ಪುತ್ತೂರು: ಪುತ್ತೂರು ತಾಲೂಕಿನ ಕಾಂಚನ ಬಜತ್ತೂರು ಎಂಬಲ್ಲಿ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ ಎಂಬಲ್ಲಿ ಎಷ್ಟೋ ವತ್ಸರಗಳಿಂದ ಸಂಗೀತ ಸೇವೆಯು ನಡೆಯುತ್ತಾ ಬಂದಿದೆ. ಸಂಗೀತದ ಅಧ್ಯಯನ-ಅಧ್ಯಾಪನಗಳು ನಡೆಯುತ್ತಾ ಬಂದಿವೆ. ಸ್ವಸ್ತಿ ಶ್ರೀ ವಿಶ್ವಾಸು ನಾಮ ಸಂವತ್ಸರದ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು, ಮಕರ ಮಾಸ ೨೨ ಸಲ್ಲುವ ಅಂದರೆ 5-2-2026 ರಿಂದ 7-2-2026 ರಿ ವರೆಗೆ ಈ ಸಂಸ್ಥೆಯ ಸ್ಥಾಪಕಗುರುವಾದ ಸಂಗೀತರತ್ನ, ಋಷಿಗಂಧರ್ವ ವಿ. ಕಾಂಚನ ವೆಂಕಟಸುಬ್ಬರತ್ನಂ ಅವರ 105 ನೇ ಜನ್ಮವಾರ್ಷಿಕದ ಅಂಗವಾಗಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ) ವತಿಯಿಂದ ನಿರ್ಮಿಸಲಾದ ನೂತನ ಸಂಗೀತ ಕಲಾಶಾಲೆ, ಸಭಾಭವನ, ಭೋಜನಶಾಲೆಯ ಲೋಕಾರ್ಪಣೆಯು ವೇದಬ್ರಹ್ಮ ಶ್ರೀ ನಾರಾಯಣ ಬಡಕಿಲ್ಲಾಯ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 5-2-2026 ಗುರುವಾರದಂದು ಸಂಜೆ 5 ಗಂಟೆಯಿಂದ ಪ್ರಾಸಾದಾದಿ ಪರಿಗ್ರಹ, ಪುಣ್ಯಾಹ ವಾಚನ, ಆಚಾರ್ಯಾದಿ ಋತ್ವಿಕ್ ವರಣ, ಸಪ್ತಶುದ್ಧಿ, ಪ್ರಾಸಾದಶುದ್ಧಿ, ಸುದರ್ಶನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರ ಬಲಿ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 6-2-2026 ಶುಕ್ರವಾರದಂದು ಗಣಪತಿ ಹೋಮ, ಆಶ್ಲೇಷ ಬಲಿ, ವಟು ಆರಾಧನೆ, ದಿವಾ. ಗಂಟೆ 10:44 ಕ್ಕೆ ನಡೆಯುವ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ, ಸಭಾಭವನ, ಭೋಜನಶಾಲೆ ಎಂಬೀ ನವಪ್ರಾಸಾದಗಳ ಪ್ರವೇಶೋತ್ಸವಗಳು ಜರುಗಲಿರುವವು.
ಮಧ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳಿದ್ದು ಸಂಜೆ 6:00 ಗಂಟೆಯಿಂದ ಶ್ರೀ ದುರ್ಗಾನಮಸ್ಕಾರ ಪೂಜೆ, ಪ್ರಸಾದ ವಿತರಣೆಗಳು ನಡೆಯಲಿವೆ.
ದಿನಾಂಕ 7-2-2026 ಶನಿವಾರದಂದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿಚಾರಣೆಗಳು ನಡೆಯಲಿದ್ದು, ಸಾಯಂಕಾಲ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆಗಳು ಜರುಗಲಿವೆ.
ಈ ಶುಭ ಸಂದರ್ಭದಲ್ಲಿ ಶ್ರೀ ತ್ಯಾಗರಾಜರ, ಶ್ರೀ ಪುರಂದರ ದಾಸರ 72ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ ಮತ್ತು ಸ್ಥಾಪಕಗುರುವಾದ ಸಂಗೀತರತ್ನ, ಕಾಂಚನ ವೆಂಕಟಸುಬ್ಬರತ್ನಂ ಹಾಗೂ ಕರ್ನಾಟಕ ಕಲಾಶ್ರೀ ವಿ ಕಾಂಚನ ಸುಬ್ಬರತ್ನಂ ಇವರ ಪುಣ್ಯಸ್ಮರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ, ದಿನಾಂಕ 5-2-2026 ಗುರುವಾರದಂದು ಸಂಜೆ 6:00 ಗಂಟೆಯಿಂದ ಕೆ ಜೆ ಋತ ಹಾಗೂ ಸಂವಿತ್ ಆರ್ ಎಸ್ ಇವರು ಕೂಡುವಿಕೆಯಿಂದ ಆರಂಭ ಸ್ತುತಿಯಿಂದ ತೊಡಗಿ ‘ಸ್ವರ ಲಯ ಲಹರಿ’ ಎಂಬ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ. ಅದರಲ್ಲಿ, ಕೆ ಜೆ ಋತ, ಅಭಯ್ ಸಂಪಿಗೆತ್ತಾಯ, ಶ್ರೀ ಕೃಷ್ಣ ಭಟ್, ತೇಜಸ್ವಿ ಸಂಜಯ್, ವರ್ಚಸ್ ವಿ, ಅಪ್ರಮೇಯ ಹೊಸಹಳ್ಳಿ, ಸಂವಿತ್ ಆರ್ ಎಸ್, ಶಮಿತ್ ಕಲ್ಕೂರು, ಸಾಕೇತರಾಮ ಫಣಿ ವೇದಾಲ ಎಂಬ ಕಲಾವಿದರು ವಿವಿಧ ವಾದ್ಯಗಳನ್ನು ನುಡಿಸಲಿದ್ದಾರೆ. ಮುಂದೆ, ಸಂಜೆ 7 ಗಂಟೆಯಿಂದ 9 ಗಂಟೆಯವರೆಗೂ ಈ ಸಂಸ್ಥೆಯ ಶಿಷ್ಯರು, ಪ್ರಶಿಷ್ಯರು ಮತ್ತು ಅತಿಥಿ ಕಲಾವಿದರಿಂದ ಸಂಗೀತ ಸೇವೆ ಜರುಗಲಿದೆ.
