ಗುರುಭಕ್ತಿಗೆ ಶರಣಾದ ಬದುಕು ಮೌನವಾಗಿದ್ದರೂ ಅರ್ಥಪೂರ್ಣವಾಗುತ್ತದೆ ಎಂಬುದಕ್ಕೆ ರಾಮಚಂದ್ರಾಪುರ ಮಂಡಲದ ಪೊರಪ್ಪೆ ಮನೆ ವಲಯದ ಹೆಗ್ಗೋಡು ಸಮೀಪದ ಗಡಿಕಟ್ಟೆಯ ಅಶೋಕ ಅವರ ಧರ್ಮಪತ್ನಿ ಭಾಗ್ಯ ಅಶೋಕ್ ಅವರ ಜೀವನವೇ ಮಾದರಿ.
ಸಿಗಂದೂರು ಮಹಾಬಲೇಶ್ವರ–ಪಾರ್ವತಿ ದಂಪತಿಗಳ ಪುತ್ರಿಯಾಗಿ ಜನಿಸಿದ ಭಾಗ್ಯ ಅವರು, ಚಿಕ್ಕಂದಿನಿಂದಲೇ ಆಧ್ಯಾತ್ಮಿಕ ಸಂಸ್ಕಾರಗಳಲ್ಲಿ ಬೆಳೆದವರು. ತಾಯಿಯ ತವರು ಮನೆಯಿಂದಲೇ ಅವರಿಗೆ ಶ್ರೀಮಠದ ಬಗ್ಗೆ, ಶ್ರೀಗುರುಗಳ ಬಗ್ಗೆ ಅರಿವು ಮೂಡಿತು. ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಿತು.
ಮದುವೆಗೆ ಮುನ್ನವೇ ಅವರ ತವರುಮನೆಗೆ ಶ್ರೀಗುರುಗಳ ದಿವ್ಯ ಆಗಮನವಾಗಿದ್ದು, ಆ ಕ್ಷಣವು ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅಂದಿನಿಂದ ಇಂದಿನವರೆಗೆ ಅವರ ಪ್ರತಿ ಉಸಿರಲ್ಲೂ ಗುರುಸ್ಮರಣೆ ಬೆರೆತು ಹೋಗಿದೆ.
ಚಿಕ್ಕಂದಿನಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದ ಇವರಿಗೆ ಗೋವುಗಳೆಂದರೆ ಅಪಾರ ಪ್ರೀತಿ. ಇಂದಿಗೂ ಅವರ ಮನೆಯಲ್ಲಿ ಐದು ಹಸುಗಳನ್ನು ಪ್ರೀತಿಯಿಂದ ಸಾಕುತ್ತಿದ್ದು, ಅವುಗಳ ಆರೈಕೆಯನ್ನು ತಮ್ಮ ಕರ್ತವ್ಯವಲ್ಲ, ಧರ್ಮವೆಂದು ಭಾವಿಸುತ್ತಾರೆ.
” ಗೋಮಾತೆಯ ಸೇವೆ ಮಾಡುತ್ತಿರುವಾಗ ನನಗೆ ಶ್ರೀಗುರುಗಳ ಸೇವೆ ಮಾಡಿದ ಸಂತೃಪ್ತಿ ದೊರಕುತ್ತಿದೆ” ಎನ್ನುವ ಅವರ ಮಾತುಗಳಲ್ಲಿ ಭಕ್ತಿಭಾವವಿದೆ.
ಶ್ರೀರಾಮಚಂದ್ರಾಪುರ ಮಠದ ಮಾತೃತ್ವಮ್ ಯೋಜನೆಗೆ ಸೇರಲು ಮಹಾಲಕ್ಷ್ಮಿ ತಿಮ್ಮಪ್ಪ ಅವರ ಪ್ರೇರಣೆ ಹಾಗೂ ಸಿದ್ಧಾಪುರದ ವೀಣಕ್ಕನ ಮಾರ್ಗದರ್ಶನ ಇವರಿಗೆ ದೊರಕಿತು. ಮುಂದೆ ಅವರು ಮಾಸದ ಮಾತೆಯಾಗಿ ಮಾತೃತ್ವಮ್ ಯೋಜನೆಯಲ್ಲಿ ಸೇರಿ ಗೋಸೇವೆ ಮಾಡುವ ನಿರ್ಧಾರಕ್ಕೆ ಬಂದರು.
