ನಂತೂರು ಶ್ರೀ ಭಾರತೀ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಚಾರ್ಮಾಡಿಯಲ್ಲಿ ಶ್ರಮದಾನ

ಸುದ್ದಿ

ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಕಾಲೇಜಿನ ಎನ್ನೆಸ್ಸೆಸ್ ತಂಡವು ಚಾರ್ಮಾಡಿಗೆ ತೆರಳಿ, ದಿನವಿಡೀ ಶ್ರಮದಾನ ನಡೆಸಿ, ನೆರೆ ಸಂತ್ರಸ್ತರಿಗೆ ಅವಶ್ಯ ಕಾಮಗಾರಿ ನಡೆಸಿದೆ.
ಹೊರಭಾಗದಿಂದ ಈ ಪ್ರದೇಶದ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದ ಪ್ರಥಮ ತಂಡವೆಂಬ ಹೆಗ್ಗಳಿಕೆಯನ್ನೂ ಪಡೆಯಿತು.

 

ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜೀವನ್‌ದಾಸ್, ಉಪನ್ಯಾಸಕ – ಎನ್ನೆಸ್ಸೆಸ್ ಯೋಜನಾಧಿಕಾರಿ ಅಶೋಕ್ ಎಸ್. ಮತ್ತು ಉಪನ್ಯಾಸಕ ಸಹಯೋಜನಾಧಿಕಾರಿ ಪ್ರವೀಣ್ ಪಿ. ಅವರ ನೇತೃತ್ವದಲ್ಲಿ 24 ವಿದ್ಯಾರ್ಥಿಗಳ ತಂಡವು ಬೆಳಗ್ಗೆ 10 ಗಂಟೆಯಿಂದ ಸಂಜೆ ಗಂಟೆ 4.30ರ ವರೆಗೆ ಚಾರ್ಮಾಡಿಯಲ್ಲಿ ಕಾರ್ಯನಿರ್ವಹಿಸಿತು.

 

ಅಲ್ಲಿನ ದೃಶ್ಯವನ್ನು ನೋಡಿ, ಕೇಳಿದಾಗ, ನದಿಯ ಪ್ರವಾಹಕ್ಕೆ ಹಲವು ಸೇತುವೆಗಳು ಇಬ್ಭಾಗವಾಗಿ, ನೀರು ಎಲ್ಲೆಂದರಲ್ಲಿ ಸಾಗಿದೆ ಎಂದು ತಿಳಿಯಿತು. ಜತೆಗೆ ಮರಳ ರಾಶಿ ಬಿದ್ದಿದೆ. ಅರಣಪಾದೆ ಎಂಬ ಪ್ರದೇಶದ 75 ಮನೆಗಳ ಸಂಪರ್ಕ ಕಡಿತವಾಗಿದೆ. ಈ ಕುಟುಂಬಗಳಿಗೆ ಸಂಪರ್ಕ ದಾರಿ ಇಲ್ಲವಾಗಿದೆ ಎಂದು ಅರಿತು, ದಾರಿ ಮಾಡಿಕೊಡುವ ಆವಶ್ಯಕತೆಯಿದೆಯೆಂದೆನಿಸಿತು.

ಅದಕ್ಕೆ ಅಲ್ಲೇ ಬಿದ್ದ ಮರಳನ್ನು ಗೋಣಿಚೀಲದಲ್ಲಿ ತುಂಬಿಸಿ, ತಾತ್ಕಾಲಿಕ ದಾರಿ ನಿರ್ಮಿಸಿಕೊಡುವ ಕಾರ್ಯದಲ್ಲಿ ತಂಡ ಭಾರೀ ಶ್ರಮವಹಿಸಿತು. ಸಂಜೆ ವರೆಗೆ ಒಟ್ಟು 1500 ಚೀಲಗಳಿಗೆ ಮರಳನ್ನು ತುಂಬಿಸಿ, ಹೊತ್ತು, ಸೂಕ್ತವಾಗಿ ಜೋಡಿಸಿಕೊಟ್ಟರು. ಕೆಲವರು ತಾವೇ ಹೊತ್ತರೆ, ಮತ್ತೆ ಕೆಲವರು ಪರಸ್ಪರ ಸಹಕರಿಸಿಕೊಂಡು ಸಾಗಾಟ ಮಾಡಿದರು. ಕೆಸರಲ್ಲಿ ಮುಳುಗಿದ್ದ ಒಂದು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿಕೊಟ್ಟರು. ವಿದ್ಯಾರ್ಥಿಗಳು ಕೆಸರಲ್ಲಿ ಕಾಲಿಡುವಾಗ ಮೊಣಕಾಲು ವರೆಗೆ ಹೂತುಹೋಗುತ್ತಿತ್ತು. ಅಲ್ಲೇ ನೀರೇಳುತ್ತಿತ್ತು. ಮಳೆಯೂ ಎಡೆಬಿಡದೇ ಧಾರಾಕಾರವಾಗಿ ಸುರಿಯುತ್ತಿತ್ತು. ಆದರೆ ನಮ್ಮ ಸಂಸ್ಥೆಯ ಮಕ್ಕಳು, ಉಪನ್ಯಾಸಕರು ತಲೆಗೆ ಪ್ಲಾಸ್ಟಿಕ್ ಹಾಕಿಕೊಂಡು, ಮಳೆಗೂ ಚಳಿಗೂ ಬಗ್ಗದೇ, ಧೈರ್ಯದಿಂದ ಮುನ್ನುಗ್ಗಿ, ತಮ್ಮ ಸೇವೆಯನ್ನು ಸಮರ್ಪಿಸಿದರು.

 

ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆದೇಶದಂತೆ ಅಂಗಸಂಸ್ಥೆಯಾಗಿರುವ ಶ್ರೀ ಭಾರತೀ ಕಾಲೇಜಿನಲ್ಲಿ ನೆರೆ ಪರಿಹಾರ ಕೇಂದ್ರವನ್ನು ತೆರೆದು, ಸಂಗ್ರಹಿಸಿರುವುದಲ್ಲದೇ ಸಂಸ್ಥೆಯ ಎನ್ನೆಸ್ಸೆಸ್ ತಂಡದ ಎರಡು ದಿನಗಳ (ಪಚ್ಚನಾಡಿ ಮಂದಾರ ಮತ್ತು ಚಾರ್ಮಾಡಿಯಲ್ಲಿ) ಅಭೂತಪೂರ್ವ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಚಾರ್ಮಾಡಿಗೆ ತೆರಳಿದ ನಮ್ಮ ತಂಡವನ್ನು ಅಲ್ಲಿನ ಸಾಮಾಜಿಕ ಕಾರ್ಯಕರ್ತರಾದ ಪ್ರಕಾಶ್‌ನಾರಾಯಣ ಚಾರ್ಮಾಡಿ, ನವೀನ್ ಚಾರ್ಮಾಡಿ, ಉಜಿರೆ ಹವ್ಯಕ ವಲಯ ಅಧ್ಯಕ್ಷ ಮಹೇಶ್ ಮತ್ತು ಪದಾಧಿಕಾರಿಗಳು ಮತ್ತು ಇತರರು ಮುಕ್ತವಾಗಿ ಶ್ಲಾಘಿಸಿದ್ದಾರೆ.

Author Details


Srimukha

Leave a Reply

Your email address will not be published. Required fields are marked *