ಶ್ರೀ ರಾಮನ ನಿರ್ಣಯದತ್ತ ಒಂದು ನೋಟ

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

 

 

ಆಪದಾಮಪಹರ್ತಾರಂ
ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ
ಭೂಯೋ ಭೂಯೋ ನಮಾಮ್ಯಹಮ್ ||

 


ಅಯೋಧ್ಯೆಯ ಅರಸುಗಳಲ್ಲಿಯೇ ಅತಿಶ್ರೇಷ್ಠನಾದ ಅರಸು ಶ್ರೀರಾಮಚಂದ್ರ. ಮರ್ಯಾದಾಪುರುಷೋತ್ತಮ ಎಂಬ ಅಭಿದಾನವನ್ನು ಹೊಂದಿದ ಭಾರತವರ್ಷದ

ಏಕಮೇವ ಚಕ್ರವರ್ತಿ. ತನ್ನ ಜೀವಿತ ಕಾಲದಲ್ಲಿ  ಮಾಡಿದ ಸಾಧನೆಯನ್ನು ಮನುಕುಲ ಇಂದಿಗೂ ಮರೆತಿಲ್ಲ. ಸುಭಿಕ್ಷ, ಶಾಂತಿ, ಸಮಾಧಾನಗಳಿಂದ ಕೂಡಿದ ರಾಜ್ಯವ್ಯವಸ್ಥೆಗೆ ಪರ್ಯಾಯ ಏನೆಂದು ಉದಾಹರಣೆಯ ಮೂಲಕ ವಿವರಿಸಿ ಎಂದರೆ ರಾಮರಾಜ್ಯ ಎಂದೇ ಕೇಳಿಬರುತ್ತದೆ. ಎಷ್ಟೋ ವರ್ಷಗಳ ಇತಿಹಾಸವನ್ನು ಹೊಂದಿದ  ಭಾರತವರ್ಷಕ್ಕೆ ಇನ್ನೊಂದು ಅಂತಹ ಸಮೃದ್ಧ, ಸಂಪನ್ನ ರಾಜ್ಯ ಜೀವನಕ್ರಮದ ಉದಾಹರಣೆ ಇಲ್ಲ. ಹಾಗಿದ್ದರೆ ಅಂತಹ ಶ್ರೀರಾಮಚಂದ್ರನನ್ನು ಯಾವ ವಿಶೇಷತೆಗಳಿಂದ ಗಮನಿಸಬಹುದು ಎನ್ನುವತ್ತ ಒಂದು ಸಣ್ಣ ಕುತೂಹಲ. ನಿಮ್ಮನ್ನು ಆ ಕಣ್ಣಿಂದ ನೋಡುವುದಕ್ಕೆ ಕರೆದುಕೊಂಡು ಹೋಗುವ ಪ್ರಯತ್ನವಿದಷ್ಟೆ.

 

ಒಬ್ಬ ವ್ಯಕ್ತಿ ಕೈಗೊಳ್ಳುವಂತ ನಿರ್ಣಯ ಎಷ್ಟು ಶ್ರೇಷ್ಠವಾಗಿರಬೇಕು, ಅದು ಹೇಗೆ ಸಾರ್ವಕಾಲವಾಗಿರಬೇಕು ಎನ್ನುವುದನ್ನು  ಶ್ರೀರಾಮ ಕೈಗೊಂಡ ಮೊಟ್ಟ ಮೊದಲ ಸ್ವತಂತ್ರ ನಿರ್ಣಯದಿಂದ ಊಹಿಸಬಹುದು. ಅದನ್ನು ಇಲ್ಲಿ ಉಲ್ಲೇಖಿಸಬಹುದು.

 

ಪೂಜ್ಯರಾದ ವಸಿಷ್ಠರಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಉನ್ನತ ಶಿಕ್ಷಣಕ್ಕೆ ಮಹರ್ಷಿಗಳಾದ ವಿಶ್ವಾಮಿತ್ರರಲ್ಲಿ ತೆರಳಿದನು ಶ್ರೀರಾಮಚಂದ್ರ. ಅಲ್ಲಿಗೆ ಹೋಗುವಾಗ ತಾಟಕಿಯನ್ನು ಸಂಹರಿಸುತ್ತಾನೆ. ಆಗ ರಾಮನಿಗೆ ಸ್ತ್ರೀಯನ್ನು ಕೊಲ್ಲಬಹುದೇ ಎಂಬ ಒಂದು ಸಂದೇಹ. ಗುರುಗಳಲ್ಲಿ ಚರ್ಚಿಸಿ ದುಷ್ಟೆಯಾದ್ದರಿಂದ ಕೊಲ್ಲುವುದು ಸರಿ ಎಂಬ ತೀರ್ಮಾನಕ್ಕೆ ಬದ್ಧನಾಗಿ ಆ ಕೃತ್ಯವನ್ನು ಎಸಗುತ್ತಾನೆ. ಆಮೇಲೆ ವಿದ್ಯಾಭ್ಯಾಸವನ್ನು ಪೂರೈಸಿ ಮಿಥಿಲೆಗೆ ತೆರಳಿ ಸೀತೆಯೊಂದಿಗೆ ವಿವಾಹವಾಗಿ ಅಯೋಧ್ಯೆಗೆ ಹಿಂದಿರುಗುತ್ತಾನೆ. ಅಲ್ಲಿಂದ ಮುಂದೆ ವಿಶ್ವಾಮಿತ್ರರು ಶ್ರೀರಾಮನ ಬದುಕಿನಲ್ಲಿ ಕಾಣಬರುವುದಿಲ್ಲ. ಇದೇ ಸಂದರ್ಭ ಚಕ್ರವರ್ತಿ ದಶರಥ  ಶ್ರೀರಾಮಚಂದ್ರನಿಗೆ ಅಯೋಧ್ಯೆಯ ಅರಸೊತ್ತಿಗೆಯನ್ನು ನೀಡುವ ಕುರಿತು ಸಂಕಲ್ಪಿಸುತ್ತಾನೆ. ಅನಂತರದ ಕಥೆ ಇದಕ್ಕೆ ಸಮ್ಮತಿಸದ ಮಂಥರೆಯ ಕುಮಂತ್ರದಿಂದ ಪ್ರಭಾವಿತಳಾದ ಕೈಕೇಯಿ ವರಗಳನ್ನು ಕೇಳಿ ಶ್ರೀರಾಮಚಂದ್ರನನ್ನು ಅರಣ್ಯಕ್ಕೆ ಕಳುಹಿಸುವ ಹುನ್ನಾರವನ್ನು ಸೃಷ್ಟಿಸುವುದು.

ಈಗ ಬಂತು ಶ್ರೀ ರಾಮಚಂದ್ರನಿಗೆ ನಿರ್ಣಯವನ್ನು ಕೈಗೊಳ್ಳುವ ಸಂದರ್ಭ. ತಂದೆ ದಶರಥ ಹೇಳುತ್ತಾನೆ ‘ನನ್ನನ್ನು ನಿಗ್ರಹಿಸಿಯಾದರೂ ಅಯೋಧ್ಯೆಯನ್ನು ಆಳು’. ತಾಯಿಕೌಸಲ್ಯಾ ಮಾತೆ ಹೇಳುತ್ತಾಳೆ ‘ನೀನು ಅರಣ್ಯಕ್ಕೆ ಹೋದರೆ ನಾನು ಬದುಕುಳಿಯುವುದು ಸಾಧ್ಯವಿಲ್ಲ’.

ಸೇರಿದ ಸಮಸ್ಥ ಪ್ರಜಾವರ್ಗ ಅಯೋಧ್ಯೆಗೆ ರಾಮನೇ ರಾಜನಾಗಬೇಕು ಎಂದು ಹಂಬಲಿಸುತ್ತಾರೆ ಆ ಕುರಿತು ಆಗ್ರಹಿಸುತ್ತಲೇ ಇರುತ್ತಾರೆ. ಮಂತ್ರಿ ಸುಮಂತ್ರ ರಾಮನೇ ಅಯೋಧ್ಯೆಗೆ ರಾಜ ಎನ್ನುವ ವಾರ್ತೆಯನ್ನು ಈಗಾಗಲೇ ಬಿಂಬಿಸಿ ಆಗಿದೆ. ಅದಕ್ಕಾಗಿಯೇ  ದೇಶದೇಶಾಂತರಗಳಿಂದ ರಾಜಮಹಾರಾಜರುಗಳು ಮಾಂಡಲಿಕರು ಕಪ್ಪ ಕಾಣಿಕೆಗಳನ್ನು ಹೊತ್ತು ತಂದಿದ್ದಾರೆ. ಇಡೀ ಅಯೋಧ್ಯೆ ಸಿಂಗಾರಗೊಂಡು ಚರಿತ್ರಾರ್ಹವಾದಂತ ಉತ್ಸವಕ್ಕೆ ಸಜ್ಜಾಗಿ ನಿಂತಿದೆ. ಸ್ವತಃ ಶ್ರೀರಾಮನೂ ಸಹ ವ್ರತನಿಷ್ಠನಾಗಿ ರಾತ್ರಿಯನ್ನು ಕಳೆದು ಕಿರೀಟಧಾರಣೆಗಾಗಿ ಸಜ್ಜಾಗಿ ನಿಂತುಕೊಂಡಿದ್ದಾನೆ. ಆದರೆ ಆ ಸಂಭ್ರಮದಲ್ಲಿ ಕಾಣದ ಕೈಕಾಮಾತೆಯನ್ನು ಕುರಿತು ಕಾರಣವನ್ನು ವಿಚಾರಿಸುವಾಗ ರಾಮನಿಗೆ ತಿಳಿದಿಯುತ್ತದೆ ಕೈಕಾಮಾತೆಗೆ ಅಸಹನೆಯುಂಟಾಗಿದೆ ಎಂದು. ತಂದೆಯ ಅಭಿಪ್ರಾಯವನ್ನು ತಾಯಿಯ ರೋಧನವನ್ನು ಗುರುಹಿರಿಯರ ವಿಷಣ್ಣತೆಯನ್ನು ಸಾಮ್ರಾಜ್ಯದ ಎಲ್ಲರ ಮನೋಭಾವವನ್ನು ತಿಳಿದ ರಾಮ ಅಯೋಧ್ಯೆಯನ್ನು ಬಿಟ್ಟು ತಂದೆಯ ಮಾತನ್ನು ಪೂರೈಸಿ ಅರಣ್ಯಕ್ಕೆ ಹೊರಡಬೇಕೇ ಅಥವಾ ಇವರೆಲ್ಲರ ಭಾವಕ್ಕೆ ಬೆಲೆಕೊಟ್ಟು ಅಯೋಧ್ಯೆಯ ಅಧಿಕಾರವನ್ನು ಸ್ವೀಕರಿಸಬೇಕೇ ಎಂಬ ಜಿಜ್ಞಾಸೆಯಲ್ಲಿದ್ದವನು ಸ್ವಲ್ಪವೂ ವಿಚಲಿತನಾಗದೆ ಯಾವ ಮುಖಮುದ್ರೆಯಲ್ಲಿದ್ದನೋ ಆ ಮುಖಮುದ್ರೆಯಲ್ಲಿ ಇನಿತೂ ವ್ಯತ್ಯಾಸವಾಗದ ಹಾಗೆ ಒಂದು ಖಚಿತ ನಿರ್ಣಯವನ್ನ ಕೈಗೊಳ್ಳುತ್ತಾನೆ. ಆ ನಿರ್ಣಯವೇ ಪಿತೃವಾಕ್ಯಪರಿಪಾಲನೆ.

 

ಎಂತಹ ಅದ್ಭುತವಾದ ನಿರ್ಣಯ. ಒಂದೆಡೆ ಸಂಭ್ರಮ ಮುಗಿಲುಮುಟ್ಟುತ್ತಿದೆ ಅಯೋಧ್ಯೆಯಲ್ಲಿ . ತಾನು ಕೈಗೊಳ್ಳುವ ನಿರ್ಣಯದಿಂದ ಸಮಸ್ಥರ ಸಂಭ್ರಮ ಕೆಲವೇ ಕ್ಷಣದಲ್ಲಿ ವಿಶಾದವಾಗುವ ಸ್ಥಿತಿ ಇದೆ. ಮಹಾ ಎತ್ತರದಿಂದ ಮಹಾಪ್ರಪಾತದತ್ತ ಸಾಗುವ ಒಂದು ಮಹತ್ತರವಾದ ಸಂದರ್ಭ. ರಾಮನ ನಿರ್ಣಯದ ಮೇಲೆ ಇಡೀ ಅಯೋಧ್ಯೆಯ ಚರಿತ್ರೆಯ ಮಹತ್ತ್ವ ಗೊತ್ತಾಗಲಿಕ್ಕಿದೆ. ಅವರ ಕೌಮಬಿಕ ವಾತ್ಸಲ್ಯದ ಬಂಧದ ಎಳೆ ಎಳೆಗಳು ಸ್ಪಷ್ಟವಾಗಲಿಕ್ಕಿದೆ. ಬಹುಶಃ ಇಂತಹ ಒಂದು ತೀವ್ರತರವಾದ ನಿರ್ಣಯವನ್ನ ಕೈಗೊಳ್ಳಬೇಕಾದಂತಹ ಸಂದರ್ಭ ಈ ಹಿಂದೆ ಮತ್ತಾರಿಗೂ ಬಂದುದಿಲ್ಲ. ಮಾತುಕೊಟ್ಟಿದ್ದ ತಂದೆ ಮಾತನ್ನ ಈಡೇರಿಸಲಾರದ ಸಂದಿಗ್ಧಸ್ಥಿತಿಗೆ ಇಳಿದಿದ್ದಾನೆ. ತಂದೆಯ ಮಾತನ್ನು ಪೂರೈಸಬೇಕು ಎಂಬ ಇಚ್ಛೆ ಕೇವಲ ಗೌರವದ ಭಾವದಿಂದಲ್ಲ. ರಾಜಾ ದಶರಥ ಕೊಟ್ಟಂಥ ಒಂದು ಮಾತು ಅದು ಸಾರ್ವಕಾಲಿಕ ಸತ್ಯವಾಗಬೇಕು. ಅದು ಶಾಶ್ವತವಾದಂತಹ ಧರ್ಮವಾಗಬೇಕು ಎಂಬ ಆಶಯದಿಂದ ಅಯೋಧ್ಯೆಯನ್ನು ಬಿಟ್ಟು ಹೊರಡುವುದಕ್ಕೆ ರಾಮ ಮನಸ್ಸು ಮಾಡುತ್ತಾನೆ. ತಂದೆಯ ಮಾತಿಗೆ ಹೆಚ್ಚಿನದಾದ ಇನ್ನಾವ ಮಾತು ಇಲ್ಲ ಎಂಬ ಅವನ ಅಭಿಪ್ರಾಯ ಇಡೀ ಮನುಕುಲದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆಯಿತು. ಇಂದಿಗೂ ಶ್ರೀ ರಾಮ ಕೈಗೊಂಡ ಆ ಆದರ್ಶದ ನಿರ್ಣಯ ಅದೇ ಘನತೆಯಲ್ಲಿ, ಗಾಂಭೀರ್ಯದಲ್ಲಿದೆ.

 

ಮಹಾತ್ಮರು ಹೇಗೆ ಮಹಾತ್ಮರಾಗುತ್ತಾರೆ ಅಂತ ಯೋಚಿಸಿದರೆ, ಅವರು ಕೈಗೊಳ್ಳುವ ನಿರ್ಣಯ ಸಾಂದರ್ಭಿಕವಲ್ಲ. ವ್ಯಕ್ತಿವ್ಯಕ್ತಿಗಳ ನಡುವಣ ಮೋಹವನ್ನು ಆಧರಿಸಿ ಅಲ್ಲ. ಸಾರ್ವಕಾಲಿಕವಾಗುವ ಅದು, ಆದರ್ಶಮಯವಾಗಿರುವ ಅದು ಸಂಸ್ಕೃತಿಯನ್ನು ಪ್ರತಿನಿಧಿಸುವ ಒಂದು ನಿರ್ಣಯವಾಗಿರುತ್ತದೆ ಎನ್ನುವುದಕ್ಕೆ ಶ್ರೀರಾಮ ಕೈಗೊಂಡ ನಿರ್ಣಯವೇ ಸಾಕ್ಷಿ. ಈ ಹೊತ್ತಿಗೂ ತಂದೆಯ ಮಾತನ್ನು ಪೂರೈಸಬೇಕೇ ಬೇಡವೇ ಎಂಬ ವಿಷಯ ಬಂದಾಗ ಭಾರತೀಯರೆಲ್ಲರಿಗೂ, ಹೆಚ್ಚೇನು ವಿಶ್ವದ ಎಲ್ಲರಿಗೂ ನೆನಪಾಗುವುದು ಶ್ರೀರಾಮಚಂದ್ರನ ಈ ನಿರ್ಣಯಾತ್ಮಕವಾದ ಗುಣನಿಲುಮೆಯೇ. ಕಾರಣ ಹಾಗೆ ತಾನು ಕೈಗೊಂಡ ಮೊಟ್ಟಮೊದಲ ನಿರ್ಣಯವೇ ಶಾಶ್ವತವಾದ ನಿರ್ಣಯ ಆಗುವುದಕ್ಕೆ ಕಾರಣೀಭೂತನಾದ ಆ ಪ್ರಭು ಶ್ರೀರಾಮಚಂದ್ರನಿಗೆ ನಮಿಸೋಣ. ಆ ನೋಟದ ಭಾವವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ.

 

ಇನ್ನೊಂದು ನೋಟ ರಾಮಬಾಣದ ಮಹಿಮೆ. ವಿಶ್ವಾಮಿತ್ರರ ಸಿದ್ಧಾಶ್ರಮದಲ್ಲಿ ಯಜ್ಞಸಂರಕ್ಷಣೆಗಾಗಿ ಬಂದವರು ರಾಮ ಲಕ್ಷ್ಮಣರು. ಯಜ್ಞ ನಡೆಯುವಾಗ ಸುಬಾಹು ಮಾರೀಚ ಎಂಬಿಬ್ಬರು ರಕ್ಕಸರು ಯಜ್ಞವನ್ನು ದ್ವಂಸಗೊಳಿಸುವುದಕ್ಕೆ. ಏನೆಲ್ಲ ಉಪಟಳಗಳನ್ನ ಮಾಡುತ್ತಾರೆ. ರಕ್ತವನ್ನು ಯಜ್ಞಕುಂಡಕ್ಕೆ ಸುರಿಯುತ್ತಾರೆ. ಮದ್ಯಮಾಂಸಗಳನ್ನು ತಂದು ಯಜ್ಞಕುಂಡಕ್ಕೆ ಹಾಕುತ್ತಾರೆ. ಈ ಎಲ್ಲ ಸಂದರ್ಭದಲ್ಲಿ ಅವರನ್ನು ನಿಗ್ರಹಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆಗ  ರಾಮ ಬಿಟ್ಟ ಬಾಣಕ್ಕೆ ಸುಬಾಹು ಅಲ್ಲಿಯೇ ಸತ್ತ. ಆದರೆ ಮಾರೀಚನನ್ನು ಯೋಜನಾಂತರಕ್ಕೆ ಶ್ರೀರಾಮಚಂದ್ರ ಹಾರಿಸಿಬಿಟ್ಟ. ಒಂದೇ ತೆರನಾದ ತಪ್ಪನ್ನ ಮಾಡಿದ ಇಬ್ಬರಿಗೆ ಶಿಕ್ಷೆ ಕೊಡಬೇಕಾದಾಗ ಶ್ರೀರಾಮಚಂದ್ರ ಕೈಗೊಂಡ ಈ ನಿಲುಮೆ ಬಹಳ ಆಶ್ಚರ್ಯಕರ. ಯಾಕೆ ಮಾರೀಚನನ್ನು ಕೊಲ್ಲದೆಯೇ ಬಿಟ್ಟ. ಯಾಕೆ ಸುಬಾಹುವನ್ನು ಅಲ್ಲಿಯೇ ಕೊಂದೇಬಿಟ್ಟ. ಎನ್ನುವುದಕ್ಕೆ ಉತ್ತರ ಸಿಗುವುದು ಅದೆಷ್ಟೋ ವರ್ಷಗಳ ಅನಂತರ ರಾಮಬಾಣದ ರುಚಿಯನ್ನು ಸುಬಾಹು ಅನುಭವಿಸಲೇ ಇಲ್ಲ. ಬಾಣಕ್ಕೆ ಪ್ರಾಣಕೊಟ್ಟ. ಆದರೆ ಮಾರೀಚ ರಾಮಬಾಣದ ನೋವಿನ ರುಚಿಯನ್ನ ಅನುಭವಿಸಿದ ದೀರ್ಘಕಾಲ. ಆನಂತರ ತನ್ನನ್ನು ತಾನು ದಂಡಿಸಿಕೊಳ್ಳುತ್ತ ಕಾನನಾಂತರದಲ್ಲಿದ್ದ. ರಾವಣನ ದರ್ಪಕ್ಕೆ ಅಡಿಯಾಳಾಗಿ ಪಂಚವಟಿಗೆ ಬಂದು ಜಿಂಕೆಯಾಗಿ ರಾಮನನ್ನೇ ವಿಭ್ರಮೆಗೊಳಿಸುವ ಕಾಯಕಕ್ಕೆ ತನ್ನನ್ನ ತಾನು ತೊಡಗಿಸಿಕೊಂಡ. ಸಿದ್ಧಾಶ್ರಮದಲ್ಲಿ ಸಾಯದೆ ಉಳಿದ ಮಾರೀಚ ಜಿಂಕೆಯ ರೂಪದಲ್ಲಿ ಮತ್ತೊಮ್ಮೆ ಪಂಚವಟಿ ಪ್ರದೇಶದಲ್ಲಿ ರಾಮನ ಬಾಣಕ್ಕೆ ಬಲಿಯಾದ. ಸಾಯುವಾಗ ರಾಮಾ ಅಂತ ಕೂಗಿದ. ಅಂದರೆ ರಾಮನ ಮೊದಲ ಬಾಣದ ಪೆಟ್ಟನ್ನ ತಿಂದವನಿಗೆ ಎರಡನೆಯ ಬಾರಿ ಹೇಗೂ ಬದುಕುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಗೊತ್ತಿತ್ತು. ಹಿಡಿ ಕಡಿ ಕೊಲ್ಲು ಈ ರೀತಿ ಮಾತುಗಳನ್ನ ಆಡುತ್ತ ಬಂದ ಮಾರೀಚ ಮೊದಲ ರಾಮಬಾಣದ ರುಚಿಯ ಅನಂತರ ಪಲ್ಲಟಗೊಂಡ. ಪರಿವರ್ತನೆಗೊಂಡ. ಸಾಯುವಾಗ ರಾಮಾ ಎಂದೇ ಸತ್ತ.

 

ರಾಮಬಾಣದ ರುಚಿಯ ಹಿಂದೆ ಇರುವ ಭಾವವೇನು ಎನ್ನುವದನ್ನು ಪ್ರಯತ್ನಿಸುವ ಪರಿಶೋಧಿಸುವ ಕಾರ್ಯವನ್ನ ಮಾಡಿದರೆ ಅದರಲ್ಲಿ ಎಂತಹ ಒಂದು ಆದರ್ಶ ಅಡಗಿದೆ. ಕಡುವೈರಿಯಾದರೂ ಕೂಡ ಒಂದು  ದಂಡನೆಯಿಂದಾಗಿ ತನ್ನನ್ನ ತಾನು ಬದಲಿಸಿಕೊಳ್ಳುವ ಪ್ರಯತ್ನಕ್ಕೆ ಬರಬಹುದು . ಆ ಪ್ರಯತ್ನದ ಪುಣ್ಯದ ಫಲವೇ ಅವನನ್ನು ಸನ್ಮಾರ್ಗದತ್ತ ಒಯ್ಯಬಹುದು ಎನ್ನುವುದಕ್ಕೊಂದು ಸಾಕ್ಷಿ ಇದೇ. ಅವನು ಅದನ್ನು ರಾವಣನಲ್ಲಿ ಹೇಳಿಯೂ ಇದ್ದ. ನಿನ್ನಿಂದ ಸಾಯುವುದಕ್ಕಿಂತ ನಾನು ರಾಮನಿಂದ ಸಾಯುವುದೇ ಲೇಸು ಎಂದು. ಕಡುದುಷ್ಟನಾದ, ಕಡುಪಾಪಿಯಾದ ಆ ರಕ್ಕಸನಲ್ಲಿಯೂ ಒಂದು ಅಪೂರ್ವವಾದಂತಹ ಬದಲಾವಣೆಯನ್ನು ತಂದ. ರಾಮಬಾಣ ಭಾವಕ್ಕೆ ಶರಣಾಗಲೇಬೇಕು.

 

ಹೀಗೆ ರಾಮಬಾಣ ಈ ಪ್ರಪಂಚದಲ್ಲಿ ಹೇಗೆ ರಾಮರಾಜ್ಯವನ್ನು ನಿರ್ಮಿಸಿತೋ ಹಾಗೆಯೇ ರಾಮಬಾಣ ಭಾವವೂ ಕೂಡ ಈ ಪ್ರಪಂಚದಲ್ಲಿ ಮಾನವೀಯ ಸೆಲೆಯನ್ನು ಉಕ್ಕೇರುವಂತೆ ಮಾಡಿತು. ಅಪೂರ್ವವಾದಂತಹ ಶ್ರೇಯಪ್ರೇಯಗಳನ್ನು ಕರುಣಿಸುವುದಕ್ಕೆ ಮನಮಾಡಿತು ಎನ್ನುವುದು ಅರಿಯಬಹುದಾದ ಸತ್ಯ. ಈ ರೀತಿಯಲ್ಲಿ ರಾಮಕಾರ್ಯದ ಎರಡು ಸಂಗತಿಗಳ ನೋಟವನ್ನು ನಿಮ್ಮ ಮುಂದಿಟ್ಟಿದ್ದೇನೆ. ಒಪ್ಪಿಸಿಕೊಳ್ಳಿ.

Author Details


Srimukha

Leave a Reply

Your email address will not be published. Required fields are marked *