದಲ್ಲಿ ಆಡುತ್ತಿದ್ದ ಸಣ್ಣ ಬಾಲಕ ನಾರಾಯಣನನ್ನು ತೋರಿಸುತ್ತ ಅವರ ಸ್ನೇಹಿತರಾದ ಕೆರೆಮನೆ ಶಿವರಾಮ ಹೆಗಡೆಯವರಲ್ಲಿ ಹೇಳಿದರಂತೆ- ಈ ಹುಡುಗ ಯಕ್ಷಗಾನದ ಪದ್ಯಗಳನ್ನು ಚೆನ್ನಾಗಿ ಹಾಡುತ್ತ ಆಡುತ್ತಿರುತ್ತಾನೆ. ಅವನನ್ನು ಸರಿದಾರಿಗೆ ತರಬೇಕು. ಏನೋ ಪ್ರತಿಭೆ ಹಾಳಾಗಬಾರದು ಎಂದು. ಅದನ್ನು ಸೂಕ್ಷ್ಮವಾಗಿ ಗ್ರಹಿಸಿದ ನಟಶ್ರೇಷ್ಠ ಕೆರೆಮನೆ ಶಿವರಾಮ ಹೆಗಡೆಯವರು ನೆಬ್ಬೂರರಲ್ಲಿ ಎರಡು ಪದ್ಯ ಹಾಡಿಸಿದರಂತೆ. ಅಷ್ಟೇ ಅಲ್ಲ ಕೊಡಗಿಪಾಲ ಹೆಗಡೆಯವರಲ್ಲಿ ಹೇಳಿದರಂತೆ – ಈ ಬಾಲಕನನ್ನು ನಮ್ಮಲ್ಲಿಗೆ ಕಳಿಸಿಕೊಡಿ. ನಾನು ನಮ್ಮ ಮಹಾಬಲನಲ್ಲಿ ಅವನನ್ನು ಬಿಟ್ಟು ಅಭ್ಯಾಸ ಮಾಡಿಸುತ್ತೇನೆ ಎಂದು. ಆ ಮಾತಿಗೆ ಒಪ್ಪಿದ ಕೊಡಲಗಿಪಾಲ ಹೆಗಡೆಯವರು ನಾರಾಯಣ ಭಾಗವತರ ಮನೆಯವರಲ್ಲಿ ಮಾತನಾಡಿ ಕೆರೆಮನೆಗೆ ನೆಬ್ಬೂರರನ್ನು ಕಳಿಸಿಕೊಡುತ್ತಾರೆ.

 

ಅಲ್ಲಿಂದ ಮುಂದೆ ಶಿವರಾಮ ಹೆಗಡೆಯವರ ಮನೆಯಲ್ಲಿಯೇ ಉಳಿದು, ಯಕ್ಷಗಾನ ಅಭ್ಯಾಸವನ್ನು ಮಾಡುತ್ತ ಜೀವನ ಸಾಗಿಸಿದ ನೆಬ್ಬೂರರು ಯಕ್ಷಗಾನದ ಕುರಿತಾದ ಒಂದು ಆಧಾರ ಅಭ್ಯಾಸವನ್ನು ಮಾಡಿದ್ದು ಮತ್ತು ಅದರ ಒಳ ಮರ್ಮಗಳನ್ನು ಒಳ ಪೆಟ್ಟುಗಳನ್ನು, ಒಳ ಮಟ್ಟುಗಳನ್ನು ಗಟ್ಟಿಗೊಳಿಸಿಕೊಂಡಿದ್ದು ಕೆರೆಮನೆ ಮಹಾಬಲ ಹೆಗಡೆಯವರಲ್ಲಿ ಎಂದು ನಮ್ಮ ತಂದೆಯವರು ನೆನಪಿಸಿಕೊಳ್ಳುತ್ತಿದ್ದರು.

 