ಗೋಸೇವೆ ಮೂಲಕ ಗುರುಸೇವೆಯನ್ನು ಮಾಡುವ ಅವಕಾಶ ದೊರಕಿತು ಎಂದು ಹರ್ಷಿಸಿದರೂ, ಕೆಲವು ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಅವರು ನಿರಂತರವಾಗಿ ಮಾತೃತ್ವಮ್ ಯೋಜನೆಯಲ್ಲಿ ದೈಹಿಕವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಅವರು ಶ್ರೀಗುರುಗಳ ಚರಣಗಳಲ್ಲಿ ತಮ್ಮ ದುಃಖವನ್ನು ನಿವೇದಿಸಿದರು.
ಅದೇ ಸಮಯದಲ್ಲಿ, ಅನಿರೀಕ್ಷಿತವಾಗಿ ಅವರ ಪತಿ ಅಶೋಕ ಅವರಿಗೆ ತಮ್ಮ ಊರಿನ ಸಮೀಪದ ಒಂದು ಧಾರ್ಮಿಕ ಸ್ಥಾನದಲ್ಲಿ ಪ್ರತಿ ಮಂಗಳವಾರ ಪೂಜೆ ಮಾಡುವ ಅವಕಾಶ ದೊರಕಿತು. ಆ ಪೂಜೆಯಿಂದ ದೊರಕುವ ಕಾಣಿಕೆಯನ್ನೆಲ್ಲ ಮಾತೃತ್ವಮ್ ಯೋಜನೆಗೆ ಮೀಸಲಿಡಬೇಕು ಎಂಬುದು ಭಾಗ್ಯ ಅವರ ಮನದಾಳದ ಹಂಬಲವಾಗಿತ್ತು.
” ಈ ಗೋಸೇವೆಗೆ ಸಂಪೂರ್ಣ ಸಹಕಾರ ನೀಡಿದವರು ನನ್ನ ಯಜಮಾನರು ” ಎಂದು ಅವರು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಪತಿ, ಪತ್ನಿಯರ ಸಮರ್ಪಣೆ ಒಂದಾಗಿ, ಶ್ರೀಗುರುಗಳ ಕೃಪೆಯಿಂದ ಅಲ್ಪ ಸಮಯದಲ್ಲೇ ಅವರು ಒಂದು ಹಸುವಿನ ವೆಚ್ಚವನ್ನು ಬರಿಸಿ, ಲಕ್ಷ ಗುರಿಯನ್ನು ತಲುಪಿದರು.
‘ ಇದು ಕೇವಲ ಹಣಕಾಸಿನ ಸಾಧನೆ ಅಲ್ಲ; ಶರಣಾಗತಿಯ ಫಲವಾಗಿ ದೊರೆತ ದಿವ್ಯ ಅನುಗ್ರಹದ ಅನುಭವ ‘ ಎನ್ನುವ ಭಾಗ್ಯ ಅವರು ಪ್ರತಿದಿನವೂ ಶ್ರೀಗುರುಗಳ ಆಶೀರ್ವಚನಗಳನ್ನು ತಪ್ಪದೇ ಕೇಳುತ್ತಾರೆ.
ವಿಶೇಷವಾಗಿ ಶ್ರೀಗುರುಗಳು ಕಾಲದ ಕುರಿತು ಹೇಳಿದ ‘ಈ ಸಮಯ ಹೀಗೆ ಇರದು ‘ಎಂಬ ಮಾತು ಅವರ ಬದುಕಿನ ಧೈರ್ಯದ ಮಂತ್ರವಾಗಿದೆ. ಸುಖ ಬಂದಾಗಲೂ ಮೈಮರೆಯದೆ, ದುಃಖ ಎದುರಾದಾಗಲೂ ಧೃತಿಗೆಡದೆ ಅವರು ಈ ಮಾತನ್ನು ಮನದಲ್ಲಿ ನೆನಪಿಸಿಕೊಳ್ಳುತ್ತಾರೆ.
‘ ಎಲ್ಲವೂ ಶ್ರೀಗುರುಗಳ ಅನುಗ್ರಹದಿಂದಲೇ ನಡೆಯುತ್ತದೆ ‘ ಎಂಬ ದೃಷ್ಟಿಕೋನವೇ ಅವರಿಗೆ ಬದುಕಿನ ಭರವಸೆಯ ಮಂತ್ರವಾಗಿದೆ.
ಭಾಗ್ಯ, ಅಶೋಕ್ ದಂಪತಿಗಳು ಈಗ ಹೊಸ ಮನೆ ಕಟ್ಟುತ್ತಿದ್ದು, ಆ ನೂತನ ಗೃಹದ ಬಗ್ಗೆ ಭಾಗ್ಯ ಅವರ ಕನಸುಗಳು ಸಂಪೂರ್ಣ ಆಧ್ಯಾತ್ಮಿಕವಾಗಿ ಬೆಸೆದಿದೆ.
” ಶ್ರೀಗುರುಗಳು ನಮ್ಮ ಮನೆಗೆ ಪಾದಾರ್ಪಣೆ ಮಾಡಬೇಕು, ಮನೆಯಲ್ಲಿ ಶ್ರೀಕರಾರ್ಚಿತ ರಾಮದೇವರಿಗೆ ಪೂಜೆ ನಡೆಯಬೇಕು, ಗುರುಭಿಕ್ಷೆ ನಡೆಯಬೇಕು” ಎಂಬುದೇ ಅವರ ಅಭಿಲಾಷೆ. ಮಕ್ಕಳಾದ ಲಕ್ಷ್ಮೀಶ ಮತ್ತು ಕೃಪೇಶ ಇಬ್ಬರಲ್ಲೂ ಶ್ರೀಮಠದ ಮೇಲೆ ಅಪಾರ ಶ್ರದ್ಧಾಭಕ್ತಿ ಇದೆ. ಇವರು ಆಗಾಗ ಶ್ರೀಮಠಕ್ಕೆ ತೆರಳಿ ಶ್ರೀಗುರುಗಳ ದರ್ಶನ ಪಡೆದು ಬರುತ್ತಾರೆ.
ಪೊರಪ್ಪೆ ಮನೆ ವಲಯದ ಶಿಷ್ಯ ಮಾಧ್ಯಮ ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಹೆಸರು, ಗೌರವ ಅಥವಾ ಮೆಚ್ಚುಗೆಯ ಅಪೇಕ್ಷೆ ಇಲ್ಲದೆ, ‘ ಇದು ಗುರುಕಾರ್ಯ ‘ಎಂಬ ಶ್ರದ್ಧಾಭಾವದಿಂದ ಸೇವೆ ಮಾಡುತ್ತಾರೆ.
ಗುರುಸ್ಮರಣೆಯಿಂದಲೇ ಇವರ ದಿನ ಆರಂಭವಾಗುತ್ತದೆ. ಪ್ರತಿಯೊಂದು ಕೆಲಸ ಮಾಡುವಾಗಲೂ ಮೌನವಾಗಿಯೇ ಗುರುಸ್ಮರಣೆ ಮಾಡುವ ಭಾಗ್ಯ ಅಶೋಕ್ ಅವರ ಜೀವನವು ಗುರುವಿನ ಚರಣಗಳಲ್ಲಿ ಸಂಪೂರ್ಣವಾಗಿ ಶರಣಾದರೆ ಬದುಕಿನ ದಾರಿಗಳು ತಾನಾಗಿಯೇ ತೆರೆದುಕೊಳ್ಳುತ್ತವೆ ಎಂಬ ಸತ್ಯಕ್ಕೆ ಸಾಕ್ಷಿಯಾಗಿದೆ.
ಪ್ರಸನ್ನಾ ವಿ. ಚೆಕ್ಕೆಮನೆ