|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ತುಪ್ಪ ತಿನ್ನುವುದು ತಪ್ಪ? | ‘ಅನ್ನಂ ಬ್ರಹ್ಮ’ ಪ್ರವಚನ – 53

ಗೋಕರ್ಣ: ಬದುಕಲು ನೀರು ಬೇಕು. ಆದರೆ ಬದುಕು ಸಾರ್ಥಕವಾಗಬೇಕಾದರೆ ಗೋವಿನ ತುಪ್ಪ ಬೇಕು. ಕ್ರಿಮಿ ಕೀಟಗಳ ಎತ್ತರದಿಂದ ಮೇಲೆದ್ದು ಅರಿವಿನ ಬದುಕನ್ನು ಕಟ್ಟಿಕೊಳ್ಳಲು ಗೋವಿನ ತುಪ್ಪದ ಪಾತ್ರ ಹಿರಿದಾಗಿದೆ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.

‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಭಾದ್ರಪದ ಶುಕ್ಲ ಅಷ್ಟಮಿಯಂದು (19-09-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ತುಪ್ಪದ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ಗೋವು ಸೃಷ್ಟಿಯ ಸಾರವಾದರೆ, ಹಾಲು ಗೋವಿನ ಸಾರ. ತುಪ್ಪ ಸಾರಗಳ ಸಾರ. ದಿನ ಕಳೆದಂತೆ ಪ್ರಪಂಚದ ಎಲ್ಲಾ ವಸ್ತುಗಳ ಗುಣ ನಾಶವಾಗುತ್ತಾ ಸಾಗುತ್ತದೆ. ಆದರೆ ಅದಕ್ಕೆ ವಿರುದ್ಧವಾಗಿ ತುಪ್ಪದ ಗುಣ ದಿನ ಕಳೆದಂತೆ ಹೆಚ್ಚಾಗುತ್ತಾ ಸಾಗುತ್ತದೆ. ಆಯುರ್ವೇದದಲ್ಲಿ ನೂರು ವರ್ಷಗಳ ಹಳೆಯ ತುಪ್ಪುವನ್ನು ಮಹಾ ಔಷಧ ಎಂದು ಕರೆಯಲಾಗಿದೆ ಎಂದರು.

ದೇಶಿ ಗೋವಿನ ತುಪ್ಪ ಮಾತ್ರ ನಿಜವಾದ ತುಪ್ಪವಾಗಿದ್ದು, A2 ಅಲ್ಲದ‌ ಹಾಲಿನಿಂದ ತಯಾರಿಸಿದ ತುಪ್ಪ ನಿಜವಾದ ತುಪ್ಪವಲ್ಲ. ಸುಶ್ರುತರು ಎಲ್ಲಾ ಜೀವಿಗಳಿಗೂ ಹಿತವಾದ ಆಹಾರಗಳ ಪಟ್ಟಿಯನ್ನು ಹೇಳುವಾಗ ನೀರಿನ ಅನಂತರ ತುಪ್ಪಕ್ಕೆ ಸ್ಥಾನವನ್ನು ನೀಡಿದ್ದು, ಇದು ತುಪ್ಪಕ್ಕಿರುವ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಆದರೆ ಇಂದು ತುಪ್ಪವನ್ನು ತಿನ್ನಬೇಡಿ, ಅದು ಆರೋಗ್ಯಕ್ಕೆ ಹಾಳು ಎಂದು ಪ್ರಚುರಪಡಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಹಾರದ ದೋಷಗಳನ್ನು ಕಳೆಯುವ ಶಕ್ತಿ ತುಪ್ಪಕ್ಕಿದೆ. ಯಜ್ಞಗಳ ಮೂಲಕ ದೇವರಿಗೆ ಸಮರ್ಪಣೆ ಮಾಡುವಾಗ
ಎಲ್ಲಾ ದ್ರವ್ಯಗಳಿಗೂ ತುಪ್ಪದ ಸಂಸರ್ಗ ಅತ್ಯಗತ್ಯ. ತುಪ್ಪವನ್ನು ಔಷಧದ ಜೊತೆ ಸೇರಿಸಿದಾಗಲೂ, ಔಷಧದ ಗುಣವನ್ನು ಹೊತ್ತು ತರುವ ಜೊತೆಗೆ ತನ್ನ ಗುಣವನ್ನು ಉಳಿಸಿಕೊಳ್ಳುವ ವಿಶೇಷ ಸಾಮರ್ಥ್ಯ ತುಪ್ಪಕ್ಕಿದೆ ಎಂದು ವಿವರಿಸಿದರು.

ತುಪ್ಪದಿಂದಲೇ ಆಹಾರ ಸೇವನೆಯ ಆರಂಭವಾಗಬೇಕು ಎಂಬುದು ಆಯುರ್ವೇದದ ಅಭಿಮತವಾಗಿದ್ದು, ಇಂದು ಉಪ್ಪಿನಕಾಯಿಯಿಂದ ಊಟವನ್ನು ಆರಂಭಿಸುತ್ತಾರೆ. ಹಾಗಾದಲ್ಲಿ ಊಟದ ವ್ಯವಸ್ಥೆಯೇ ಬುಡಮೇಲಾದಂತೆ ಎಂದು ಎಚ್ಚರಿಸಿದರು.

**

ಪ್ರವಚನ ಬಿಂದುಗಳು:

*ಯಜ್ಞದ ಅಂತ್ಯದಲ್ಲಿ ಮಳೆ ಬಂದರೆ ಶುಭ ಎಂದರ್ಥ

*ಹುಣ್ಣಿಮೆ ರಾತ್ರಿಯ ಚಂದ್ರನ ಕಿರಣಗಳು ಬಿದ್ದ ನೀರು ಸೇವನೆಗೆ ಉತ್ತಮ.

*ಬದುಕಲು ಬೇಕು ‘ಜಲ’, ಬದುಕು ಸಾರ್ಥಕವಾಗಲು ಬೇಕು ‘ಘೃತ’

*ಧರ್ಮಶಾಸ್ತ್ರದ ಪ್ರಕಾರ ತುಪ್ಪವಿಲ್ಲದೆ ಊಟವನ್ನೇ ಮಾಡಬಾರದು, ತುಪ್ಪ ಅನಿವಾರ್ಯ ಮತ್ತು ಅತ್ಯವಶ್ಯ.

*ಬೆಳಿಗ್ಗೆ ಎದ್ದು ತುಪ್ಪದಲ್ಲಿ ಮುಖವನ್ನು ನೋಡಿಕೊಂಡರೆ ಬದುಕು ಮಂಗಲವಾಗುತ್ತದೆ ಮತ್ತು ದೀರ್ಘವಾಗುತ್ತದೆ.

*ಗೋವು ಸೃಷ್ಟಿಯ ಸಾರ, ಕ್ಷೀರ ಗೋವಿನ ಸಾರ
ಕೆನೆಮೊಸರು-ಬೆಣ್ಣೆಗಳು ಗೋಕ್ಷೀರಸಾರ
ಸಾರಗಳ ಸಾರ ಘೃತವಾ ಮಂಗಲದ್ರವದಿ
ಪ್ರತಿಫಲಿಸಿ ನೀನಪ್ಪೆ ಮಂಗಲಾಕಾರ

ಶುದ್ಧ ತುಪ್ಪದಿ ಮುಖವ ನೋಡಿಕೊಳೊ ನೀನೆದ್ದು
ಚಿರಜೀವನಕೆ ನೋಡು ಸರಳ ಮಾರ್ಗವಿದು
ನಿನ್ನ ಮುಖ ನಿನಗೆ ಶುಭ, ಸರ್ವ-ಮಂಗಲವಾಜ್ಯ
ಉಭಯಶುಭ ಸೇರೆ ದಿನ ಪರಮ ಶುಭವಹುದು
-ಶ್ರೀಕಾವ್ಯ

*ಗೋವು ಕೊಡುವುದೆಲ್ಲವೂ ಪರಮ ಶುಭ, ಗೋವಿನ ತ್ಯಾಜ್ಯವೂ ಕೂಡಾ ನಮಗೆ ಪೂಜ್ಯವಾಗುತ್ತದೆ.

*ಜಗತ್ತಿನ ಎಲ್ಲಾ ಸಂಗತಿಗಳು ಸಮಯ ಕಳೆದಂತೆ ಕ್ಷೀಣವಾಗುತ್ತದೆ, ಆದರೆ ಗೋಘೃತ ಮಾತ್ರ ಸಮಯ ಕಳೆದಂತೆ ಗುಣವೃದ್ಧಿಯನ್ನು ಹೊಂದುತ್ತದೆ.

**

ಭಾರತ ಮಂಡಲದ ಚೆನೈ, ಹುಬ್ಬಳ್ಳಿ – ಧಾರವಾಡ, ಹಾವೇರಿ, ಯಲ್ಲಾಪುರ, ಚಿಕ್ಕಮಗಳೂರು, ಹಾಸನ ಹಾಗೂ‌ ಕೇರಳ ವಲಯದ ಪರವಾಗಿ ಗಜಾನನ ಭಾಗ್ವತ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಕೃಷ್ಣ ಕಳಂಜಿ ಹಾವೇರಿ, ಆರ್. ಜಿ ಭಟ್, ಡಾ. ಶಾರದಾ ಜಯಗೋವಿಂದ, ದಿನಪ್ರಧಾನರಾಗಿ ದತ್ತರಾಜ್ ಮಂಚಾಲೆ ದಂಪತಿಗಳು ಉಪಸ್ಥಿತರಿದ್ದರು.