ಮುಜುಂಗಾವು: ಶ್ರೀಭಾರತೀ ವಿದ್ಯಾಪೀಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಶ್ರೀಕೃಷ್ಣನ ಜನ್ಮದಿನವನ್ನು ಸ್ಮರಿಸುವ ಈ ಪವಿತ್ರ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಉದಯ ಕುಮಾರ್ ಮಾಯಿಪ್ಪಾಡಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಂಬಾರು ಶ್ರೀದುರ್ಗಾ ಪರಮೇಶ್ವರಿ ದೇವಾಲಯದ ಆಡಳಿತ ಮೊಕ್ತೇಸರರಾದ ಶ್ರೀ ರವಿಶಂಕರ ಭಟ್ ಎಡಕ್ಕಾನ ಅವರು ಆಗಮಿಸಿ ವಿದ್ಯಾರ್ಥಿಗಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳನ್ನು ತಿಳಿಸಿದರು. ಹಿರಿಯ ಅಧ್ಯಾಪಕರಾದ ಶ್ರೀಬಾಲಕೃಷ್ಣ ಶರ್ಮರವರು ಶ್ರೀಕೃಷ್ಣನ ಜೀವನ, ಆತನ ಆದರ್ಶಗಳು ಹಾಗೂ ಭಗವದ್ಗೀತೆಯ ಸಂದೇಶಗಳ ಕುರಿತು ಮಾತನಾಡಿ, ವಿದ್ಯಾರ್ಥಿಗಳಿಗೆ ಸತ್ಯ, ಧರ್ಮ, ಪ್ರೀತಿ ಮತ್ತು ಕರ್ತವ್ಯನಿಷ್ಠೆಯಿಂದ ಜೀವನ ನಡೆಸುವಂತೆ ಪ್ರೇರೇಪಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪುಟಾಣಿ ಮಕ್ಕಳು ರಾಧಾ-ಕೃಷ್ಣರ ವೇಷಭೂಷಣವನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರ ಸುಂದರ ವೇಷಭೂಷಣ, ಮುಗ್ಧ ನಗು ಹಾಗೂ ಉತ್ಸಾಹಭರಿತ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು. ಪುಟಾಣಿ ಮಕ್ಕಳು ಕೃಷ್ಣ ವೇಷದಲ್ಲಿ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.


