ಅಮೃತಮಹೋತ್ಸವಕ್ಕೆ ವೈಭವದ ಚಾಲನೆ

ವಿಶ್ವ ಹವ್ಯಕ ಸಮ್ಮೇಳನ
ಎಲ್ಲರನ್ನೂ ಕರೆಯುವುದು, ಎಲ್ಲರ ಜೊತೆ ಸಾಗುವುದು ಹವ್ಯಕತ್ವ –  ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು
ಹವ್ಯಕ ಸಮಾಜ 100% ಸುಶಿಕ್ಷಿತ ಎಂಬುದಯ ನಿಜಕ್ಕೂ ಹೆಮ್ಮೆಯ ವಿಚಾರ – ನ್ಯಾಯಮೂರ್ತಿ ಶಿವರಾಜ್ ಪಾಟೀಲ್
ವ್ಯಕ್ತಿಗೂ ಸಂಸ್ಥೆಗೂ ವ್ಯತ್ಸಾಸವಿದೆ. 75 ವರ್ಷಕ್ಕೆ ವ್ಯಕ್ತಿ ವೃದ್ಧಾಪ್ಯ ಹೊಂದಿ ಮರಣಕ್ಕೆ ಹತ್ತಿರವದರೇ, ಸಂಸ್ಥೆ 75   ವರ್ಷ ಪೂರೈಸಿದಾಗ ಅಮೃತವಾಗುತ್ತದೆ. ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುತ್ತದೆ. ವ್ಯಕ್ತಿ ದುರ್ಬಲನಾದರೆ ಸಂಸ್ಥೆ ಮತ್ತಷ್ಟು ಸಶಕ್ತವಾಗುತ್ತದೆ. ಅಂತಹ 75 ವರ್ಷಗಳನ್ನು ಪೂರೈಸಿದ ಅಖಿಲ ಹವ್ಯಕ ಮಹಾಸಭೆಗೆ ಪರ್ಯಾಯ ಇಲ್ಲ. ಇನ್ನೊಂದಲ್ಲ ಹನ್ನೊಂದು ಒಕ್ಕೂಟಗಳನ್ನು ಕಟ್ಟಬಹುದು, ಆದರೆ ಏಳು ದಶಕಗಳನ್ನು ಪೂರೈಸಿದ ಈ ಸಂಸ್ಥೆಯ ಸೇವೆ, ತ್ಯಾಗಗಳಿಗೆ ಪರ್ಯಾಯವಿಲ್ಲ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭವಾದ ಐತಿಹಾಸಿಕ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು,ಹಿಂದೆ ರಾಜ ಮಯೂರವರ್ಮ ದೇಶದಲ್ಲಿ ಶ್ರೇಷ್ಠ ವೇದವಿದ್ವಾಂಸರನ್ನು ಹುಡುಕಿ ಅವನ ದೇಶಕ್ಕೆ ಕರೆತರಲು ಹೊರಟ ಅವನು ಹವ್ಯಕರನ್ನು ತನ್ನ ದೇಶಕ್ಕೆ ಕರೆತಂದ, ಇದರಿಂದ ಹವ್ಯಕರು ಸರ್ವಶ್ರೇಷ್ಠ ಎಂಬುದು ನಿರೂಪಿತವಾಗುತ್ತದೆ.
