ಶ್ರೀಮಠದ ಸೇವೆ ಆತ್ಮ ಸಂತೋಷಕ್ಕೆ ದಾರಿ – ಮಹಾದೇವಿ ಸಿ. ಭಟ್ ಶಿರಸಿ

ಮಾತೃತ್ವಮ್

 

” ಗೋಮಾತೆ ನಮ್ಮ ಸಂಸ್ಕೃತಿಯ ಜೀವಾಳ. ಧರ್ಮ, ಸಂಸ್ಕಾರ, ಜೀವನ ಮೌಲ್ಯಗಳೆಲ್ಲವೂ ಗೋವಿನೊಂದಿಗೆ ಬೆಸೆದುಕೊಂಡಿದೆ. ಬದುಕಿನಲ್ಲಿ ಗೋಸೇವೆಗೆ ಅವಕಾಶ ದೊರೆತರೆ ಅದುವೇ ನಮ್ಮ ಜೀವನದ ಸಾರ್ಥಕತೆ ” ಎಂದು ಶ್ರದ್ಧಾಭಕ್ತಿಗಳಿಂದ ನುಡಿದವರು ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ಶಿರಸಿಯ ಚಂದ್ರಶೇಖರ ಭಟ್ ಅವರ ಪತ್ನಿ ಮಹಾದೇವಿ ಭಟ್.

ಮೂಲತಃ ಕುಮಟಾ ಸಮೀಪ ದೇವನೀ ಮಠ ಬಾಡದ ಅನಂತ ಭಟ್ – ಯಮುನಾ ದಂಪತಿಗಳ ಪುತ್ರಿಯಾದ ಮಹಾದೇವಿ ಭಟ್ ಬಾಲ್ಯದಿಂದಲೇ ಧಾರ್ಮಿಕ ವಾತಾವರಣದಲ್ಲಿ ಬೆಳೆದವರು. ತಂದೆ ವೈದಿಕರಾಗಿದ್ದ ಕಾರಣ ಮನೆಯಲ್ಲೇ ವೇದಾಧ್ಯಯನ, ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದು ಶ್ರೀಮಠದ ಸೇವೆಯ ಮಹತ್ವದ ಅರಿವು ಇವರಲ್ಲಿ ಬಾಲ್ಯದಲ್ಲಿಯೇ ಬೇರೂರಿತು. ಅದುವೇ ಮುಂದಿನ ಜೀವನದಲ್ಲಿಯೂ ಇವರಿಗೆ ದಾರಿದೀಪವಾಯಿತು.

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಾದೇವಿ ಭಟ್ ಅವರು ನಿವೃತ್ತಿಯ ನಂತರ ಸಮಾಜ ಸೇವೆ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಪತಿ ಚಂದ್ರಶೇಖರ ಭಟ್ ಅವರು ಗುರಿಕಾರರಾಗಿಯೂ ಸೇವೆ ಸಲ್ಲಿಸಿದವರು. ಇವರ ಕುಟುಂಬದಲ್ಲಿಯೂ ಧಾರ್ಮಿಕ ಸೇವೆಯ ಪರಂಪರೆ ಇದೆ. ಚಂದ್ರಶೇಖರ ಭಟ್ ಅವರ ಅಣ್ಣ ಶ್ರೀಪರಿವಾರದಲ್ಲಿ ವೈದಿಕರಾಗಿ ಸೇವೆ ಸಲ್ಲಿಸಿದ್ದರು. ಇಂತಹ ಧಾರ್ಮಿಕ ಹಿನ್ನೆಲೆಯ ಕುಟುಂಬದಲ್ಲಿ ಬದುಕುತ್ತಿರುವ ಮಹಾದೇವಿ ಭಟ್ ಅವರಿಗೆ ಮಠದ ಸೇವೆ ಎಂದರೆ ಅಪಾರ ಪ್ರೀತಿ ಮತ್ತು ಗೌರವ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದಾ ಸಕ್ರಿಯರಾಗಿರುವ ಇವರು ಅಂಬಾಗಿರಿ ಮಠದ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಶ್ರೀಗುರುಗಳ ಎಲ್ಲಾ ಯೋಜನೆಗಳಿಗೂ ಸಂಪೂರ್ಣ ಸಮರ್ಪಣೆಯೊಂದಿಗೆ ಕೈಜೋಡಿಸಿದ್ದಾರೆ.
” ಶ್ರೀಮಠದ ಸೇವೆಯೆಂದರೆ ದೇವರ ಸೇವೆಯೇ ” ಎಂಬ ಭಾವ ಇವರ ಮನಸ್ಸಿನಲ್ಲಿ ಭದ್ರವಾಗಿ ನೆಲೆಸಿದೆ.

ಗೋಸೇವೆಯ ವಿಷಯದಲ್ಲಿ ಮಹಾದೇವಿ ಭಟ್ ಅವರ ನಿಷ್ಠೆ ಮತ್ತು ಶ್ರದ್ಧೆ ವಿಶೇಷವಾಗಿ ಗಮನಾರ್ಹ. ಮಾತೃತ್ವಮ್ ಯೋಜನೆಯ ಮೂಲಕ ಈಗಾಗಲೇ ಐದು ಗೋಮಾತೆಗಳ ಪೋಷಣ ವೆಚ್ಚವನ್ನು ಸ್ವಯಂ ಭರಿಸಿರುವ ಇವರು ಈಗಲೂ ನಿರಂತರವಾಗಿ ಗೋಸೇವೆಯನ್ನು ಮುಂದುವರಿಸುತ್ತಿದ್ದಾರೆ.

” ನಮ್ಮಿಂದ ಸಾಧ್ಯವಾದಷ್ಟು ಗೋಮಾತೆಗೆ ನೆರವಾಗುವುದು ನಮ್ಮ ಕರ್ತವ್ಯ. ಗೋಮಾತೆ ಎಂದರೆ ದೇವತಾ ಸ್ವರೂಪಿಣಿ ” ಎಂಬ ಭಾವದಿಂದ ಅವರು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮಾತ್ರವಲ್ಲದೆ, ತಮ್ಮ ಆಪ್ತ ವಲಯದ ಮಾತೆಯರನ್ನು ಪ್ರೇರೇಪಿಸಿ ಅವರು ಸಹಾ ಮಾತೃತ್ವಮ್ ನ ಮೂಲಕ ಗುರಿ ತಲುಪುವ ಕಾರ್ಯದಲ್ಲಿಯೂ ಸಹಕಾರ ನೀಡುತ್ತಿದ್ದಾರೆ.

” ಒಬ್ಬೊಬ್ಬರು ಕೈಜೋಡಿಸಿದರೆ ದೊಡ್ಡ ಗುರಿ ತಲುಪುದು ಅಸಾಧ್ಯವಲ್ಲ ” ಎಂಬ ನಂಬಿಕೆಯೊಂದಿಗೆ ಇತರರನ್ನೂ ಈ ಪುಣ್ಯಕಾರ್ಯಕ್ಕೆ ಕರೆತರುತ್ತಿರುವುದು ಅವರ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿ.

ಈ ಹಿಂದೆ ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ವಿಶ್ವಗೋ ಸಮ್ಮೇಳನ, ಶ್ರೀರಾಮಾಯಣ ಮಹಾಸತ್ರವೇ ಮೊದಲಾದ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿರುವ ಅನುಭವವೂ ಇವರಿಗಿದೆ. ಶ್ರೀಮಠದ ಸೇವೆಗಳಲ್ಲಿ ತೊಡಗಿಸಿಕೊಂಡಾಗ ಮನಸ್ಸಿಗೆ ಅಪಾರ ಸಂತೋಷ, ಶಾಂತಿ ದೊರಕುತ್ತದೆ ಎಂಬುದು ಅವರ ಮನದ ಮಾತು

” ಶ್ರೀಮಠದ ಸೇವೆಗೆ ವಯಸ್ಸು ಅಡ್ಡಿಯಲ್ಲ. ಮನಸ್ಸಿನಲ್ಲಿ ಶ್ರದ್ಧೆ ಮತ್ತು ಸಮರ್ಪಣೆ ಇದ್ದರೆ ಸಾಕು” ಎಂಬುದು ಮಹಾದೇವಿ ಭಟ್ ಅವರ ಜೀವನದ ತತ್ವ. ತಮ್ಮ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಈ ತತ್ವವನ್ನು ಅನುಸರಿಸಿಕೊಂಡು ಬಂದವರು ಇವರು.

ಇವರ ಇಬ್ಬರು ಪುತ್ರಿಯರಿಗೂ ವಿವಾಹವಾಗಿದೆ. ಶ್ರೀಗುರುಗಳ ಕೃಪೆಯಿಂದ ಅವರೆಲ್ಲರೂ ಸುಸ್ಥಿತಿಯಲ್ಲಿ, ಸುಖವಾಗಿ ಬದುಕುತ್ತಿದ್ದಾರೆ ‘ ಎಂಬ ಸಂತೋಷ ಇವರಿಗಿದೆ. ಶ್ರೀಮಠದ ಸಂಪರ್ಕ ಬಾಲ್ಯದಿಂದಲೇ ದೊರಕಿದ ಕಾರಣ ಪುತ್ರಿಯರಲ್ಲಿಯೂ ಧಾರ್ಮಿಕ ಆಸಕ್ತಿ, ಮೌಲ್ಯಗಳು ಬೆಳೆದು ಬಂದಿವೆ.
” ಮಕ್ಕಳಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಬೇಕು. ಅದೇ ಅವರಿಗೆ ಸರಿಯಾದ ಜೀವನ ಮಾರ್ಗವನ್ನು ತೋರಿಸುತ್ತದೆ ” ಎನ್ನುವುದು ಮಹಾದೇವಿ ಭಟ್ ಅವರ ಅನಿಸಿಕೆ.

ಭವಿಷ್ಯದಲ್ಲಿಯೂ ಶ್ರೀಮಠದ ಎಲ್ಲಾ ಯೋಜನೆಗಳಲ್ಲಿ ತೊಡಗಿಸಿಕೊಂಡು ಸೇವೆ ಮುಂದುವರಿಸಬೇಕು ಎಂಬ ಅಭಿಲಾಷೆ ಮಹಾದೇವಿ ಭಟ್ ಅವರದ್ದು. ಗೋಸೇವೆ, ಧಾರ್ಮಿಕ ಸೇವೆ, ಸಮಾಜ ಸೇವೆ ಇವೆಲ್ಲವು ಇವರ ಜೀವನದ ಅವಿಭಾಜ್ಯ ಅಂಗಗಳು.

” ಗೋಮಾತೆಯ ಸೇವೆಯಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕುತ್ತದೆ. ಈ ಅನುಭವವನ್ನು ಇನ್ನಷ್ಟು ಜನರಿಗೆ ತಲುಪಿಸುವುದೇ ನನ್ನ ಆಶಯ ” ಎಂದು ನುಡಿಯುವ ಮಹಾದೇವಿ ಭಟ್ ಅವರಿಗೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ದೊರಕಿರುವುದು ಪೂರ್ವಜನ್ಮದ ಸುಕೃತ ಎಂಬ ನಂಬಿಕೆ ಇದೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *