ಋಷ್ಯಾಶ್ರಮಗಳಿಗೆ ಮತ್ತೆ ಆತಂಕ…

ಲೇಖನ

ಕೈಲಾಸದಿಂದ ಮರಳುವಾಗ ಸಾಕಷ್ಟು ಕಾಲವೂ ಕಳೆದಿತ್ತು.ಇತ್ತ ಆಶ್ರಮಗಳ ಪರಿಸ್ಥಿತಿ ಆತಂಕಕಾರಿಯಾಗಿತ್ತು. ಕಾರ್ತವೀರ್ಯನ ಮರಣದಿಂದ ಕುದಿದುಹೋದ ಕ್ಷತ್ರಿಯರು ಮತ್ತೆ ಸಮಸ್ತ ಋಷಿಪರಂಪರೆಯಮೇಲೇ ಮತ್ಸರಿಗಳಾಗಿದ್ದರು.ರಾಮನಮೇಲಿನ ಆಕ್ರೋಶ ಆಗಾಗ ಜಮದಗ್ನಿಗಳ ಆಶ್ರಮದಮೇಲಾಗುತ್ತಿತ್ತು.ಇತರ ಭೃಗುಗಳಮೇಲೂ ಇದರ ಪರಿಣಾಮ ವಿಪರೀತವಾಗಿತ್ತು. ಸ್ವತಃ ದಾಳಿ ಇಡುವುದು ,ದಾಳಿಕೋರರನ್ನು ಪ್ರಚೋದಿಸುವುದು ,ಅರಣ್ಯದ ಬೇಡರುಗಳನ್ನು ಎತ್ತಿಕಟ್ಟಿ ಅಪಹರಣ ದರೋಡೆಗಳಿಗೆ ಪ್ರಚೋದನೆ ನೀಡುವುದು ಹೀಗೆ ಪರೋಕ್ಷ ಹಿಂಸೆ ಅವ್ಯಾಹತವಾಗಿತ್ತು.ಕಾರ್ತವೀರ್ಯನ ಹಂತಕನಾದ ರಾಮನ ಪ್ರಳಯಾಂತಕ ಪರಾಕ್ರಮದ ವಿಚಾರ ತಿಳಿದ ಕಾರಣ ಪ್ರಚ್ಛನ್ನ ಸಮರ ನಿರಂತರವಾಗಿ ಸಾಗಿತ್ತು.ತಮ್ಮ ಕುಲಕ್ಕಾದ ಘೋರ ಅವಮಾನವನ್ನು ಈ ಬಗೆಯಲ್ಲಿ ತೀರಿಸಿಕೊಳ್ಳುವ ಕ್ಷತ್ರಿಯರು ವಿದ್ಯೆಗೆ ಗುರುಕುಲವನ್ನೇ ಆಶ್ರಯಿಸಬೇಕಾಗಿರುವುದರಿಂದ ಆ ಕಾಲದ ಪ್ರಸಿದ್ಧ ಋಷಿಗಳ ಸುದ್ದಿಗೆ ಹೋಗದೆ ಅವರನ್ನು ತಮ್ಮ ಕಡೆ ಇರುವಂತೆಯೂ ನೋಡಿಕೊಂಡಿದ್ದರು.ಅಂದಿನ ದಿನಗಳಲ್ಲಿ ಋಷಿಗಳಲ್ಲಿ ಬಹುದೊಡ್ಡ ಕ್ರಾಂತಿಯಾದದ್ದು ಮಹರ್ಷಿ ವಿಶ್ವಾಮಿತ್ರರಿಂದ. ಕ್ಷತ್ರಿಯನಾಗಿಯೂ ಬ್ರಹ್ಮರ್ಷಿ ಪದಕ್ಕೇರಿದಮೇಲೆ ಇತರ ಅನೇಕ ಕ್ಷತ್ರಿಯರೂ ಹಾಗೆ ಮಾಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಆದರೆ ಈ ವಿವೇಚನೆ ಇಲ್ಲದ ಸಣ್ಣಸಣ್ಣ ಪಾಳೆಯಪಟ್ಟುಗಳ ತುಂಡರಸರ ,ಪುಂಡರಸರ ಉಪಟಳ ಹೇಳತೀರದಷ್ಟು ಹೆಚ್ಚಿತ್ತು.ಆಶ್ರಮಕ್ಕೆ ಕೊಡುವ ಉಂಬಳಿ ನಿಂತು ಆಶ್ರಮಕ್ಕೆ ಬರುವ ಛಾತ್ರರ ಸಂಖ್ಯೆ ಕಡಿಮೆಯಾಗಿ ಅಂತಹ ಛಾತ್ರರಾಗಬೇಕಾದವರೂ ಪುಂಡುಪೋಕರಿಗಳಾಗಿ ಪರಿವರ್ತಿತರಾಗಿದ್ದರು.

 

ಎಲ್ಲ ಕ್ಷತ್ರಿಯರು ದುಷ್ಟರಲ್ಲದಿದ್ದರೂ ಅಂಥವರ ಸಂಖ್ಯೆ ಹೆಚ್ವುತ್ತಿತ್ತು. ಆದ್ದರಿಂದ ಒಳ್ಳೆಯವರು ನಿಷ್ಕ್ರಿಯರಾಗಿದ್ದರು.ರಾಮನ ಇಪ್ಪತ್ತೊಂದು ಬಾರಿಯ ಪ್ರತಿಜ್ಞೆ ಅನೇಕರಿಗೆ ತಿಳಿದಿರಲಿಲ್ಲ.ರಾಮನು ಕಾಣಿಸದೆ ಇರುವುದರಿಂದ ತಮಗೆ ಹೆದರಿ ಅಡಗಿದ್ದಾನೆ ಎಂದು ಪ್ರಚಾರಮಾಡುವವರೆಗೂ ಇದು ಮುಂದುವರಿದಿತ್ತು.

 

ಕಾಂಬೋಜ,ಗಾಂಧಾರ,ಪಾಂಚಾಲ,ದಶಾರ್ಣ ಮುಂತಾದ ಅರಸರಿಗೆ ಅರ್ಜುನನ ಮರಣದ ಸರಿಯಾದ ಕಾರಣವೇ ತಿಳಿಯದುದರಿಂದ ರಾಮನು ಶಿಕ್ಷಾರ್ಹನೆಂದೇ ಭಾವಿಸಿದ್ದರು.ಮಾಹಿಷ್ಮತಿಯಲ್ಲಿ ಅರ್ಜುನನ ಉತ್ತರಾಧಿಕಾರಿಯಾಗಿ ಮರಣಿಸದೆ ಉಳಿದ ಮಕ್ಕಳಲ್ಲಿ ಹಿರಿಯವನಿಗೆ ಪಟ್ಟಾಭಿಷೇಕವಾಗಿತ್ತು.ಶೂರಸೇನನೇ ಮೊದಲಾದ ಸಾಮಂತರು ಪ್ರತೀಕಾರಕ್ಕೆ ಸಿದ್ಧರಾಗಿದ್ದರೂ ರಾಣಿಯರ ಆತಂಕದಿಂದ ಮುಂದುವರಿಯಲಿಲ್ಲ.ಇತ್ತ ಸೂರ್ಯ ಚಂದ್ರ ವಂಶೀಯ ಚಕ್ರವರ್ತಿಗಳು ಹೈಹಯರ ಕುರಿತು ಸದಭಿಪ್ರಾಯವಿರದವರಾದಕಾರಣ ಬ್ರಹ್ಮದ್ವೇಷಕ್ಕೆ ಆಸಕ್ತರಾಗದೆ ಉಳಿದರು.ಔರ್ವ,ಚ್ಯವನ,ಮೊದಲಾದ ಋಷಿಗಳ ತಪಸ್ಸಿನ ಋಚಿ ತಿಳಿದಿರುವುದರಿಂದ ಅನೇಕ ಅರಸರು ಹೆದರಿ ಸುಮ್ಮನಿದ್ದರು.ಒಟ್ಟು ಆಶ್ರಮಗಳ ವ್ಯವಸ್ಥೆ ಕುಸಿಯಲು ಏನುಬೇಕೋ ಅದೆಲ್ಲವನ್ನೂ ವ್ಯವಸ್ಥಿತವಾಗಿ ನಡೆಸಲಾಗುತ್ತಿತ್ತು.

