ಅದು 1999ರ ಸಮಯ. ಅಪ್ಪನ ಜೊತೆ ರಾಮೋತ್ಸವಕ್ಕೆಂದು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಬಂದಿದ್ದ ನನಗೆ ವಿಸ್ಮಯವಾಗಿತ್ತು. ಅಂದು ಜಾತ್ರೆಯೇ ಎಂಬಂತೆ ನೆರೆದಿತ್ತು ಜನ ಸಾಗರ. ಮಠದ ತುಂಬೆಲ್ಲ ಶೃಂಗಾರ, ಮಂತ್ರಗಳ ಸುಸ್ವರ, ತೇರಿನ ಸಡಗರ, ಸುತ್ತಲೂ ಹಚ್ಚ ಹಸಿರಿನ ಚಿತ್ತಾರ, ಅಪರೂಪದ ದಂತ ಸಿಂಹಾಸನ.
ಓ, ಸ್ವರ್ಗವೇ ಧರೆಗಿಳಿದಂತಿತ್ತು.
ಚಿಕ್ಕವಳಾಗಿದ್ದ ನನಗೆ ಇದನ್ನೆಲ್ಲಾ ನೋಡುವುದೇ ಒಂದು ವಿಸ್ಮಯ. ಜಗತ್ತಿನ ಏಕೈಕ ಅವಿಚ್ಛಿನ್ನ ಪರಂಪರೆ, ಅಗಸ್ತ್ಯ ಮುನಿಗಳು ಪೂಜಿಸುತ್ತಿದ್ದ ರಾಮಾದಿ ವಿಗ್ರಹಗಳು, ಚಂದ್ರಮೌಳೀಶ್ವರ ಲಿಂಗ, ರಾಜರಾಜೇಶ್ವರಿ, ಶ್ರೀಪಾದುಕೆಗಳು ಹಾಗೂ ಗುರು ಪರಂಪರೆ ಮತ್ತು ಗುರುಗಳ ಮಹಿಮೆ ಪವಾಡಗಳನ್ನು ತಿಳಿದಾಗ ಪುಲುಕಿತಗೊಂಡೆ.
ನಂತರ ಎಷ್ಟೋ ರಾಮೋತ್ಸವಗಳಲ್ಲಿ ಭಾಗಿಯಾಗುವ ಭಾಗ್ಯ ನನ್ನದಾಗಿತ್ತು. ರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನದಂತ ಅದ್ಭುತ ಕಾರ್ಯಕ್ರಮಗಳು ಅಲ್ಲಿ ಸಂಪನ್ನಗೊಂಡಿವೆ. ಹೀಗೆ ದಿನಗಳು, ವಸಂತಗಳು ಸಂದಿವೆ.
ಈಗ ಮತ್ತೊಂದು ಮಹಾಭಾಗ್ಯವೊಂದು ನಮಗೊದಗಿ ಬಂದಿದೆ. ಅದೇ ಪ್ರಧಾನ ಮಠದ ಪುನರ್ನಿರ್ಮಾಣ.
ಈ ಶುಭ ಸಂದರ್ಭದಲ್ಲಿ:
ಶ್ರೀಗುರು ಶ್ರೀವಾಸ ನಿರ್ಮಾಣ ಸ್ಥಳದಲ್ಲಿ ಶಿಷ್ಯ ಭಕ್ತರಿಂದ ಶ್ರೀಗುರುಪಾದುಕಾಸ್ತೋತ್ರ ಸಮರ್ಪಣೆ
ಶ್ರೀರಾಮನ ಸಾನಿಧ್ಯ ನಿರ್ಮಾಣ ಸ್ಥಳದಲ್ಲಿ ಸಾವಿರಕ್ಕೂ ಹೆಚ್ಚು ಮಹನೀಯರಿಂದ ಶ್ರೀರಾಮ ತಾರಕ ಜಪ.
ಜಗನ್ಮಾತೆಯ ದೇಗುಲ ನಿರ್ಮಾಣ ಸ್ಥಳದಲ್ಲಿ ಶ್ರೀ ರಾಜರಾಜೇಶ್ವರಿಗೆ ಸಾವಿರಕ್ಕೂ ಅಧಿಕ ಮಹಿಳೆಯರಿಂದ ಸಹಸ್ರಾಧಿಕ ಕುಂಕುಮಾರ್ಚನೆ.
ಶ್ರೀ ಚಂದ್ರಮೌಳೀಶ್ವರನ ಸಾನಿಧ್ಯದಲ್ಲಿ ರುದ್ರಪಾಠಿಗಳಿಂದ ಶತಾಧಿಕ ರುದ್ರಪಠಣ ಪೂರ್ವಕ ಅಭಿಷೇಕ.
ಶಾರದೆಯ ಸನ್ನಿಹಿತದಲ್ಲಿ ಶತಾಧಿಕ ಶಾರದಾಷ್ಟಕ ಪಠಣ.
ಗುರು ಸನ್ನಿಧಿಯಲ್ಲಿ ಶಿಷ್ಯ ಭಕ್ತರಿಂದ ನಿಧಿ ಕಲಶಕ್ಕೆ ಮುಷ್ಟಿ ದ್ರವ್ಯ ಸಮರ್ಪಣೆ.
ಸಮಸ್ತ ಶಿಷ್ಯ ಭಕ್ತರಿಂದ ತಾಯಿ ಶಾರದೆಗೆ ಭಕ್ತಿ ಭಾವದ ದಿವ್ಯಾರತಿ.
ಧರ್ಮಸಭೆ
ಹೀಗೆ ಶ್ರೀ ಸಂಸ್ಥಾನದವರ ದಿವ್ಯ ಸಾನಿಧ್ಯದಲ್ಲಿ ಅಭೂತ ಪೂರ್ವ ಭವ್ಯ ಕಾರ್ಯಕ್ರಮ. ಈ ಕಾರ್ಯಕ್ಕೆ ತನು, ಮನ, ಧನ ದಿಂದ ನಾವು ಭಾಗಿಯಾಗೋಣ. ಎಲ್ಲರೂ ಜೊತೆಯಾಗಿ ಸೇರಿ ಧನ್ಯರಾಗೋಣ! ಪುಣ್ಯ ಗಳಿಸೋಣ !!
‘ ರಾಮಸತಿ’