ಸಮಾಜ ಸೇವೆಯ ಮೂಲಕ ಶಿಕ್ಷಣ : ಪ್ರೊ. ವೇದವ್ಯಾಸ ರಾಮಕುಂಜ

ಸುದ್ದಿ

ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ವಿದ್ಯಾರ್ಥಿಗಳು ಗದ್ದೆ ನಾಟಿ ಮಾಡುವುದರ ಮುಖಾಂತರ ಕುರ್ನಾಡು ಗ್ರಾಮದ ಅಂಗಣೆಮಾರು ಎಂಬಲ್ಲಿ ನಡೆಯಿತು.

 

ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ವೇದವ್ಯಾಸ ರಾಮಕುಂಜ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಸಮಾಜ ಸೇವೆಯ ಮೂಲಕ ಶಿಕ್ಷಣ ಎಂಬ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ರಾಷ್ಟ್ರೀಯ ಸೇವಾ ಯೋಜನೆ ಮುನ್ನಡೆಯುತ್ತಿದೆ ಎಂದರು. ರಾ.ಸೇ.ಯೋ. ವಿದ್ಯಾರ್ಥಿಗಳಿಗೆ ಅಶೋಕ ವೃಕ್ಷದ ಬೀಜವನ್ನು ಹಸ್ತಾಂತರ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಕೃಷಿ ಕೆಲಸಕ್ಕೆ ಚಾಲನೆ ನೀಡಿ, ಅದರ ಮಹತ್ವದ ಕುರಿತು ಮಾತನಾಡಿದರು.

 

ರಾ.ಸೇ.ಯೋಜನೆಯ 50ನೇ ವರ್ಷದ ಸಂಭ್ರಮಾಚರಣೆಯ ಕುರಿತಾಗಿ, ರಾ.ಸೇ.ಯೋಜನೆಯಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗುರುತಿಸಿ ಗೌರವಿಸುವ ಸಲುವಾಗಿ, ಪ್ರೊ.ವೇದವ್ಯಾಸ ರಾಮಕುಂಜ ಅವರನ್ನು ರಾ.ಸೇ.ಯೋಜನ ಘಟಕದ ವತಿಯಿಂದ ಸಮ್ಮಾನಿಸಲಾಯಿತು.

 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್ ಮಾತನಾಡಿ, ಹಳ್ಳಿಯ ಜೀವನ ನೈಜ ಜೀವನ, ಹಳ್ಳಿಯ ಜೀವನ ಪದ್ದತಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಿರುವ, ರಾ.ಸೇ.ಯೋಜನ ಘಟಕದ ಮಹತ್ಕಾರ್ಯವನ್ನು ಶ್ಲಾಘಿಸಿದರು.

 

ಕುರ್ನಾಡು ಹನ್ನೆರಡು ಮುಡಿ ಶ್ರೀ ನಾಗಬ್ರಹ್ಮ ಆದಿಮಾಯೆ ದೇವಸ್ಥಾನದ ಮೊಕ್ತೇಸರ ರಮೇಶ್ ಕುಮಾರ್, ಕುರ್ನಾಡು ಗ್ರಾಮ ಪಂಚಾಯತ್ ಸದಸ್ಯ ಶಿವಶಂಕರ್ ಭಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶುಭ ಹಾರೈಸಿದರು.

 

ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್‌ದಾಸ್ ಎ. ಅವರು ಮಾತನಾಡಿ, ಕೃಷಿ ಜೀವನದ ಕುರಿತಾದ ವಿಷಯಗಳು ವಿದ್ಯಾರ್ಥಿಗಳಲ್ಲಿ ಅಂತರ್ಗತವಾದಾಗ, ಬದುಕಿನ ಮೌಲ್ಯ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತದೆ ಎಂದು ಹೇಳಿದರು.

 

ಕುರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತಿನ್ ಕುಮಾರ್ ಗಟ್ಟಿ ಅಧ್ಯಕ್ಷತೆ ವಹಿಸಿ, “ವಿದ್ಯಾರ್ಥಿಗಳ ನಡಿಗೆ,ರೈತರ ಕಡೆಗೆ”ಎನ್ನುವ ಧ್ಯೇಯ ವಾಕ್ಯದ ಕುರಿತು ಶ್ಲಾಘಿಸಿದರು. ಕುರ್ನಾಡು ಗ್ರಾಮವನ್ನು ರಾ.ಸೇ.ಯೋಜನಾ ಘಟಕ ದತ್ತು ಪಡೆದುಕೊಂಡದ್ದಕ್ಕಾಗಿ, ಕುರ್ನಾಡು ಗ್ರಾಮ ಪಂಚಾಯತ್ ಪರವಾಗಿ ಅಭಿನಂದಿಸಿದರು.

 

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಅಶೋಕ ಎಸ್.ಪ್ರಸ್ತಾವನೆಗೈದರು. ರಾ.ಸೇ.ಯೋಜನಾ ಘಟಕದ ಸಹಯೋಜನಾಧಿಕಾರಿ ಪ್ರವೀಣ ಪಿ., ಸತ್ಯನಾರಾಯಣ ಪ್ರಸಾದ್, ಡಾ.ಈಶ್ವರ ಪ್ರಸಾದ್, ಕು.ಕಾವ್ಯಶ್ರೀ ಉಪಸ್ಥಿತರಿದ್ದರು.

ಸುಂದರ ಶೆಟ್ಟಿ ಕುರ್ನಾಡು ಅವರು ಗದ್ದೆ ನಾಟಿಯ ಪ್ರಾತ್ಯಕ್ಷಿಕೆ ಮತ್ತು ಗದ್ದೆ ಬೇಸಾಯದ ಮಾಹಿತಿ ನೀಡಿದರು. ಸುಮಾರು 60 ವಿದ್ಯಾರ್ಥಿಗಳು ಗದ್ದೆ ನಾಟಿಯಲ್ಲಿ ತೊಡಗಿಸಿಕೊಂಡರು.

 

ವಿದ್ಯಾರ್ಥಿನಿ ಗಂಗಾ ಸತ್ಯನಾರಾಯಣ ಹೆಗ್ಡೆ ಸ್ವಾಗತಿಸಿ, ಘಟಕ ನಾಯಕಿ ರಶ್ಮಿ ವಿ.ಆರ್. ವಂದಿಸಿದರು. ಘಟಕ ಸುಮಂತ್ ನಿರೂಪಿಸಿದರು.

Author Details


Srimukha

Leave a Reply

Your email address will not be published. Required fields are marked *