|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

‘ಬದುಕಿನ ಧನ್ಯತೆ ಶ್ರೀಮಠದ ಸೇವೆಯಲ್ಲಿ ‘ ಅನಿತಾ ಎಸ್. ಭಟ್ ಪೊನ್ನೂರುಕಜೆ

​”ಗುರುಸೇವೆಯೇ ನಮ್ಮ ಬದುಕಿನಲ್ಲಿ ನಿಜವಾದ ನೆಮ್ಮದಿಯ ಆಶ್ರಯ ತಾಣ. ಶ್ರೀಮಠದ ನಿರಂತರ ಸೇವೆಯಿಂದ ನಮ್ಮ ಜೀವನದಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ” ಎಂದು ಭಾವಪೂರ್ಣವಾಗಿ ನುಡಿಯುವವರು ಅನಿತಾ ಎಸ್. ಭಟ್. ಪೊನ್ನೂರುಕಜೆ.
ಮುಳ್ಳೇರಿಯ ಮಂಡಲ ಗುತ್ತಿಗಾರು ವಲಯದ ಪೊನ್ನೂರುಕಜೆಯಲ್ಲಿ ವಾಸಿಸುತ್ತಿರುವ ಕಜೆಹಿತ್ತಿಲು ಸೂರ್ಯನಾರಾಯಣ ಭಟ್ ಅವರ ಧರ್ಮಪತ್ನಿಯಾದ ಇವರು, ಶ್ರೀಮಠದ ಸೇವೆಯಲ್ಲಿ ಸದಾ ನಿರತರಾಗಿದ್ದಾರೆ

ಸರಳಿ ಕೃಷ್ಣ ಭಟ್ ಮತ್ತು ಗೋಪಿಲಕ್ಷ್ಮಿ ದಂಪತಿಗಳ ಪುತ್ರಿಯಾದ ಇವರು, ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವರು. ತವರು ಮನೆಯಿಂದಲೇ ಲಭಿಸಿದ ಶ್ರೀಮಠದ ಸಂಪರ್ಕವು, ಮದುವೆಯ ನಂತರ ಕಜೆಹಿತ್ತಿಲು ಕುಟುಂಬದ ಸೊಸೆಯಾಗಿ ಬಂದ ಮೇಲೆ ಮತ್ತಷ್ಟು ದೃಢವಾಯಿತು.
ಪತಿ ಸೂರ್ಯನಾರಾಯಣ ಭಟ್ ಅವರು ಪ್ರಸ್ತುತ ಸ್ಥಳೀಯ ಘಟಕದ ಗುರಿಕಾರರಾಗಿ ಶ್ರೀಮಠದ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ, ಪತಿಯ ಅಣ್ಣತಮ್ಮಂದಿರು ಹಾಗೂ ಅವರ ಮನೆಯವರೆಲ್ಲ ಸೇರಿದಂತೆ ಪೊನ್ನೂರುಕಜೆ ಕುಟುಂಬದವರೆಲ್ಲರೂ ಶ್ರೀಮಠದ ಶ್ರದ್ಧಾವಂತ ಭಕ್ತರಾಗಿದ್ದು, ಎಲ್ಲರೂ ಒಟ್ಟಾಗಿ ಗುರುಸೇವೆಯಲ್ಲಿ ನಿಷ್ಠೆಯನ್ನು ಹೊಂದಿದ್ದಾರೆ.

​ಶ್ರೀಮಠದ ಸೇವಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಅನಿತಾ ಅವರು, ತಮ್ಮ ಬಂಧುಗಳೂ ಆಗಿರುವ ಮಂಗಳೂರಿನ ಸುಮಾ ರಮೇಶ್ ಅವರ ಮಾರ್ಗದರ್ಶನದಂತೆ ಶ್ರೀಮಠದ ‘ಮಾತೃತ್ವಮ್’ ಯೋಜನೆಯ ಮೂಲಕ ‘ಮಾಸದ ಮಾತೆ’ಯಾಗಿ ಕೈಜೋಡಿಸಿದರು.
ಆರಂಭದಲ್ಲಿ ನಿಗದಿತ ಗುರಿಯನ್ನು ತಲುಪುವ ಬಗ್ಗೆ ತುಸು ಆತಂಕ ಮೂಡಿದರೂ, ಶ್ರೀಗುರುಗಳ ಅನುಗ್ರಹದಿಂದ ಅತ್ಯಂತ ಬೇಗನೆ ಒಂದು ಹಸುವಿನ ಗುರಿಯನ್ನು ತಲುಪಿದರು. ಶ್ರೀಗುರುಗಳ ದಿವ್ಯ ಹಸ್ತಗಳಿಂದ ‘ಬಾಗಿನ’ವನ್ನು ಸ್ವೀಕರಿಸಿದ ಇವರು ಲಕ್ಷಬಾಗಿನಿಯಾಗಿದ್ದಾರೆ

​”ಗೋಮಾತೆಯ ಮೇಲೆ ಪ್ರೀತಿ ಇದ್ದವರೆಲ್ಲರೂ ಇಂದಿನ ದಿನಗಳಲ್ಲಿ ಮಾಸದ ಮಾತೆಯಾಗಿ ಗೋಸೇವೆ ಮಾಡಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ಮನೆಗಳಲ್ಲಿ ಹಸುಗಳನ್ನು ಸಾಕುವುದು ಸ್ವಲ್ಪ ಕಷ್ಟದಾಯಕ. ಹಾಗಾಗಿ ಶ್ರೀಮಠದ ‘ಮಾತೃತ್ವಮ್’ ಯೋಜನೆಯ ಮೂಲಕ ಗೋಸೇವೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು. ನಾವು ಸಂಕಲ್ಪ ಮಾಡಿದರೆ ಗುರಿ ತಲುಪಿಸಲು ಶ್ರೀಗುರುಗಳು ಖಂಡಿತ ಆಶೀರ್ವದಿಸುತ್ತಾರೆ” ಎಂಬುದು ಅನಿತಾ ಅವರ ಅನುಭವದ ನುಡಿ.
ಶ್ರೀಮಠದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಇವರು, ಈ ಗೋಸೇವೆಯನ್ನು ನಿತ್ಯ ನಿರಂತರವಾಗಿ ಮುನ್ನಡೆಸಿಕೊಂಡು ಹೋಗುವ ಸತ್ಸಂಕಲ್ಪವನ್ನು ಹೊಂದಿದ್ದಾರೆ.

“ಮಕ್ಕಳಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕವನ್ನು ಒದಗಿಸಿಕೊಡಬೇಕು. ಭಾರತೀಯ ಗೋತಳಿಗಳ ಮಹತ್ವವನ್ನು, ಗೋವುಗಳ ಶ್ರೇಷ್ಠತೆಯನ್ನು ಹಾಗೂ ಗೋಉತ್ಪನ್ನಗಳ ವಿಶೇಷತೆಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕು” ಎಂದು ಬಯಸುವ ಅವರು ತಮ್ಮ ಮನೆಯಲ್ಲೂ ಈ ಸಾತ್ತ್ವಿಕ ವಾತಾವರಣವನ್ನು ಕಾಯ್ದುಕೊಂಡಿದ್ದಾರೆ.

​ಗುರುಕೃಪೆಯಿಂದ ಬದುಕಿನಲ್ಲಿ ಎಲ್ಲವೂ ಒಳಿತಾಗಿದೆ ಎಂಬ ಭರವಸೆ ಹೊಂದಿರುವ ಅನಿತಾ ಎಸ್. ಭಟ್ ಪೊನ್ನೂರುಕಜೆ ಅವರಿಗೆ ಶ್ರೀಮಠದ ಸೇವೆಯನ್ನು ಮಾಡಲು ತಮಗೆ ಇನ್ನಷ್ಟು ಅವಕಾಶಗಳು ಹಾಗೂ ಶಕ್ತಿಯನ್ನು ಶ್ರೀಗುರುಗಳು ಒದಗಿಸಿಕೊಡಲಿ ಎಂಬುದು ಮನದಾಳದ ಪ್ರಾರ್ಥನೆ .

ಪ್ರಸನ್ನಾ ವಿ. ಚೆಕ್ಕೆಮನೆ