 

ಹೀಗೆ ತಮ್ಮ ಬದುಕು ನಿತ್ಯನರಕವಾಗುತ್ತಿರುವುದಕ್ಕೆ ಋಷಿಸಮೂಹ ಆತಂಕಿತವಾಗಿತ್ತು. ಋಷಿಗಳಲ್ಲೂ ಕೆಲವರು ರಾಮನ ನಡೆಯಿಂದ ಈವರೆಗಿನ ಕ್ಷಾತ್ರ -ಬ್ರಾಹ್ಮ ಸಂಬಂಧ ಹಾಳಾಯಿತು,ಇದು ಅತಿರೇಕವಾಯಿತು ಎಂಬ ಮಾತುಗಳು ಬರತೊಡಗಿದವು.ಅದು ಜಮದಗ್ನಿಗಳ ಕಿವಿಗೂ ತಲುಪುತ್ತಿದ್ದರೂ ನೇರವಾಗಿ ಹೇಳುವ ಧೈರ್ಯ ಯಾರಿಗೂ ಇರಲಿಲ್ಲ.ರಾಮನನ್ನು ಚಕ್ರವರ್ತಿ ಹಂತಕನೆಂದು ಹೀಗಳೆಯುವವರೂ ಬ್ರಾಹ್ಮಣರಲ್ಲೂ ಕಾಣಿಸಿಕೊಂಡು ಕ್ಷತ್ರಿಯರ ಮೆಚ್ಚುಗೆಗೆ ಹಪಹಪಿಸುವವರೂ ಇದ್ದರು.

 

ಈ ಎಲ್ಲ ಗೊಂದಲಕ್ಕೆ ಪರಿಹಾರವನ್ನು ಕಾಣಬೇಕೆಂದು ಮಹರ್ಷಿ ವಿಶ್ವಾಮಿತ್ರರ ಆಶ್ರಮದಲ್ಲಿ ,ಅವರ ಹಿರಿತನದಲ್ಲಿ ಪರಿಷತ್ತು ಸೇರಲಿತ್ತು.

 

ರಾಮನು ಆಶ್ರಮಕ್ಕೆ ಮರಳಿ ಕೆಲವು ಕಾಲವಾದರೂ ತನ್ನ ಪ್ರತಿಜ್ಞೆಯಕಡೆ ಲಕ್ಷ್ಯವಹಿಸಲಿಲ್ಲ.ನಡೆಯುತ್ತಿರುವುದೆಲ್ಲ ತಿಳಿದರೂ ತಂದೆಯ ಆತಂಕ ಹೆಚ್ಚಿಸಬಾರದೆಂದು ತಡೆದಿದ್ದ.ಅವರ ವಾದ ಪ್ರತಜ್ಞೆಗಿಂತ ಜೀವ ದೊಡ್ಡದು .ಇದು ಬ್ರಾಹ್ಮಕ್ಕೆ ಅನುಚಿತ ಎಂದೇ ಆಗಿತ್ತು.

 

ವಿಶ್ವಾಮಿತ್ರರು ಅಂದಿಗೆ ಅತ್ಯಂತ ಹಿರಿಯರು.ರಾಮನ ನಡೆಗೆ ಕಾರಣವನ್ನು ಅರಿತವರಾದಕಾರಣ ಯಾರಾದರೂ ಈ ಬಗ್ಗೆ ಪ್ರಶ್ನಿಸಿದರೆ ರಾಮನ ಪರವಾಗಿಯೇ ಮಾತಾಡುತ್ತಿದ್ದರು.ಮೊದಲು ಕ್ಷತ್ರಿಯನಿದ್ದೂ ಋಷಿಯಾದ ಇವರಿಗೆ ಕ್ಷಾತ್ರಕಾರ್ಯ ಮೆಚ್ಚುಗೆಯಾಗಿದೆ ಎಂದು ಅನೇಕ ಋಷಿಗಳು ಹಿಂದಿನಿಂದ ಆಡಿಕೊಂಡ ವರ್ತಮಾನ ತಿಳಿದರೂ ನಕ್ಕು ಸುಮ್ಮನಾಗುತ್ತಿದ್ದರು.ದೇವರಹಸ್ಯವನ್ನು ಅರಿತವರು ಇರಬೇಕಾದ ದಾರಿ ಅದು.

 

ಪರಿಷತ್ತಿನಲ್ಲಿ ಮಂಥನ ಮಾಡಬೇಕಾದುದು ಕಾರ್ತವೀರ್ಯನ ಮರಣಾನಂತರದ ಬ್ರಾಹ್ಮ ಕ್ಷಾತ್ರ ಸಂಘರ್ಷದ ವಿಚಾರವೇ ಆಗಿತ್ತು.ಅನೇಕ ಋಷಿಗಳ ಗೊಂದಲ ಕ್ಷತ್ರಿಯರ ಸಧ್ಯದ ನಡೆ ಅದಕ್ಕೆ ಪ್ರತಿಕ್ರಿಯೆಯೋ ,ಪ್ರತೀಕಾರವೋ ಏನಿದ್ದರೂ ವಿಶ್ವಾಮಿತ್ರರಂಥವರ ಮಾತಿಗೆ ಗೌರವವಿರುವುದರಿಂದ ಅವರೇ ಒಂದು ದಾರಿ ತೋರಿಸಬೇಕೆಂಬುದೇ ಆಗಿತ್ತು.
ರಾಮನ ಅಣ್ಣಂದಿರಿಗೆಲ್ಲ ಮದುವೆಯಾಗಿ ,ಸಂಸಾರ ಬೆಳೆದಿತ್ತು .ಪರಂಪರೆಯೂ ಬೆಳೆದಿತ್ತು.ತಾಯಿಗೆ ರಾಮನೂ ಸಂಸಾರಿಯಾಗಲಿ ಎಂದು ಆಸೆ ಇದ್ದರೂ ತನ್ನ ಬದುಕಿಗೆ ಸಂಸಾರ ಸರಿಹೊಂದದೆಂದು ರಾಮ ನಿರ್ಧರಿಸಿದ.ಅಕೃತವ್ರಣ ಅನುಸರಿಸಿದ.

 

ಸ್ವಯಂ ವಿಶ್ವಾಮಿತ್ರರೇ ರಾಮನನ್ನೂ ಒಡಗೂಡಿ ಋಷಿಸಂಸತ್ತಿನಲ್ಲಿ ಭಾಗವಹಿಸಬೇಕೆಂದು ನಿರೂಪವನ್ನು ಕಳುಹಿಸಿದ್ದರು.

 

ವಿಶ್ವಾಮಿತ್ರರು ಋಷಿಗಳಾದಮೇಲೂ ಬೆಳೆದ ಅವರ ಸಂತತಿಯವರು ಋಷಿಪರಂಪರೆಯನ್ನೇ ಮುಂದುವರಿಸಿದ್ದು ಗಾಲವಾದಿಗಳು ತಪಸ್ವಿಗಳೆಂದೇ ಖ್ಯಾತಿ ಗಳಿಸಿದ್ದರು.ಗಾಲವ ಪುತ್ರ ಅಲರ್ಕ ಕಿರಿಯ ಪ್ರಾಯದಲ್ಲೇ ಶಾಸ್ತ್ರವೇತ್ತನೆಂದು ಪ್ರಖ್ಯಾತನಾಗಿದ್ದ.

 

ಹೀಗೆ ರಾಮನ ಕಾರ್ಯ ತಪ್ಪೆನ್ನುವವರು,ಸರಿಯೆನ್ನುವವರು,ತಟಸ್ಥರು,ಆಶ್ರಮಗಳ ಬದುಕು ಸರಿಯಾಗಬೇಕೆನ್ನುವವರು,ಕ್ಷತ್ರಿಯರ ವಿರೋಧಿಗಳು,ಸ್ನೇಹಿಗಳು ಇದಕ್ಕೊಂದು ಪರಿಹಾರ ಸಿಕ್ಕೀತೆಂಬ ಆಸಕ್ತಿಯುಳ್ಳವರೆಲ್ಲ ಅಲ್ಲಿ ಸೇರುತ್ತಿದ್ದರು.

 

ರಾಮ ಸಹಿತ ರೇಣುಕಾದೇವಿಯನ್ನೊಗೊಂಡು ಮಹರ್ಷಿ ಜಮದಗ್ನಿಗಳು ಹೊರಟರು…

 

ಮುಂದುವರಿಯುವುದು…

 

Author Details


Srimukha

Leave a Reply

Your email address will not be published. Required fields are marked *