‘ಅನ್ನಬ್ರಹ್ಮ ಚಾತುರ್ಮಾಸ್ಯ’ ಆಮಂತ್ರಣ ಲೋಕಾರ್ಪಣೆ

ಸುದ್ದಿ

ಅಶೋಕೆ: ನಿಜ ಜ್ಯೇಷ್ಠ ಶುಕ್ಲ ತದಿಗೆಯಂದು (17-06-2026) ಪರಮಪೂಜ್ಯ ಶ್ರೀಸಂಸ್ಥಾನದರು ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಆಮಂತ್ರಣ ಪತ್ರಿಕೆಯನ್ನು ಸೇವಾಸೌಧದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಮಯದಲ್ಲಿ ಶ್ರೀಮಠದ ಕೇಂದ್ರ ಕಾರ್ಯಾಲಯ – ಶಾಸನತಂತ್ರ – ಮಹಾಮಂಡಲ – ಅಂಗಸಂಸ್ಥೆಗಳ ಪದಾಧಿಕಾರಿಗಳು, ಶ್ರೀಸವಾರಿಯ ಸದಸ್ಯರು, ಶಿಷ್ಯಭಕ್ತರು ಉಪಸ್ಥಿತರಿದ್ದರು.

ಶ್ರೀಸಂಸ್ಥಾನದವರು ತಮ್ಮ ಮೂವತ್ತಮೂರನೆಯ ಚಾತುರ್ಮಾಸ್ಯವನ್ನು ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಎಂಬ ಅಭಿಧಾನದಲ್ಲಿ, ಅಶೋಕೆಯಲ್ಲಿ, ಆಷಾಢ ಶುಕ್ಲ ಪೂರ್ಣಿಮೆಯಿಂದ ಭಾದ್ರಪದ ಶುಕ್ಲ ಪೂರ್ಣಿಮೆಯವರೆಗೆ (29-07-2026 ರಿಂದ 26-09-2026 ರ ವರೆಗೆ) ಆಚರಿಸಲಿದ್ದಾರೆ.

ತಮ್ಮ ಚಾತುರ್ಮಾಸ್ಯಗಳನ್ನು ಸಮೂಹದ ಒಳಿತಿಗೆ ಅನುಕೂಲವಾಗುವಂತೆ ಸಂಯೋಜಿಸುತ್ತಾ ಬಂದಿರುವುದು ಪರಮಪೂಜ್ಯ ಶ್ರೀಸಂಸ್ಥಾನದವರ ಪರಮ ಕಾರುಣ್ಯ. ಚಾತುರ್ಮಾಸ್ಯಗಳನ್ನು ನಿರ್ದಿಷ್ಟ ಪರಿಕಲ್ಪನೆಗೆ ಒಳಪಡಿಸಿ, ಅದರ ಮೂಲಕ ಜ್ಞಾನ ಜಾಗರಣ ಮಾಡುವುದಲ್ಲದೇ, ಆ ಪುಣ್ಯಕಾರ್ಯಗಳಲ್ಲಿ ಶಿಷ್ಯ-ಭಕ್ತರು ಭಾಗಿಯಾಗುವಂತೆ ಮಾಡಿರುವುದು ಪರಮಪೂಜ್ಯ ಶ್ರೀಸಂಸ್ಥಾನದವರ ಚಾತುರ್ಮಾಸ್ಯಗಳ ಗರಿಮೆ.

ಪರಮಪೂಜ್ಯ ಶ್ರೀಸಂಸ್ಥಾನದವರು ಪ್ರಕೃತ ಚಾತುರ್ಮಾಸ್ಯವನ್ನು ಅನ್ನಬ್ರಹ್ಮದ ಪರಿಕಲ್ಪನೆಯಲ್ಲಿ ಆಚರಿಸುತ್ತಿದ್ದಾರೆ. ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತಾದ ಜ್ಞಾನೋದ್ದೀಪನಕ್ಕೆ ಈ ಚಾತುರ್ಮಾಸ್ಯ ಸಮರ್ಪಿತವಾಗಿದೆ. ಆಹಾರದ ಕುರಿತಾದ ಋಷಿದರ್ಶನವನ್ನು ಪ್ರಸ್ತುತ ಪಡಿಸುವ ಕಾರ್ಯ ಈ ಚಾತುರ್ಮಾಸ್ಯದಲ್ಲಿ ನಡೆಯುತ್ತದೆ. ಸ್ವತಃ ಪರಮಪೂಜ್ಯರೇ ಆ ಕುರಿತಾದ ಸರಣಿ ಪ್ರವಚನವನ್ನು ಅನುಗ್ರಹಿಸಲಿದ್ದಾರೆ. ಪ್ರಾಚೀನ ವಿಧಾನದ ಆಹಾರದ ಭೋಜನವೂ ಇರಲಿದೆ.

Leave a Reply

Your email address will not be published. Required fields are marked *