ಹವಿ ಸವಿ ತೋರಣ – ೨೩ ‘ ಪರಾಭವ’ ಸಂವತ್ಸರ ತರಲಿ ಸದಾ ವಿಜಯ

ಲೇಖನ


​ಮಾವಿನ ಬೇವಿನ ತೋರಣ ಕಟ್ಟು
ಬೇವು ಬೆಲ್ಲಗಳನು ಒಟ್ಟಿಗೆ ಕುಟ್ಟು
ಜೀವನವೆಲ್ಲಾ ಬೇವು ಬೆಲ್ಲ
ಎರಡೂ ಸವಿವವನೇ ಕಲಿ ಮಲ್ಲ..
​ ರಾಷ್ಟ್ರಕವಿ ಕುವೆಂಪು ಅವರ ಚೆಂದದ ಸಾಲುಗಳ ನೆಂಪು ಮಾಡುವ ಹಾಂಗೆ ಮತ್ತೊಂದು ಯುಗಾದಿ ಹಬ್ಬ ಸಂಭ್ರಮದೊಟ್ಟಿಂಗೆ ಬಂತೇ ಬಂತಿದಾ..!
​ಚಾಂದ್ರಮಾನ ಪದ್ಧತಿಯ ಪಂಚಾಂಗದ ಪ್ರಕಾರ ಚೈತ್ರ ಶುದ್ಧ ಪ್ರತಿಪದೆಯ ನಾವು ಹೊಸ ವರ್ಷ ಹೇಳಿ ಆಚರಿಸುತ್ತು. ಯುಗ ಯುಗಂಗಳ ಮೊದಲು ಬ್ರಹ್ಮದೇವರು ಸೃಷ್ಟಿ ಕಾರ್ಯ ಸುರು ಮಾಡಿದ ದಿನ ಇದು ಹೇಳಿ ಸಣ್ಣಾದಿಪ್ಪಗ ಅಜ್ಜಿ ಹೇಳಿದ ನೆಂಪು.
ಕಾಲಸ್ವರೂಪಿ ಪರಮಾತ್ಮನ ಐದು ಅಂಗಂಗಳ ವಾರ, ನಕ್ಷತ್ರ, ಯೋಗ, ಕರಣ ಹೇಳಿ ಹೇಳುದಾಡ. ಹೊಸ ಸಂವತ್ಸರದ ಸುರುವಾಣ ದಿನ ಪಂಚಾಂಗ ಶ್ರವಣ ಮಾಡಿರೆ ನಮ್ಮ ಸಕಲ ದೋಷoಗಳೂ ನೀಗಿ ಆಯುರಾರೋಗ್ಯ, ಐಶ್ವರ್ಯಾದಿ ಒಳ್ಳೆಯ ಫಲಂಗೊ ಸಿಕ್ಕುತ್ತು ಹೇಳುದು ನಮ್ಮ ನಂಬಿಕೆ.
ಮನೆಯ ಯಜಮಾನ ಉದಿಯಪ್ಪಗ ಮಿಂದಿಕ್ಕಿ ಬಂದು, ಸಂಧ್ಯಾವಂದನೆ ಮುಗುಶಿಕ್ಕಿ ಹೆರಬಂದು ಕೂದು ಪಂಚಾಂಗ ಓದುವ ಕ್ರಮ ಯುಗಾದಿ ದಿನದ ವಿಶೇಶ. ಮನೆಯವು ಎಲ್ಲರೂ ಅಲ್ಲೇ ಹತ್ತರೆ ಕೂದು ಅದರ ಶ್ರದ್ಧೆಲಿ ಕೇಳುಗು. ಈ ವರುಷ ಮಳೆ ಹೇoಗೆ ? ಅಡಕ್ಕೆ ಬೆಳೆ ಹೇಂಗಿಕ್ಕು, ಸಂಕ್ರಾಂತಿ ಪುರುಷ ಎಂತ ತತ್ತ° ಹೇಳುವ ಕುತೂಹಲ ಎಲ್ಲರಲ್ಲೂ ಇರ್ತು.

ಬೇಸಗೆಯ ಎಡೇಲೂ ಮನಸಿಂಗೆ ತಂಪು ಕೊಡುವ ಹಬ್ಬ ಈ ಯುಗಾದಿ. ಜೀವನಲ್ಲಿ ಬಪ್ಪ ಕಷ್ಟ- ಸುಖಂಗಳ ಸಮಾನವಾಗಿ ಸ್ವೀಕರಿಸಿoಡು, ಸಮಚಿತ್ತoದ ಜೀವನ ನಡೆಶೆಕು ಹೇಳುವ ಸಂದೇಶವನ್ನೂ ತತ್ತು ಈ ಹಬ್ಬ. ಅದಕ್ಕೆ ಬೇಕಾಗಿಯೇ ಈ ದಿನ ಬೇವು ಬೆಲ್ಲವ ಹಂಚುವ ಕ್ರಮ.
ಜೀವನ ಹೇಳಿದರೆ ಬರೀ ಹೂಗಿನ ಹಾಸಿಗೆಯೂ ಅಲ್ಲ, ಮುಳ್ಳಿನ ಮಂಚವೂ ಅಲ್ಲ. ಹೂಗು ಮುಳ್ಳುಗಳ ಹಾಂಗೆ ನಮ್ಮ ಬದ್ಕು ಕೂಡಾ ಹೇಳಿ ನಮ್ಮ ಹಿರಿಯರು ತಿಳ್ಕೊಂಡಿದವು.
ಬೇವು ಕೈಕ್ಕೆ ಆದರೂ ಅದು ನಮ್ಮ ಆರೋಗ್ಯಕ್ಕೆ ಅಮೃತದ ಹಾಂಗೆ, ಬೆಲ್ಲ ಸೀವಾಗಿ ದೇಹಕ್ಕೆ ಚೈತನ್ಯ ತುಂಬುತ್ತು. ಇವೆರಡನ್ನೂ ಒಟ್ಟಿಂಗೆ ತಿಂಬದು ಹೇಳಿರೆ ಜೀವನದ ಸವಾಲುಗಳ ಪ್ರೀತಿoದ ಎದುರಿಸುದು ಹೇಳಿಯೇ ಅರ್ಥ.

​”ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ”
​ನೂರ್ಕಾಲ ವಜ್ರದೇಹಿಗಳಾಗಿ ಬದ್ಕುಲೆ, ಸಂಪತ್ತು ಹೊಂದಿ, ಸರ್ವವಿಧವಾದ ರೋಗಂಗೊ ನಾಶ ಅಪ್ಪಲೆ ನಿಂಬಕಂದಳ (ಬೇವಿನ ಚಿಗುರು) ವನ್ನು ಸೇವಿಸೇಕು ಹೇಳಿ ನಮ್ಮ ಧರ್ಮಶಾಸ್ತ್ರ ಹೇಳುತ್ತಾಡ.
ಇಂದು ವೈದ್ಯರೂ ಹೇಳುವ ಹಾಂಗೆ ಬೆಲ್ಲಲ್ಲಿ ತುಂಬ ಕಬ್ಬಿಣಾಂಶ ಇದ್ದು , ಬೇವಿನ ಚಿಗುರು ರೋಗನಿರೋಧಕ ಶಕ್ತಿಯ ಪ್ರತೀಕ. ಇದರ ಸೇವನೆoದ ಮನೋದೈಹಿಕ ಸ್ವಾಸ್ಥ್ಯ ಹೆಚ್ಚಾವ್ತಾಡ. ನಮ್ಮ ಹಿರಿಯರು ಹಾಕಿಕೊಟ್ಟ ಈ ಸಂಪ್ರದಾಯಂಗಳ ಒಟ್ಟಿಂಗೆ ಎಷ್ಟು ಚೆಂದದ ವಿಜ್ಞಾನ ಪಾಠ ಇದ್ದು!

​ವಸಂತ ನವರಾತ್ರಿ, ವಸಂತೋತ್ಸವ, ಯುಗಾದಿ ಹೇಳಿ ಬೇರೆ ಬೇರೆ ಹೆಸರಿಂದ ಇಡೀ ಭಾರತಲ್ಲಿ ಆಚರಿಸುವ ಈ ಹಬ್ಬದ ಶುಭ ಸಂದರ್ಭಲ್ಲಿ ಹೊಸ ವಸ್ತ್ರ ಹಾಕಿ ಗುರುಹಿರಿಯರಿಗೆ ವಂದಿಸಿ, ಮನೆ ದೇವರ ಪೂಜೆ ಮಾಡಿ ಸಂಭ್ರಮ ಹಂಚಿಕೊಂಬದು ಸಂಪ್ರದಾಯ.
ಹಳ್ಳಿಂದ ಪೇಟಗೆ ಹೋದವೆಲ್ಲ ಈ ಹಬ್ಬಕ್ಕೆ ಮನೆಗೆ ಬತ್ತವು. ಊರಿನ ಮನೆಲಿ ಅಜ್ಜ ಅಜ್ಜಿಯ ಒಟ್ಟಿಂಗೆ ಮನೆಯವೆಲ್ಲ ಕೂದು ಪಾಯಸ ಉಂಬ ಸಂತೋಶವೇ ಒಂದು ಬೇರೆ.

ಯುಗಾದಿ ನಮ್ಮ ಬದ್ಕಿಂಗೆ ಹಳೇ ಬೇಜಾರ, ದುಃಖ ಎಲ್ಲವನ್ನೂ ಕಳೆದು ಹೊಸ ಸಂತೋಶ ತತ್ತು. ಈ ವರ್ಷ ಪರಾಭವ ಸಂವತ್ಸರ ಸುರುವಪ್ಪದು. ನಮ್ಮ ಜೀವನದ ಕಷ್ಟಂಗೊ ಎಲ್ಲ ಪರಾಭವ ಆಗಿ ಎಲ್ಲೋರಿಂಗು ಒಳ್ಳೆದಾಯೆಕು, ಸದಾ ವಿಜಯ ಸಿಕ್ಕುವ ಹಾಂಗಾಯೆಕು, ಬೇವಿನ ಕೈಕ್ಕೆ ಹೋಗಿ ಬೆಲ್ಲದ ಸೀವು ಜೀವನಲ್ಲಿ ಒಳಿಯೇಕು. ಶಾಂತಿ, ನೆಮ್ಮದಿ, ಸಂತೃಪ್ತಿ ಎಲ್ಲೋರ ಬದುಕನ್ನೂ ಹಸನುಗೊಳಿಸಿ ಎಲ್ಲರ ಜೀವನಲ್ಲೂ ಸನ್ಮಂಗಲಂಗೊ ಮಾಂತ್ರ ಉಳಿವ ಹಾಂಗೆಯೆಕೂಳಿ ಪ್ರಾರ್ಥಿಸುವ°
ಪರಾಭವ ನಾಮ ಸಂವತ್ಸರ ಜೀವನದ ಎಲ್ಲ ಪರಾಜಯಗಳನ್ನು ಗೆದ್ದು ಸದಾ ಜಯವನ್ನೇ ತರಲಿ ಹೇಳಿ ನಮ್ಮೆಲ್ಲೋರ ಪ್ರಾರ್ಥನೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *