ನ್ಯಾಸವೆಂಬುದರ ಸಾಮಾನ್ಯ ಅಭಿಪ್ರಾಯ ಇಡುವುದು.
ಶಿಲಾನ್ಯಾಸವೆಂದರೆ ಶಿಲೆಯನ್ನಿಡುವುದು ಎಂದರ್ಥ.
ಅದಕ್ಕೇನು ಇಷ್ಟು ಮಹತ್ವ?
ದೇವಾಲಯ ನಿರ್ಮಾಣದಲ್ಲಿ ಶಿಲಾನ್ಯಾಸ, ನಿಧಿಕಲಶ ಸ್ಥಾಪನೆ,ಷಡಾಧಾರ,ಗರ್ಭನ್ಯಾಸ
ಇವುಗಳು ಒಂದೊಂದು ಹಂತದ ಪ್ರಾರಂಭದ ಕಾರ್ಯಕ್ರಮಗಳೆಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ.
ಆಯಾ ಪ್ರಾರಂಭದ ಕಾರ್ಯಗಳಿಗೆ ಒಂದು ಪ್ರಾಮುಖ್ಯ ವೂ ಶಾಸ್ತ್ರಗಳಲ್ಲಿ ಹೇಳಿದ್ದಿದೆ.
ಪ್ರಸ್ತುತ ಪ್ರಧಾನ ಮಠ ಶ್ರೀರಾಮಚಂದ್ರಾಪುರ, ಹೊಸನಗರ ಇದರ ಪುನರ್ನಿರ್ಮಾಣ ಕಾರ್ಯದಲ್ಲಿ ಶಿಲಾನ್ಯಾಸವನ್ನು ಮಾಡಲಾಗುತ್ತಿದೆ.
ಹೇಗೆ ಸಣ್ಣ ಬೀಜದಲ್ಲಿ ಇಡೀ ವೃಕ್ಷವು ಅಡಕವಾಗಿರುತ್ತದೆಯೋ,ಆ ಸಣ್ಣ ವೃಕ್ಷವು ಮುಂದೆ ಹೆಮ್ಮರವಾಗಿ ಬೆಳೆಯುತ್ತದೆಯೋ ಹಾಗೆಯೇ ಇಲ್ಲಿ ನ್ಯಾಸ ಮಾಡಡುತ್ತಿರುವ ಪುಟ್ಟ ಶಿಲೆಯಲ್ಲಿ ಮುಂದೆ ನಿರ್ಮಿಸಲಾಗುವ ಇಡೀ ದೇವಾಲಯವೇ ಅಡಕವಾಗಿದೆ .ಇಡೀ ದೇವಾಲಯವನ್ನು ಆಧಾರರೂಪವಾಗಿ ಇದು ಹೊತ್ತು ಕೊಳ್ಳುತ್ತದೆ.ಅಂದರೆ ದೇವಾಲಯದ ತೂಕವನ್ನೆಲ್ಲಾ ಹೊತ್ತುಕೊಳ್ಳುತ್ತದೆ ಎಂಬರ್ಥದಲ್ಲಿ ಅಲ್ಲ.
ಇಡೀ ದೇವಾಲಯದ ತತ್ತ್ವವೇ ಇದನ್ನು ಆಧರಿಸಿದೆ.
ತ್ವಮೇವ ಪರಮಾಶಕ್ತಿಃ ತ್ವಮೇವಾಸನಧಾರಿಕಾ|
ಸಂತೃಪ್ತಯಾ ತ್ವಯಾ ದೇವಿ ಸ್ಥಾತವ್ಯಮಿಹಸರ್ವದಾ||
ಎಂದು ಸಕಲಾಧಾರರೂಪವಾದ ಪ್ರಕೃತಿಯನ್ನು /ದೇವಿಯನ್ನು/ಭುವನೇಶ್ವರಿಯನ್ನು ಆಧಾರಶಕ್ತಿಯಾಗಿ ಆವಾಹಿಸಿ ಶಾಶ್ವತವಾಗಿ ಇಲ್ಲೇ ನೆಲೆಸಿ ಆಸನರೂಪದಲ್ಲಿ ದೇವಾಲಯವನ್ನು ಧರಿಸು(ಹೊತ್ತುಕೊ) ಎಂಬರ್ಥದಲ್ಲಿ ಪ್ರಾರ್ಥಿಸಲಾಗುತ್ತದೆ.ಆದ್ದರಿಂದಲೆ ಈ ಶಿಲೆಗೆ ಆಧಾರ ಶಿಲೆ ಎಂದು ಹೆಸರು. ಆ -ಸಮಂತಾತ್(ಪೂರ್ಣವಾಗಿ) ಧರತಿ (ಹೊತ್ತಿರುತ್ತದೆ) ಇತಿ ಆಧಾರ: ||
ಆದುದರಿಂದ ಇಂಥಹ ಮಹತ್ವದ ಕಾರ್ಯಕ್ಕೆ ಶುಭ ಮುಹೂರ್ತವನ್ನು ಆಯ್ದು, ಶಂಕರಪೀಠದ ಅವಿಚ್ಛಿನ್ನ ಪರಂಪರೆಯ ಶ್ರೀ ಸಂಸ್ಥಾನದವರ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳಿಂದ ಶಿಲಾನ್ಯಾಸ ಮಾಡಲಾಗುತ್ತಿದೆ.
ಪ್ರಾರಂಭ ಸಮರ್ಪಕವಾಗಿದ್ದರೆ,ಅದರ ಫಲ ಅಷ್ಟೇ ಉತ್ತಮವಾಗಿ,ಉಜ್ವಲವಾಗಿರಲು ಸಾಧ್ಯ ಎಂಬುದು ಅರ್ಷ ಚಿಂತನೆಯಾಗಿದೆ.
ಇದಕ್ಕೆ ಪೂರ್ವಭಾವಿಯಾಗಿ ವಾಸ್ತು ದೇವತೆಯನ್ನೂ,ಪರಿವಾರವಾಗಿರುವ ಇನ್ನೂ ೫೩ ದೇವತೆಗಳನ್ನು ಆವಾಹಿಸಿ ಬಲಿಸಮರ್ಪಣೆ ಮಾಡಲಾಗುವುದು.
ಆನಂತರ ಶಸ್ತ್ರಗಳನ್ನು -ಶಿಲ್ಪಿಗಳ ಆಯುಧಗಳನ್ನು ಇಟ್ಟು ಅಸ್ತ್ರ ದೇವತೆಗಳನ್ನು ಆವಾಹಿಸಿ ಶಸ್ತ್ರ ಪೂಜೆಯನ್ನು ಮಾಡಲಾಗುವುದು.
ಆನಂತರ ಆಯಾ ದೇವಾಲಯದ ಧಾರ್ಮಿಕ ವಿಧಿವಿಧಾನಗಳನ್ನು ಅರಿತಿರುವ ತಂತ್ರಿಗಳನ್ನು ಗೌರವಿಸಿ,ಮುಂದೆ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಅವಶ್ಯಕ ವಾಗಿರುವ ವಾಸ್ತುಶಿಲ್ಪಿಗಳನ್ನು ಸ್ವೀಕರಿಸಿ ,ಶಿಲ್ಪಿಗಳಿಗೆ ಪೂಜಿಸಿದ ಶಸ್ತ್ರಾಯುಧಗಳನ್ನು ನೀಡಿ ಈಶಾನ್ಯ ದಿಕ್ಕಿಗೆ ತೆರಳಿ ಶಿಲಾಪರಿಗ್ರಹಕ್ಕಾಗಿ ಅನುಜ್ಞಾಪಿಸಲಾಗುತ್ತದೆ.
ಇವಿಷ್ಟು ಕಾರ್ಯಗಳನ್ನು ಶಿಲಾನ್ಯಾಸದಂದು ನೆರವೇರಿಸಿ ಮುಂದಿನ ಭವ್ಯವಾದ ಪ್ರಧಾಮಠ ಸಪರಿವಾರ ಶ್ರೀರಾಮ ದೇವಾಲಯದ ಸಂಕಲ್ಪ ಮಾಡಲಾಗುತ್ತಿದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಬಂದು , ಸಾಕ್ಷಿಗಳಾಗಿ,ಶ್ರೀಗುರುಗಳ ಸಂಕಲ್ಪಸಿದ್ಧಿಯಲ್ಲಿ ಸೇವೆಯನ್ನು ಸಲ್ಲಿಸಿ ಜೀವನವನ್ನು ಸಾರ್ಥಕಮಾಡಿಕೊಳ್ಳೋಣ.
-ಶ್ರೀಸಂಯೋಜಕರು
ಧರ್ಮಕರ್ಮ ಖಂಡ
ಶಾಸನತಂತ್ರ
ಶ್ರೀ ರಾಮಚಂದ್ರಾಪುರಮಠ