ವಿಖ್ಯಾತ ವ್ಯಾಖ್ಯಾನ ಸಿಂಹಾಸನಾರೂಢ

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

ಹಿಂದಿನ ಸಲ ನಾವು ‘ಗುರುರಾಜ ಪಟ್ಟಭದ್ರ’ ಎಂಬ ಭೋಪರಾಕಿನ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದ್ದೆವು. ಈಗ ಇನ್ನೊಂದು ಪರಾಕು ‘ವಿಖ್ಯಾತ ವ್ಯಾಖ್ಯಾನ ಸಿಂಹಾಸನಾರೂಢ’ ಈ ವಿಷಯವನ್ನು ಚಿಂತಿಸುವುದಕ್ಕೆ ಯೋಚಿಸುವಾಗ ಸುಮಾರು ೨೦ ವರ್ಷಗಳ ಹಿಂದೆ ಕೆಕ್ಕಾರು ಮಠದಲ್ಲಿ ನಮ್ಮ ಶ್ರೀಸಂಸ್ಥಾನದ ಸವಾರಿ ತಂಗಿತ್ತು. ಪೀಠಕ್ಕೆ ಅವರು ಬರುವುದಕ್ಕಿಂತ ಮೊದಲು ಪೀಠದ ಎದುರಿನಲ್ಲಿ ನನ್ನ ಜೊತೆಯಲ್ಲಿ ವಿದ್ವಾಂಸರಾದ ಕಟ್ಟೆ ಪರಮೇಶ್ವರ ಭಟ್ಟರವರು ಕುಳಿತಿದ್ದರು. ಆಗ ‘ಎಂತಹ ದಿವ್ಯ ಪೀಠ ನಮ್ಮದು’ ಎಂದರು. ನಾನು ‘ಹೌದು, ಗುರುಗಳು ಬರುವಾಗ ಪರಾಕು ಹೇಳುತ್ತಾರಲ್ಲ, ಅದೇನು ವಿಶೇಷ?  ಅದನ್ನು ಯಾರು ಕೊಟ್ಟರು?’ ಎಂದು ಕೇಳಿದೆ. ಆಗ ಅವರು ನಮ್ಮ ಪೀಠಕ್ಕೆ ‘ವ್ಯಾಖ್ಯಾನ ಸಿಂಹಾಸನಾಧೀಶ್ವರ ಅಂತ ಹೆಸರುಂಟು. ಅಂದರೆ ತರ್ಕ, ಆಗಮ ಮೊದಲಾದ ಶಾಸ್ತ್ರೀಯ ವಿಷಯಗಳಲ್ಲಿ ನಮ್ಮ ಪರಂಪರೆಯ ಗುರುಗಳು ಪೀಠದಲ್ಲಿ ಕುಳಿತಿರುವಾಗ ಅವರನ್ನು ಸೋಲಿಸಲು ಯಾರಿಗೂ ಆಗಲಿಲ್ಲ. ಆಗ ಆ ‘ವ್ಯಾಖ್ಯಾನ ಸಿಂಹಾಸನಾಧೀಶ್ವರ’ ಎನ್ನುವ ಬಿರುದು ಅವರಿಗೆ ಸಂದಿತು. ಅಂತಹ ಮಹಾಪೀಠವಿದು. ಮಹಾ ಸತ್ವಶಾಲಿ ಪೀಠವಿದು.’ ಎಂದು ಅವರು ವಿವರಿಸಿದರು. ಅಂದಿನಿಂದಲೂ ನನಗೆ ಒಂದು ಕುತೂಹಲ. ಎಷ್ಟು ಸರಳವಾಗಿ ಈ ವಿಷಯವನ್ನು ಹೇಳಲಾಗಿದೆ. ಆದರೆ ಅದರ ಆಳ ಎಷ್ಟು ದೊಡ್ಡದು ಎಂದರೆ ಈಗ ‘ಆ ಕಣ್ಣಿಂದ’ ಅದನ್ನು ಹೆಚ್ಚು ನೋಡುವ ಮನಸ್ಸು ಮಾಡುತ್ತಿದೆ.

ಈ ದಿವ್ಯಪೀಠವನ್ನು ಬಂದು ಅಧಿರೋಹಿಸಿ ಅದರಲ್ಲಿ ಮಂಡಿಸಿದಾಗ ಶ್ರೀಸಂಸ್ಥಾನವನ್ನು ಅಂದರೆ ರಾಜಗುರು ಸಂಸ್ಥಾನವನ್ನು ನಮ್ಮ ಕುಲದೈವ ಎಂದು ನಂಬಿರುವ ಶಿಷ್ಯರು, ಭಕ್ತರು ಅವರನ್ನು ಸ್ತುತಿಸುವ ಎರಡನೆಯ ವಾಕ್ಯ. ಅವರನ್ನು ಸ್ತುತಿಸುವ ಎನ್ನುವಲ್ಲಿ ಅವರನ್ನು ದರ್ಶಿಸಿ ಅವರ ಹಿತನುಡಿಗಳಿಗಾಗಿ ಅನುಗ್ರಹಕ್ಕಾಗಿ ಕಾಯುವ ಜನಸ್ತೋಮ ಅವರನ್ನು ಮೊದಲು ಅರ್ಚಿಸುವ ವಿಧಾನವಿದು. ‘ಭೋಪರಾಕು’ ಅಂತ ಕರೆಯುತ್ತ ನೀವು ಅಂತರ್ಮುಖಿಗಳಾಗಿ ಇರುವದಷ್ಟೇ ಅಲ್ಲ. ನೀವು ನಮಗಾಗಿ ಬಹಿರ್ಮುಖರಾಗಿ, ಅನುಗ್ರಹಿಸಿ ಮುನ್ನಡೆಸಿ, ಮಾರ್ಗದರ್ಶನ ನೀಡಿ ಎಂದು ಪ್ರಾಂಜಲವಾಗಿ ಬೇಡುವ ಸನ್ನಿವೇಶ.

 

ಬಹಿರ್ಮುಖರಾಗಿ ಲೌಕಿಕ ವಿಷಯವನ್ನೂ ನೀವು ನೋಡುವುದೂ ಅಗತ್ಯ ಎನ್ನುವ ನಿವೇದನೆಯ ಹಿಂದೆ ಎಂತಹ ಸಾತ್ವಿಕ ಆಗ್ರಹವಿದೆ. ಅವರನ್ನು ಪ್ರಸನ್ನೀಕರಿಸಿಕೊಳ್ಳುವ ವಿಷಯದಲ್ಲಿ ಅದೆಂತಹ ನಿರ್ಮಲವಾದ ಭಕ್ತಿ ಇದೆ. ಇದನ್ನು ಮೊದಲು ಗಮನಿಸಬೇಕು. ಅದರ ಮೊದಲನೇ ವಾಕ್ಯ ‘ಗುರುರಾಜ ಪಟ್ಟಭದ್ರ’ ವನ್ನು ಹಿಂದೆ ನೋಡಿದ್ದೇವೆ. ಎರಡನೆಯದು ‘ವಿಖ್ಯಾತ ವ್ಯಾಖ್ಯಾನ ಸಿಂಹಾಸನಾರೂಢ’. ಇಲ್ಲಿ ಈ ಸಿಂಹಾಸನ ಎಂಥಹದ್ದು. ನೀವೀಗ ಕುಳಿತಿರುವ ಸಿಂಹಾಸನ ಎಷ್ಟು ಪವಿತ್ರವಾದದ್ದು, ಎಷ್ಟು  ಶ್ರೇಷ್ಠವಾದದ್ದು ಅಂದರೆ ಇದು ವ್ಯಾಖ್ಯಾನ ಸಿಂಹಾಸನ. ಅಂದರೆ ಭಾರತೀಯ ಆರ್ಷ ಪರಂಪರೆಯಲ್ಲಿ ಯಾವೆಲ್ಲ ಶ್ರೇಷ್ಠವಾದಂತಹ ಶಾಸ್ತ್ರಗಳು, ಪುರಾಣಗಳು, ವೇದ ಉಪನಿಷತ್ತುಗಳು, ಇನ್ನನೇಕ ಸಾವಿರ ಸಾವಿರ ಗ್ರಂಥಗಳು ಚಿಂತನೆಗಳು ತತ್ತ್ವಗಳು ಅಡಕವಾಗಿದೆಯೋ, ಅದೆಷ್ಟು ಗಹನವಾಗಿದೆಯೋ ಅದೆಲ್ಲವನ್ನೂ ವ್ಯಾಖ್ಯಾನಿಸಬಲ್ಲವರು. ಅದರ ಮಹತ್ತನ್ನು ಪ್ರಪಂಚಕ್ಕೆ ತೆರೆದು ತೋರಿಸಬಲ್ಲವರು. ಅದರ ಒಳಗಿನ ಸಾರವನ್ನು ಹಲವಾರು ದೃಷ್ಟಾಂತಗಳ ಮುಖಾಂತರ ಪ್ರಪಂಚಕ್ಕೆ ತಿಳಿಹೇಳಬಲ್ಲವರು ಎಂಬರ್ಥದಲ್ಲಿ. ಹಾಗಾದರೆ ಈ ‘ವ್ಯಾಖ್ಯಾನ ಸಿಂಹಾಸನ’ ಇಲ್ಲಿ ಮಾತ್ರವೇ? ಎಂಬ ಪ್ರಶ್ನೆಗೆ ‘ಹೌದು’ ಎಂದುತ್ತರಿಸಬಹುದು. ಈ ಸಿಂಹಾಸನವನ್ನು ಬಿಟ್ಟು ಅನ್ಯತ್ರ ಇದಿಲ್ಲ. ಅಂದರೆ ಈ ಸಿಂಹಾಸನದ ಮೇಲೆ ಕುಳಿತುಕೊಂಡು ಇಂತಹ ಸಂಕೀರ್ಣ ವಿಷಯಗಳ ಕುರಿತು ವಿವರಿಸುವ, ವಿವರಿಸಿ ಅದರ ಮೇಲೆ ಖಚಿತವಾದ ಅಭಿಪ್ರಾಯವನ್ನು ಕೊಡುವ ಪೀಠವಿದು. ಎಂದರೆ ನಿರ್ಣಯಾತ್ಮಕವಾದಂತಹ ಪೀಠವಿದು. ಅಂದರೆ ನ್ಯಾಯವೇತ್ತರವಾದ ಪೀಠವಿದು. ಇಂತಹ ವಿಚಾರಗಳು ಒಮ್ಮೆ ಇಲ್ಲಿ ಕುಳಿತ ಶಂಕರಾಚಾರ್ಯರಿಂದ ಹೊರಬಂದರೆ ಅದು ಸರ್ವೋನ್ನತವಾದಂತಹ ನಿರ್ಣಯ ಎಂಬರ್ಥದಲ್ಲಿ.

ಹಾಗಿದ್ದರೆ ಹೀಗೊಂದು ಮಾತನ್ನು ಹೇಳುವಾಗ, ಹೀಗೊಂದು ಟಿಪ್ಪಣಿಯನ್ನು ಕೊಡುವಾಗ, ಹೀಗೊಂದು ವಿಷಯಕ್ಕೆ ಭಾಷ್ಯವನ್ನು ಹೇಳುವಾಗ, ಹೀಗೊಂದು ವಿಷಯಕ್ಕೆ ವ್ಯಾಖ್ಯಾನವನ್ನು ನೀಡುವಾಗ ಅದರ ಹಿಂದೆ ನೀಡುವವರ ಆಳವಾದ ಅಧ್ಯಯನ, ಪರಿಜ್ಞಾನ, ವಿಧಾನ ಇವೆಲ್ಲವೂ ಗಮನೀಯವಾಗುತ್ತದೆ. ಜೊತೆಗೆ ಆ ಪೀಠದಲ್ಲಿರುವಂತಹ ಶಕ್ತಿಯೂ ಕೂಡ ಈ ಪೀಠಸ್ಥರಾದಂತಹ ಸ್ವಾಮೀಜಿಯವರಿಂದ ಲೋಕಮುಖವಾಗುತ್ತದೆ. ಅದು ಪ್ರಶ್ನಾತೀತವಾಗುತ್ತದೆ. ಇದು ಮಹತ್ವದ್ದು. ಹೀಗೆ ಪ್ರಶ್ನಾತೀತವಾಗಿರುವ ಹೀಗೆ ನಿರ್ಣಯವೆಂದು ಅಂಗೀಕರಿಸಲ್ಪಡುವ ವಿಷಯಗಳನ್ನು ಆದ್ಯ ಶಂಕರಾಚಾರ್ಯರಿಂದ ಆರಂಭಿಸಿ ಇಲ್ಲಿಯವರೆಗೂ ಹಲವಾರು ಸಂದರ್ಭಗಳಲ್ಲಿ ಪರೀಕ್ಷಿಸಲಾಗಿದೆ. ನಿಕಷಕ್ಕೆ ಒಳಪಡಿಸಲಾಗಿದೆ. ಆ ಎಲ್ಲ ಸಂದರ್ಭಗಳಲ್ಲಿಯೂ ರಾಮಚಂದ್ರಾಪುರಮಠದ ಪೀಠಸ್ಥರಾದ ಸಂಸ್ಥಾನದವರು ಅತ್ಯಂತ ಸೂಕ್ತವಾಗಿ ವ್ಯಾಖ್ಯಾನವನ್ನು ನೀಡಿ ಅದರಲ್ಲಿ ಜಯಗಳಿಸಿದ್ದಾರೆ. ಅರ್ಥಾತ್ ಹೀಗೆ ಶಂಕರಾಚಾರ್ಯರು ಮಾಡುತ್ತ ಬಂದಿರುವುದರಿಂದಲೇ, ವ್ಯಾಖ್ಯಾನವನ್ನು ವಿಷದೀಕರಿಸುತ್ತ, ಎಲ್ಲರನ್ನೂ ಮಣಿಸುತ್ತ ಬಂದಿರುವುದರಿಂದಲೇ, ಈ ಸಿಂಹಾಸನದಲ್ಲಿ ಆಸೀನರಾಗಿರುವವರು. ಈ ಧರ್ಮಸಿಂಹಾಸನದಲ್ಲಿ ಆರೂಢರಾಗಿ ಆಸೀನರಾಗಿರುವವರು ವಿಖ್ಯಾತರಾಗಿದ್ದಾರೆ. ಖ್ಯಾತಿ ಗಳಿಸಿದ್ದಾರೆ ಎನ್ನುವ ಕಾರಣಕ್ಕಾಗಿ ‘ವಿಖ್ಯಾತ ವ್ಯಾಖ್ಯಾನ ಸಿಂಹಾಸನಾರೂಢ’ರು. ಇದನ್ನು ಎಲ್ಲರೂ ಹಲವಾರು ಅನ್ಯಾನ್ಯ ಜಗದ್ಗುರುಗಳು ಪೀಠಾಧೀಶರುಗಳು ಬಳಸುತ್ತಾರೆ. ಅಲ್ಲಿಯೂ ಇದೇ ರೀತಿಯ ಅರ್ಥವಿರಲೇಬೇಕೇ ಹೊರತು ಅನ್ಯ ಅರ್ಥವಿರುವುದಕ್ಕೆ ಸಾಧ್ಯವಿಲ್ಲ. ಹೇಗೆ ಆದಿಗುರು ಶಂಕರಾಚಾರ್ಯರು ಆ ಕಾಲದಲ್ಲಿ ಬೇರೆ ಬೇರೆ ರೀತಿಯ ವಾದಗಳನ್ನು ಮಂಡಿಸುವವರನ್ನು ಎದುರಿಸಿ, ನಿಷ್ಕಲ್ಮಷ ಮನೋಭಾವದಿಂದ, ನಿರ್ಮಲ ಚಿತ್ತದಿಂದ ಸರ್ವಜ್ಞ ಪೀಠವನ್ನು ಅಧಿರೋಹಿಸಿ, ಹೇಗೆ ಜಗದ್ಗುರುಗಳೆನಿಸಿದರೋ ಹಾಗೆಯೇ ಇಲ್ಲಿಯೂ ಕೂಡ ಈಗಲೂ ಕೂಡ ಯಾವುದೇ ಒಂದು ಶಾಸ್ತ್ರ ಚರ್ಚೆ ಬಂದಾಗ, ಸಂದಿಗ್ಧತೆ ಬಂದಾಗ, ಜಿಜ್ಞಾಸೆ ಉಂಟಾದಾಗ ಈ ಪೀಠದಲ್ಲಿ ಕುಳಿತು ಹೇಳುವ ನಿರ್ಣಯಗಳು ನಿರ್ಣಯಗಳಾಗುತ್ತವೆ. ಆದುದರಿಂದ ಅವರು ‘ವ್ಯಾಖ್ಯಾನ ಸಿಂಹಾಸನಾಧೀಶರು’. ಇನ್ನು ಕೆಲವು ಕುಚೋದ್ಯಗಳು ನಡೆಯುವುದುಂಟು. ಅವರ ಶಾಸ್ತ್ರಪರಿಣಿತಿಯನ್ನು ಪರೀಕ್ಷಿಸುವ, ತತ್ತ್ವವಿಷಯಗಳನ್ನು ಪರಿಶೀಲಿಸುವ ಪ್ರಯೋಗಳನ್ನು ಹಲವು ವಿದ್ವಾಂಸರುಗಳು ಹಲವು ಜನರು ಮಾಡುವುದಕ್ಕೆ ಉದ್ಯುಕ್ತ ರಾಗುತ್ತಾರೆ. ಅಂತಹ ಸಂದರ್ಭಗಳನ್ನು ಎದುರಿಸಿಯೂ ಸಾಗಬೇಕಾಗುತ್ತದೆ ಈ ಪೀಠದಲ್ಲಿ ಆರೂಢರಾಗಿರುವವರು. ಕಾರಣ ಇಷ್ಟೇ. ಇದು ಕೇವಲ ಪೀಠವಲ್ಲ. ಶಂಕರಾಚಾರ್ಯರ ತತ್ತ್ವನಿರ್ಣಯಗಳು, ಅವರ ಧರ್ಮಸಂಸ್ಥಾಪನೆಯ ವಿಚಾರಗಳು, ಸರ್ವರನ್ನೂ ಸರ್ವಸ್ವವನ್ನೂ ಪ್ರೀತಿಸುತ್ತ ಸನ್ಮಾರ್ಗದೆಡೆಗೆ ಕೊಂಡೊಯ್ಯುವ ಅವರ ಉದಾತ್ತ ತತ್ತ್ವಗಳನ್ನು ಅನುಷ್ಠಾನಗೊಳಿಸುವವರೂ, ರಾಗದ್ವೇಷಗಳಿಂದ ಅತೀತರಾದವರೂ ಸರ್ವಭೂತಹಿತರತರಾಗಿ ಅವರ ಹಿತದಲ್ಲಿಯೇ ಸಮಾಧಾನವನ್ನು ಹೊಂದುವಂತಹ ಶ್ರೇಷ್ಠ ಸ್ಥಿತಿಯನ್ನು ತಲುಪಿದವರೂ ಈ ವ್ಯಾಖ್ಯಾನವನ್ನು ನೀಡಬಲ್ಲ ಸಮರ್ಥರು. ಈ ಗುಣಗಳನ್ನು ಅವಲೋಕಿಸಿದರೆ ಈ ಬಿರುದು ಕೇವಲ ಬಿರುದಾಗಿ ಉಳಿಯಲಾರದು. ಇದು ವಾಸ್ತವದಲ್ಲಿ ಕಾಣಬೇಕಾದಂತಹ ಗುಣವಾಗಿ ಇರುತ್ತದೆ. ಇರಬೇಕು. ಇದರ ಮರ್ಮವನ್ನು ತಿಳಿಯುವ ಪ್ರಯತ್ನವನ್ನು ಆಯಾಯ ಮಠದ ಶಿಷ್ಯರು ಮಾಡುವುದು ಒಳಿತು.

 

ಇದು ‘ವಿಖ್ಯಾತ ವ್ಯಾಖ್ಯಾನ ಸಿಂಹಾಸನ’. ಈ ಶಬ್ದವೂ ಕೂಡ ಅತ್ಯಂತ ವಿಶಿಷ್ಟವಾದದ್ದು. ಇದು ಸಿಂಹಾಸನ. ಜಿಂಕೆಯ ಚರ್ಮದ ಮೇಲೆ ಕುಳಿತ ಅಥವಾ ವ್ಯಾಘ್ರ ಚರ್ಮದ ಮೇಲೆ ಕುಳಿತ ಸಂನ್ಯಾಸಿಗಳು ಈ ಸಿಂಹಾಸನದ ಮೇಲೆ ಕುಳಿತಿದ್ದರಿಂದ ಈ ಸಿಂಹಾಸನಾರೂಢರು. ಹಾಗಾದರೆ ಈ ಆಸನಕ್ಕೆ ಸಿಂಹಾಸನ ಅಂತ ಯಾಕೆ ಕರೆದರು? ಅಂತ ಯೋಚಿಸುವಾಗ ಮೊದಲನೆಯದಾಗಿ ಇದು ಧರ್ಮಪೀಠ. ಆದುದರಿಂದ ಧರ್ಮ ಸಿಂಹಾಸನ. ಧರ್ಮ ಹೇಗೆ? ಅಂದರೆ ರಹಸ್ಯವೂ ಹೌದು. ಪ್ರಕಾಶವೂ ಹೌದು. ಧರ್ಮವನ್ನು ರಹಸ್ಯ ಅಂತ ತಿಳಿಯುವಾಗ ಅದು ಅರ್ಥವಾಗದೇ ಇರುವಂಥಹದ್ದು. ಅದು ಅದಾವುದೋ ಒಂದು ಶ್ರೇಷ್ಠ  ಸ್ಥಿತಿಯಲ್ಲಿ ಅನುಭವಕ್ಕೆ ಸಿಗುವಂತಹ ವಿಷಯ. ಆದುದರಿಂದ ಅದನ್ನು ವಿವರಿಸುವ ಗೋಜಿಗೆ ನಾನು ಹೋಗಲಾರೆ. ಅದು ಪ್ರಕಾಶವೂ ಆದದ್ದು ಎನ್ನುವಾಗ ಕೆಲವು ಪವಾಡಗಳು, ಲೋಕದ ಕೆಲವು ವಿಚಾರಗಳು ನಮ್ಮ ಗಮನಕ್ಕೆ ಬರುತ್ತವೆ. ಅದೇ ರೀತಿಯಲ್ಲಿ ಸಿಂಹ ಎನ್ನುವಂತಹ ಕಾಡಿನ ರಾಜ. ಅದರ ಗುಣಸ್ವಭಾವಗಳು ಇದರ ಮೇಲೆ ಆರೋಪಿಸಲ್ಪಡುತ್ತವೆ. ಏನದರ ಗುಣಸ್ವಭಾವಗಳು ಅಂತ ನೋಡುವಾಗ ಅದು ನಿರ್ಭೀತವಾದಂತಹ ಒಂದು ಶ್ರೇಷ್ಠ ಪ್ರಾಣಿ. ನಿರ್ಭೀತತೆಯೇ ಅದರ ಗುಣ. ಧೈರ್ಯವೇ ಅದರ ಗುಣ. ತನ್ನದಲ್ಲದ್ದನ್ನು ಸ್ವೀಕರಿಸದೇ ಇರುವುದು ಅದರ ಗುಣ. ತನಗೆ ಬೇಕಾದ ಆಹಾರಕ್ಕಾಗಿ ಅನ್ಯತ್ರ ಯಾರಲ್ಲೂ ಅವರ ಕೈಕೆಳಗೆ ಇರದ ಹಾಗೆ ತನ್ನದನ್ನು ತಾನೇ ಗಳಿಸಬಲ್ಲ ಒಂದು ಶ್ರೇಷ್ಠವಾದ ಗುಣವನ್ನು ಹೊಂದಿದೆ. ಈ ಪ್ರಾಣಿ ಯಾರಿಗೂ ಕಪ್ಪ ಕೊಡುವುದಿಲ್ಲ. ಯಾರಲ್ಲೂ ಹೋಗಿ ಶರಣಾಗುವುದಿಲ್ಲ. ತಾನು ತಾನಾಗಿಯೇ ತನ್ನ ಘನತೆ ಗೌರವಗಳನ್ನು ಉಳಿಸಿಕೊಂಡಿಯೇ ನಡೆಯುತ್ತದೆ. ತನಗಿಂತ ದೊಡ್ಡ ಪ್ರಾಣಿಯಾದರೂ ಇದು ಅಲ್ಲಿ ಬಗ್ಗುವುದಿಲ್ಲ. ಕಾರಣ ತಾನು ಕಾಡಿನ ರಾಜ ಎನ್ನುವ ಪ್ರಜ್ಞೆ ಅದರಲ್ಲಿ ಯಾವತ್ತೂ ಜಾಗ್ರತವಾಗಿರುತ್ತದೆ. ಆ ರಾಜತ್ವ, ಆ ಶ್ರೇಷ್ಠತ್ವ ತಾನು ಬಗ್ಗಿದರೆ ತನ್ನೊಡನೆ ಇಡೀ ಕಾಡನ್ನೇ ಬಗ್ಗಿಸಿ ಅದನ್ನು ಶರಣಾಗತಿಯ ಒಂದು ಸೇವಕ ವೃತ್ತಿಗೆ ತಳ್ಳಿದಂತಾಗುತ್ತದೆ ಎನ್ನುವ ಒಂದು ಸುಪ್ತಪ್ರಜ್ಞೆ ಈ ಪ್ರಾಣಿಯಲ್ಲಿ ಯಾವತ್ತೂ ಜಾಗ್ರತವಾಗಿರುತ್ತದೆ. ಆದುದರಿಂದಲೇ ಸಿಂಹ ಎನ್ನುವದು ಧೈರ್ಯಕ್ಕೂ, ನಿರ್ಭೀತತನಕ್ಕೂ, ಶ್ರೇಷ್ಠವಾದ ಆಡಳಿತ ವ್ಯವಸ್ಥೆಗೂ, ಅದರ ರಾಜ ಲಕ್ಷಣಗಳಿಗೂ ಹೇಳಿ ಮಾಡಿಸಿದ ಒಂದು ಪ್ರಾಣಿಯಾಗಿದೆ. ಇದನ್ನು ಬಗ್ಗಿಸುವುದು ಯಾರಿಗೂ ಸಾಧ್ಯವಿಲ್ಲ. ಶೌರ್ಯದಲ್ಲಾಗಲೀ, ನಡೆಯಲ್ಲಾಗಲೀ, ಅದರ ಘರ್ಜನೆಯಲ್ಲಾಗಲೀ ಈ ಎಲ್ಲ ಗುಣಗಳೂ ಒಂದು ಉನ್ನತವಾದ ಒಂದು ಶ್ರೇಷ್ಠವಾದ ಗುಣ ಎಂದು ಪರಿಗಣಿಸಲ್ಪಟ್ಟಿದೆ.

