ಕೈರಂಗಳ: ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಮಕರ ಸಂಕ್ರಾಂತಿಯಂದು (ಜನವರಿ 14) ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆರಂಭವಾದ ‘ಗೋಸೇವಾ ಮಾಸಾಚರಣೆ’ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಗೋಸೇವೆ ಹಾಗೂ ಭಜನೆ ಸೇವೆ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಅಂಗವಾಗಿ ಮಾಘ ಕೃಷ್ಣ ಸಪ್ತಮಿಯಂದು (ಫೆಬ್ರವರಿ 8) ‘ವೀಣಾ-ಮೃದಂಗ ವೈಭವ’ ಕಾರ್ಯಕ್ರಮ ಜರುಗಿತು. ‘ಸಂಗೀತ ಕಲಾ ದಂಪತಿ’ ಎಂದೇ ವಿಖ್ಯಾತರಾದ ವಿದುಷಿ ವೈ. ಜಿ. ಶ್ರೀಲತಾ ನಿಕ್ಷಿತ್ ಮತ್ತು ವಿದ್ವಾನ್ ಪುತ್ತೂರು ನಿಕ್ಷಿತ್ ಇವರು ಈ ಕಾರ್ಯಕ್ರಮವನ್ನು ಮನೋಹರವಾಗಿ ನಡೆಸಿಕೊಟ್ಟರು. ವಿದುಷಿ ವೈ. ಜಿ. ಶ್ರೀಲತಾ ನಿಕ್ಷಿತ್ ಅವರು ವೀಣೆಯನ್ನು ನುಡಿಸಿದರೆ, ವಿದ್ವಾನ್ ಪುತ್ತೂರು ನಿಕ್ಷಿತ್ ಅವರು ಮೃದಂಗವನ್ನು ನುಡಿಸಿದರು. ಮಾಸ್ಟರ್ ತಮನ್ ಎಕ್ಕಡ್ಕ ಅವರು ಘಟಂ ವಾದ್ಯದೊಂದಿಗೆ ಸಾಥ್ ನೀಡಿದರೆ,
ವಿದ್ವಾನ್ ಹರೀಶ್ ಡೋಂಗ್ರೆ ಅವರು ತಬಲದೊಂದಿಗೆ ಸಹಕರಿಸಿದರು. ವಿದ್ವಾನ್ ಶ್ರೀನಿಧಿ ಕೊಪ್ಪ ಅವರು ಕೀಬೋರ್ಡ್ ನುಡಿಸಿ ಕಾರ್ಯಕ್ರಮವನ್ನು ಚಂದಗೊಳಿಸಿದರು. ವಿದ್ವಾನ್ ಸತ್ಯನಾರಾಯಣ ಅವರು ರಿದಂ ಪ್ಯಾಡ್ ನುಡಿಸಿ ಕಾರ್ಯಕ್ರಮದ ಶೋಭೆಯನ್ನು ವರ್ಧಿಸಿದರು. ಇಂತು ಈ ಕಾರ್ಯಕ್ರಮವು ರಾತ್ರಿ 8.00 ಘಂಟೆಗೆ ತೊಡಗಿ ಸಂಗೀತ ಕಲಾ ರಸಿಕರನ್ನು ಸೆಳೆಯಿತು.