ಶಿವರಾಮ ಹೆಗಡೆಯವರು ಮಾಡಿದ ಈ ಕೆಲಸ ಎಷ್ಟು ದೊಡ್ಡದಾಯಿತು ಎಷ್ಟು ಮಹತ್ತ್ವದ್ದಾಯಿತು ಎಂದರೆ ಯಕ್ಷಗಾನ ಕ್ಷೇತ್ರ ಒಬ್ಬ ಮಹಾನ್ ಕಲಾವಿದನನ್ನು ಉಳಿಸಿಕೊಂಡಿತು. ಅಷ್ಟೇ ಅಲ್ಲ ಒಂದು ಅಪೂರ್ವವಾದಂತಹ ಶೈಲಿಯನ್ನು ಉಳಿಸಿಕೊಂಡಿತು. ಒಂದು ಉನ್ನತವಾದ ಪರಂಪರೆಯನ್ನು ಕಾಪಾಡಿಕೊಂಡಿತು. ಕೆರೆಮನೆ ಶಿವರಾಮ ಹೆಗಡೆಯವರಿಗೆ ಈ ದೂರದರ್ಶಿತ್ವ ಇಲ್ಲದಿದ್ದರೆ ಈ ಹೊತ್ತು ನೆಬ್ಬೂರರು ಈ ಮಟ್ಟದ ಖ್ಯಾತಿಯನ್ನು ಗಳಿಸುತ್ತಿರಲಿಲ್ಲ. ಕೆರೆಮನೆಯಲ್ಲಿ ಅವರಿಗೆ ಶಿವರಾಮ ಹೆಗಡೆಯವರ ಮಾರ್ಗದರ್ಶನ, ಮಹಾಬಲ ಹೆಗಡೆಯವರ ಜೊತೆಯ ಅಭ್ಯಾಸ, ಅಧ್ಯಯನ,  ಶಂಭು ಹೆಗಡೆಯವರ ಜೊತೆಗಿನ ಸ್ನೇಹ ಒಡನಾಟ ಈ ವಿಚಾರಗಳು ಅವರನ್ನು ಶ್ರೇಷ್ಠರನ್ನಾಗಿಸಿದವು. ಮೂವರು ಮಹಾನ್ ಕಲಾವಿದರು ಒಂದೊಂದು ವಿಭಾಗದಲ್ಲಿ ಒಂದೊಂದು ರೀತಿಯಲ್ಲಿ ಪ್ರತಿಭಾವಂತರು ಮೇಲಾಗಿ ಈ ಕ್ಷೇತ್ರದಲ್ಲಿ ದಾರ್ಶನಿಕರು. ಹಾಗಾಗಿ ಯಾರಾದರೂ ನೆಬ್ಬೂರರನ್ನು ನೆನಪಿಸಿಕೊಳ್ಳುವಾಗ ಈ ಮೂವರನ್ನು ನೆನಪಿಸಿಕೊಳ್ಳದಿದ್ದರೆ ಅದು ಆತ್ಮವಂಚನೆಯೇ ಆಗುತ್ತದೆ.

 

ಸಹಜವಾಗಿಯೇ ನೆಬ್ಬೂರರಿಗೆ ಕೆರೆಮನೆ ಶಿವರಾಮ ಹೆಗಡೆಯವರಲ್ಲಿ ಗುರುಭಕ್ತಿ, ಗುರುಭಾವ. ವಯೋಮಾನದ ಅಂತರವೂ ಹಾಗೇ ಇದೆ. ಮಹಾಬಲ ಹೆಗಡೆಯವರಲ್ಲಿ ಸಲಿಗೆ ಎಷ್ಟೋ ಅವರು ವಿದ್ಯೆಯನ್ನು ಕಲಿಸಿದವರು, ಆ ವಿಭಾಗದಲ್ಲಿ ಗಟ್ಟಿಗರು ಎಂಬರ್ಥದಲ್ಲಿ ಭಯಮಿಶ್ರಿತವಾದ ಪ್ರೀತಿ, ಗೌರವ. ಶಂಭುಹೆಗಡೆಯವರಲ್ಲಿ ಅವರು ಈ ಕ್ಷೇತ್ರದ ಅಪೂರ್ವ ಚಿಂತಕರಾದದ್ದರಿಂದ ನೆಬ್ಬೂರರ ಸಹಪಾಠಿಗಳಾಗಿದ್ದರಿಂದ ವಯೋಮಾನ ದೃಷ್ಟಿಯಿಂದ ಅವರಲ್ಲಿ ಸಲಿಗೆ, ಸ್ನೇಹ, ಸಖತನ.

 

ಆ ಸಂದರ್ಭದಲ್ಲಿ ಅಂದರೆ ನೆಬ್ಬೂರರು ಕೆರೆಮನೆಗೆ ಬಂದು ಸೇರಿದ ಸಂದರ್ಭದಲ್ಲಿ ಕೆರೆಮನೆ ಮೇಳದ ಭಾಗವತರಾಗಿದ್ದವರು ಯಾಜಿ ಭಾಗವತರು. ಅವರು ಯಕ್ಷಗಾನದ ಪಾರಂಪರಿಕ ವಿಚಾರವನ್ನು ಚೆನ್ನಾಗಿ ತಿಳಿದುಕೊಂಡವರು ಮತ್ತು ನುರಿತವರು. ಹಾಗಾಗಿ ಅವರೊಂದಿಗೆ ರಂಗದ ಮೇಲಿನ ಇವರ ಒಡನಾಟ ಮತ್ತು ನೈಜ ಶಿಕ್ಷಣ ನೆಬ್ಬೂರರನ್ನು ಒಬ್ಬ ಪ್ರಸಿದ್ಧ ಮತ್ತು ಸಿದ್ಧ ಭಾಗವತರನ್ನಾಗಿ ರೂಪಿಸಿದ್ದರಲ್ಲಿ ಹೆಚ್ಚು ಕಾಣ್ಕೆಯನ್ನು ಕೊಟ್ಟಿದೆ.

