|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶ್ರೀಗುರುಕಾರುಣ್ಯದಿಂದ ಬದುಕಿಗೆ ನಿರಾಮಯ ಭಾವ ‘ – ಜ್ಯೋತಿ ಮಹಾಬಲೇಶ್ವರ ಸಾಗರ

​” ಶ್ರೀಗುರುಗಳ ದಿವ್ಯ ಕೃಪೆಯಿಂದ ನಮ್ಮ ಬದುಕಿನಲ್ಲಿ ಎಲ್ಲವೂ ಒಳಿತಾಗಿದೆ. ಶ್ರೀಗುರುಗಳ ಅನುಗ್ರಹವೇ ನಮ್ಮ ಕುಟುಂಬಕ್ಕೆ ನಿಜವಾದ ಶ್ರೀರಕ್ಷೆ. ನಮ್ಮ ನಿವಾಸದಲ್ಲಿ ಶ್ರೀಗುರುಗಳು ಮೊಕ್ಕಾಂ ಹೂಡಿದ್ದು ನಮ್ಮ ಪೂರ್ವಜನ್ಮದ ಸುಕೃತ ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಜ್ಯೋತಿ ಮಹಾಬಲೇಶ್ವರ ಸಾಗರ
ಸಾಗರ ಮಂಡಲ ಪಶ್ಚಿಮ ವಲಯದ ಮಹಾಬಲೇಶ್ವರ ಅವರ ಪತ್ನಿಯಾಗಿರುವ ಇವರು, ಶ್ರೀಮಠದ ವಿವಿಧ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಾ ಗೋಸೇವೆಯಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದಾರೆ.

​ಸಸರವಳ್ಳಿಯ ಹೆಚ್.ಆರ್. ತಿಮ್ಮಪ್ಪ ಮತ್ತು ಸರಸ್ವತಿ ದಂಪತಿಗಳ ಪುತ್ರಿಯಾದ ಜ್ಯೋತಿ ಅವರಿಗೆ ಬಾಲ್ಯದಿಂದಲೇ ಸಾತ್ತ್ವಿಕ ಸಂಸ್ಕಾರ ಬಳುವಳಿಯಾಗಿ ದೊರಕಿತ್ತು. ಕೆಲವು ವರ್ಷಗಳಿಂದ ಶ್ರೀರಾಮಚಂದ್ರಾಪುರ ಮಠದ ಸಂಪರ್ಕದಲ್ಲಿರುವ ಇವರು, ಶ್ರೀಮಠದ ಸೇವೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಕೋಗೋಡು ವಲಯದಲ್ಲಿದ್ದಾಗ ವಲಯ ಮಾತೃ ಪ್ರಧಾನೆಯಾಗಿ, ಸಾಗರ ಮಂಡಲದ ಮುಷ್ಟಿ ಭಿಕ್ಷಾ ಪ್ರಧಾನೆಯಾಗಿ, ಮಾತೃತ್ವಮ್ ಕಾರ್ಯದರ್ಶಿಯಾಗಿ, ಕೋಗೋಡು ವಲಯದ ಕೋಶಾಧ್ಯಕ್ಷರಾಗಿ ಹಾಗೂ ಸಾಗರ ಮಂಡಲದ ಬಿಂದು ಸಿಂಧು ಪ್ರಧಾನೆಯಾಗಿಯೂ ಶ್ರೀಮಠದ ಸೇವೆಯನ್ನು ಸಲ್ಲಿಸಿ, ಸಮಾಜ ಸಂಘಟನೆಯಲ್ಲಿ ತಮ್ಮ ಚತುರತೆಯನ್ನು ಸಾಬೀತುಪಡಿಸಿದ್ದಾರೆ.

​ವೃತ್ತಿಯಲ್ಲಿ ‘ನಿರಾಮಯ’ ಎಂಬ ಔಷಧಮಳಿಗೆ ನಡೆಸುತ್ತಿರುವ ಜ್ಯೋತಿ ಮಹಾಬಲೇಶ್ವರ ಅವರಿಗೆ ಶ್ರೀಮಠದ ಸೇವೆಗೆ ಪ್ರೇರಣೆ ದೊರಕಿದ್ದು ‘ಭಾವ ಸಮರ್ಪಣಾ’ ನಾರಿ ಸಮಾವೇಶದಲ್ಲಿ. ಪ್ರಸ್ತುತ ಮಾತೃತ್ವಮ್ ಅಧ್ಯಕ್ಷರಾಗಿರುವ ಈಶ್ವರೀ ಬೇರ್ಕಡವು ಅವರ ಭಾಷಣದಿಂದ, ಅವರ ಯೋಚನೆಗಳಿಂದ ಪ್ರಭಾವಿತರಾದ ಇವರು, ಶ್ರೀಮಠದ ಸೇವೆಯಲ್ಲಿ ಕ್ರಿಯಾಶೀಲರಾದರು.

” ಈಶ್ವರಿ ಅಕ್ಕನ ಮಾತುಗಳಿಂದ ನಾನು ತುಂಬಾ ಪ್ರಭಾವಿತಳಾದೆ. ಆ ಮೂಲಕ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ದೊರಕಿತು. ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು. ನಮ್ಮ ಸಂಸ್ಥೆಗೆ ‘ನಿರಾಮಯ ‘ ಎಂಬ ಹೆಸರನ್ನು ಸೂಚಿಸಿ ಆಶೀರ್ವದಿಸಿದ್ದು ಶ್ರೀಸಂಸ್ಥಾನದವರು. ಆ ದಿನದಿಂದ ನಮ್ಮ ಉದ್ಯಮ ಮತ್ತು ಜೀವನ ಎರಡರಲ್ಲೂ ಪ್ರಗತಿ ಕಂಡುಬಂದಿದೆ ” ಎಂದು ಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾರೆ ಜ್ಯೋತಿ.

​ಶ್ರೀಮಠದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಸೇವೆ ಸಲ್ಲಿಸುತ್ತಿರುವ ಜ್ಯೋತಿ ಅವರಿಗೆ ಅನೇಕ ಗುರುಬಂಧುಗಳು ಆರಂಭದಲ್ಲಿ ಸಹಕಾರ ನೀಡಿದರು. ಮುಂದೆ ತಮ್ಮ ಕುಟುಂಬದವರ ಸಂಪೂರ್ಣ ಪ್ರೋತ್ಸಾಹದಿಂದ ಇವರು ಗೋಸೇವೆಯ ಗುರಿಯನ್ನು ತಲುಪಿದರು. ಇವರ ಈ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಕ್ಕೆ ಪತಿ ಹಾಗೂ ಮಕ್ಕಳ ಸಂಪೂರ್ಣ ಬೆಂಬಲವಿದೆ. ಇವರ ಇಬ್ಬರು ಮಕ್ಕಳೂ ಶ್ರೀಮಠದ ಸೇವೆಯಲ್ಲಿ ಮತ್ತು ಶ್ರೀಗುರು ಚರಣಗಳಲ್ಲಿ ಅಪಾರ ಶ್ರದ್ಧೆ, ನಂಬಿಕೆ ಇರಿಸಿಕೊಂಡಿದ್ದಾರೆ.

​” ಶ್ರೀಗುರುಗಳ ಪಾದಾರ್ಪಣೆಯಿಂದ ನಮ್ಮ ಮನೆ ಪವಿತ್ರವಾಗಿದೆ. ನಮ್ಮ ಕುಟುಂಬದ ಪ್ರತಿಯೊಬ್ಬರೂ ಶ್ರೀಮಠದ ವಿವಿಧ ಸೇವೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಶ್ರೀಗುರುಗಳ ಮತ್ತು ಗೋಮಾತೆಯ ಸೇವೆಯನ್ನು ಬದುಕಿನ ಕೊನೆಯ ಉಸಿರಿರುವವರೆಗೂ ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದೇ ನಮ್ಮ ಅಂತರಾಳದ ಅಭಿಲಾಷೆ” ಎನ್ನುವ ಜ್ಯೋತಿ ಮಹಾಬಲೇಶ್ವರ ಅವರ ಶ್ರದ್ಧಾಮಯ ಜೀವನ ಪಯಣವು ಆದರ್ಶಪ್ರಾಯವಾಗಿದೆ.

ಪ್ರಸನ್ನಾ ವಿ. ಚೆಕ್ಕೆಮನೆ