ಅಪೂರ್ವ ಸೇವಾವಸರವಿದು ಪ್ರಧಾನಮಠಕೆ…

ಲೇಖನ

 

ಹೊಸನಗರ: ಸಹಸ್ರಮಾನದ ಇತಿಹಾಸ ನಿರ್ಮಾಣದ ಯೋಗ ಒದಗಿ ಬಂದಿದೆ. ಶ್ರೀಸಂಸ್ಥಾನದವರ ದಿವ್ಯಸಂಕಲ್ಪದ ಸುವರ್ಣಯೋಗವೇ ಪ್ರಧಾನಮಠದ ಪುನರ್ನಿರ್ಮಾಣ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ವಿಶ್ವಾವಸು ಫಾಲ್ಗುನ ಶುದ್ಧ ದಶಮಿಯಂದು, (26-02-2026) ವೃಷಭ ಲಗ್ನದ ಶುಭಮುಹೂರ್ತದಲ್ಲಿ ಪ್ರಧಾನಮಠದಲ್ಲಿ ಶ್ರೀರಾಮ ಸಾನ್ನಿಧ್ಯದ ಶಿಲಾನ್ಯಾಸವು ನಡೆಯಲಿದೆ. ತನ್ಮೂಲಕ ಈ ಪುಣ್ಯ ಕಾರ್ಯಕ್ಕೆ ಶುಭಾರಂಭವು ಸಿಗಲಿದೆ.

“ರಾಮ ಪರಿವಾರದ ನೆಲೆಯಾಗಲಿದೆ ಶಿಲೆ;
ಕಲೆತು ಬೆರೆಯಲಿದೆ ನಾನಾ ಸೇವೆ;
ಅಳಿಲಾಗೋಣ ದಿವ್ಯಸೇವೆಯಲ್ಲಿ
ಅಮರವಾಗಲಿ ಸದ್ಭಾವವಿಲ್ಲಿ”
ಎಂಬ ಭಾವದಲ್ಲಿ ಶಿಷ್ಯ-ಭಕ್ತರೆಲ್ಲರೂ ಅಜರಾಮರ ಸೇವಾಸಾಕ್ಷಿಗಳಾಗೋಣ. ಅಂದು ಶ್ರೀರಾಮಚಂದ್ರಾಪುರ ಮಠದಲ್ಲಿ ಜೊತೆಯಾಗೋಣ.

* ಆ ದಿನದಂದು ಶ್ರೀಗುರು ಶ್ರೀವಾಸ ನಿರ್ಮಾಣ ಸ್ಥಳದಲ್ಲಿ ಶಿಷ್ಯ-ಭಕ್ತರಿಂದ ಶ್ರೀಗುರುಪಾದುಕಾ ಸ್ತೋತ್ರ ಸಮರ್ಪಣಾ ಕಾರ್ಯಕ್ರಮವಿರುತ್ತದೆ.

* ಮರ್ಯಾದಾಪುರುಷೋತ್ತಮ ಶ್ರೀರಾಮನ ಸಾನ್ನಿಧ್ಯ ನಿರ್ಮಾಣದ ಸ್ಥಳದಲ್ಲಿ ಸಾವಿರಕ್ಕೂ ಹೆಚ್ಚು ಪುರುಷರಿಂದ ಶ್ರೀರಾಮತಾರಕ ಜಪ ನಡೆಯಲಿದೆ.

* ಜಗನ್ಮಾತೆಯ ದೇಗುಲ ನಿರ್ಮಾಣದ ಸ್ಥಳದಲ್ಲಿ ಶ್ರೀರಾಜರಾಜೇಶ್ವರಿಗೆ ಸಾವಿರಕ್ಕೂ ಹೆಚ್ಚು ಮಾತೆಯರ ಮನದ ಮಮಕಾರದ ಸಹಸ್ರಾಧಿಕ ಕುಂಕುಮಾರ್ಚನಾ ಸೇವೆಯು ಸಲ್ಲಲಿರುವುದು.

* ಶ್ರೀಚಂದ್ರಮೌಳೀಶ್ವರನ ಸಾನ್ನಿಧ್ಯಕ್ಕೆ ರುದ್ರಪಾಠಿಗಳಿಂದ ಶತಾಧಿಕ ರುದ್ರಪಠಣಪೂರ್ವಕ ಅಭಿಷೇಕ ಸಂಪನ್ನಗೊಳ್ಳಲಿದೆ.

* ಶರಣ್ಯೆ ಶಾರದೆಯ ಸನ್ನಿಹಿತದಲ್ಲಿ ಶತಾಧಿಕ ಶಾರದಾಷ್ಟಕದ ಪಠಣ ಜರುಗಲಿದೆ.

* ಗುರು ಸನ್ನಿಧಿಯಲ್ಲಿ ಶಿಷ್ಯ-ಭಕ್ತರಿಂದ ನಿಧಿಕಲಶಕ್ಕೆ ಮುಷ್ಟಿದ್ರವ್ಯ ಸಮರ್ಪಣೆ ನೆರವೇರಲಿದೆ.
(ಮುಷ್ಟಿದ್ರವ್ಯ ಸಮರ್ಪಣೆಗೆ ನಾಣ್ಯಗಳನ್ನು ಒದಗಿಸಲಾಗುವುದು. ತಾವೇ ತಂದು ಅರ್ಪಿಸಲೂ ಅವಕಾಶವಿರುತ್ತದೆ.)

* ಸಮಸ್ತ ಶಿಷ್ಯಭಕ್ತರಿಂದ ತಾಯಿ ಶಾರದೆಗೆ ಭಕ್ತಿ ಭಾವದ ದಿವ್ಯಾರತಿಯಿರುತ್ತದೆ.

* ಸದ್ಭಾವವನ್ನು ಉದ್ದೀಪಿಸುವ ಧರ್ಮಸಭೆಯಿರಲಿದೆ.

ಪ್ರಧಾನಮಠ ನಮ್ಮೆಲ್ಲರ ಪರಮ ಶ್ರದ್ಧಾಕೇಂದ್ರ. ವಿಶೇಷವಾಗಿ ಕಳೆದ ಮೂರು ದಶಕಗಳಿಂದ ಅದರೊಡನೆ ನಮ್ಮೆಲ್ಲರ ಭಾವನಾತ್ಮಕ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅದಕ್ಕೆ ಕಾರಣ ನಮ್ಮ ಶ್ರೀಸಂಸ್ಥಾನದವರು ಅಲ್ಲಿ ನಡೆಸಿದ ಅಭೂತಪೂರ್ವ ಕಾರ್ಯಗಳು. ಪೂರ್ವಗುರುಗಳು ಮೊಟ್ಟಮೊದಲು ಶ್ರೀಸಂಸ್ಥಾನದವರನ್ನು ಕಳುಹಿಸಿದ್ದು ಪ್ರಧಾನಮಠಕ್ಕೆ. ಇದು ಗುರುಪರಂಪರೆಗೆ ಇರುವ ಪ್ರಧಾನಮಠ ಪುನರುತ್ಥಾನದ ಉದ್ದೇಶವನ್ನು ತೋರಿಸುತ್ತದೆ. ಪರಮಪೂಜ್ಯ ಶ್ರೀಸಂಸ್ಥಾನದವರು ಇದನ್ನು ವಿಶಿಷ್ಟವಾಗಿಯೇ ಮಾಡಿದ್ದಕ್ಕೆ ನಾವೆಲ್ಲರೂ ಪ್ರತ್ಯಕ್ಷ ಸಾಕ್ಷಿಯಾಗಿದ್ದೇವೆ, ವಿಶ್ವವನ್ನೇ ಅತ್ತ ತಿರುಗುವಂತೆ ಮಾಡಿದ್ದನ್ನು ಕಣ್ಣಾರೆ ಕಂಡಿದ್ದೇವೆ.

ಪ್ರಾಚೀನದಲ್ಲಿ ಕೂಡ ಪ್ರಧಾನಮಠಕ್ಕೆ ವಿಶಿಷ್ಟ ಸ್ಥಾನವಿತ್ತಿತ್ತು. ನಮ್ಮ ಗುರುಪರಂಪರೆಯ ಹೆಚ್ಚಿನ ಪೀಠಾಧಿಪತಿಗಳು ಇಲ್ಲಿ ತಮ್ಮ ತಪಸ್ಸು ಗೈದಿದ್ದಾರೆ. ಅದರ ಪುಣ್ಯದಿಂದ ಈ ಭೂಮಿಯನ್ನು ಮತ್ತಷ್ಟು ಉಜ್ವಲಗೊಳಿಸಿದ್ದಾರೆ. ಪ್ರಧಾನಮಠದ ಈ ಸ್ಥಾನಕ್ಕೆ ಶ್ರೀಮಠದ ಶಿಷ್ಯರಾದ ನಾವು ಯಾವತ್ಕಾಲವೂ ಕೃತಜ್ಞರಾಗಿರಬೇಕು. ಯಾಕೆಂದರೆ ಈ ಪುಣ್ಯಸ್ಥಾನ ಸುದೀರ್ಘ ಕಾಲ ನಮ್ಮ ಪರಂಪರೆಯನ್ನು ಪೊರೆದಿದೆ. ಇಲ್ಲಿಯ ಪೂರ್ವಸನ್ನಿಧಿಯಾದ ಶ್ರೀಚಂದ್ರಮೌಳೀಶ್ವರ, ಶ್ರೀಮನ್ಮಹಾಗಣಪತಿ, ಶರಾವತಿ, ಅಗಸ್ತ್ಯತೀರ್ಥ, ಯೋಗಿತೀರ್ಥಗಳು ನಮ್ಮ ಕುಲಕೋಟಿಯನ್ನು ಪಾವನಗೊಳಿಸಿವೆ.

