‘ ದಾನದ ಮೌಲ್ಯ ಅರಿವಾಗಿದ್ದು ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ‘ – ಸುಮನಾ ಸುರೇಶ್ ಸಿಗಂದೂರು

ಲೇಖನ ಮಾತೃತ್ವಮ್

​” ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಸಮಾಜದಲ್ಲಿ ಜನರ ಜೊತೆಗಿನ ಒಡನಾಟ ಹೆಚ್ಚಾಗಿದೆ. ನಮ್ಮಲ್ಲಿರುವುದನ್ನು ಇತರರಿಗೆ ದಾನ ಮಾಡುವ, ಹಂಚಿ ತಿನ್ನುವ ಶ್ರೇಷ್ಠ ಗುಣ, ಕೊಟ್ಟು ಪಡೆಯುವ ಸುಖದ ನಿಜವಾದ ಮೌಲ್ಯ ನಮಗೆ ಅರಿವಾಗಿದ್ದು ಶ್ರೀಮಠದ ನಿಕಟ ಸಂಪರ್ಕಕ್ಕೆ ಬಂದ ಮೇಲೆಯೇ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಸುಮನಾ ಸುರೇಶ್ ಸಿಗಂದೂರು. ಬೆಂಗಳೂರು ದಕ್ಷಿಣ ಮಂಡಲ ಗಿರಿನಗರ ವಲಯದ ನಿವಾಸಿಗಳಾಗಿರುವ ಸುರೇಶ್ ಸಿಗಂದೂರು ಅವರ ಪತ್ನಿಯಾದ ಇವರು, ಶ್ರೀಮಠದ ಸೇವೆ ಮತ್ತು ಗೋಸೇವೆಯಲ್ಲಿ ಸಾರ್ಥಕತೆಯನ್ನು ಕಾಣುತ್ತಿದ್ದಾರೆ.

​ ಗೋಕರ್ಣದ ಸಿದ್ಧಿವಿನಾಯಕ ಕುರ್ಸೆ ಮತ್ತು ಲಲಿತಾ ಕುರ್ಸೆ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಲಭಿಸಿತ್ತು. ತವರು ಮನೆಯಲ್ಲಿ ಹಸುಗಳ ಒಡನಾಟದಲ್ಲೇ ಬೆಳೆದಿದ್ದರಿಂದ, ಗೋಮಾತೆಯ ಮೇಲೆ ಅವರಿಗೆ ಪ್ರೀತಿಯ ಬಾಂಧವ್ಯ ಸಹಜವಾಗಿಯೇ ಮೂಡಿತ್ತು. ಮುಂದೆ ಸುರೇಶ್ ಸಿಗಂದೂರು ಅವರೊಂದಿಗೆ ವಿವಾಹವಾದ ನಂತರ ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು. ಪ್ರಸ್ತುತ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಶ್ರೀಮಠದ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿದ್ದಾರೆ

​ ನಾಗರತ್ನ ಶರ್ಮಾ ಅವರ ಮಾರ್ಗದರ್ಶನದಂತೆ ಶ್ರೀಮಠದ ‘ಮಾತೃತ್ವಮ್’ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಕೈಜೋಡಿಸಿದ ಸುಮನಾ ಅವರು, ತಮ್ಮ ಪತಿಯ ಸಂಪೂರ್ಣ ಸಹಕಾರದೊಂದಿಗೆ ಈಗಾಗಲೇ ಮೂರು ಹಸುಗಳ ಪೋಷಣೆಯ ಗುರಿಯನ್ನು ತಲುಪಿದ್ದಾರೆ. ಮಾತ್ರವಲ್ಲದೆ ಈಗಲೂ ಈ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಗೋಮಾತೆ ಮೇಲಿನ ಮಮತೆಯಿಂದ ಇವರು ಪ್ರತಿ ತಿಂಗಳು ಮಾತೃತ್ವಮ್ ಯೋಜನೆಯ ಮೂಲಕ ಗೋಮಾತೆಯ ಸೇವೆಗಾಗಿ ಒಂದಿಷ್ಟು ನಿಗದಿತ ಮೊತ್ತವನ್ನು ಮೀಸಲಿಡುತ್ತಿದ್ದಾರೆ.

​”ನಮ್ಮ ಜೀವನದಲ್ಲಿ ಎದುರಾದ ಕೆಲವು ವಿಷಮ ಸಮಸ್ಯೆಗಳಿಂದ ನಾವು ಸುರಕ್ಷಿತವಾಗಿ ಪಾರಾಗಿದ್ದು ಶ್ರೀಗುರುಗಳ ಅನುಗ್ರಹದಿಂದ. ಶ್ರೀಗುರುಗಳ ಮಂತ್ರಾಕ್ಷತೆಯ ಬಲದಿಂದಲೇ ಬದುಕಿನ ಸರ್ವತ್ರ ರಂಗಗಳಲ್ಲೂ ವಿಜಯ ಲಭಿಸುತ್ತದೆ ಎಂಬ ಅಚಲವಾದ ಭರವಸೆ ನಮಗಿದೆ” ಎಂದು ಸುಮನಾ ಅವರು ಭಕ್ತಿಪೂರ್ವಕವಾಗಿ ನುಡಿಯುತ್ತಾರೆ.

ಶ್ರೀಗುರುಗಳ ಪ್ರತಿಯೊಂದು ಯೋಜನೆಗಳಿಗೂ ಸಾಧ್ಯವಾದಷ್ಟು ಮಟ್ಟಿಗೆ ಸಹಕಾರ ನೀಡುತ್ತಾ, ಗುರುಗಳ ಆಶೀರ್ವಚನಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವುದೇ ತಮ್ಮ ಬದುಕಿನ ನೆಮ್ಮದಿಗೆ ಕಾರಣ ಎನ್ನುವ ಇವರು
​ “ಇಂದಿನ ಮಕ್ಕಳಿಗೆ ಎಳವೆಯಿಂದಲೇ ಸುಸಂಸ್ಕೃತ ವಾತಾವರಣ ದೊರೆಯಬೇಕಾದರೆ, ನಾವು ಅವರನ್ನು ಶ್ರೀಮಠದ ಸಂಪರ್ಕಕ್ಕೆ ತರಬೇಕು. ಶ್ರೀಗುರುಗಳ ದಿವ್ಯ ಆಶೀರ್ವಚನಗಳನ್ನು ಮಕ್ಕಳಿಗೆ ಕೇಳಿಸಬೇಕು. ಆ ಮೂಲಕ ಮಾತ್ರ ಅವರು ಜೀವನದಲ್ಲಿ ಸದ್ಗುಣಗಳನ್ನು ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ” ಎನ್ನುತ್ತಾರೆ.
ಸುಮನಾ ಅವರ ಆಶಯದಂತೆಯೇ ಮಗನಿಗೂ ಶ್ರೀಮಠದ ನಿರಂತರ ಸಂಪರ್ಕವಿದೆ ಗೋಮಾತೆಯ ಸೇವೆಯಲ್ಲಿಯೂ ಆಸಕ್ತಿಯಿದೆ.

​ಶ್ರೀಮಠದ ಮತ್ತು ಗೋಮಾತೆಯ ಸೇವೆಯಿಂದ ತಮ್ಮ ಕುಟುಂಬಕ್ಕೆ ಶಾಂತಿ ಮತ್ತು ನೆಮ್ಮದಿ ದೊರಕಿದೆ ಎಂದು ನಂಬಿರುವ ಸುಮನಾ ಸುರೇಶ್ ಸಿಗಂದೂರು ಅವರಿಗೆ ತಮ್ಮ ಜೀವನದ ಕೊನೆಯ ತನಕವೂ ಶ್ರೀಮಠದ ನಿಷ್ಠಾವಂತ ಸೇವಕಿಯಾಗಿ ಮುಂದುವರಿಯಬೇಕು ಎಂಬ ಅಭಿಲಾಷೆಯಿದೆ. ನಮ್ಮ ಸಂಸ್ಕೃತಿಯ ಸಾತ್ತ್ವಿಕತೆ, ಹಂಚಿ ಉಣ್ಣುವ ಉದಾತ್ತ ಗುಣ ಮತ್ತು ಅನನ್ಯವಾದ ಗುರುಭಕ್ತಿಯನ್ನು ಉಸಿರಾಗಿಸಿಕೊಂಡಿರುವ ಈ ಕುಟುಂಬದ ಜೀವನ ಪಯಣವು ಧನ್ಯತೆಯ ಹಾದಿಯಲ್ಲಿ ಸಾಗುತ್ತಿದೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *