ನಮ್ಮ ಮನೆ ಹವ್ಯಕಭವನ

ನಮ್ಮ ಮಠ

 

(ಶ್ರೀಸಂಸ್ಥಾನದವರ ಅನುಗ್ರಹದಿಂದ ಕಾರ್ಯನಿರ್ವಹಿಸುತ್ತಿರುವ ಗುರುವಾಯನಕೆರೆಯ ‘ನಮ್ಮ ಮನೆ’ ಅಂಗಸಂಸ್ಥೆಯಲ್ಲಿ ಬರುವ ಮಾರ್ಚ್ ೪ ರಂದು ಶ್ರೀಮಠದ ೩೪ನೇ ಪೀಠಾಧಿಪತಿಗಳಾದ ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ ನಡೆಯಲಿದೆ. ತನ್ನಿಮಿತ್ತ ‘ನಮ್ಮ ಮನೆ’ಯ ಪರಿಚಯ.)

 

 

ಮಂಗಳೂರು ಹೋಬಳಿಯು (ಪ್ರಾಂತ್ಯ) ಗೋಕರ್ಣ ಮಹಾಮಂಡಲದ ಮೂರು ಹೋಬಳಿಗಳಲ್ಲಿ ಒಂದು. ಈಗಿನ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈ ಹೋಬಳಿಯು ಹಬ್ಬಿದೆ. ಇದರಲ್ಲಿ ಉಪ್ಪಿನಂಗಡಿ, ಮಂಗಳೂರು ಮತ್ತು ಮುಳ್ಳೇರಿಯ ಮಂಡಲಗಳು ಇವೆ. ಹಳೆಯ ಸೀಮೆಗಳಾದ ಕುಂಬಳೆ, ಪಂಜ, ಕೋಳ್ಯೂರು, ಪುತ್ತೂರು, ವಿಟ್ಲ ಸೀಮೆಗಳೊಂದಿಗೆ ಹೊಸದಾಗಿ ರಚಿತವಾದ ಕಾಂಚನ, ಈಶ್ವರಮಂಗಲ ಮತ್ತು ಬೆಳ್ತಂಗಡಿ ಸೀಮೆಗಳು ಈ ಹೋಬಳಿಯಲ್ಲಿ ಇವೆ. ಪ್ರಾಂತ್ಯ/ಹೋಬಳಿ ಪರಿಷತ್ತುಗಳಿರುವ ಕಾಲದಲ್ಲಿ ಬೆಳ್ತಂಗಡಿ ಸೀಮೆಯು (ಡಿಸೆಂಬರ್ ೨೦೦೦) ಪರಮಪೂಜ್ಯ ಶ್ರೀಸಂಸ್ಥಾನದವರರಿಂದ ಘೋಷಿಸಲ್ಪಟ್ಟಿತು. ಇಡೀ ಬೆಳ್ತಂಗಡಿ ತಾಲೂಕು ಈ ಸೀಮೆಗೆ ಒಳಪಟ್ಟಿತು. ಮಂಡಲಗಳ ರಚನೆಯಾದ ಬಳಿಕ ಉಪ್ಪಿನಂಗಡಿ ಮಂಡಲದಲ್ಲಿರುವ ಈ ಸೀಮೆಯಲ್ಲಿ ಉಜಿರೆ, ಉರುವಾಲು ಮತ್ತು ವೇಣೂರು ವಲಯಗಳು ಇವೆ. ದಕ್ಷಿಣದಲ್ಲಿ ನೇತ್ರಾವತಿನದಿ, ಪಶ್ಚಿಮದಲ್ಲಿ ಹೊಸಂಗಡಿನದಿ, ಪೂರ್ವ- ಉತ್ತರಗಳಲ್ಲಿ ಪಶ್ಚಿಮಘಟ್ಟ ಮತ್ತು ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ (ಸರಿಸುಮಾರು) ಇದರ ಗಡಿಗಳು.

 

ಹೋಬಳಿಯ ಉದ್ದಗಲಗಳಿಂದ ಬಂದ ಹವ್ಯಕರೇ ಇಲ್ಲಿ ಹೆಚ್ಚು. ಇವರೊಂದಿಗೆ ಗೋಕರ್ಣ ಮಹಾಮಂಡಲದ ಎಲ್ಲಾ ಹೋಬಳಿಗಳಿಂದ ಬಂದವರೂ ಇಲ್ಲಿ ಕೃಷಿ-ಕೃಷಿಯೇತರ ವೃತ್ತಿಗಳನ್ನು ಅವಲಂಬಿಸಿ ವಾಸಿಸುತ್ತಿರುವರು. ಶತಮಾನಗಳ ಇತಿಹಾಸವುಳ್ಳ ಉಳಿದ ಸೀಮೆಗಳಲ್ಲಿ ಅದರದ್ದೇ ಆದ ಸಾಂಸ್ಕೃತಿಕ – ಸಾಂಪ್ರದಾಯಿಕ ವಿಶೇಷತೆಗಳಿದ್ದರೆ ದಶಕಗಳ ಇತಿಹಾಸವನ್ನು ಹೊಂದಿರುವ ಬೆಳ್ತಂಗಡಿ ಸೀಮೆಯು ತನ್ನದೇ ಆದ ವರ್ತಮಾನವನ್ನು ಹೊಂದಿರುವುದು ವಿಶೇಷವಾದುದಾಗಿದೆ. ಇದರಲ್ಲಿ ‘ಬೆಳ್ತಂಗಡಿ ಹವ್ಯಕಸೀಮಾ ಪರಿಷತ್’ ಮತ್ತು ‘ನಮ್ಮ ಮನೆ ಹವ್ಯಕಭವನ’ ವರ್ತಮಾನದ ಸಾಧನೆ- ಕೊಡುಗೆಗಳಾಗಿವೆ.

 

‘ನಮ್ಮ ಮನೆ’- ನಮ್ಮ ಪಾಲಿಗೆ ಇದೊಂದು ಅದ್ಭುತಸೃಷ್ಟಿ! ಇದರ ಹಿಂದೊಂದು ಅತ್ಯುತ್ತಮ ಕಾರ್ಯಪಡೆಯ ಒಗ್ಗಟ್ಟಿನ ಪರಿಶ್ರಮವಿದೆ. ಶ್ರಮದಾನದ ಮೂಲಕ, ಆರ್ಥಿಕಸಂಪನ್ಮೂಲಗಳ ಕ್ರೋಡೀಕರಣದ ಮೂಲಕ, ಎಲ್ಲಾ ಗ್ರಾಮಗಳ ಹವ್ಯಕಬಾಂಧವರ ಮನೆ-ಮನೆ ಸಂಪರ್ಕದ ಮೂಲಕ – ನಿಜಾರ್ಥದಲ್ಲಿ ‘ತನು-ಮನ-ಧನ’ಗಳ ಸಹಕಾರಗಳೊಂದಿಗೆ ಒಟ್ಟಾಗಿ ದುಡಿದುದರ ಪೂರ್ಣಫಲವೇ ಈ ಹೋಬಳಿಯ ಮೊತ್ತಮೊದಲ ಹವ್ಯಕಭವನ-ನಮ್ಮಮನೆ. ಎಲ್ಲರ ಸೇರಿಸುವಿಕೆಯಿಂದ ಇದು ಶ್ರೀಸಂಸ್ಥಾನದವರ ಆಶಯದಂತೆ ನಮ್ಮೆಲ್ಲರ ‘ನಮ್ಮ ಮನೆ’ಯಾಗಿದೆ. ಹಿಂದೂಸಮಾಜದ ಎಲ್ಲರ ಪಾಲಿಗೂ ಇದು ನಮ್ಮಮನೆ- ನಮ್ಮೆಲ್ಲರ ಮನೆಯಾಗಿ ಉಳಿದು ಬೆಳೆದು ಬಂದಿದೆ. ‘ನಮ್ಮ ಮನೆ’- ಇದು ಶ್ರೀಸಂಸ್ಥಾದವರು ಪ್ರೀತಿಯಿಂದ ಕರೆದ ಹೆಸರು.

 

ಬೆಳ್ತಂಗಡಿ ತಾಲೂಕು ಹವ್ಯಕ ಮಹಾಸಭಾ (ರಿ) ಮತ್ತು ಹವ್ಯಕ ಸೀಮಾ ಪ್ರತಿನಿಧಿ ಪರಿಷತ್ತಿನ ಸರ್ವಸದಸ್ಯರು ಸೇರಿ ನಿರ್ಮಿಸಿದ ನಮ್ಮಮನೆಗೆ ೨೯-೧೨-೧೯೯೦ರಂದು ಈಗ ಇರುವ ಸ್ಥಳವನ್ನು ಖರೀದಿಸಲಾಯಿತು. ೧೦-೫-೧೯೯೯ರಂದು ಬೆಳ್ತಂಗಡಿ ಸೀಮೆಗೆ ಮೊತ್ತ ಮೊದಲ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಸಂಸ್ಥಾದವರು ಈ ನಿವೇಶನಕ್ಕೆ ಚಿತ್ತೈಸಿ ಗಂಗೆಯ ತಾಣವನ್ನು ಗುರುತಿಸಿ ಯಥೇಚ್ಛವಾಗಿ ನೀರು ದೊರಕುವಂತೆ ಅನುಗ್ರಹಿಸಿದರು. ಸುಮಾರು ಇಪ್ಪತ್ತೈದು ವರ್ಷಗಳ ಕಾಲ ನಮಗೆ ಮಾತ್ರವಲ್ಲದೆ ನೆರೆಕರೆಯ ಅನೇಕ ಕುಟುಂಬಗಳಿಗೆ ಇದು ನೀರಿನ ಆಸರೆಯಾಯಿತು. ಇತ್ತೀಚೆಗೆ ಶ್ರೀಸಂಸ್ಥಾದವರ ಆಶೀರ್ವಾದ-ಮಂತ್ರಾಕ್ಷತೆಗಳ ಬಲದಿಂದ ಮತ್ತೊಂದು ಸಮೃದ್ಧ ನೀರಿನ ತಾಣವನ್ನು ಗುರುತಿಸಿ ಬೇಕಾದಷ್ಟು ನೀರನ್ನು ಪಡೆಯುವಂತಾದುದು. ‘ನಮ್ಮ ಮನೆ’ ಸಂಸ್ಥೆಯ ಮೇಲಿನ ಅವರ ವಾತ್ಸಲ್ಯಕ್ಕೆ ಸಾಕ್ಷಿಯಾಯಿತು.

 

೧೮-೩-೨೦೦೧ ರಂದು ಶ್ರೀಸಂಸ್ಥಾನದವರು ಹವ್ಯಕಭವನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಒಂದು ವರ್ಷದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಇದು ‘ನಮ್ಮ ಮನೆ- ಹವ್ಯಕಭವನ’ವಾಗಲಿ ಎಂದು ಹರಸಿದರು.

೩೦-೫-೨೦೦೧ರಂದು ಶ್ರಮದಾನ ಮಾಡುವ ಮೂಲಕ ಕಾಮಗಾರಿಯನ್ನು ವಿಧ್ಯುಕ್ತವಾಗಿ ಆರಂಭಿಸಲಾಯಿತು.

೧೩-೬-೨೦೦೨ರಂದು ‘ನಮ್ಮ ಮನೆ’ಯನ್ನು ಶ್ರೀಸಂಸ್ಥಾನದವರು ಲೋಕಾರ್ಪಣೆಗೈದರು.

 

ಅಂದಿನ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ೮೧ ಗ್ರಾಮಗಳಲ್ಲಿ ಹವ್ಯಕರ ಮನೆ ಸುಮಾರು ೬೦೦. ಜನಸಂಖ್ಯೆ ಸುಮಾರು ೩೦೦೦. ಇಂದಿಲ್ಲಿ ೭೬೬ ಹವ್ಯಕರ ಮನೆಗಳಿವೆ. ಕೃಷಿಯೊಂದಿಗೆ ಕಟ್ಟಡ ನಿರ್ಮಾಣ, ವಿದ್ಯುದೀಕರಣ, ವ್ಯಾಪಾರ – ವ್ಯವಹಾರಗಳಲ್ಲಿ ನಮ್ಮವರು ಎದ್ದು ಕಾಣುತ್ತಿರುವುದು ಅಭಿಮಾನದ ವಿಚಾರವಾಗಿದೆ. ತಾಲೂಕಿನ ಹಲವು ಸಾರ್ವಜನಿಕ ಸೇವಾ ಸಂಘ- ಸಂಸ್ಥೆಗಳಲ್ಲಿ ನಮ್ಮವರು ಮುಂಚೂಣಿಯಲ್ಲಿ ನಿಂತು ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ.

 

ಮಂಗಳೂರು ಹೋಬಳಿಯಲ್ಲಿ ಮೊದಲನೆಯದಾದ ಹವ್ಯಕಭವನದ ನಿರ್ಮಾಣದಲ್ಲಿ ದೈಹಿಕ ಕೆಲಸಗಳು ಶ್ರಮದಾನದ ಮೂಲಕವೇ ನಡೆದದ್ದು ನಮ್ಮೆಲ್ಲರ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಸಂಘಟನೆಗಾಗಿರುವ ತುಡಿತ, ಶ್ರೀಸಂಸ್ಥಾನದವರ ಅನುಗ್ರಹ-ಮಾರ್ಗದರ್ಶನಗಳು ಇದರ ಜೀವಾಳವಾಗಿದೆ. ಹಿರಿಯ ಪೀಳಿಗೆಯೊಂದರ ಸೇವೆಯ ಬಳಿಕ ಹೊಸ ಪೀಳಿಗೆಯ ಕೈಗೆ ನಮ್ಮಮನೆಯೂ ಸೇರಿದಂತೆ ಶ್ರೀಮಠದ ಎಲ್ಲಾ ಸೇವಾ ಚಟುವಟಿಕೆಗಳು ಹಸ್ತಾಂತರಿಸಲ್ಪಟ್ಟದ್ದು ಭವ್ಯಭವಿಷ್ಯದ ಸೂಚನೆಯಾಗಿದೆ. ಹಿರಿಯರು ಸುಮ್ಮನೆ ಇರದೆ ಸೂಕ್ತ ಮಾರ್ಗದರ್ಶನ – ಸಹಕಾರಗಳನ್ನು ನೀಡುತ್ತಿರುವುದು ನಮ್ಮಮನೆಮಂದಿಯಲ್ಲಿ ಭದ್ರತೆಯ ಭಾವವನ್ನು ತುಂಬಿದೆ. ‘ಹೊಸಚಿಗುರು – ಹಳೆಬೇರು’ ಇಲ್ಲಿ ಸಾಕಾರಗೊಂಡಿರುವುದನ್ನು ಕಾಣಬಹುದು.

