|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಬಾಯಾರಿದವರಿಗೆ ನೀರು ನೀಡುವುದು ಶ್ರೇಷ್ಠ ಯಜ್ಞ | ‘ಅನ್ನಂ ಬ್ರಹ್ಮ’ ಪ್ರವಚನ – 52

ಅಶೋಕೆ: ಮಾನವನ ದೈನಂದಿನ ಜೀವನದಲ್ಲಿ ನೀರು ಕೇವಲ ದಾಹ ತಣಿಸುವ ದ್ರವವಲ್ಲ. ಅದು ಶರೀರದ ಆರೋಗ್ಯವನ್ನು ಕಾಯ್ದುಕೊಳ್ಳುವ ದಿವ್ಯ ಔಷಧ ಹಾಗೂ ಪರಮ ಧರ್ಮ ಸಾಧನ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.

‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಭಾದ್ರಪದ ಶುಕ್ಲ ಸಪ್ತಮಿಯಂದು (18-09-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ಯಜ್ಞ – ತಪಸ್ಸು – ವ್ರತಗಳನ್ನು ಮಾಡದೇ ಇದ್ದರೂ ಬಾಯಾರಿದವರಿಗೆ ನೀರನ್ನು ದಾನ ಮಾಡಿದವನು ಸ್ವರ್ಗವನ್ನು ಪಡೆಯುತ್ತಾನೆ. ಬಾಯಾರಿದವರಿಗೆ ನೀರು ನೀಡುವುದು ಮತ್ತೊಬ್ಬರ ಜಠರಾಗ್ನಿಗೆ ಜಲವನ್ನು ಆಹುತಿಯಾಗಿ ನೀಡುವ ಯಜ್ಞದಂತೆ. ಬೇಸಿಗೆಯಲ್ಲಿ ದಾರಿಹೋಕರಿಗೆ ನೀರನ್ನು ಒದಗಿಸುವುದು, ಬಾವಿ ಹಾಗೂ ಕೆರೆಗಳನ್ನು ನಿರ್ಮಿಸುವುದು ಶ್ರೇಷ್ಠ ಕಾರ್ಯ ಎಂದು ಧರ್ಮಶಾಸ್ತ್ರಗಳ ಶಾಸನವನ್ನು ಉಪದೇಶಿಸಿದರು.

ಜೀವನದಲ್ಲಿ ದೊರೆಯುವ ಅಪರೂಪದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಶ್ರೀಸಂಸ್ಥಾನದವರು, ಸ್ವಾತಿ ನಕ್ಷತ್ರದ ಮಳೆಯ ನೀರಿನ ಕುರಿತಾಗಿ ವಿವರಿಸುತ್ತಾ, ಇದು ಜೀರ್ಣಕ್ಕೆ ಲಘು, ದೇಹಕ್ಕೆ ಪಥ್ಯಕರ ಹಾಗೂ  ದೀರ್ಘಕಾಲದವರೆಗೆ ಕೆಡದಂತೆ ಉಳಿಯುವ ದಿವ್ಯಗುಣವನ್ನು ಸ್ವಾತಿ ಮಳೆ ನೀರು ಹೊಂದಿರುತ್ತದೆ. ವರ್ಷಗಳ ಕಾಲ ಇದನ್ನು ಸಂಗ್ರಹಿಸಿದರೂ ಈ ನೀರಿನಲ್ಲಿ ಸೂಕ್ಷಣು ಜೀವಿಗಳು ಉತ್ಪತ್ತಿಯಾಗುವುದಿಲ್ಲ ಎಂದು ಆಧುನಿಕ ವಿಜ್ಞಾನವೂ ಒಪ್ಪಿದೆ ಎಂದರು.