 

ಇನ್ನೊಂದು ಜನಜನಿತವಾದ ಶಬ್ದ ‘ಸಿಂಹಾವಲೋಕನ’. ಅವಲೋಕನದಲ್ಲಿ ಸಿಂಹದ ಗುಣ ಅನುಕರಣೀಯವಾಗಿದೆ. ಏನು ಅವಲೋಕನ? ಬಂದ ದಾರಿಯನ್ನು ನೋಡುವುದು. ಮುಂದಕ್ಕೆ ಒಬ್ಬಂಟಿಯಾಗಿ ಸಾಗುತ್ತಿದ್ದರೂ ಅದು ಆಗಾಗ ನಿಂತು ಹಿಂದಕ್ಕೆ ತಿರುಗಿ ನೋಡುತ್ತಿರುತ್ತದೆ. ನೋಡುವಾಗ ತನ್ನ ಬಲಗಾಲನ್ನು ಎತ್ತಿ ಇಟ್ಟುಕೊಳ್ಳುತ್ತದೆ. ಬಲಗಾಲನ್ನು ಎತ್ತಿಟ್ಟುಕೊಂಡು ಅದು ಹಿಂದಕ್ಕೆ ತಿರುಗಿ ನೋಡುವಾಗ ಅದರ ನೋಟದಲ್ಲಿ ಒಂದು ತೀಕ್ಷ್ಣತೆ ಇದೆ. ಎಷ್ಟು ಸಾಧ್ಯವೋ ಅಷ್ಟು ಹಿಂದೆ ಅದು ನೋಡುತ್ತದೆ. ಮತ್ತು ಆ ನೋಟದಲ್ಲಿ ಒಂದು ಸ್ವಾಭಿಮಾನವಿದೆ. ತಾನು ಸಾಗಿಬಂದ ದಾರಿ ಎಷ್ಟು ಕಠಿಣವಾಗಿದ್ದರೂ ಸಾಗಿ ಬಂದಿದ್ದೇನಲ್ಲ ಎನ್ನುವ ಆತ್ಮವಿಶ್ವಾಸ ಅದರ ಕಣ್ಣುಗಳಲ್ಲಿ ಹೊಳೆಯುವುದನ್ನು ನಾವು ಈಗಲೂ ಭಾವಚಿತ್ರಗಳಲ್ಲಿ ನೋಡಬಹುದು. ಮೃಗಾಲಯಗಳಲ್ಲಿ ಇರುವ ಸಿಂಹಗಳನ್ನು ನೋಡಿಯೂ ಇದನ್ನು ಅರಿಯಬಹುದು. ಹಾಗೆ ಒಮ್ಮೆ ಹಿಂದಕ್ಕೆ ನೋಡಿ ಅದು ಮತ್ತೆ ತಿರುಗಿ ನಿಲ್ಲುವುದಿಲ್ಲ. ಮುಂದಕ್ಕೇ ಹೆಜ್ಜೆಯನ್ನಿಡುತ್ತದೆ. ಅವಲೋಕನ ಎಷ್ಟು ಸೂಕ್ಷ್ಮ, ಎಷ್ಟು ದೀರ್ಘ, ಎಷ್ಟು ವ್ಯಾಪಕವಾಗಿದ್ದರೂ ಅದರ ಗಮನ ಊರ್ಧ್ವಗತಿಯಿದ್ದು, ಮುಂದೇ ಇರುತ್ತದೆಯೇ ಹೊರತು ಹಿಂದಲ್ಲ. ಯಾರಲ್ಲೂ ಹೋಗಿ ಶರಣಾಗುವುದಿಲ್ಲ. ತಾನು ತಾನಾಗಿಯೇ ತನ್ನ ಘನತೆ ಗೌರವಗಳನ್ನು ಉಳಿಸಿಕೊಂಡಿಯೇ ನಡೆಯುತ್ತದೆ. ತನ್ನ ಕಾಲಖಂಡಕ್ಕೆ ತಾನು ಯಾವ ಪೀಠವನ್ನು ಅಲಂಕರಿಸಿದ್ದೇನೆ ಎನ್ನುವುದು ಸಿಂಹಾಸನಾರೂಢರಿಗೆ ತಿಳಿದಿರುತ್ತದೋ ಅವರು ಹಿಂದಕ್ಕೆ ನೋಡುತ್ತಾರೆ. ಅಂದರೆ ತನ್ನ ಪರಂಪರೆಯನ್ನು ವೀಕ್ಷಿಸುತ್ತಾರೆ. ಅದರ ದಟ್ಟ ವಿಚಾರಗಳನ್ನು ಗಮನಿಸುತ್ತಾರೆ. ಆ ಹೊಣೆಯನ್ನು ಅರಿಯುತ್ತಾರೆ. ಇಷ್ಟು ಮಾಡಿಯೂ ತಮ್ಮ ಶಿಷ್ಯಸ್ತೋಮದೊಂದಿಗೆ ಅದೇ ಕೀರ್ತಿ ಘನತೆಯೊಂದಿಗೆ ಮುಂದಕ್ಕೆ ಹೆಜ್ಜೆಯಿಡುತ್ತಾರೆ. ಎಂದೂ ಹಿಂದಕ್ಕೆ ಹೆಜ್ಜೆಯಿಡುವ ಸ್ವಭಾವದವರಲ್ಲ.

 

ಇನ್ನೊಂದು ಶಬ್ದ ‘ಸಿಂಹಸ್ವಪ್ನ’. ಬಹಳ ಕುತೂಹಲಕಾರಿಯಾಗಿದೆ. ಈ ಸಿಂಹಕ್ಕೆ ಸ್ವಪ್ನ ಬಿದ್ದದ್ದು ಕೇಳಿಲ್ಲ. ಆದರೆ ಹಲವರಿಗೆ ಇನ್ನೊಬ್ಬ ವ್ಯಕ್ತಿ ಸಿಂಹಸ್ವಪ್ನರಾಗುತ್ತಾರೆ. ಅಂದರೆ ಸಿಂಹವನ್ನು ಕಾಣಬೇಕು ಅಂತಿಲ್ಲ. ಸಿಂಹವನ್ನು ಕುರಿತು ತಿಳಿಯಬೇಕು ಅಂತಿಲ್ಲ. ಸಿಂಹದ ವಿಚಾರ ಮನಸ್ಸಿಗೆ ಬಂದರೆ ಇವರು ನಡುಗುತ್ತಾರೆ. ಅಂದರೆ ಈ ಸಿಂಹದ ವ್ಯಕ್ತಿತ್ವ ಹೇಗೆಂದರೆ ತನ್ನ ವಿರೋಧಿಗಳಲ್ಲಿ ಇವರ ವಿಚಾರ ಬಂದರೆ ಸಿಂಹದ ವಿಚಾರ ಬಂದರೆ ಅವರು ನಡುಗುವಷ್ಟು ಅವರ ವ್ಯಕ್ತಿತ್ವ ಪ್ರಭಾವವನ್ನುಂಟುಮಾಡಿರುತ್ತದೆ ಎಂದರ್ಥ. ಅದೂ ಕೂಡ ಜಾಗ್ರತಾವಸ್ಥೆಯಲ್ಲಲ್ಲ. ಸ್ವಪ್ನಾವಸ್ಥೆಯಲ್ಲಿ. ಸ್ವಪ್ನಾವಸ್ಥೆಯಲ್ಲಿಯೇ ಸಿಂಹವನ್ನು ನೆನೆಸಿಕೊಂಡರೆ ಕೈಕಾಲು ನಡುಗುವ, ಭಯಭೀತರಾಗುವ ಜಂಘಾಬಲವನ್ನೇ ಉಡುಗಿಸಿಕೊಳ್ಳುವ ವ್ಯಕ್ತಿ ಸಿಂಹವನ್ನು ಜಾಗ್ರತಾವಸ್ಥೆಯಲ್ಲಿ ಕಂಡರೆ ಏನು ಮಾಡಿಯಾನು ಅಂದರೆ ಗಾವುದ ಗಾವುದ ದೂರ ಓಡಿ ಹೋಗಿಯಾನು ಎಂಬರ್ಥದಲ್ಲಿ ಈ ಶಬ್ದದ ಪ್ರಯೋಗವಿದೆ. ಈಗಲೂ ಅದನ್ನು ನಾವು ಗಮನಿಸಬಹುದು. ಸಿಂಹದಂತಹ ವ್ಯಕ್ತಿತ್ವದವರ ಮೇಲೆ ಹಲವಾರು ಆಕ್ರಮಣಗಳು, ಆರೋಪಗಳು ಆಕ್ರೋಶಗಳ ಅಭಿವ್ಯಕ್ತಿಗಳು ಅಸಹನೆಯ ಅಭಿವ್ಯಕ್ತಿಗಳು ಕಂಡು ಬರುತ್ತವೆ. ಆದರೆ ಅವೆಲ್ಲವೂ ಅವರ ಮುಖಾಮುಖಿ ಎದುರಿನಲ್ಲಲ್ಲ. ನೇಪಥ್ಯದಲ್ಲಿ. ಪ್ರಚ್ಛನ್ನ ಸ್ಥಿತಿಯಲ್ಲಿ. ಅದರ ಅರ್ಥ ನೇರವಾಗಿ ಸಿಂಹದೊಂದಿಗೆ ಯುದ್ಧಕ್ಕೆ ಬರುವುದು ಯಾವ ಪ್ರಾಣಿಗೂ ಸಾಧ್ಯವಿಲ್ಲ. ಉಳಿದ ಪ್ರಾಣಿಗಳು ಅಲವತ್ತುಕೊಳ್ಳುತ್ತವೆ. ತಮ್ಮ ಅಸಹನೆಯನ್ನು ತಮ್ಮಂತೆಯೇ ಯೋಚಿಸುವ ಇನ್ನಿತರ ಧೈರ್ಯಹೀನರ ಜೊತೆಯಲ್ಲಿ ವ್ಯವಹರಿಸುತ್ತಾರೆ ಎನ್ನುವುದು ‘ಸಿಂಹಸ್ವಪ್ನ’ದ ಅರ್ಥವ್ಯಾಪ್ತಿ.  

ಈಗ ಈ ನಾಲ್ಕೂ ಶಬ್ದಗಳನ್ನು ಜೋಡಿಸಿ ನೋಡಿದರೆ ‘ಸಿಂಹಾಸನ’ ಎನ್ನುವುದು ಸಿಂಹದ ಗುಣಶೀಲಸ್ವಭಾವಗಳನ್ನು ಅಳವಡಿಸಿಕೊಂಡಂತಹ ಒಂದು ಶ್ರೇಷ್ಠ ಪೀಠ. ಇದನ್ನು ಶಕ್ತಿಯುತವನ್ನಾಗಿಸಿದವರು ಇದನ್ನು ಕರುಣಿಸಿದವರು ಆದ್ಯಶಂಕರಾಚಾರ್ಯರು. ಯಾರು ವಿತಂಡವಾದಿಗಳಿಗೆ ಧರ್ಮಕ್ಷೆಭೆಗೆ ಕಾರಣರಾದವರಿಗೆ ಸಿಂಹಸ್ವಪ್ನರೋ, ಯಾರು ಸದಾ ತನ್ನ ಗಮನವನ್ನು ಸಿಂಹಾವಲೋಕನದಿಂದ ಗೈದು ಮುನ್ನಡೆಸುತ್ತ ಬಂದರೋ ಅಂತಹ ಆದ್ಯ ಗುರು ಶಂಕರಾಚಾರ್ಯರು ಕರುಣಿಸಿದ ಪೀಠದ ಮಹಿಮೆ. ಈ ಪೀಠದಲ್ಲಿ ಕುಳಿತವರು ಯಾವುದೇ ಶಾಸ್ತ್ರವೇತ್ತವಿಚಾರಗಳಿಗೆ ಎಂತಹ ಸಂದರ್ಭದಲ್ಲಿಯೂ ಆಬಾಲವೃದ್ಧರೂ ಅರ್ಥಮಾಡಿಕೊಳ್ಳುವ ಹಾಗೆ ವಿವರಿಸಬಲ್ಲಂತಹ ವ್ಯಾಖ್ಯಾನ ವಿಶಾರದರು. ಹೀಗಿರುವಂತಹ ತಮ್ಮ ಶಕ್ತಿಸಾಮರ್ಥ್ಯಗಳನ್ನು ತಮ್ಮ ತ್ರಿಕಾಲ ಜ್ಞಾನವನ್ನು ಲೋಕಮುಖಕ್ಕೆ ಎದುರಾದ ಹಲವಾರು ಸಂದರ್ಭಗಳಲ್ಲಿ ತೋರ್ಪಡಿಸಿ ಅವರು ವಿಖ್ಯಾತರಾದವರು. ಅಂತಹ ವಿಖ್ಯಾತಿಯನ್ನು ಪಡೆದಂತಹ ಪೀಠದಲ್ಲಿ ಶ್ರೀರಾಮಚಂದ್ರಾಪುರಮಠದ ಪೀಠವೂ ಒಂದು. ಈ .ಪೀಠವನ್ನು ಸರ್ವಶ್ರೇಷ್ಠವನ್ನಾಗಿಸಿದ ಸರ್ವಸಲ್ಲಕ್ಷಣಗಳಿಂದ ಒಡಗೂಡಿ ವಿಸ್ತಾರ ಮಾಡಿದಂತಹ ಕೀರ್ತಿಗೆ ಹೇಗೆ ಆದಿಗುರು ಶಂಕರಾಚಾರ್ಯರಿಂದ ಆರಂಭಿಸಿ ಇಲ್ಲಿಯವರೆಗಿನ ಯತಿಗಳು,  ಈಗ ೩೬ ನೇ ಪೀಠಾಧೀಶರಾದ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳವರೆಗೂ ಇದು ನ್ಯೂನತೆಯಿಲ್ಲದೇ ಸಾಗಿಕೊಂಡು ಬಂದಿದೆ ಎನ್ನುವುದು ಹಲವಾರು ಪರೀಕ್ಷೆಗಳಲ್ಲಿ ಹಲವಾರು ಸಂದರ್ಭಗಳಲ್ಲಿ ದೃಢಪಟ್ಟಂತಹ ವಿಚಾರ.

 

ನಮ್ಮ ಈಗಿನ  ಶ್ರೀಸಂಸ್ಥಾನದವರು ಎದುರಿಸಿದಂತಹ ಸವಾಲುಗಳು ಎಷ್ಟು ಎನ್ನುವುದು ಲೋಕಕ್ಕೇ ತಿಳಿದಿದೆ. ವರ್ತಮಾನ ಅದು. ಹಿಂದೆಯೂ ಕೂಡ ಹಲವಾರು ಪೀಠಾಧೀಶರಿಗೆ ಹಲವಾರು ರೀತಿಯ ಸಂಕೀರ್ಣವಾದಂತಹ ಸವಾಲುಗಳು ಎದುರಾಗಿದ್ದವು. ಆ ಎಲ್ಲ ಸಂದರ್ಭಗಳಲ್ಲಿ ಕೂಡ  ಶ್ರೀಸಂಸ್ಥಾನ ಅದನ್ನು ಸಿಂಹದಂತೆ ಎದುರಿಸಿ ಲೋಕದಲ್ಲಿ ಆದರ್ಶವನ್ನು, ಧರ್ಮಶ್ರೇಷ್ಠತೆಯನ್ನು, ಧರ್ಮಬುದ್ಧಿಯ ಹಿರಿಮೆಯನ್ನು ತೋರಿ ಇದರ ಮಹತ್ತನ್ನು ಮೆರೆದವರು. ಅಂತಹ ಗುರುರಾಜ ಪಟ್ಟಭದ್ರರೂ, ವಿಖ್ಯಾತ ವ್ಯಾಖ್ಯಾನ ಸಿಂಹಾಸನಾರೂಢರೂ ಆದ ಶ್ರೀಸಂಸ್ಥಾನಕ್ಕೆ ಶರಣು.

Author Details


Srimukha

Leave a Reply

Your email address will not be published. Required fields are marked *