ಐತಿಹಾಸಿಕವಾದ ಈ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸರ್ವರಿಗೂ ಅವಕಾಶ ಕೊಟ್ಟದ್ದು ಶ್ಲಾಘನೀಯ. ಎಲ್ಲರ ಜೊತೆಗೆ ಒಟ್ಟಾಗಿ, ಸಹಬಾಳ್ವೆ ಮಾಡಿದ ಪರಂಪರೆ ಹವ್ಯಕರದ್ದು.  ಹವ್ಯಕ ಸಮಾಜ ಎಂದೆದಿಗೂ ಇನ್ಕ್ಲೂಸಿವ್ ಪರಂಪರೆಯನ್ನು ಹೊಂದಿರುವಂತದ್ದು. ಸಂಘಟನೆಗೆ ಬೆಳೆಯಲು ಇದು ಮುಖ್ಯ. ಆದರೆ ಪ್ರತಿಷ್ಠೆ ಸಂಘಟನೆಗೆ ಮಾರಕ, ನನ್ನನ್ನು ಮೇಲಿಡು, ಅವನನ್ನು ಕರೆಯಬೇಡ ಎಂಬುದು ಹವ್ಯಕ ಸಂಸ್ಕೃತಿಯಲ್ಲ. ನಾನು ಬರುವುದಿಲ್ಲ, ಆದರೆ ಕಾರ್ಯಕ್ರಮ ಚನ್ನಾಗಿ ಆಗಲಿ ಎಂದು ಹೇಳುವುದು ದೇವತ್ವ, ನನ್ನನ್ನು ಆಹ್ವಾನಿಸು, ಅವರನ್ನೂ ಆಹ್ವಾನಿಸು ಎಂಬುದು ಮನುಷ್ಯತ್ವ. ಎಲ್ಲರನ್ನೂ ಕರೆಯುವುದು, ಎಲ್ಲರ ಜೊತೆ ಸಾಗುವುದು ಹವ್ಯಕತ್ವ. ಅಷ್ಟೇ ಅಲ್ಲದೇ ಒಟ್ಟಾಗುವುದು ಶಂಕರರ ಅದ್ವೈತ ತತ್ವದ ಸಾರ ಎಂದರು.
ಸಮಾಜ ಬೆಳಯಬೇಕು, ಒಟ್ಟು ಭಾರತೀಯ ಸಮಾಜವನ್ನು ಬೆಳೆಸಬೇಕು.ಈ ದಿಶೆಯಲ್ಲಿ ಮಹಾಸಭೆಗೆ ಗುರುಪೀಠದ ಸಂಪೂರ್ಣ ಆಶೀರ್ವಾದ ಸದಾ ಇದೆ.  ಯಾವುದೇ ರಚನಾತ್ಮಕ ಕಾರ್ಯದಲ್ಲಿ ರಾಮಚಂದ್ರಾಪುರಮಠದ ಹಾಗೂ ಬಳಗದ ತ್ಯಾಗ ಸಹಕಾರ ಸದಾ ಇದೆ ಎಂದು ಮಹಾಸಭೆಗೆ ಅಭಯಾಶೀರ್ವಾದವನ್ನು ಮಾಡಿ,ಇದು ಆರಂಭವಷ್ಟೇ, ಇಂದು, ನಾಳೆ, ನಾಡಿದ್ದು ಇಲ್ಲಿ ಹವ್ಯಕರ ವಿರಾಟ್ ದರ್ಶನವಾಗಲಿದೆ. ಇಡೀ ವಿಶ್ವದ ಹವ್ಯಕರು ಹಾಗೂ  ಅಭಿಮಾನಿಗಳು ಒಟ್ಟಾಗುವ ಕಾಲಕ್ಕೆ ಸಾಕ್ಷಿಯಾಗೋಣ ಎಂದರು.
ಸುಬ್ರಹ್ಮಣ್ಯ ಮಠದ ಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಯಜ್ಞಗಳ ಮೂಲಕ ಗುರುತಿಸಿಕೊಂಡ ಸಮಾಜ ಹವ್ಯಕ ಸಮಾಜ. ಆದರೆ ಅಷ್ಟಕ್ಕೇ ಸೀಮಿತವಾಗದೆ ಕಲೆ – ವಿಜ್ಞಾನ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜಗತ್ತಿನ ಗಮನಸೆಳೆದ ಹಿರಿಮೆ ಹವ್ಯಕರದ್ದು. ನೂತನವಾಗಿ ಲೋಕಾರ್ಪಿತವಾದ ಹವ್ಯಕ ಮಹಾಸಭಾದ ಲಾಂಛನದಲ್ಲಿ ಊರ್ಧ್ವಮುಖಿಯಾದ ಅಗ್ನಿ ಇದೆ, ಇದು ಸಾತ್ವಿಕತೆಯನ್ನು ಸೂಚಿಸುತ್ತದೆ. ಇದು ಸಮಾಜದ ಸಾತ್ವಿಕ ಶಕ್ತಿಯ ಸಂಕೇತ, ನಮ್ಮ ಹಾಗೂ ರಾಮಚಂದ್ರಾಪುರಮಠದ ಸಂಬಂಧ ಐತಿಹಾಸಿಕವಾದದು, ಹಾಗೆಯೇ ಹವ್ಯಕ ಸಮಾಜದ್ದು ಕೂಡ. ಈ ಸಮಾಜ ಲೋಕಹಿತ ಕಾರ್ಯದಲ್ಲಿ ಸದಾ ತೊಡಗಿಸಿಕೊಳ್ಳಲಿ ಎಂದು ಆಶಿಸಿದರು.
 ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ  ಶಿವರಾಜ್ ಪಾಟೀಲ್‘ಅಮೃತವರ್ಷಿಣಿ” ಸ್ಮರಣಸಂಚಿಕೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಸಮುದಾಯದ ಸಂಘಟನೆಗಳು ತಪ್ಪಲ್ಲ, ನಮ್ಮ ಸಂತೋಷಕ್ಕಾಗಿ ಸಂಘಟನೆಗಳು ಬೇಕು ಹೊರತು ಬೇರೆಯವರಿಗೆ ದುಃಖ ನೀಡಲಲ್ಲ. ಸಂಘಟನೆ ಅಭಿವೃದ್ಧಿಗೆ ಕಾರಣವಾಗಬೇಕು ಹೊರತು ಮತ್ತೊಬ್ಬರಿಗೆ ಮಾರಕವಾಗಬಾರದು. ಈ ದಿಶೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಸಂಘಟನೆಗಳಿಗೆ ನನ್ನ ಸಹಮತಿ ಇದೆ. ಹವ್ಯಕ ಮಹಾಸಭೆ ಈ ದಿಶೆಯಲ್ಲಿ ತೊಡಗಿಸಿಕೊಂಡಿದೆ ಎಂಬುದು ನನ್ನ ಅಭಿಪ್ರಾಯ.
ಹವ್ಯಕ ಸಮಾಜ ಈ ರೂಪದಲ್ಲಿ ಸಂಘಟಿತವಾಗಿ 75 ವರ್ಷಗಳಾಗಿದೆ. ಇಲ್ಲಿಯ ವರೆಗಿನ ಕಾರ್ಯಗಳನ್ನು ಅವಲೋಕನ ಮಾಡಿಕೊಂಡು ಮುಂದೇನು ಮಾಡಬಹುದು ಎಂಬ ಕುರಿತು ಆಲೋಚಿಸಬೇಕು. ಮುಂದೆ ನಡೆಯುವ ಗೋಷ್ಠಿಗಳು ಈ ದಿಶೆಯಲ್ಲಿ ಬೆಳಕು ಚೆಲ್ಲಲಿ. ಅಮೃತಮಹೋತ್ಸವದ ಸಂದರ್ಭದಲ್ಲಿ ‘ಅಮೃತ ವರ್ಷಿಣಿ’ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿರುವುದು ಸಂತಸದ ವಿಚಾರ.
ಹವ್ಯಕ ಸಮಾಜ 100% ಸುಶಿಕ್ಷಿತ ಎಂಬುದಯ ನಿಜಕ್ಕೂ ಹೆಮ್ಮೆಯ ವಿಚಾರ. ಎಲ್ಲ ಸಮಾಜಗಳಿಗೆ ಇದು ಮಾದರಿಯಾಗಬೇಕು. ಹವ್ಯಕ ಸಮಾಜಕ್ಕೆ ನಾನು ಈ ಮೂಲಕ ಒಂದು ಕರೆಯನ್ನು ಕೊಡಲು ಬಯಸುತ್ತೇನೆ. ನೀವು ಈ ನಾಡಿನಲ್ಲಿ, ಈ ದೇಶದಲ್ಲಿ ಅನಕ್ಷರತೆಯನ್ನು ಹೋಗಲಾಡಿಸಲು ಪಣತೊಡಬೇಕು. ಸಮಸ್ಥ ದೇಶದಲ್ಲಿ ಅಕ್ಷರ ಜಾಗೃತಿ ಮೂಡಿಸುವ ಕೆಲಸ ನಿಮ್ಮ ಸಮಾಜದಿಂದಾಗಲಿ ಎಂದರು.
ಘನ ಸಚಿವರಾದ ಆರ್ ವಿ ದೇಶಪಾಂಡೆ ಮಾತನಾಡಿ,ಹವ್ಯಕ ಸಮಾಜದ ಜೊತೆಗೆ ನಾನು ಅವಿನಾಭಾವದ ಸಂಬಂಧವನ್ನು ಹೊಂದಿದ್ದೇನೆ. ಹವ್ಯಕ ಸಮಾಜ ತನ್ನಲ್ಲಿ ಅನೇಕ ಗುಣಾತ್ಮಕ ಬದಲಾವಣೆಗಳೊಂದಿಗೆ ಮುನ್ನೆಡೆಯುತ್ತಿದೆ. ಇದು ಪ್ರಜ್ಞಾವಂತ ಸಮುದಾಯವಾಗಿದೆ. ರಾಮಚಂದ್ರಾಪುರಮಠದ ಶ್ರೀಗಳ ನೇತೃತ್ವದಲ್ಲಿ ಸಮಾಜ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದ್ದು, ಸಮಾಜದಲ್ಲಿ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಬೆಳೆಸುತ್ತಿರುವ ಕಾಯಕದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕಾರ್ಯ ಅನುಪಮವಾದದ್ದು. ಮನುಷ್ಯ ಸಮಾಜಕ್ಕಷ್ಟೇ ಅಲ್ಲದೇ, ಪೂಜ್ಯ ಶ್ರೀಗಳು ಗೋವಿಗಾಗಿ ಜಗತ್ತಿನ ಮೊದಲ ಸ್ವರ್ಗವನ್ನು ನಿರ್ಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜ ಮುಂದುವರಿಯಲಿ.
ನನ್ನ ರಾಜಕೀಯ ಗುರುಗಳಾದ ರಾಮಕೃಷ್ಣರ ಹೆಗಡೆಯವರು ರಾಷ್ಟ್ರದ ರಾಜಕಾರಣಕ್ಕೆ ಹವ್ಯಕ ಸಮುದಾಯದ ಕೊಡುಗೆಯಾಗಿದೆ. ಅವರು ಕೈಗೊಂಡ ಅನೇಕ ದೂರದೃಷ್ಟಿಯ ಯೋಜನೆಗಳು ಸದಾ ಮಾರ್ಗದರ್ಶಕವಾಗಿವೆ.ಸಂಘಟನೆಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿರಬೇಕು ಹೊರತು ಮಾರಕವಾಗಬಾರದು, ಸಮಾಜದ ಶ್ರೇಯಸ್ಸಿಗೆ ತೊಡಗಿಸಿಕೊಳ್ಳಬೇಕು. ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಮುಂದುವರಿಯಲಿ ಎಂದರು.
ಹೆಚ್ ಕೆ ಪಾಟೀಲ್ ಮಾತನಾಡಿ,ಹವ್ಯಕ ಸಮುದಾಯದೊಂದಿಗೆ ನನ್ನ ಸಂಬಂಧಗಳು ಅನುಪಮವಾದದ್ದು, ನಾನು ಅನೇಕ ಹುದ್ದೆಗಳನ್ನು ನಿರ್ವಹಿಸುವುದರ ಹಿಂದೆ ಹವ್ಯಕ ಸಮಾಜದ ಕೊಡುಗೆ ಅವಿಸ್ಮರಣೀಯ. ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ಹವ್ಯಕರ ಕೊಡುಗೆಯನ್ನು ನಾಡಿನ ಜನತೆ ಸದಾ ಸ್ಮರಸಬೇಕಿದೆ. ಸಹಸ್ರಾರು ಸಹಕಾರಿ ಸಂಘಗಳನ್ನು ಹುಟ್ಟುಹಾಕಿ ಯಶಸ್ವಿಯಾಗಿ ಮುನ್ನೆಡೆಸಿ, ಅನೇಕ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಹವ್ಯಕರದ್ದು.