ನಮ್ಮಮನೆ ಒಂದು ಸಮಾಜಕ್ಕೆ ಸೀಮಿತವಲ್ಲ. ಸಮಾಜದ ಎಲ್ಲ ವರ್ಗದವರಿಗೂ ಇಲ್ಲಿ ಮುಕ್ತ ಪ್ರವೇಶವಿದೆ. ರಾಜರಾಜೇಶ್ವರಿ ಅಮ್ಮನ ದಿವ್ಯಸಾನ್ನಿಧ್ಯದಲ್ಲಿ ಪ್ರತಿದಿನ ಮೂರು ಹೊತ್ತು ಪೂಜೆ ನಡೆಯುತ್ತದೆ. ಪ್ರತಿ ಶುಕ್ರವಾರ ರಾಜರಾಜೇಶ್ವರಿ ಭಜನಾ ಮಂಡಳಿಯವರು ಭಜನೆಯನ್ನು ನಡೆಸುತ್ತಾ ಬಂದಿದ್ದಾರೆ. ತಿಂಗಳ ಮೊದಲ ಶುಕ್ರವಾರದಂದು ನಮ್ಮ ಹೆಂಗಳೆಯರು ಕುಂಕುಮಾರ್ಚನೆಯ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ನವರಾತ್ರಿಯ ದಿನಗಳಂದು ಹತ್ತು ದಿನಗಳ ಕಾಲ ಇಲ್ಲಿ ನಮ್ಮ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹೊಸ ಅಕ್ಕಿಯೂಟ, ಮನೆತುಂಬುವ ಕಾರ್ಯಕ್ರಮಗಳು ಇದೇ ಸಂದರ್ಭದಲ್ಲಿ ನಡೆಯುತ್ತವೆ.

 

ವಿಶ್ವ ಹಿಂದೂ ಪರಿಷತ್ತಿನ ವರಿಷ್ಠ ನೇತಾರರಾಗಿದ್ದ ಅಶೋಕ ಸಿಂಘಲ್ ರಂತಹವರೂ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಈ ಸಂಸ್ಥೆಯ ಹಿರಿಮೆಗೆ ಸಾಕ್ಷಿ. ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಮುಂತಾದ ಹಿಂದೂ ಸಮಾಜದ ಎಲ್ಲ ಸಮಾಜಮುಖಿ ಸಂಸ್ಥೆಗಳು ಇದನ್ನು ತಮ್ಮ ಸಂಸ್ಥೆಯೆಂದೇ ಭಾವಿಸಿ ಇಲ್ಲಿ ಸಭೆ- ಸಮಾರಂಭಗಳನ್ನು ನಡೆಸಿಕೊಂಡು ಬರುತ್ತಿವೆ. ಭಜನೆ- ಸಂಗೀತ -ನೃತ್ಯ- ಯೋಗಗಳ ತರಬೇತಿಗಳು ನಡೆದುಕೊಂಡು ಬಂದಿವೆ.

 

೨೦೦೦ ನೆಯ ಇಸವಿಯಲ್ಲಿ ಸುಮಾರು ಐವತ್ತೈದು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಮನೆಯು ಇದೀಗ ಒಂದಷ್ಟು ನವೀಕರಣದ ಅನಿವಾರ್ಯತೆಯನ್ನು ಹೊಂದಿದೆ. ಸರಿಸುಮಾರು ಇಪ್ಪತ್ತೈದು ವರ್ಷಗಳ ಬಳಿಕ ಒಂದಷ್ಟು ದುರಸ್ತಿ ಕಾಮಗಾರಿಗಳು ನಡೆದಿದ್ದು- ನಡೆಯುತ್ತಲಿದ್ದು ಶುಭಸಮಾರಂಭಗಳಿಗೆ ನಮ್ಮಮನೆಯು ಸಿದ್ಧವಾಗಿದೆ.

 

– ಉಂಡೆಮನೆ ವಿಶ್ವೇಶ್ವರ ಭಟ್ಟ

Leave a Reply

Your email address will not be published. Required fields are marked *