ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕಿಡಿಗೆ 162 ವರ್ಷಗಳು

ಅಂಕಣ ಜಾಗೃಯಾಮ : ಶಿಶಿರ ಅಂಗಡಿ

ಭಾರತ ದೇಶದ‌ ಭವ್ಯ ಸಂಪತ್ತನ್ನು ಲೂಟಿಮಾಡಲೆಂದೆ ಹತ್ತು ಹಲವು ದೇಶದವರು ಪ್ರಾಂತ್ಯದವರು ದಾಳಿ ಮಾಡಿದರು. ಭಾರತದಿಂದ ಅವರೆಲ್ಲರೂ ಸಾಕಷ್ಟು ಲೂಟಿ ಮಾಡಿಕೊಂಡು ಹೋದರು. ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ವೈಭವದ ಪರಂಪರೆಯನ್ನು ಧ್ವಂಸ ಮಾಡುವ ಸಾಕಷ್ಟು ಪ್ರಯತ್ನಗಳೂ ನಡೆದಿವೆ. ಕೊನೆಯಲ್ಲಿ ಬ್ರಿಟಿಷರು ಸಂಪತ್ತಿನ ಲೂಟಿಯ ಜೊತೆಗೆ ಭಾರತವನ್ನು ಜೀತದಂತೆ ಆಳುವ ದುರುದ್ದೇಶದೊಂದಿಗೆ ಭಾರತಕ್ಕೆ ಕಾಲಿಟ್ಟಿತು. ಈಸ್ಟ್ ಇಂಡಿಯಾ ಕಂಪನಿಯ ನೆಪದಲ್ಲಿ ಭಾರತವನ್ನು ಬ್ರಿಟೀಷರು ವಶಪಡಿಸಿಕೊಂಡಾಗಿತ್ತು. ಸ್ವಾತಂತ್ರ್ಯಕ್ಕಾಗಿನ ಹೋರಾಟದಲ್ಲೂ ನಮ್ಮ ದೇಶದ್ದು ಅತ್ಯಂತ ಶ್ರೇಷ್ಠ ಇತಿಹಾಸ ಇದೆ. ಕೋಟ್ಯಾಂತರ ಜೀವಗಳ ತ್ಯಾಗ ಬಲಿದಾನದ ಅಪರೂಪದ ಪರಂಪರೆಯೇ ಇದೆ. ದೇಶದ ಸ್ವಾತಂತ್ರ್ಯಕ್ಕಾಗಿ ಕದನ ಭೂಮಿಯಲ್ಲಿ ವೀರಯೋಧರು ಹೋರಾಡಿದ ಪರಿಯನ್ನು ಮರೆಯುವುದುಂಟೆ?

ಅಂತಹ ಹೋರಾಟಕ್ಕೆ ಬೀಜಾಂಕುರವಾದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಆರಂಭಕ್ಕೆ ಇಂದು, ಇದೇ ದಿನಕ್ಕೆ ಸರಿಯಾಗಿ 162 ವರ್ಷಗಳು ಸಂದಿದೆ. ಬ್ರೀಟಿಷರ ದುರಾಡಳಿತ ಹಾಗೂ ಧಾರ್ಮಿಕ ನಂಬಿಕೆಗಳ ಮೇಲಿನ ದಾಳಿಯಿಂದ ರೋಸಿಹೋಗಿದ್ದ ಭಾರತೀಯರಿಗೆ ಹೋರಾಟ ಕಿಚ್ಚನ್ನು ಹೊತ್ತಿಸಿದ್ದ ಮಂಗಲ್ ಪಾಂಡೆ ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ಭುಗಿಲೆದ್ದಿದ್ದು ಇದೆ ಮಾರ್ಚ್ 29, 1857ರಂದು.

ಏನಿದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ?

ಬ್ರಿಟೀಷರ ತಾರತಮ್ಯ ನೀತಿ,ಭಾರತೀಯರನ್ನು ಅವಮಾನಿಸುವುದು, ದುರಾಡಳಿತಗಳು ಮಿತಿಮೀರಿದ್ದ ಕಾಲವದು. ಸೈನಿಕರ ರಕ್ತ ಕುದಿಯುತ್ತಿತ್ತು, ಹೇಗಾದರೂ ಮಾಡಿ ಬ್ರಿಟಿಷರನ್ನು ಹೊಡೆದೋಡಿಸಬೇಕೆಂದು ಅವರ ಮನ ಹಾತೊರೆಯುತ್ತಿತ್ತು. ಆದರೆ ಹೋರಾಟದ ಕಲ್ಪನೆ, ಭಾರತ ದೇಶ ಎಂಬ ಕಲ್ಪನೆಗಳು ಆಗಿನ್ನೂ ಸ್ಪಷ್ಟವಾಗಿರಲಿಲ್ಲ. ಹಾಗಾಗಿ ದೇಶಭಕ್ತರು, ಭಾರತದ ಸೈನಿಕರು ದಿಕ್ಕೇತೋಚದಂತಾಗಿದ್ದರು. ಅದೇ ಸಮಯದಲ್ಲಿ ಬ್ರೀಟಿಷರು ಎನಫೀಲ್ಡ್ ಪಿ53 ಎಂಬ ಹೊಸ ಬಂದೂಕುಗಳನ್ನು ಭಾರತದ ಸೈನಿಕರಿಗೆ ಪರಿಚಯಿಸಿ, ಇದನ್ನೇ ಬಳಸುವಂತೆ ತಾಕೀತು ಮಾಡಿದರು. ಕಾಡತೂಸುಗಳನ್ನು ತುಂಬುವಾಗ ಬಂದೂಕಿನ ಭಾಗವನ್ನು ಕಚ್ಚಿ ತೆಗೆಯಬೇಕಾದ ಅವಶ್ಯಕತೆ ಇತ್ತು. ಆದರೆ ಆ ಭಾಗದಲ್ಲಿ ಗೋವಿನ ಚರ್ಮದ‌ ಅಡಿಯಲ್ಲಿರು ಕೊಬ್ಬು ಹಾಗೂ ಹಂದಿಯ ಕೊಬ್ಬನ್ನು ಸವರಲಾಗುತ್ತಿತ್ತು‌. ಇದು ಹಿಂದು ಮತ್ತು‌ ಮುಸಲ್ಮಾನ್ ಸೈನಿಕರನ್ನು ಕೆರಳಿಸಿತು. ಯಾಕೆಂದರೆ ಗೋವು ಹಿಂದೂಗಳಿಗೆ ಪೂಜ್ಯವಾದರೆ, ಹಂದಿ ಮುಸಲ್ಮಾನರಿಗೆ ವರ್ಜ್ಯ. ಹಾಗಾಗಿ ಅವುಗಳ ಕೊಬ್ಬನ್ನು ನಮ್ಮ ಬಾಯಿಂದ
ಕಚ್ಚುವುದು ಧರ್ಮಾಪಚಾರ ಆಗುತ್ತಿತ್ತು. ಆಗ ಎಲ್ಲ ಸೈನಿಕರು ಅದನ್ನು ಬಳಸುವುದಿಲ್ಲ ಎಂದು ಸಾರಿದರು. ಆದರೂ ಬ್ರೀಟಿಷರು ಆ ಬಂದೂಕುಗಳನ್ನೇ ಬಳಸುವಂತೆ ಒತ್ತಾಯಿಸುತ್ತಿದ್ದರು. ನಿರಾಕರಿಸಿದ ಭಾರತದ ಸೈನಿಕರು ಶಿಕ್ಷೆಗೂ ಗುರಿಯಾದರು.

ಇದನ್ನೆಲ್ಲ ನೋಡುತ್ತಿದ್ದ 34ನೇ ಬಂಗಾಲ ಸ್ಥಳೀಯ ಪದಾತಿದಳದ 6ನೇ ಕಂಪನಿಯಲ್ಲಿ ಕಾರ್ಯನಿರ್ವಹುಸತ್ತಿದ್ದ 22ರ ಹರೆಯದ ಮಂಗಲ್ ಪಾಂಡೆಯ ಸಹನೆ ಕಟ್ಟೆಯೊಡೆದಿತ್ತು. ಆತ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸಿಪಾಯಿ ಆಗಿದ್ದ.  ಬ್ರಿಟೀಷರ ದಾಸ್ಯದಿಂದ ಹೊರಬಂದು ಸ್ವಾತಂತ್ರ್ಯ ಪಡೆಯುವ ಛಲದಲ್ಲಿದ್ದ ಬಿಸಿರಕ್ತದ ಯುವಕ ಸರಿಯಾದ ಸಂದರ್ಭಕ್ಕಾಗಿ ಕಾಯುತ್ತಿದ್ದ. 1857ರ ಮಾರ್ಚ್ 29ರಂದು ಬ್ರಿಟೀಷ್ ಅಧಿಕಾರಿಗಳಾದ ಮೇ. ಹ್ಯೂಸನ್ ಮತ್ತು ಲೆ. ಬಾಘ್ ಇಬ್ಬರನ್ನೂ ಮಂಗಲದ ಪಾಂಡೆ ಗುಂಡಿಕ್ಕಿ ಕೊಂದ. ಇದುವೇ ಆರಂಭ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಸಂದರ್ಭ ಇದು. ನಂತರ ನಡೆದದ್ದು ಇತಿಹಾಸ.

ಎಪ್ರಿಲ್ 8ರಂದು ಮಂಗಲ್ ಪಾಂಡೆಯನ್ನು ನೇಣಿಗೇರಿಸಲಾಯಿತು. ಹೋರಾಟದ ಕಿಚ್ಚು ಜೋರಾಗಿಯೇ ಹಬ್ಬ ತೊಡಗಿತು. ಕರ್ನಾಟಕದಲ್ಲಿ  ಹಲಗಲಿಯ ಬೇಡರು, ಮುಂಡರಗಿ ಭೀಮರಾವ್,
ಸುರಪುರದ 4ನೇ ವೆಂಕಟಪ್ಪ ನಾಯಕ ಮತ್ತು ನರಗುಂದದ ಬಾಬಾ ಸಾಹೇಬ ಪ್ರಮುಖವಾಗಿ ಹೋರಾಟದ ನೇತೃತ್ವ ವಹಿಸಿದ್ದರು.

ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯಿಂದ ನೇರವಾಗಿ ಬ್ರಿಟೀಷ್ ರಾಣಿ ವಿಕ್ಟೋರಿಯಾ ವಹಿಸಿಕೊಂಡು, ಭಾರತೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದಿಲ್ಲ ಎಂದು ಘೊಷಿಸಿದರು. ಈ ಸಂಗ್ರಾಮ ಮುಂದಿನ ಸ್ವಾತಂತ್ರ್ಯಕ್ಕಾಗಿನ ಹೋರಾಟಕ್ಕೆ ದಾರಿದೀಪವಾಗಯಿತು. ಪ್ರತಿ ಹೋರಾಟಕ್ಕೂ ಸ್ಪೂರ್ತಿಯ ಶಕ್ತಿಯಾಗಿ ನಮ್ಮೆದುರಿಗಿದೆ.

ಅನೇಕಾನೇಕ ತ್ಯಾಗ ಬಲಿದಾನಗಳ ಫಲವಾಗಿ ಭಾರತವೇನೋ ಬ್ರಿಟೀಷರ ಬಿಗಿಮುಷ್ಟಿಯಿಂದ ಸ್ವಾತಂತ್ರ್ಯ ಪಡೆದಿದೆ. ಆದರೆ ಯಾವ ಸ್ವಾತಂತ್ರ್ಯ ಹೋರಾಟಕ್ಕೆ ಮೂಲ ಕಾರಣವಾದ ಗೋವು ಮಾತ್ರ ಇನ್ನೂ ಮನುಷ್ಯನ ಬಿಗಿಮುಷ್ಠಿಯಿಂದ ಸ್ವಾತಂತ್ರ್ಯ ಪಡೆಯಲೇ ಇಲ್ಲ. ಅವ್ಯಾಹತವಾಗಿ ಗೋಹತ್ಯೆ ನಡೆಯುತ್ತಲೇ ಇದೆ. ಗೋವುಗಳನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ. ಎಷ್ಟರಮಟ್ಟಿಗೆ ಅಂದರೆ ಬದುಕಿದ್ದಾಗಲೇ ಗೋವುಗಳ ಜೀವನವನ್ನು ನರಕಸದೃಶ ಮಾಡಲಾಗುತ್ತಿದೆ. ಅವುಗಳಿಂದ ಸಹಜ ಜೀವನ ಪ್ರಕ್ರಿಯೆಗಳನ್ನು ದೂರಮಾಡಲಾಗುತ್ತಿದೆ. ಇಂದು ಮೇಯಲಿಕ್ಕೆ ಹೋದ ಗೋವು ಮರಳಿ ಬರುತ್ತದೆ ಎಂಬ ನಂಬಿಕೆಯಿಲ್ಲ. ಸಂಜೆ ಕೊಟ್ಟಿಗೆಯಲ್ಲಿ ಕಟ್ಟಿದ ಗೋವುಗಳು ನಾಳೆ ಬೆಳಗಾಗುವವರೆಗೂ ಕೊಟ್ಟಿಗೆಯಲ್ಲೇ ಇರುತ್ತದೆ ಎಂಬ ನಂಬಿಕೆಯಿಲ್ಲ. ಅಷ್ಟರ ಮಟ್ಟಿಗೆ ಗೋವುಗಳ‌ ಕಳ್ಳಸಾಗಾಣಿಕೆ, ಗೋಹತ್ಯೆ ನಡೆಯುತ್ತಿದೆ. ಇದನ್ನು ತಡೆದು, ಗೋವುಗಳ ರಕ್ಷಣೆ‌ ಮಾಡಲು ನಾವು ನೀವೆಲ್ಲರೂ ಕಟಿಬದ್ಧರಾಗಬೇಕಿದೆ.

ಆದರೆ ಗೋವುಗಳ ಸಂರಕ್ಷಣೆ,ಸಂಶೋಧನೆ, ಸಂವರ್ಧನೆ, ಸಂಬೋಧನೆಯ ಉದ್ದೇಶ ಇಟ್ಟುಕೊಂಡು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಕಳೆದೆರಡು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಗೋವುಗಳ ಸಂಪೂರ್ಣ ಸ್ವಾತಂತ್ರ್ಯ ಒದಗಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಬೃಹತ್ತಾದ ಗೋಸ್ವರ್ಗವನ್ನು ಪರಮಪೂಜ್ಯ ರಾಘವೇಶ್ವರಭಾರತಿ ಶ್ರೀಗಳು ನಿರ್ಮಿಸಿದ್ದು, ಅಲ್ಲಿರುವ  600ಕ್ಕೂ ಅಧಿಕ ಗೋವುಗಳನ್ನು ಕಟ್ಟಿಹಾಕದೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಅವುಗಳಿಗೆ ಮೇವು, ನೀರು, ಬಿಸಿಲು, ತಂಪು ಎಲ್ಲವೂ ಅವುಗಳ ಆಯ್ಕೆ. 24ಗಂಟೆ ನೀರು ಮತ್ತು ಮೇವು ಗೋವುಗಳ‌ ಎದುರಲ್ಲೇ ಲಭ್ಯ ಇರುತ್ತದೆ. ಅವುಗಳಿಗೆ ಬೇಕಾದಾಗ, ಬೇಕಾದಷ್ಟನ್ನು ಸೇವಿಸಬಹುದಾಗಿದೆ

ಹೀಗೆಯೇ ಗೋವುಗಳಿಗೆ ಬಂಧನಮುಕ್ತ ಜೀವನವನ್ನು ಕೊಡುವತ್ತ ನಾವೆಲ್ಲ ಕಾರ್ಯಪ್ರವತ್ತರಾಗಬೇಕಿದೆ‌. ಪ್ರಮುಖವಾಗಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿರುವವರನ್ನು ನೆನೆಯುತ್ತಾ, ಗೌರವ ಸಮರ್ಪಿಸುತ್ತಾ‌.. ಅವರುಗಳಿಂದ‌ ಪ್ರೇರಣೆ ಪಡೆದು, ದೇಶದ ಅಭಿವೃದ್ಧಿಗಾಗಿ ಶ್ರಮಿಸೋಣ.

Author Details


Srimukha

Leave a Reply

Your email address will not be published. Required fields are marked *