” ಶ್ರೀಗುರುಕೃಪೆಯ ಸ್ಪರ್ಶದಿಂದ ಬದುಕಿಗೆ ಹೊಸ ಬೆಳಕು ” – ಚಿತ್ರಾ ಭಟ್ ಬೆಕ್ಕುತ್ತೆ

ಮಾತೃತ್ವಮ್

 

” ಶ್ರೀಮಠದ ಸಂಪರ್ಕಕ್ಕೆ ಬಂದ ಬಳಿಕ ನನ್ನ ಬದುಕಿನ ಪಥವೇ ಬದಲಾಗಿದೆ. ಕಷ್ಟದ ಸಮಯದಲ್ಲಿ ಶ್ರೀಗುರು ಚರಣಗಳಿಗೆ ಶರಣಾದರೆ ಬೆಳಕಿನ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬುದನ್ನು ನಾನು ನನ್ನ ಜೀವನದಲ್ಲೇ ಅನುಭವಿಸಿದ್ದೇನೆ ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಹೊನ್ನಾವರ ಮಂಡಲ ಮುಗ್ವಾ ವಲಯದ ಬೆಕ್ಕುತ್ತೆ ರಾಯಭಟ್ರ ಮನೆಯ ಗಣಪತಿ ಭಟ್ ಅವರ ಪತ್ನಿ ಚಿತ್ರಾ ಭಟ್.

ಹೊನ್ನಾವರದ ನಾರಾಯಣ ಭಟ್ – ಮಾದೇವಿ ಭಟ್ ದಂಪತಿಗಳ ಪುತ್ರಿಯಾದ ಚಿತ್ರಾ ಭಟ್ ಅವರು ಕಳೆದ ೧೫ ವರ್ಷಗಳಿಂದ ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಕಳೆದ ಎಂಟು ವರ್ಷಗಳಿಂದ ಮುಗ್ವಾ ವಲಯದ ಮಾತೃ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಬಾಗಿನವನ್ನು ಪಡೆದ ಇವರು, ಮಾತೃತ್ವಮ್ ಯೋಜನೆಯ ಮೂಲಕ ಎರಡು ಹಸುಗಳ ಗುರಿ ತಲುಪಿದ ಮಾಸದ ಮಾತೆ. ಇಂದಿಗೂ ತಮ್ಮ ಮನೆಯಲ್ಲಿ ಮೂರು ಹಸುಗಳನ್ನು ಸಾಕುತ್ತಿರುವುದು ಇವರ ಗೋಸೇವೆಯ ಮೇಲಿನ ಅಪಾರ ಪ್ರೀತಿಯ ಪ್ರತೀಕ.

ಚಿತ್ರಾ ಭಟ್ ಅವರ ಬದುಕಿನಲ್ಲಿ ಶ್ರೀಗುರು ಕೃಪೆಯ ಮಹತ್ವವನ್ನು ಸಾರುವ ಘಟನೆಯೊಂದು ನಡೆದಿದ್ದು ಒಂದು ಸಂದರ್ಭದಲ್ಲಿ ಅವರ ಆರೋಗ್ಯ ತುಂಬಾ ಹದಗೆಟ್ಟಿತ್ತು. ಬೆನ್ನಿನ ಡಿಸ್ಕ್ ಸಮಸ್ಯೆ ಸಂಪೂರ್ಣ ವಾಸಿಯಾಗುವುದು ಅಸಾಧ್ಯ ಎಂದು ವೈದ್ಯರೂ ಹೇಳಿದ್ದರು. ಆ ಸಮಯದಲ್ಲಿ ಅವರು ಶ್ರೀಗುರುಚರಣಗಳಿಗೆ ಶರಣಾದರು.

” ಗುರುಕೃಪೆಯಿಂದ ನನ್ನ ಎಲ್ಲಾ ನೋವು, ಅನಾರೋಗ್ಯ ಸಂಪೂರ್ಣ ವಾಸಿಯಾಯಿತು. ಈಗ ನಮ್ಮ ಮನೆಯ ಹಸುಗಳ ಕೆಲಸದ ಸಹಿತ ಎಲ್ಲಾ ಕೆಲಸಗಳನ್ನು ನಾನೇ ಮಾಡುತ್ತಿದ್ದೇನೆ. ವೈದ್ಯರಿಗೂ ಅಚ್ಚರಿ ಮೂಡಿಸಿದ ಪವಾಡವಿದು ” ಎನ್ನುತ್ತಾ ಚಿತ್ರಾ ಭಟ್ ಭಾವುಕರಾಗುತ್ತಾರೆ.

ಶ್ರೀಗುರು ಕೃಪೆಯ ಅನುಭವವು ಇವರ ಕುಟುಂಬ ಜೀವನದಲ್ಲಿಯೂ ಅನೇಕ ಬದಲಾವಣೆಗಳನ್ನು ತಂದಿದೆ. ಇವರ ಹೊಸ ಮನೆಗೆ ‘ ಸುಸಮ್ಮತ ‘ ಎಂಬ ಹೆಸರು ನೀಡಿದವರು ಸ್ವತಃ ಶ್ರೀಸಂಸ್ಥಾನದವರು. ಈ ಮನೆಗೆ ಶ್ರೀಗುರುಗಳ ದಿವ್ಯ ಆಗಮನವಾಗಿದ್ದು, ಪಾದಪೂಜೆ ನಡೆಸುವ ಸೌಭಾಗ್ಯವೂ ಇವರಿಗೆ ದೊರಕಿದೆ.
” ಶ್ರೀ ಗುರುಗಳು ನಮ್ಮ ಮನೆ ಬಂದಿದ್ದು ಪೂರ್ವ ಜನ್ಮದ ಸುಕೃತ ” ಎಂದು ಆ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ.

ಚಿತ್ರಾ ಭಟ್ ಅವರ ಮನೆಯವರೆಲ್ಲರೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತಿ ಗಣಪತಿ ಭಟ್ ಗುರಿಕಾರರಾಗಿ ಹಾಗೂ ವಲಯ ಕೋಶಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಮಗ ಪ್ರಮತ್ ನ ಉದ್ಯೋಗದ ವಿಷಯದಲ್ಲಿಯೂ ಶ್ರೀಗುರುಕೃಪೆಯ ಅನುಭವವನ್ನು ಚಿತ್ರಾ ಭಟ್ ಹೃದಯಂಗಮವಾಗಿ ವಿವರಿಸುತ್ತಾರೆ.
” ಪ್ರಮತ್‌ಗೂ ಶ್ರೀಮಠದ ಸೇವೆಯ ಮೇಲೂ, ಶ್ರೀಗುರುಗಳ ಮೇಲೂ ಅಪಾರ ಶ್ರದ್ಧೆ. ಅವನ ಓದು ಮುಗಿದ ತಕ್ಷಣವೇ ಉದ್ಯೋಗ ದೊರಕಿದ್ದು, ಶ್ರೀಗುರು ಕೃಪೆಯ ಫಲವೆಂದು ನಾವು ನಂಬುತ್ತೇವೆ. ಶ್ರೀಮಠದ ಸಂಪರ್ಕದಿಂದ ಅವನಲ್ಲೂ ಧಾರ್ಮಿಕ ಪ್ರಜ್ಞೆ ಮೂಡಿದೆ. ಮಠದ ವಿವಿಧ ಸೇವೆಗಳಿಗೆ ಅವನು ಸಮರ್ಪಣೆ ಮಾಡಿದ್ದಾನೆ. ಮಕ್ಕಳಿಗೆ ಶ್ರೀಮಠದ ಸಂಪರ್ಕ ದೊರಕುವಂತೆ ಮಾಡುವುದು ತಾಯ್ತಂದೆಯರ ಕರ್ತವ್ಯ ” ಎನ್ನುತ್ತಾರೆ.

ಮುಗ್ವಾ ವಲಯದ ಮಾತೃ ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿರುವ ಚಿತ್ರಾ ಭಟ್, ಅನೇಕ ಮಾತೆಯರನ್ನು ಒಗ್ಗೂಡಿಸಿ ಶ್ರೀಮಠದ ವಿವಿಧ ಯೋಜನೆಗಳಿಗೆ ಕೈಜೋಡಿಸಲು ಪ್ರೇರೇಪಣೆ ನೀಡಿದ್ದಾರೆ.
” ಮನೆಯೊಳಗೆ ಸೀಮಿತವಾಗಿದ್ದ ಮಾತೆಯರು, ಶ್ರೀಮಠದ ಕಾರ್ಯಗಳ ಮೂಲಕ ಹೊರಬಂದು ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ತುಂಬಾ ಹೆಮ್ಮೆಯ ವಿಚಾರ. ಮಾತೆಯರ ಸಂಘಟನೆ ಸಮಾಜದ ಶಕ್ತಿ ” ಎನ್ನುತ್ತಾರೆ ಚಿತ್ರಾ ಭಟ್

” ಪ್ರತಿಯೊಂದು ಕಾರ್ಯ ಆರಂಭಿಸುವಾಗಲೂ ನನಗೆ ಶ್ರೀಗುರುಗಳ ಆಶೀರ್ವಚನದ ಮಾತುಗಳೇ ನೆನಪಾಗುತ್ತವೆ. ಅವೇ ನನ್ನನ್ನು ಸದಾ ಸತ್ಕರ್ಮಗಳತ್ತ ಪ್ರೇರೇಪಿಸುತ್ತವೆ ” ಎನ್ನುವ ಇವರಿಗೆ, ಮುಂದಿನ ದಿನಗಳಲ್ಲಿ ಶ್ರೀಮಠದ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕೆಂಬ ಅಪೇಕ್ಷೆಯಿದೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *