” ಜೀವನವೆಂಬ ಸುಖ – ದುಃಖಗಳ ಅವಿರತ ಪಯಣದಲ್ಲಿ ಶ್ರಿಗುರುಚರಣಗಳನ್ನು ಅಚಲವಾಗಿ ನಂಬಿದವರು ಶ್ರೀಗುರುಕೃಪೆಯ ಪ್ರತ್ಯಕ್ಷ ಅನುಭವವನ್ನು ಪಡೆಯುತ್ತಾರೆ ಎಂಬುದಕ್ಕೆ ನಾವೇ ಸಾಕ್ಷಿ ” ಎನ್ನುತ್ತಾರೆ ಬೆಂಗಳೂರು ದಕ್ಷಿಣ ಮಂಡಲ ಗಿರಿನಗರ ವಲಯದಲ್ಲಿ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿರುವ ವಿಘ್ನೇಶ್ ಬಳ್ಳಮಜಲು ಅವರ ಪತ್ನಿ ಸೀತಾರತ್ನ.
ಕನ್ಯಾನ ಪಿಲಿಂಗುಳಿ ಮೂಲದ ಪೆರಾಜೆ ಗಂಗಾರಾಮ ನಿವಾಸದ ಗಣನಾಥ ಭಟ್ ಮತ್ತು ಸರಸ್ವತಿ ಜಿ. ಭಟ್ ಅವರ ಸುಪುತ್ರಿಯಾಗಿ ಜನಿಸಿದ ಇವರು, ದಕ್ಷಿಣ ಕನ್ನಡ ಮೂಲದ ವಿಘ್ನೇಶ್ ಬಳ್ಳಮಜಲು ಅವರನ್ನು ವಿವಾಹವಾಗಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಇವರಿಗೆ ದೊರಕಿದೆ. ದೊಡ್ಡ ಗುರುಗಳ ಕಾಲದಿಂದಲೇ ಇವರ ತವರುಮನೆಯವರಿಗೆ ಶ್ರೀಮಠದ ಸಂಪರ್ಕವಿದ್ದು, ಇವರ ಅಜ್ಜ ಗುರಿಕ್ಕಾರರಾಗಿ ಸೇವೆ ಮಾಡುತ್ತಿದ್ದವರು.
ಶ್ರೀಗುರುಚರಣಗಳನ್ನು ದೃಢವಾಗಿ ನಂಬಿದವರಿಗೆ ಗುರುಕೃಪೆಯು ಪ್ರತಿ ಹಂತದಲ್ಲಿಯೂ ಯಾವ ರೀತಿ ರಕ್ಷಾಕವಚವಾಗಿ ನಿಲ್ಲುತ್ತದೆ ಎಂಬುದು ಇವರ ಜೀವನದಲ್ಲಿ ಅನುಭವಕ್ಕೆ ಬಂದ ಸತ್ಯ.
ಸೀತಾರತ್ನ ಅವರ ಬದುಕಿನಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ. ಅವರ ಮಗಳು
ಚಿಕ್ಕಂದಿನಲ್ಲಿ ಅಕಸ್ಮಾತ್ತಾಗಿ ಕರ್ಪೂರವನ್ನು ಸೇವಿಸಿ ಪರಿಸ್ಥಿತಿ ಗಂಭೀರವಾಗಿದ್ದಾಗ ಸೀತಾರತ್ನ ಅವರು ಮೊರೆ ಹೋಗಿದ್ದು ಶ್ರೀಗುರುಚರಣಗಳಿಗೆ. ಗುರುಗಳ ಕೃಪೆ ಮತ್ತು ವಿಶೇಷ ಆಶೀರ್ವಾದದಿಂದ ಮಗಳು ಅಪಾಯದಿಂದ ಪಾರಾಗಿದ್ದು ಅವರ ಜೀವನದಲ್ಲಿ ನಡೆದ ಮೊದಲ ಪವಾಡ ಸದೃಶ ಘಟನೆ
ಅದೇ ರೀತಿಯಲ್ಲಿ ‘ ವಿಘ್ನೇಶ್ ಅವರ ಚಿನ್ನದ ಉಂಗುರವು ಜನನಿಬಿಡ ರಸ್ತೆಯಲ್ಲಿ ಕಾಣೆಯಾದ ಸಂದರ್ಭದಲ್ಲಿ, ಆತಂಕದ ನಡುವೆಯೂ ಗುರುಸ್ಮರಣೆ ಮಾಡಿ ಹುಡುಕಿದಾಗ ಅದು ಅನಿರೀಕ್ಷಿತವಾಗಿ ದೊರಕಿದ್ದೂ ಪವಾಡ ‘ಎನ್ನುತ್ತಾರೆ ಅವರು.
ಕೆಲವು ವರ್ಷಗಳ ಹಿಂದೆ ಸೀತಾರತ್ನ ಅವರಿಗೆ ‘ಡೆಂಗ್ಯೂ’ ಜ್ವರ ಬಾಧಿಸಿ,ಪರಿಸ್ಥಿತಿ ಅದೆಷ್ಟು ಗಂಭೀರವಾಗಿತ್ತೆಂದರೆ, ಅವರು ತೀವ್ರನಿಗಾಘಟಕವನ್ನು ಸೇರಿದರೂ ಅನೇಕ ದಿನಗಳ ಕಾಲ ಯಾವುದೇ ಬದಲಾವಣೆ ಇಲ್ಲದೆ ಅವರ ಆರೋಗ್ಯ ಅತೀವ ವಿಷಮತೆಯಿಂದ ಕೂಡಿತ್ತು. ವೈದ್ಯಕೀಯ ದೃಷ್ಟಿಯಲ್ಲಿ ಯಾವುದೇ ಭರವಸೆಯು ವೈದ್ಯರು ನೀಡದೆ ಇರುವಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ಅವರ ಕುಟುಂಬದವರು ಶರಣಾಗಿದ್ದು ಶ್ರೀಗುರುಗಳ ಚರಣಗಳಿಗೆ.
“ಗುರುಗಳೇ ನೀವೇ ಕಾಪಾಡಬೇಕು” ಎಂದು ಅಚಲವಾಗಿ ನಂಬಿ, ಶ್ರೀಗುರುಗಳು ಅನುಗ್ರಹಿಸಿದ ಮಂತ್ರಾಕ್ಷತೆಯನ್ನು ಸೀತಾರತ್ನ ಅವರಿಗೆ ಹಾಕಿದಾಗ ನಡೆದಿದ್ದು ಅದ್ಭುತ ಪವಾಡ.
” ಮರಣದ ಅಂಚಿನಿಂದ ಮರಳಿ ಬಂದು ಇಂದು ಸಹಜ ಬದುಕನ್ನು ನಡೆಸುತ್ತಿದ್ದೇನೆ ಎಂದರೆ ಅದು ಗುರುಗಳ ಅನುಗ್ರಹವಲ್ಲದೆ ಬೇರೇನು ಅಲ್ಲ ” ಎಂಬುದು ಅವರ ದೃಢ ನಂಬಿಕೆ.
ಅಷ್ಟೇ ಅಲ್ಲದೆ, ಅವರ ಯಜಮಾನರಿಗೆ ರಕ್ತದೊತ್ತಡದ ಸಮಸ್ಯೆ ಗಂಭೀರವಾಗಿ ವೈದ್ಯರು ಕೈಚೆಲ್ಲುವಂತಹ ಪರಿಸ್ಥಿತಿ ಕಾಡಿದಾಗಲೂ, ಗುರುಗಳ ಕೃಪೆಯಿಂದಲೇ ಅವರು ಅಪಾಯದಿಂದ ಪಾರಾಗಿದ್ದಾರೆ.
ಈ ದಿವ್ಯ ಅನುಭವಗಳಿಂದ ಪ್ರೇರಿತರಾದ ಸೀತಾರತ್ನ ಅವರು, ಶ್ರೀಮಠದ ಸೇವೆ ಗೋಸೇವೆಯನ್ನು ತಮ್ಮ ಜೀವನದ ವ್ರತವನ್ನಾಗಿಸಿಕೊಂಡಿದ್ದಾರೆ.
” ಶ್ರೀ ಗುರುಗಳ ಅನುಗ್ರಹವು ಸಂಜೀವಿನಿಯಂತೆ ಕೆಲಸ ಮಾಡಿ ನಮ್ಮನ್ನು ಬದುಕಿಸಿದೆ. ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಗುರುಕೃಪೆ ನಮ್ಮ ಜೊತೆಗೆ ಇದೆ ಎಂಬುದನ್ನು ನಾವು ಅನುಭವದಿಂದ ಕಂಡುಕೊಂಡಿದ್ದೇವೆ. ಇದಕ್ಕಿಂತ ಮಿಗಿಲಾಗಿ ಬೇರೇನು ಬೇಕು ? ನಮ್ಮ ಪಾಲಿಗೆ ಗುರುಗಳು ಎಂದರೆ ಸಾಕ್ಷಾತ್ ಶ್ರೀರಾಮನೆ. ನಾನು ಶ್ರೀರಾಮ ದೇವರನ್ನು ಗುರುಗಳಲ್ಲಿ ಕಾಣುತ್ತಿದ್ದೇನೆ ” ಎಂದು ಭಾವಪೂರ್ಣವಾಗಿ ಹೇಳುತ್ತಾರೆ ಸೀತಾರತ್ನ.