ಇಂಥ ಪ್ರಧಾನಮಠದ ಪುನರುತ್ಥಾನದ ಮಹಾನ್ ಕಾರ್ಯವನ್ನು ಪರಮಪೂಜ್ಯ ಶ್ರೀಸಂಸ್ಥಾನದವರು ಅಂದೇ ಆರಂಭಿಸಿದರು. ಅವರು ಪೂರ್ವಗುರುವರ್ಯರ ಆದೇಶದಂತೆ ಇಲ್ಲಿಗೆ ಬಂದಾಗಿನಿಂದಲೇ ಇದರ ಸಮುತ್ಥಾನ ಆರಂಭವಾಯಿತು. ಇಲ್ಲಿ ಅನೇಕ ಯಜ್ಞ-ಯಾಗಗಳು ನಡೆದವು. ಅಪಾರ ಅನ್ನದಾನ ನಡೆಯಿತು. ಶ್ರೀಚಂದ್ರಮೌಳೀಶ್ವರನೇ ಮೊದಲಾದ ಕ್ಷೇತ್ರದ ಸಾನ್ನಿಧ್ಯಗಳಿಗೆ ಶಾಸ್ತ್ರೋಕ್ತ ನೆಲೆಗಳ ನಿರ್ಮಾಣವಾಯಿತು. ವೇದದ ಘೋಷ ನಿರಂತರವಾಗಿ ಮೊಳಗಿತು. ಗೋವುಗಳಿಗೆ ಅನುಪಮ ಸ್ಥಾನ ಮತ್ತು ಸೇವೆ ದೊರೆಯಿತು. ಅನೇಕ ಸಾಧು-ಸಂತರ ಪಾದಸ್ಪರ್ಶವಾಯಿತು. ವಿದ್ಯೆ, ಕಲೆ, ಸಂಸ್ಕೃತಿ, ಸಜ್ಜನಿಕೆ ಎಲ್ಲವೂ ಮೇಳೈಸಿದವು.

ಇದೀಗ ಈ ಎಲ್ಲ ಕಾರ್ಯಗಳ ಅಂತಿಮ ಘಟ್ಟದ ಕಾರ್ಯಗಳನ್ನು ಪೂರ್ಣ ಮಾಡುವ ಸಮಯ ಬಂದಿದೆ. ಪರಮಪೂಜ್ಯ ಶ್ರೀಸಂಸ್ಥಾನದವರು ಪುನರುತ್ಥಾನದ ಮುಂದಿನ ಕಾರ್ಯಗಳಿಗೆ ಸೂಚನೆ ನೀಡಿದ್ದಾರೆ. ಪರಿಪೂರ್ಣತೆಯ ಈ ಮಹಾಯಾತ್ರೆಯಲ್ಲಿ ನಾವೆಲ್ಲಾ ಪೂರ್ಣಮನಸ್ಸಿನಿಂದ ತೊಡಗಿಕೊಳ್ಳಬೇಕಿದೆ. ನಮ್ಮ ಕಾಲಘಟ್ಟದಲ್ಲಿ ಮತ್ತೊಮ್ಮೆ ಪ್ರಧಾನಮಠದ ಪೂರ್ವವೈಭವವನ್ನು ಸ್ಥಾಪಿಸಲು ಪರಿಶ್ರಮಿಸಬೇಕಿದೆ. ಸಾರ್ಥಕತೆಯಲ್ಲಿ ತೃಪ್ತರಾಗಿ ತಂಪಾಗಬೇಕಿದೆ.

ಇದು ಪ್ರಧಾನಮಠ ಪುನರ್ನವದ ಅಮೃತಕಾಲ.
ಇದು ನಮ್ಮ ಕಾಲದ ಮಹೋನ್ನತ ಕಾರ್ಯ.
ಇದು ಸಹಸ್ರಮಾನದ ಕಾರ್ಯ.
ಪ್ರಧಾನಮಠದ ಇತಿಹಾಸದಲ್ಲಿ ಹೆಗ್ಗುರುತಾಗುವ ಕಾರ್ಯ. ಇದನ್ನು ಸಾಧಿಸಿ ಗುರುದೇವತಾ ಕಾರುಣ್ಯವನ್ನು ಪಡೆದುಕೊಳ್ಳುವ ಕಾರ್ಯ.
ಬಹುಬೇಗ ಈ ಕಾರ್ಯವನ್ನು ಸಾಧಿಸಲು ನಾವೆಲ್ಲರೂ ಕಟಿಬದ್ಧರಾಗಬೇಕಿದೆ.

ಬನ್ನಿ, ಜೊತೆಯಾಗಿ, ನಾವೆಲ್ಲ ಸೇರಿ ಈ ಪುಣ್ಯಕಾರ್ಯವನ್ನು ಸಾಧಿಸೋಣ.

Leave a Reply

Your email address will not be published. Required fields are marked *