ಪೂಜ್ಯ ರಾಘವೇಶ್ವರ ಶ್ರೀಗಳ ಅನುಪಮವಾದ ಆಶೀರ್ವಾದ ನನ್ನ ಮೇಲಿದೆ.  ಆ ಸಮಾಜದ ಜೊತೆ ಸಂಬಂಧ ಇರುವುದರಿಂದ ಶ್ರೀಗಳು ‘ಪಾಟೀಲರೇ ನೀವು ಕೂಡ ಹವ್ಯಕರೇ” ಎಂದು ಹೇಳುವುದುಂಟು. ಆಗ ‘ಹವ್ಯಕ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಅಂದುಕೊಳ್ಳುತ್ತೇನೆ ಎಂದು ಆಪ್ತ ಕ್ಷಣಗಳನ್ನು ಹಂಚಿಕೊಂಡರು.

ಅಧ್ಯಕ್ಷರಾದ  ಡಾ. ಗಿರಿಧರ ಕಜೆ  ಸ್ವಾಗತ ಭಾಷಣ ಮಾಡಿ, ಲೋಕದ ಒಳಿತಿಗಾಗಿ ಆರ್ವಿಭವಿಸಿದ ಸಮಾಜ ಹವ್ಯಕ ಸಮಾಜ. ಉತ್ತರದ ಅಹಿಚ್ಛತ್ರದಿಂದ ರಾಜ ಮಯೂರವರ್ಮ 30 ವೈದಿಕ ಕುಟುಂಬಗಳನ್ನು ಕರೆತಂದ. ಇದೇ ಕುಟುಂಬಗಳು ಹವ್ಯಕ ಸಮುದಾಯವಾಗಿ ರೂಪುಗೊಂಡು ಲೋಕವಿಖ್ಯಾತವಾಯಿತು. ಹವ್ಯಕ ಸಮುದಾಯ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದು ಸಮಾಜಕ್ಕೆ ಹೆಮ್ಮೆಯ ವಿಚಾರ. ಹವ್ಯಕರು ತಮ್ಮದೇ ಆದ ಹವಿಗನ್ನಡ ಭಾಷೆಯನ್ನು ಹೊಂದಿದೆ, ಅಡಿಕೆ ಕೃಷಿ ನಮ್ಮ ಪಾರಂಪರಿಕ ಕೃಷಿಯಾದರೆ, ಯಕ್ಷಗಾನ ಕ್ಷೇತ್ರದಲ್ಲಿ ಹವ್ಯಕರ ಕೊಡುಗೆ ಅನುಪಮವಾದದ್ದು. ಹಾಗೆಯೇ ಹವ್ಯಕರಲ್ಲಿ ಅನಕ್ಷರಸ್ಥರು ಇಲ್ಲ ಎಂಬುದು ಗಮನಾರ್ಹ.
ಐತಿಹಾಸಿಕವಾದ ಪ್ರಥಮ ವಿಶ್ವ ಹವ್ಯಕ ಸಮ್ಮೇಳನ ಸರಿಯಾಗಿ 22 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸಂಪನ್ನವಾಗಿತ್ತು. ಹವ್ಯಕರ ಸಂಸ್ಕೃತಿ ಸಂಪ್ರದಾಯವನ್ನು ಜಗತ್ತಿನ ಮುಂದೆ ತೆರೆದಿಡಲು ಇದೀಗ ಮತ್ತೆ ಐತಿಹಾಸಿಕವಾದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಅಮೃತಮಹೋತ್ಸವದ ಜೊತೆಜೊತೆಗೆ ಆಯೋಜಿಸಲಾಗಿದೆ. ಈ ಬೃಹತ್ ಕಾರ್ಯಕ್ರಮದ ಆಯೋಜನೆಯ ಹಿಂದೆ ಸಹಸ್ರಾರು ಸುಸಂಸ್ಕೃತ ಸಂಸ್ಕೃತಿಯ ಸಹೃದಯಗಳು ಕೈಜೋಡಿಸಿವೆ. ಐತಿಹಾಸಿಕ ದಾಖಲೆಯ ಅನೇಕ ಕಾರ್ಯಕ್ರಮ ಸರಣಿಗಳು ಈ ಸಮ್ಮೇಳನದಲ್ಲಿ ಇರಲಿವೆ. ಎಲ್ಲಾ ಸುಮನಸ್ಸುಗಳಿಗೂ ಕಾರ್ಯಕ್ರಮಕ್ಕೆ ಸ್ವಾಗತ ಎಂದು ಸಮ್ಮೇಳನದ ಅಧ್ಯಕ್ಷರಾದ ಡಾ. ಗಿರಿಧರ ಕಜೆಯವರು ತಮ್ಮ ಸ್ವಾಗತ ಭಾಷಣದಲ್ಲಿ ತಿಳಿಸಿದರು.
ಮಾಜಿ ಸಚಿವರಾದ ಹಾಲಪ್ಪ ಅವರು ಮಾತನಾಡಿ, ನಾನು ಅಕ್ಷರ ಕಲಿತು ವಿದ್ಯಾವಂತನಾಗಲು ಹವ್ಯಕ ಸಮಾಜ ಕಾರಣ, ಹಾಗೆಯೇ ನಾನು ಉದ್ಯಮಿಯಾಗಲು, ರಾಜಕಾರಣಿಯಾಗಲು, ಕಷ್ಟಕಾಲವನ್ನು ಧೈರ್ಯವಾಗಿ ಎದುರಿಸಲು ಹವ್ಯಕ ಸಮಾಜದ ಬೆಂಬಲ ಕಾರಣ. ಈಡಿಗರು – ಹವ್ಯಕರ ಸಂಬಂಧ ಉತ್ತಮವಾಗಿದೆ. ಸಮಾಜ ಸಮಾಜಗಳು ಸಹಬಾಳ್ವೆಯಿಂದ ಜೊತೆಸಾಗಲಿ
ಮಾಜಿ ಗೃಹ ಸಚಿವ ಪಿ ಜಿ ಆರ್ ಸಿಂಧ್ಯ ಮಾತನಾಡಿ, ಹವ್ಯಕ ಸಮಾಜ ನಾಡಿನ ಅಭಿವೃಧಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ಸಮಾಜದ ಅಭಿವೃಧಿಯಲ್ಲಿ ಪೂಜ್ಯ ರಾಘವೇಶ್ವರ ಶ್ರೀಗಳ ಪಾತ್ರ ಹಿರಿದಾದದು. ಸಮಾಜದ ಉನ್ನತಿಯಲ್ಲಿ ತೊಡಗಿಕೊಂಡ ಅಂತಹ ಪೂಜ್ಯರಿಗೆ ಅನೇಕ ಕಿರುಕುಳ ನೀಡಲಾಯಿತು. ಆದರೆ ಅವರು ಅದನ್ನೆಲ್ಲವನ್ನೂ ಸಹಿಸಿಕೊಂದು ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಕನ್ನಡಪ್ರಭಾ ಹಾಗೂ ಸುವರ್ಣಾ ನ್ಯೂಸ್ ಸಂಪಾದಕ ರವಿ ಹೆಗಡೆ ಮಾತನಾಡಿ, ಹವ್ಯಕ ಎಂದುಕೊಳ್ಳಲು ನಾನು ಹೆಮ್ಮೆ ಪಡುತ್ತೇನೆ, ನಿಜವಾಗಿ ನಾವು ಅಲ್ಪಸಂಖ್ಯಾತರು ಆದರೆ ನಮ್ಮ ಸಾಮರ್ಥ್ಯದಿಂದಾಗಿ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದೇವೆ ಎಂದರು.
ಹವ್ಯಕರ ಮೂಲಸ್ಥಾನ ಹೈಗುಂದದಿಂದ ತಂದ ಜ್ಯೋತಿಯನ್ನು ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹವ್ಯಕ ಮಹಾಸಭಾದ ನೂತನ ಲಾಂಚನವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾದಲಾಯಿತು. ಕಾರ್ಯಕ್ರಮದ ಸ್ಮರಣ ಸಂಚಿಕೆ ಲೋಕಾರ್ಪಿತವಾಯಿತು.
100 ಪುಸ್ತಕಗಳ ಲೋಕಾರ್ಪಣೆ :  ಹವ್ಯಕರ ಇತಿಹಾಸ – ಹೆಚ್ ಎಂ ತಿಮ್ಮಪ್ಪ, ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ – ಪರಂಪರೆ, ವೇದ ವಿಜ್ಞಾನ – ಪಳ್ಳತ್ತಡ್ಕ ಶಂಕರನಾರಾಯಣ ಘನಪಾಠಿಗಳು,ದೇಶಸೇವೆಯಲ್ಲಿ ಹವ್ಯಕ ಯೋಧ ರತ್ನರು – ರವಿ ನಾರಾಯಣ ಪಟ್ಟಾಜೆ, ಮಾಧ್ಯಮದ ಕಣ್ಣಲ್ಲಿ ಮಹಾಸಭೆಯ ಅಮೃತವರ್ಷ – ಸಂದೇಶ ತಲಕಾಲಕೊಪ್ಪ, ಕಾಡು ತೋಟದ ಕೃಷಿಕ – ರಾಧಾಕೃಷ್ಣ ಬಂದಗದ್ದೆ ಸೇರಿದಂತೆ 100 ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು, ಇದು ಲಿಮ್ಕಾ ರೆಕಾರ್ಡ್ ಸೇರಲಿರುವುದು ವಿಷೇಷ.
ಹವ್ಯಕ ವೇದರತ್ನ :ಶಿತಿಕಂಠ ಭಟ್ ಹೀರೇ, ನಾಗಾನಂದಕುಮಾರ ಪುರಾಣಿಕರು, ಗೋಪಾಲಕೃಷ್ಣ ಘನಪಾಠಿಗಳು, ಶಿವರಾಮ ಅಗ್ನಿಹೋತ್ರಿ, ಸೇರಿದಂತೆ 75 ವೇದ ವಿದ್ವಾಂಸರಿಗೆ ಹವ್ಯಕ ವೇದರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಲ್ಲೇಪುರಂ ಜಿ ವೆಂಕಟೇಶ್, ಹರಿಕೃಷ್ಣ ಪುನರೂರು,ಅರಳುಮಲ್ಲಿಗೆ ಪಾರ್ಥಸಾರಥಿ, ಡಾ ಕಬ್ಬಿನಾಲೆ ವಸಂತ ಭಾರಧ್ವಾಜ್, ಶಂಕರನಾರಾಯಣ ಜೋಯ್ಸ್ ಮುಂತಾದ ಅನೆಕ ಗಣ್ಯರು ಉಪಸ್ಥಿತರಿದ್ದರು. ದೇಶ ವಿದೇಶದ ವಿವಿಧ ಭಾಗಗಳಿಂದ ಆಗಮಿಸಿದ 6000ಕ್ಕೂ ಅಧಿಕ ಜನರು ಕಾರ್ಯಕರ್ಮಕ್ಕೆ ಸಾಕ್ಷಿಯಾದರು.
ಆಲೆಮನೆ, ಹವ್ಯಕ ಪಾಕೋತ್ಸವ, ಗೋತಳಿಗಳ ಪ್ರದರ್ಶನ ಮುಂತಾದವು ಜನಾಕರ್ಷಣೆಯ ಕೇಂದ್ರವಾಗಿತ್ತು, ನಾಳೆ ನಾಡಿದ್ದು ಇನ್ನಷ್ಟು ಜನ ಹವ್ಯಕ ಪಾಕೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಇದೆ.
 Quality audience : ತುಂಬಿ ತುಳುಕುವ ಸಭೆಯಿದ್ದರೂ ಆರಂಭದಿಂದ ಪಿನ್ ಡ್ರಾಪ್ ಸೈಲೆನ್ಸ್ ಇರುವುದು ಹವ್ಯಕರ ಸುಸಂಸ್ಕೃತಿಯನ್ನು ತೋರಿಸುತ್ತದೆ. ಇದು ಸಭೆಯಲ್ಲಿರುವವರು Quality audience ಅನ್ನು ಪ್ರತಿಬಿಂಬಿಸುತ್ತದೆ – ಶಿವರಾಜ್ ಪಾಟೀಲ್

Author Details


Srimukha

Leave a Reply

Your email address will not be published. Required fields are marked *