ಎಳವೆಯಿಂದಲೇ ಗೋಮಾತೆಯ ಮೇಲೆ ವಿಶೇಷ ಪ್ರೀತಿ ಹೊಂದಿದ ಇವರು ಶ್ರೀಮಠದ ‘ಸಾವಿರದ ಸುರಭಿ’ ಯೋಜನೆಯ ಮೂಲಕ ಗೋಮಾತೆಯ ಸೇವೆಗೆ ಕೈಜೋಡಿಸಿ ಲಕ್ಷಭಾಗಿನಿಯಾದರು. ನಂತರ ‘ಮಾತೃತ್ವಮ್’ ಯೋಜನೆ ಆರಂಭವಾದ ಮೇಲೆ ಈ ಮೂಲಕ ಗೋಮಾತೆಯ ಸೇವೆಯನ್ನು ಮುಂದುವರಿಸಿದರು. ಈಗಾಗಲೇ ಎರಡು ಹಸುಗಳ ನಿರ್ವಹಣಾ ವೆಚ್ಚವನ್ನು ಸಂಗ್ರಹಿಸಿದ ಇವರು ಗೋಮಾತೆಯ ಸೇವೆಯನ್ನು ಈಗಲೂ ಮುಂದುವರಿಸುತ್ತಿದ್ದಾರೆ. ಗೋಮಾತೆಯ ಸೇವೆಗೆ ದೊಡ್ಡ ಮೊತ್ತವನ್ನು ಕಾಣಿಕೆಯಾಗಿ ಸಮರ್ಪಿಸಿದವರನ್ನು ಸ್ವತಃ ಅವರೇ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಹಿರಿಮೆ ಇವರದ್ದು.
“ನಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಗಳಿಸಿ, ಜೀವನ ಮೌಲ್ಯಗಳನ್ನು ರೂಢಿಸಿಕೊಂಡು ಬೆಳೆಯುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಶ್ರೀಗುರುಗಳ ಅನುಗ್ರಹವೇ ಹೊರತು ನಮ್ಮ ಪ್ರಯತ್ನವಲ್ಲ. ಶ್ರೀಗುರುಗಳು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಭಕ್ತನಿಗೆ ಯಾವ ಕೊರತೆಯೂ ಕಾಡುವುದಿಲ್ಲ ಎಂಬ ಸತ್ಯವನ್ನು ನಮ್ಮ ಬದುಕಿನ ಅನುಭವದ ಮೂಲಕ ಕಂಡುಕೊಂಡಿದ್ದೇವೆ. ಇಂದಿಗೂ ಶ್ರೀಮಠದ ಯಾವುದೇ ಸೇವೆಯಾದರೂ ಅದು ನನ್ನ ಪಾಲಿನ ಕರ್ತವ್ಯ ಎಂದು ಭಾವಿಸಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ ” ಎನ್ನುತ್ತಾರೆ ಸೀತಾರತ್ನ.
ಬದುಕೆಂಬ ಭವಸಾಗರವನ್ನು ದಾಟಿಸುವ ದೋಣಿಯಾಗಿ ಶ್ರೀಗುರುಗಳ ಕೃಪೆ ಅವರಿಗೆ ಲಭಿಸಿದೆ. ನಿರಂತರ ಗುರುಸ್ಮರಣೆ, ಅಚಲ ಶ್ರದ್ಧೆ, ಗೋಸೇವೆ ಮತ್ತು ಶರಣಾಗತಿಯೇ ಅವರ ಬದುಕಿನ ಮೂಲಮಂತ್ರ.
” ಗುರುಗಳ ಮಂತ್ರಾಕ್ಷತೆಯ ಬಲದಿಂದಾಗಿ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ನಮ್ಮ ಸೇವೆ ಏನಿದ್ದರೂ ಕೇವಲ ಅಳಿಲು ಸೇವೆಯಷ್ಟೇ. ಮಾತ್ರವಲ್ಲ ಎಲ್ಲವನ್ನು ವ ಮುನ್ನಡೆಸುವುದು ಶ್ರೀಗುರುಗಳು ಮತ್ತು ರಾಮದೇವರು. ನಾವು ಎಂಬುದು ಕೇವಲ ನಿಮಿತ್ತ ಮಾತ್ರ ” ಎನ್ನುವ ಸೀತಾರತ್ನ ಅವರಿಗೆ ಗುರುಭಕ್ತಿಯ ಹಾದಿಯಲ್ಲಿ ಸದಾ ಸೇವೆ ಮಾಡುತ್ತಾ ಮುಂದುವರಿಯುವ ಅಭಿಲಾಷೆಯಿದೆ. ಸಕಲ ಭಾಗ್ಯಗಳ ಮೂಲವಾದ ಶ್ರೀಗುರುಚರಣಗಳ ಕೃಪೆಯಿಂದ ಇನ್ನಷ್ಟು ಸೇವೆ ಮಾಡುವ ಅವಕಾಶ ಒದಗಿ ಬರಲಿ ಎಂಬುದು ಅವರ ಅಭಿಲಾಷೆ.
ಪ್ರಸನ್ನಾ ವಿ. ಚೆಕ್ಕೆಮನೆ