ಗಂಗಾ ನದಿಯ ನೀರಿನ ಸಂಸರ್ಗದಿಂದ ಪಾಪ ಪರಿಹಾರದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಶ್ರೀಸಂಸ್ಥಾನದವರು,

ಪಶ್ಚಾತ್ತಾಪ ಇರುವವನಿಗೆ ಮಾತ್ರ ಪ್ರಾಯಶ್ಚಿತ್ತ ಮಾಡುವ ಅಧಿಕಾರ ಇರುವುದಾಗಿದೆ. ಮಾಡಿದ ತಪ್ಪನ್ನು ಅರಿತು ಪುನಃ ತಪ್ಪನ್ನು ಮಾಡದಿರುವ ದೃಢಸಂಕಲ್ಪವೇ ಪ್ರಾಯಶ್ಚಿತ್ತವಾಗಿದ್ದು, ಆ ಮನಸ್ಸಿನಿಂದ ಮಾಡಿದ ಗಂಗಾ ಸ್ನಾನದಿಂದ ಮಾತ್ರ ಪಾಪ ಪರಿಹಾರವಾಗುತ್ತದೆ ಎಂದು ಉತ್ತರಿಸಿದರು.

**

*ಪ್ರವಚನ ಬಿಂದುಗಳು*

*ಕಲ್ಲು ಸಕ್ಕರೆ ಬೆರೆತ ನೀರು ದೇಹದ ಮೂರೂ ದೋಷಗಳನ್ನು ಸರಿಯಾಗಿಸುತ್ತದೆ

*ಅನ್ನದಾನ, ಜಲದಾನ ಮತ್ತು ಕಾಯಿಲೆ ಗುಣಪಡಿಸುವ ವೈದ್ಯವೃತ್ತಿ – ಈ ಮೂರು ಪುಣ್ಯದ ಕೆಲಸ ಮನುಷ್ಯನನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತದೆ

*ಪಾಪ ಪರಿಹಾರಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವಾಗ ಪಶ್ಚಾತ್ತಾಪ ಅತ್ಯಗತ್ಯ

*ವೈದ್ಯ ಮತ್ತು ಔಷಧಿ ಮೇಲೆ ನಮ್ಮ ನಂಬಿಕೆ ಹೇಗಿದೆಯೋ ಹಾಗೆ ನಮಗೆ ಪರಿಣಾಮ ಉಂಟಾಗುತ್ತದೆ

*ಸ್ವಾತಿ ಮಳೆಯ ನೀರು ಉಪಯೋಗಿಸಲು ಬಹಳ ಉತ್ಕೃಷ್ಟ

*ತಾಮ್ರ ಪಾತ್ರೆಗಳ ಒಳಗೆ ಹಾಕುವ ಶುದ್ಧವಾದ ಕಲಾಯಿ (ತವರ) ನಮ್ಮ ಬುದ್ಧಿಶಕ್ತಿ ಮತ್ತು ದೇಹಬಲವನ್ನು ಹೆಚ್ಚಿಸುತ್ತದೆ

***

ಆನಂದ ಭಟ್ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ದಿನಪ್ರಧಾನರಾಗಿ ರಾಮಚಂದ್ರರಾವ್ ಗಾಂಜಾಳ ದಂಪತಿಗಳು ಉಪಸ್ಥಿತರಿದ್ದರು.

*ಮಡಿವಾಳ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:* ಶ್ರೀರಾಮಚಂದ್ರಾಪುರ ಮಠಕ್ಕೆ ತಲೆತಲಾಂತರದಿಂದ ನಡೆದುಕೊಳ್ಳುವ ಮಡಿವಾಳ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಪಾದುಕಾ ಪೂಜೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಮಡಿವಾಳ ಸಮಾಜವು ಸಂಘಟಿತವಾಗುವ ಮೂಲಕ ಹೆಚ್ಚಿನ ಒಳಿತನ್ನು ಪಡೆಯುವಂತಾಗಲಿ. ಸಮಾಜದ ಜೊತೆಗೆ ಗುರುಪೀಠ ಸದಾ ಇರಲಿದ್ದು, ಸಮಾಜದ ಕಷ್ಟ – ನಷ್ಟಗಳು ದೂರವಾಗಲಿ ಎಂದು ಆಶೀರ್ವದಿಸಿದರು. ಮಂಜುನಾಥ ಮಡಿವಾಳ, ಸದಾನಂದ ಮಡಿವಾಳ, ಮಂಜುನಾಥ ಬಿಳಗಿ, ರಮಾನಂದ ಮಡಿವಾಳ ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.