ಕೆಕ್ಕಾರಿನಲ್ಲಿ ‘ಬನ್ನಂಜೆ 90 ವಿಶ್ವನಮನ’

ಸುದ್ದಿ

ಹೊನ್ನಾವರ: ‘ಬನ್ನಂಜೆ ಗೋವಿಂದಾಚಾರ್ಯರ ಮಾತು ಗಂಗಾ ಪ್ರವಾಹದಂತೆ. ಅವರ ವ್ಯಕ್ತಿತ್ವ ಮತ್ತು ಚಿಂತನೆಗಳು ಕಥೆಯಾಗಿ ಉಳಿದು ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಬೇಕು’ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.

ಶ್ರೀರಾಮಚಂದ್ರಾಪುರ ಮಠದ ಕೆಕ್ಕಾರು ಶಾಖೆಯಾದ ಶ್ರೀರಘೂತ್ತಮ ಮಠದ ಶ್ರೀವಿದ್ಯಾರಣ್ಯ ಸಂಸ್ಕೃತ ಪಾಠಶಾಲಾ ಸಭಾಂಗಣದಲ್ಲಿ ಶ್ರೀರಾಮಚಂದ್ರಾಪುರ ಮಠ – ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ – ಶ್ರೀಮಠದ ಹೊನ್ನಾವರ ಮತ್ತು ಕುಮಟಾ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಬನ್ನಂಜೆ 90 ವಿಶ್ವನಮನ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಬನ್ನಂಜೆ ಅವರ ಮಾತುಗಳಿಗೆ ಆಳ ಮತ್ತು ಅಗಲ ಎರಡೂ ಇದ್ದವು. ಮಕ್ಕಳಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಅವರು ವಿಚಾರ ಮಂಡಿಸುತ್ತಿದ್ದರು. ನಾವು ಬಾಲ್ಯದಲ್ಲಿದ್ದಾಗಲೇ ಗೋಕರ್ಣದಲ್ಲಿ ಅವರ ಪ್ರವಚನಗಳನ್ನು ಕೇಳುತ್ತಿದ್ದೆವು. ಅವರ ವಾಗ್ಮಿತೆ ದೈವಕೃಪೆಯಿಂದ ಲಭಿಸಿದ್ದು, ಕೇವಲ ಮಾನವ ಪ್ರಯತ್ನದಿಂದ ಸಾಧ್ಯವಾಗುವಂಥದ್ದಲ್ಲ’ ಎಂದು ಬಣ್ಣಿಸಿದರು.

ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ| ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ ‘ಬನ್ನಂಜೆ ಗೋವಿಂದಾಚಾರ್ಯರ 90ನೇ ಜನ್ಮವರ್ಷದ ಅಂಗವಾಗಿ ರಾಜ್ಯ ಹಾಗೂ ವಿದೇಶಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬನ್ನಂಜೆ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಆಗಸ್ಟ್ 3 ರಂದು ಬಿಡುಗಡೆಯಾಗಲಿದ್ದು, ಬಹುಶ್ರುತ ವಿದ್ವಾಂಸರೊಬ್ಬರ ಕುರಿತಾಗಿ ನಿರ್ಮಾಣವಾಗುತ್ತಿರುವ ಪ್ರಥಮ ಚಿತ್ರ ಇದಾಗಿದೆ’ ಎಂದು ತಿಳಿಸಿದರು.

ಹಿರಿಯ ವಿದ್ವಾಂಸರಾದ ಜಗದೀಶಶರ್ಮಾ ಸಂಪ ಮಾತನಾಡಿ ‘ಬನ್ನಂಜೆ ಅವರು ಬಹುಶ್ರುತ ವಿದ್ವಾಂಸರು. ಅವರ ಪ್ರವಚನಗಳ ಧ್ವನಿ ಗ್ರಹಣವೇ ವಿಶೇಷ. ಒಂದೊಂದು ಪದಕ್ಕೂ ಹತ್ತಾರು ಅರ್ಥವಿಸ್ತಾರ ಅವರ ಶಕ್ತಿ ಹಾಗೂ ಅಧ್ಯಯನದ ಫಲ. ಅವರ ಸ್ಮರಣೆಯ ಕಾರ್ಯ ನಿರಂತರವಾಗಿ‌ ನಡೆಯಬೇಕು’ ಎಂದರು. ‘ಶ್ರೀಕೃಷ್ಣ ಸಂಧಾನಕ್ಕೆ ಉಪಪ್ಲಾವ್ಯದಿಂದ ಹೊರಟಾಗ ಸ್ವತಃ ಮಹರ್ಷಿಗಳೇ ಬಂದಿದ್ದರು. ಹಾಗೆ ಬಂದವರಿಗೆ ವಿಶ್ವರೂಪದರ್ಶನವಾಗಿತ್ತು. ಹಾಗೆಯೇ ಬನ್ನಂಜೆ ಪ್ರವಚನಗಳಿಗೆ ಬಂದವರಿಗೂ ವಿಶ್ವರೂಪದರ್ಶನವೇ ಆಗುತಿತ್ತು’ ಎಂದು ಬಣ್ಣಿಸಿದರು.

ವಿದ್ವಾನ್ ರಮೇಶ ವಾಸುದೇವ ಗಮಕಿ ಮಾತನಾಡಿ, ‘ಕೇವಲ ಕಲಿಕೆಯಲ್ಲ, ವಿದ್ಯೆಗೆ ಶರಣಾಗಬೇಕು ಎಂಬ ಸಂದೇಶವನ್ನು ಬನ್ನಂಜೆ ಅವರು ನೀಡುತ್ತಿದ್ದರು. ಜ್ಞಾನವನ್ನು ಸಂಪಾದಿಸಲು ಅಕ್ಷರ ಅರಿವು ಮಾತ್ರವಲ್ಲದೆ ವಿಷಯದ ಹೊಸ ಹೊಳವು ತಿಳಿಯಬೇಕು. ಮಗುವಿನ ಕುತೂಹಲದಿಂದ ಜ್ಞಾನಾರ್ಜನೆ ಮಾಡಬೇಕು. ಭಾರತದಲ್ಲಿ ಜ್ಞಾನ ಮತ್ತು ಗಾನ ಒಟ್ಟಿಗೆ ಸಾಗಬೇಕು ಎಂಬುದು ಅವರ ಚಿಂತನೆಯಾಗಿತ್ತು’ ಎಂದು ಹೇಳಿದರು.

ಶ್ರೀರಾಮಚಂದ್ರಾಪುರ ಮಠದ ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ‘ವಿಶ್ವದಾದ್ಯಂತ ಬನ್ನಂಜೆ ೯೦ ವಿಶ್ವ ನಮನ ಕಾರ್ಯಕ್ರಮ ನಡೆದಿದೆ. ಬನ್ನಂಜೆ ಅವರು ಈ ಕೆಕ್ಕಾರು ತಪೋಭೂಮಿಯಲ್ಲೂ ಪ್ರವಚನ ನೀಡಿದ್ದರು. ಶ್ರೀಸಂಸ್ಥಾನಕ್ಕೂ ಆಪ್ತರಾಗಿದ್ದರು. ಕೆಕ್ಕಾರಿನಲ್ಲೂ ಈ ಕಾರ್ಯಕ್ರಮ ನಡೆದು ಬನ್ನಂಜೆ 90 ರ ಕಾರ್ಯಕ್ರಮದ ವಿಶ್ವದ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆದಂತಾಗಿದೆ’ ಎಂದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ ಮಾತನಾಡಿ ‘ಶ್ರೀಮಠದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ’ ಎಂದರು.

ಸಂಸ್ಕೃತಿ ಚಿಂತಕಿ ವೀಣಾ ಬನ್ನಂಜೆ ಮಾತನಾಡಿ ‘ಗೋವಿಂದಾಚಾರ್ಯರ ವ್ಯಕ್ತಿತ್ವ ಹಾಗೂ ಕಾರ್ಯಕ್ಷೇತ್ರ ಅತ್ಯಂತ ವಿಸ್ತಾರವಾಗಿದ್ದು, ಅವರ ಅಭಿಮಾನಿಗಳು ಮತ್ತು ವಿವಿಧ ಸಂಘಟನೆಗಳು ಇಂತಹ ಕಾರ್ಯಕ್ರಮಗಳ ಮೂಲಕ ಅವರನ್ನು ಸ್ಮರಿಸುತ್ತಿರುವುದು ಹೆಮ್ಮೆಯ ವಿಷಯ’ ಎಂದು ಹೇಳಿದರು. ‘ಶ್ರೀಸಂಸ್ಥಾನದ‌ ಮೇಲೆ ಮಿಥ್ಯಾರೋಪ ಬಂದಾಗ ಶ್ರೀಗಳ ಪರವಾಗಿ ಜೊತೆಗೆ ನಿಂತವರು ಅಪ್ಪ ಬನ್ನಂಜೆ ಅವರು. ಅವರಿಗೆ ಯಾವುದು ಸತ್ಯ, ಯಾವುದು‌ ಮಿಥ್ಯ‌ ಎಂಬುದು ಗೊತ್ತಿತ್ತು. ಶ್ರೀಗಳ ಗೋಸೇವೆ ಸಂತರೊಬ್ಬರ ಬಹಳ ದೊಡ್ಡ ಕಾರ್ಯ ಎಂದು ಸದಾ ಮೆಚ್ಚಿಕೊಂಡಿದ್ದರು’ ಎಂದು ನುಡಿದರು.

ಹಿರಿಯ ಕಲಾವಿದ ಪ್ರೊ. ಎಸ್. ಶಂಭು ಭಟ್ಟ ಕಡತೋಕ ಹಾಗೂ ಉದ್ಯಮಿ ಸುಬ್ರಾಯ ಭಟ್ಟ ಕೋಣಾರೆ ಉಪಸ್ಥಿತರಿದ್ದರು. ಕವಿತಾ ಉಡುಪ ಹಾಗೂ ಸುಮಾ ಶಾಸ್ತ್ರಿ ಅವರಿಂದ ಬನ್ನಂಜೆ ಹಾಡುಗಬ್ಬ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ವಿಶ್ವಶಾಂತಿ ಸರಣಿಯಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ವಿರಚಿತ ‘ವಿಶ್ವಾಭಿಗಮನಮ್’ ಯಕ್ಷನೃತ್ಯ ರೂಪಕ ಪ್ರದರ್ಶನಗೊಂಡಿತು. ಶಿರಸಿಯ ಯುವ ಕಲಾವಿದೆ ಕು. ತುಳಸಿ ಹೆಗಡೆ ಅವರ ಪ್ರಸ್ತುತಿಯಲ್ಲಿ ಸೊಗಸಾಗಿ ಮೂಡಿ ಬಂತು. ಶ್ರೀಕೃಷ್ಣನವ್ಯಕ್ತಿತ್ವ, ರಾಧೆಯ ನಿರ್ಮಲ ಪ್ರೇಮ ಭಕ್ತಿ, ಸೂಕ್ಷ್ಮ ಅಭಿನಯ, ಸುಂದರ ಲಾಲಿತ್ಯಪೂರ್ಣ ಕುಣಿತಗಳು ಸೇರಿದ ಅಪಾರ ಆಸಕ್ತರನ್ನು ರಂಜಿಸಿತು. ಗೋಕುಲ ವಾಸಿಗಳ ಒಡನಾಟ ಹಾಗೂ ಜೀವನ ಆದರ್ಶವಾಗಿ ಕಂಡು ಬಂದಿತು.

ರೂಪಕದ ಹಿಮ್ಮೇಳದಲ್ಲಿ ಸುಶ್ರಾವ್ಯ ಕಂಠ ಸಿರಿಯ ಖ್ಯಾತ ಭಾಗವತ ಕೇಶವ ಹೆಗಡೆ ಕೊಳಗಿ, ರಸ ಭಾವ ಪ್ರಚೋದಕ ಅಪೂರ್ವದ ಪೆಟ್ಟುಗಳ ಪ್ರಸಿದ್ಧ ಮದ್ದಲೆವಾದಕ ಶಂಕರ ಭಾಗವತ್, ಚಂಡೆವಾದಕ ವಿಘ್ನೇಶ್ವರ ಗೌಡ ಹಾಗೂ ಪ್ರಸಾಧನ ಕಲಾವಿದ ಗಣಪತಿ ಹೆಗಡೆ ಮೂರೂರು ಸಹಕರಿಸಿದರು.

ಕಾರ್ಯಕ್ರಮಕ್ಕೆ ಶ್ರೀಮಠದ ಹೊನ್ನಾವರ ಹಾಗೂ ಕುಮಟಾ ಮಂಡಲ, ಶ್ರೀರಘೂತ್ತಮ ಮಠ ಮಹಾಸಮಿತಿ ಹಾಗೂ ಕ್ರಿಯಾಸಮಿತಿ ಸಹಕಾರ ನೀಡಿದ್ದವು.

Leave a Reply

Your email address will not be published. Required fields are marked *