 

ಹೀಗೆ ನೆಬ್ಬೂರರು ಯಕ್ಷಗಾನ ಕ್ಷೇತ್ರದಲ್ಲಿ ಭಾವಗತರಾಗಿ ಬೆಳೆಯುತ್ತ ಬಂದಿದ್ದು ಅನಿರೀಕ್ಷಿತವಲ್ಲ, ಆಕಸ್ಮಿಕವಲ್ಲ. ಅದೊಂದು ಅಧ್ಯಯನಶೀಲ ಹಾಗೂ ಅದೊಂದು ಅಭ್ಯಾಸ ಬಲದಿಂದ ಬಂದದ್ದು. ಇದರಲ್ಲಿ ನಾವು ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ ನೆಬ್ಬೂರರ ಶಾರೀರ. ಅವರ ಕಂಠಸಿರಿ. ಇದೊಂದು ಗಾಯಕನಿಗೆ ಪ್ರಾಕೃತಿಕವಾಗಿ ಬರಬೇಕಾದದ್ದು. ಅದು ಇದೆ ಎಂದು ಗೊತ್ತಾದಾಗ ಅದನ್ನು ಪರಿಷ್ಕರಿಸಿ, ನಿಕಷಕ್ಕೆ ಒಳಪಡಿಸಿ ಅದನ್ನು ಹದವಾಗಿ ರೂಪಿಸಿಕೊಳ್ಳಬೇಕಾದದ್ದು ಗಾಯಕನ ಕರ್ತವ್ಯ. ಇದರಲ್ಲಿ ನೆಬ್ಬೂರರು ಪಳಗಿದರು.
ಅವರ ಶಾರೀರಕ್ಕೆ ಒಂದು ಝೇಂಕಾರವಿದೆ. ಅವರ ಶಾರೀರದಲ್ಲಿ ಒಂದು ಸಹಜವಾದ ಓಂಕಾರವಿದೆ. ಅದು ಎಷ್ಟು ಸರಳವಾಗಿ ಎಷ್ಟು ಸಹಜವಾಗಿ ಮೂರು ಸ್ಥಾಯಿಗಳಲ್ಲಿ ಸಂಚರಿಸಬಲ್ಲದು ಎನ್ನುವುದಕ್ಕೆ ಶಬ್ದಗಳು ಸಾಲದು. ಅದನ್ನು ಕೇಳಿಯೇ ಅನುಭವಿಸಬೇಕು. ಅವರಿಗೆ ಎತ್ತರದ ಸ್ಥಾಯಿಯಲ್ಲಿ ಯಾವುದನ್ನು ಯಾವ ಪದ್ಯವನ್ನು ಹೇಳುತ್ತ ಪಾತ್ರಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಶಕ್ತಿ ಇತ್ತೋ ಅದೇ ಸಂದರ್ಭದಲ್ಲಿ ಅದನ್ನು ಕೆಳಮನೆಯಲ್ಲಿ ಹಾಡುತ್ತ ಭಾವತೀವ್ರತೆಯ ಸ್ಥಿತಿಯನ್ನು ತಲುಪಿಸುವುದಕ್ಕೂ ಸಾಧ್ಯತೆ ಇತ್ತು. ಯಕ್ಷಗಾನದ ಪದ್ಯಗಳಲ್ಲಿ ಸಹಜವಾಗಿ ಕಂಡುಬರುವ ರಸಭೂಯಿಷ್ಟವಾದಂತಹ ವಿಚಾರಗಳು, ಭಾವಪ್ರಚೋದಕವಾದಂತಹ ಸಂಗತಿಗಳು, ಅದು ಹಾಗಲ್ಲದೇ ಅನ್ಯರೀತಿಯಲ್ಲಿ ಪ್ರಸ್ತುತ ಪಡಿಸಿದರೆ ಅದು ತನ್ನ ಕಾಂತಿಯನ್ನು ಕಳೆದುಕೊಳುವುದರಲ್ಲಿ ಅನುಮಾನವೇ ಇಲ್ಲ. ಇದನ್ನು ತಿಳಿಯುವುದಕ್ಕೆ ಭಾಗವತರಿಗೆ ವಿಶೇಷವಾದ ದೃಷ್ಟಿ ಬೇಕು. ವಿಶೇಷವಾದ ಬುದ್ಧಿ ಬೇಕು. ನೆಬ್ಬೂರರು ಅದನ್ನು ಸುದೀರ್ಘವಾದ ಅಭ್ಯಾಸದಿಂದ ಕಂಡುಕೊಂಡವರಾಗಿತ್ತು. ಪೌರಾಣಕ ಪ್ರಸಂಗಗಳಿಗೆ ತನ್ನ ಶಾರೀರವನ್ನು ಒಗ್ಗಿಸಿಕೊಂಡು, ಅದನ್ನು ನ್ಯೂನತೆ ಇಲ್ಲದೇ ಅಳವಡಿಸಿಕೊಂಡ ಅವರ ಚಿತ್ತವೃತ್ತಿ ಶ್ರೇಷ್ಠವಾದದ್ದು. ಇಂದಿಗೂ ಯಕ್ಷಗಾನದ ಪ್ರಸಿದ್ಧವಾದ ಹಾಗೂ ಅಪ್ರಸಿದ್ಧವಾದ ಬಹುತೇಕ ಪ್ರಸಂಗಗಳು ಅವರ ಕಂಠಸಿರಿಯಲ್ಲಿ ಕಾಂತಿಯನ್ನು ಕಂಡಿವೆ. ರಂಗಪ್ರಕ್ರಿಯೆಗಳಿಗೆ ಅದು ಚೆನ್ನಾಗಿ ಒದಗಿ ಬಂದಿದೆ.

 

ನೆಬ್ಬೂರರು ಯಕ್ಷಗಾನ ಒಂದರಲ್ಲಿಯೇ ಆರು ದಶಕಗಳ ಕಾಲ ಸಾಗಿ ಬಂದರು. ಸೇವೆಗೈದರು. ಇದು ಒಂದು ಸಣ್ಣ ವಿಷಯವಲ್ಲ. ಸಾಮಾನ್ಯವಾಗಿ ಯಾವುದೇ ವೃತ್ತಿ ಅಥವಾ ವೃತ್ತಿ ಕಲಾವಿದರು ಇಷ್ಟು ದೀರ್ಘಕಾಲ ತಮ್ಮನ್ನು ತಾವು ಒಂದು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಅದು ಬಲು ಅಪರೂಪ. ಅದಕ್ಕೆ ಆರೋಗ್ಯ ಬೇಕು. ಅದಕ್ಕೆ ಪೂರಕ ವಾತಾವರಣ ಇರಬೇಕು. ಜೊತೆಯಲ್ಲಿ ಒಂದು ಸೌಹಾರ್ದ ಮನಸ್ಥಿತಿ ಇರಬೇಕು. ಇದೆಲ್ಲವನ್ನೂ ನೆಬ್ಬೂರರು ಹೊಂದಿದ್ದರು ಎನ್ನುವುದು ವಿಶೇಷ. ಇಂತಹ ನೆಬ್ಬೂರರು ಯಕ್ಷಗಾನವನ್ನು ಉಂಡರು, ಮೈಗೊಂಡರು, ಅಲ್ಲಿಯೇ ಆನಂದವನ್ನು ಕಂಡರು. ಸಾವಿರಾರು ಕಲಾವಿದರನ್ನು ಕುಣಿಸಿದರು, ಕೋಟಿ ಕೋಟಿ ಜನರ ಮನಸ್ಸನ್ನು ತಣಿಸಿದರು, ಮರೆಯಲಾರದ ಭಾಗವತಿಕೆಯ ಸ್ವಾದವನ್ನು ಲೋಕಕ್ಕೆ ಉಣಬಡಿಸಿದರು. ಅವರು ಶಾಶ್ವತರಾಗಿ ಉಳಿದರು.

 

ಅವರ ಭಾಗವತಿಕೆಯಲ್ಲಿ ಭಕ್ತಿರಸ, ವೀರರಸ, ಕರುಣಾರಸ, ಶಾಂತರಸ ಇವುಗಳು ಹೆಚ್ಚು ಪ್ರಕಾಶವನ್ನು ಕಂಡಿವೆ. ಕೆರೆಮನೆಯ ಶಂಭುಹೆಗಡೆಯವರಿಗೆ ಹೆಚ್ಚು ಸಹಜವಾಗಿ  ಒಲಿದ ಶೋಕ, ಕರುಣೆ, ಶಾಂತ ಈ ಎಲ್ಲ ರಸಭೂಯಿಷ್ಟವಾದ ಪಾತ್ರಗಳನ್ನು ಮೆರೆಸುವಲ್ಲಿ ನೆಬ್ಬೂರರ ಕಂಠದಾನ ದೊಡ್ಡ ಕೆಲಸ ಮಾಡಿದೆ. ಇವರ ಹಿಮ್ಮೇಳವಿರುವಾಗ ಇಡಗುಂಜಿ ಮೇಳ ಅಂದರೆ ಕೆರೆಮನೆ ಮೇಳ ಅತ್ಯುತ್ತಮವಾದಂತಹ ಕೀರ್ತಿಯನ್ನು ಗಳಿಸಿದೆ, ಕೆರೆಮನೆ ಮೇಳದ ವ್ಯಾಪ್ತಿ ವಿಸ್ತಾರದಲ್ಲಿ ಅದಕ್ಕೆ ಸಂದ ಕೀರ್ತಿ ಗೌರವಗಳಲ್ಲಿ ಶಿವರಾಮ ಹೆಗಡೆಯವರು, ಶಂಭು ಹೆಗಡೆಯವರು, ಮಹಾಬಲ ಹೆಗಡೆಯವರು, ಗಜಾನನ ಹೆಗಡೆಯವರು ಇವರುಗಳ ಪಾತ್ರ ಎಷ್ಟು ದೊಡ್ಡದೋ ಅದಕ್ಕೆ ಒಂದಿನಿತೂ ಕಡಿಮೆಯಿಲ್ಲದ ಹಾಗಿನ ಇನ್ನೊಂದು ಪಾತ್ರವೇ ನೆಬ್ಬೂರರು ಎಂದು ನಾನು ಹೇಳಿದರೆ ಅದು ಅತಿಶಯೋಕ್ತಿಯಲ್ಲ.

 

ಕೆರೆಮನೆ  ಶಿವರಾಮ ಹೆಗಡೆಯವರ ಮನೆತನದ ಮತ್ತೊಬ್ಬ ಸದಸ್ಯನೇ ಎನ್ನುವಷ್ಟು ವ್ಯಾಪಕವಾಗಿ ಬೆಳೆದ ನೆಬ್ಬೂರು ನಾರಾಯಣ ಭಾಗವತರು ತುಂಬು ಕಂಠದ ಮಹಾಶ್ರೇಷ್ಠವಾದಂತಹ ಒಡವೆಗೆ ಒಡೆಯರಾಗಿದ್ದರು. ನಾವು ಯಕ್ಷಗಾನದ ಹಲವು ಪದ್ಯಗಳನ್ನು, ಗಾನವಿಧಾನಗಳನ್ನು ಈ ಹೊತ್ತು ಕಾಣವುದು ಅದು ಹಿಂದೆ ಹೇಗಿತ್ತು ಎಂಬ ಆಧಾರದಲ್ಲಿ. ಇದನ್ನು ಅವಲೋಕಿಸಿದರೆ ಇಂದಿಗೂ ನೆಬ್ಬೂರರ ಗಾನವಿಧಾನದ ನಡೆಯನ್ನು ಗಮನಿಸಬೇಕಾಗುತ್ತದೆ. ಅದನ್ನು ಅನುಸರಿಸಬೇಕಾಗುತ್ತದೆ. ಇದು ಇಂದಿನ ಕಲಾವಿದರುಗಳಿಗೆ ಅಗತ್ಯ. ಹೊಸ ಹೊಸ ರಾಗಗಳನ್ನು ತರುವುದಾಗಲೀ, ಹೊಸ ಹೊಸ ಪ್ರಯೋಗಗಳನ್ನು ಮಾಡುವುದಾಗಲೀ ಏನನ್ನೇ ಮಾಡಿದರೂ ಕಟ್ಟಿರುವ ಒಂದು ಅಡಿಪಾಯದ ಮೇಲೇಯೇ ಮಾಡುವ ಪ್ರಯೋಗ. ಅಡಿಪಾಯವನ್ನೇ ಕಟ್ಟುವ ಕೆಲಸ ಅತ್ಯಂತ ವಿರಳವಾಗಿ ಸಾಗಿದೆ ಯಕ್ಷಗಾನದಲ್ಲಿ. ಈ ಮಾತನ್ನು ನಾನು ಉಲ್ಲೇಖಿಸುವಾಗ ನೆಬ್ಬೂರರಿಗೆ ಇದ್ದ ಅವರ ಹಿಂದಿನ ಎರಡು ತಲೆಮಾರಿನ ಸಾಂಗತ್ಯದ ಮತ್ತು ಆಗ ನಡೆಯುತ್ತಿರುವ ವರ್ತಮಾನಗಳ ಚಿಂತನೆಗಳ ಸಾಧ್ಯತೆ ಒದಗಿದ ಪ್ರತಿಭಾವಂತರ ಚಿಂತನೆಯ ಸಾಧ್ಯತೆ ಹಾಗೂ ಅದನ್ನು ಅವರು ಪ್ರಯೋಗಾತ್ಮಕವಾಗಿ ಸಮಕಾಲೀನರೊಂದಿಗೆ ಮೇಳೈಸಿದ ರೀತಿ, ಅದನ್ನು ಹಿರಿತನದಲ್ಲಿ ಪ್ರಾಯೋಗಿಕವಾಗಿ ಮುಂದಿನ ಎರಡು ತಲೆಮಾರಿಗೆ ಬೋಧಿಸಿದ ವಿಧಾನ ಇವುಗಳನ್ನು ಒಳಗೊಂಡಿದೆ. ಅದುದರಿಂದಲೇ ಯಕ್ಷಗಾನದ ಹಿಮ್ಮೇಳದ ವ್ಯಾಪ್ತಿ ವಿಸ್ತಾರದ ವಿಚಾರದಲ್ಲಿ ನೆಬ್ಬೂರರ ಕೊಡುಗೆ ಅನನ್ಯವಾದದ್ದು. ಅದು ಇನ್ನೊಬ್ಬರೊಂದಿಗೆ ಹೋಲಿಸುವುದಕ್ಕೆ ಸಾಧ್ಯವಿಲ್ಲದಷ್ಟು ಎತ್ತರವಾದದ್ದು.

 

ಇನ್ನೊಂದು, ನೆಬ್ಬೂರರ ಹೆಸರು ಕೆರೆಮನೆ ಎಂಬ ಶಬ್ದದೊಂದಿಗೆ ಮೇಳೈಸಿಕೊಂಡ ವಿಧಾನ. ಆಗಲೇ  ಉಲ್ಲೇಖಿಸಿದಂತೆ ಅವರು ಕೆರೆಮನೆ ಕುಟುಂಬಕ್ಕೆ ಬಂದು ಸೇರಿ ಕುಟುಂಬದವರೇ ಆಗಿ ಹೋದರು. ಅವರ ಮನೆಯ ಗೋಡೆಗಳೆಲ್ಲ ಅದು ಎಷ್ಟು ಸನ್ಮಾನಗಳಿಂದ ತುಂಬಿದೆಯೋ ಅದೆಲ್ಲದರಲ್ಲಿ ಎದ್ದು ಕಾಣವುದು ನೆಬ್ಬೂರರ ಜೊತೆ ಶಿವರಾಮ ಹೆಗಡೆಯವರು ಶಂಭು ಹೆಗಡೆಯವರು ಅವರು ಪ್ರಾತಃಸ್ಮರಣೀಯರಾಗಿದ್ದರು ಎಂಬ ಅಂಶ. ಅವರಿಗೆ ಕೆರೆಮನೆ ಗುರುಮನೆಯೂ ಹೌದು ಅದು ಅವರ ಉಸಿರು ಎಂದು ನಾವು ಹೇಳಬಹುದಾದದ್ದು ಅಷ್ಟು ಸ್ಪಷ್ಟವಾಗಿ ಕಂಡುಬರುತ್ತದೆ. ಕೆರೆಮನೆಯ ಕಾರ್ಯಕ್ರಮಗಳು ಯಕ್ಷಗಾನಕ್ಕೆ ಸಂಬಂಧಿಸಿರಲಿ ಅಥವಾ ಯಕ್ಷಗಾನಕ್ಕೆ ಸಂಬಂಧಿಸದೇ ಇದ್ದ ಕಾರ್ಯಕ್ರಮ ಬೇಕಿದ್ದರೂ ಆಗಿರಲಿ, ಅದರಲ್ಲಿ ನೆಬ್ಬೂರರ ಪಾತ್ರ ನೆಬ್ಬೂರರ ಪ್ರವೇಶ ಲೋಕ ಕಾಣುವಂತೆ ಕಂಡುಬಂದಿದೆ. ಅದು ಅವರ ಬದುಕಿನ ಬಹುದೀರ್ಘ ಕಾಲವನ್ನು ವ್ಯಾಪಿಸಿಕೊಂಡಿದೆ ಎಂಬ ಧ್ವನಿಯನ್ನು ನಾವು ಗುರುತಿಸಬೇಕು. ಅವರ ಬೆಳವಣಿಗೆ, ಅವರ ಜೀವನ ಶೈಲಿ ಈ ಎಲ್ಲದರಲ್ಲಿ ಕೆರೆಮನೆಯತನವನ್ನು ಕಾಣಬಹುದು. ಒಬ್ಬ ಯಕ್ಷಗಾನ ಕಲಾವಿದರಾಗಿ, ಕೆರೆಮನೆ ಕುಟುಂಬದ ಸಹವರ್ತಿಯಾಗಿ ನೆಬ್ಬೂರರು ಬಹಳ ಆನಂದ ಪಟ್ಟಿದ್ದವರು. ತುಂಬ ಅಭಿಮಾನ ಪಟ್ಟವರು. ಅದರಲ್ಲಿಯೂ ವಿಶೇಷವಾಗಿ ಅವರು  ಶಂಭು ಹೆಗಡೆಯವರ ಒಡನಾಟದಲ್ಲಿ ಕೀರ್ತಿ ಮತ್ತು ಗೌರವಗಳನ್ನು ಮಾನ-ಮನ್ನಣೆಯನ್ನು ಪಡೆದವರು ಎಂಬ ಮಾತಿಗೆ ಎಲ್ಲಿಯೂ ಅಪಸ್ವರ ಕೇಳುವ ಹಾಗಿಲ್ಲ.

 

ಸ್ವಭಾವತಃ ನೆಬ್ಬೂರರು ಹಾಸ್ಯಪ್ರಿಯರು. ಅವರ ಹಾಸ್ಯದಲ್ಲಿ ಮೊನಚು ಕಾಣುತ್ತಿತ್ತು. ಅವರಿದ್ದ ವಾತಾವರಣ ಯಾವತ್ತೂ ನಗುತ್ತಲೇ ಇರುತ್ತಿತ್ತು. ಅವರ ಜೀವನಾನುಭವಗಳನ್ನು ಅವರು ಹಂಚಿಕೊಳ್ಳುವ ವಿಧಾನದಲ್ಲಿ ಆ ಗುಣಗಳು ಹಾಸುಹೊಕ್ಕಾಗಿದ್ದವು. ನನಗಂತೂ ಇತ್ತೀಚಿನ ಆರೇಳು ವರ್ಷಗಳಲ್ಲಿ ಅವರ ಒಡನಾಟ ಹೆಚ್ಚು ಸಿಕ್ಕಿತ್ತು. ಜೊತೆಯಲ್ಲಿ ಅವರ ಮನಸ್ಸೇನು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗಿತ್ತು. ಯಕ್ಷಗಾನದ ಎಷ್ಟೋ ವಿಚಾರಗಳನ್ನು ನಾನು ಚಿಂತಿಸುವಾಗ ಅವರಲ್ಲಿ ವಿಚಾರ ವಿನಿಮಯ ಮಾಡುವಾಗ ನಮ್ಮ ಅದೆಷ್ಟೋ ವಿಚಾರಗಳನ್ನು ಅವರು ತುಂಬು ಮನಸ್ಸಿನಿಂದ ಒಪ್ಪಿ ಇಂತಹ ಚಿಂತನೆಗಳು ಬಹಳ ಮೊದಲಿನಿಂದ ಬೇಕಿತ್ತು, ಆ ಕೊರತೆ ಯಕ್ಷಗಾನವನ್ನು ಈಗಲೂ ಕಾಡುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದನ್ನು ನಾನು ದೃಢೀಕರಿಸ ಬಯಸುತ್ತೇನೆ.

 

ಸಂದರ್ಭ ಒದಗಿ ಬಂದಾಗ ಕೆರೆಮನೆಯ ಕೊಡುಗೆಯನ್ನು ಯಕ್ಷಗಾನದ ಶ್ರೇಷ್ಠತೆಯನ್ನು

ಅವರ ಮಾತುಗಳಲ್ಲಿ ಕಾಣುವಾಗ ಅವರು ಸಂಭ್ರಮಿಸಿದ್ದನ್ನು ಅವರು ಸಂಕಟ ಪಟ್ಟಿದ್ದನ್ನು ನಾನು ಕಂಡಿದ್ದೇನೆ. ಕೆರೆಮನೆ ಕುಟುಂಬದವರ ಕೊಡುಗೆಯನ್ನು ಅವರು ಮುಕ್ತ ಮನಸ್ಸಿನಿಂದ ಹೊಗಳುವುದನ್ನು ಅನುಭವಿಸುವುದನ್ನು ಕಾಣುವಾಗ ನಮಗೂ ಹಿಗ್ಗು ಉಂಟಾದದ್ದು ಸಹಜ. ಎಲ್ಲಿಯೋ ಸಣ್ಣಪುಟ್ಟ ವಿಚಾರಗಳು ಅವರ ಮನಸ್ಸಿಗೆ ನೋವನ್ನುಂಟುಮಾಡಿದಾಗ ಅವರು ಹೊರಗಿನವರು ಇನ್ನೊಬ್ಬರ ಮನೆಯ ಒಳಗಿನ ವಿಚಾರಗಳಲ್ಲಿ ಮೂಗು ತೂರಿಸಿದರೆ ಕೊನೆಗೂ ಸಮಾಜಕ್ಕೆ ಸಿಗುವುದು ನೋವೇ ಎಂಬ ಮಾತನ್ನು ಹೇಳುತ್ತಿದ್ದರು. ಇದನ್ನು ನಾನು ಬಿಡಿಸಿ ಕೇಳಲಿಲ್ಲ, ಅವರು ವಿಸ್ತರಿಸಲಿಲ್ಲ.
ಅವರಿಗೆ ಯಕ್ಷಗಾನದ ತನ್ನ ಒಟ್ಟಾರೆ ನಡೆಯನ್ನು ಹೆಚ್ಚು ವ್ಯವಸ್ಥಿತವಾಗಿ ದಾಖಲಿಸಬೇಕು ಎಂಬ ಒಂದು ಆಶಯ ಇತ್ತು. ಆ ಕಾರ್ಯ ಅವರೆಣಿಸಿಕೊಂಡಂತೆ ಆಗಲಿಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಅಷ್ಟು ದೀರ್ಘಕಾಲ ಯಕ್ಷಗಾನ ಕ್ಷೇತ್ರವನ್ನು ಸೇವೆ ಗೈದ ನೆಬ್ಬೂರು ನಾರಾಯಣ ಭಾಗವತರು ಯಾವ ಸ್ಥಿತಿವಂತ ಕ್ರಮದಲ್ಲಿ ಇರಬೇಕಿತ್ತೋ ಅದು ಸಾಧ್ಯವಾಗದೇ ಇರುವುದು ಬಹುತೇಕ ಎಲ್ಲ ಕ್ಷೇತ್ರಗಳಂತೆ ಯಕ್ಷಗಾನವೂ ಸಹ ಕಲಾವಿದರನ್ನು ನಡೆಸಿಕೊಳ್ಳುವ ರೀತಿ ಎಂದು ನನಗೆ ಅನಿಸುತ್ತದೆ.

 

ಅವರಿಗೆ ಒದಗಿದ ಸಂಪತ್ತುಗಳಲ್ಲಿ ಅವರ ಧರ್ಮಪತ್ನಿಯಾಗಿ ಅವರನ್ನು ಅರ್ಥೈಸಿಕೊಂಡು ಬದುಕಿದ ಶರಾವತಕ್ಕ, ಅವರ ಮಗ ಮತ್ತು ಮಗಳು-ಅಳಿಯ ಮತ್ತು ಸೊಸೆ-ಮೊಮ್ಮಕ್ಕಳು, ಜೊತೆಯಲ್ಲಿ ಅವರ ಹೆಚ್ಚು ಹತ್ತಿರದ ಬಂಧು- ಬಾಂಧವರು, ಇದಕ್ಕೂ ಮೀರಿ ಅವರನ್ನು ಮೆಚ್ಚುವ, ಪ್ರೀತಿಸುವ, ಒಂದರ್ಥದಲ್ಲಿ ಅವರನ್ನು ಆರಾಧಿಸುವ ದೊಡ್ಡ ಅಭಿಮಾನಿ ಬಳಗ – ಇವೆಲ್ಲವೂ ನೆಬ್ಬೂರರನ್ನು ಸದಾ ಸಮೃದ್ಧಿಯಲ್ಲಿ ಸದಾ ಸಂತೋಷದಲ್ಲಿ ಇರುವಂತೆ ಮಾಡಿದೆ. ಹಾಗಾಗಿ ಜೀವನವನ್ನು ನೆಬ್ಬೂರರು ಪೂರ್ಣವಾಗಿ ಅನುಭವಿಸಿದರು. ಪೂರ್ಣವಾಗಿ ಆನಂದಿಸಿದರು.
ಯಾವುದೇ ಬದುಕಿನ ಆತ್ಯಂತಿಕವಾದಂತಹ ಉದ್ದೇಶ ಏನು ಎಂಬ ಪ್ರಶ್ನೆಗೆ  ಆರ್ಷೇಯವಾದಂತಹ ಉತ್ತರ, ಶಾಶ್ವತವಾದ ಉತ್ತರ ಆನಂದವೇ ಆದುದರಿಂದ ನೆಬ್ಬೂರರ ಬದುಕು ಪೂರ್ಣತೆಯ ಬದುಕು ಎಂದು ನಾನು ಉಲ್ಲೇಖಿಸುವುದಕ್ಕೆ ಇಷ್ಟ ಪಡುತ್ತೇನೆ. ತುಂಬು ಜೀವನ ತುಂಬು ಕಂಠ ಇವೆರಡೂ ನೆಬ್ಬೂರರಿಗೆ ಪರ್ಯಾಯ ಪದ. ಆನಂದ ಅವರಿಗೆ ಸಿಕ್ಕ ಪ್ರತಿಫಲ. ಜೀವನದುದ್ದದಲ್ಲಿ ಬದುಕಿದಂತಹ, ಅನುಭವಿಸಿದಂತಹ ಕೆಲವು ಆತಂಕ ಮತ್ತು ಸಂಕಟಗಳು ಅದು ಜೀವನದ ಒಂದು ಭಾಗವೇ ಆದ ಕಾರಣ ಅದನ್ನು ವೈಭವೀಕರಿಸುವ ಅಗತ್ಯ ಕಾಣುವುದಿಲ್ಲ.

 


ಹೀಗೆ ಒಂದು ಮಹಾಚೇತನವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಹಾಡುತ್ತ ಕುಣ ಸುತ್ತ ನಲಿದಾಡಿದ ನೆಬ್ಬೂರರು ಸಮಾಜದ ಒಬ್ಬ ಗಣ್ಯಮಾನ್ಯರಾಗಿ ಲೋಕಮಾನ್ಯರಾಗಿ ಜೀವನವನ್ನು ಬೆಳಗಿದ್ದು ಜೀವನವನ್ನು ಬೆಳಗಿಸಿಕೊಳ್ಳುವ ಹಲವರಿಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದು ಅವರ ಜೀವನದ ಬಹುದೊಡ್ಡ ಸಾಧನೆ, ಅವರಿಗೆ ಸಿಕ್ಕ ಬಹುದೊಡ್ಡ ಪ್ರಶಸ್ತಿ. ಅವರಿಗೆ ಒಲಿದ ಸಮಾಜದ ಪ್ರಶಸ್ತಿಗಳು, ರಾಜ್ಯೋತ್ಸವ ಪ್ರಶಸ್ತಿ, ಕೆರೆಮನೆಯ ಪ್ರಶಸ್ತಿ ಇವೆಲ್ಲವೂ ಅವರಿಗೆ ಅರ್ಹತೆಯಿಂದಲೇ ಸಂದಿದೆ. ಅವರಿಗೆ ಇನ್ನೂ ಹೆಚ್ಚು ಪ್ರಶಸ್ತಿಗಳು ಬರಬೇಕಿತ್ತು. ಆ ಮಟ್ಟದಲ್ಲಿ ಅವರು ಅದಕ್ಕೆ ಅರ್ಹರಾಗಿದ್ದರು ಎನ್ನುವ ಮಾತನ್ನು ಉಲ್ಲೇಖಿಸುತ್ತ ಅವರಿಗೆ ಭಗವಂತನು ಸದ್ಗತಿಯನ್ನು ಕರುಣಿಸಲಿ, ಅವರ ಜೀವನದ ಪೂರ್ಣತೆ ಇಹದಲ್ಲಿ ನಾವು ಕಂಡಂತೆ ಪರದಲ್ಲಿಯೂ ಪರಮಾತ್ಮನ ಅನುಗ್ರಹದಿಂದ ಪ್ರಾಪ್ತಿಸುವಂತಾಗಲಿ ಎನ್ನುವ ಸದಾಶಯದೊಂದಿಗೆ ಮನದುಂಬಿ ಹೃದಯ ತುಂಬಿ ಈ ನುಡಿನಮನವನ್ನು  ಆ ದಿವ್ಯಚೇತನಕ್ಕೆ ಆ ಮಹಾಚೇತನಕ್ಕೆ ತಮ್ಮೆಲ್ಲರ ಆಶೋತ್ತರಗಳೊಂದಿಗೆ ಸಮರ್ಪಿಸಬಯಸುತ್ತೇನೆ.

Author Details


Srimukha

Leave a Reply

Your email address will not be published. Required fields are marked *