ದಿನಾಂಕ 6-2-2026 ಶುಕ್ರವಾರದಂದು ಬೆಳಿಗ್ಗೆ 10:44 ಗಂಟೆಗೆ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೂತನ ಪ್ರಾಸಾದಗಳ ಪ್ರವೇಶೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಹಾಗೆಯೇ ಕಾಂಚನ ಮ್ಯೂಸಿಕ್ ಅಕಾಡೆಮಿಯ ಶಿಷ್ಯರು, ಪ್ರಶಿಷ್ಯರು ಹಾಗೂ ಅತಿಥಿ ವೃಂದದಿಂದ, ವಿದ್ವಾನ್ ಕಾಂಚನ ವೆಂಕಟಸುಬ್ಬರತ್ನಂ ಅವರ 105 ನೇ ಜನ್ಮವಾರ್ಷಿಕದ ಪ್ರಯುಕ್ತ “ಶತಾಧಿಕ ಕಂಠಗಾಯನ ಮತ್ತು ವಾದನ” ಎಂಬ ಅಭಿಧಾನದೊಂದಿಗೆ ಸಂಗೀತದ ರಸಧಾರೆಯು ಹರಿಯಲಿದೆ. 11:30 ಗಂಟೆಯಿಂದ ಅಭಿಷೇಕ್ ಎನ್ ಎಸ್ ಅವರಿಂದ ಗಾಯನವಿರುತ್ತದೆ. ಅಲ್ಲಿ ಶ್ರೀ ಅಭಯ್ ಸಂಪಿಗೆತ್ತಾಯರ ವಯಲಿನ್ ವಾದನ ಹಾಗೂ ಶ್ರೀ ಕಾಂಚನ ಈಶ್ವರ ಭಟ್ ಮತ್ತು ಶ್ರೀ ಅಕ್ಷಯ ನಾರಾಯಣ ಅವರ ದ್ವಂದ್ವ ಮೃದಂಗ ಕಾರ್ಯಕ್ರಮ ಸಂಗೀತ ರಸಿಕರಿಗೆ ಹಬ್ಬವನ್ನೀಯಲಿರುವುದು. ಮುಂದೆ 12:00 ಗಂಟೆಗೆ ಸಂಗೀತ ಸೇವೆ ನಡೆಯಲಿದ್ದು, ಸಂಜೆ 4:30 ಗಂಟೆಯಿಂದ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಂಗೀತ ಕಲಾಶಾಲೆ ಹಾಗೂ ಸಭಾಭವನಗಳ ಲೋಕಾರ್ಪಣಾ ಕಾರ್ಯಕ್ರಮವು ಸುಸಂಪನ್ನಗೊಳ್ಳಲಿದೆ. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ, ಪದ್ಮವಿಭೂಷಣ, ರಾಜರ್ಷಿ ಶ್ರೀ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ನೆರವೇರಲಿದೆ. ಅಂತೆಯೇ ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಾಗೆಯೇ ಪುತ್ತೂರಿನ ಮಾನ್ಯ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ್ ಕುಮಾರ್ ರೈ ಅವರು ಮತ್ತು ಬೇಕಲ್ ಗೋಕುಲಂ ಗೋಶಾಲೆಯ ಸ್ಥಾಪಕರಾದ, ಪರಂಪರಾ ವಿದ್ಯಾಪೀಠದ ಪ್ರಾಚಾರ್ಯರಾದ, ದೈವಜ್ಞರಾದ ವೇದಬ್ರಹ್ಮ ಶ್ರೀ ವಿಷ್ಣು ಪ್ರಸಾದ್ ಹೆಬ್ಬಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಜೆ 6:30 ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ‘King of Drums’ ಎಂಬ ಕೀರ್ತಿಭಾಜನರಾದ ಪದ್ಮಶ್ರೀ ಕಲೈಮಾಮಣಿ ಶ್ರೀ ಶಿವಮಣಿ ಎಂಬವರಿಂದ Drums ವಾದನ, ಅಂತೆಯೇ ಸಂಗೀತ ವಿದ್ವಾಂಸರುಗಳಾದ ಕಾಂಚನ ಸಹೋದರಿಯರು ಎಂದೇ ಖ್ಯಾತಿ ಪಡೆದ ಕಾಂಚನ ಶ್ರೀರಂಜನಿ ಮತ್ತು ಕಾಂಚನ ಶೃತಿ ರಂಜನಿ ಅವರ ದ್ವಂದ್ವ ಗಾಯನ ನಡೆಯಲಿದೆ. ಅಲ್ಲಿ ಕಾಂಚನ ಸುಮನಸರಂಜನಿಯವರ ವಯಲಿನ್ ವಾದನ ಇರಲಿದ್ದು, ರವಿಚಂದ್ರ ಕೂಳೂರು ಅವರು ಕೊಳಲಿನ ಮೂಲಕ, ಕೆ. ಯು ಜಯಚಂದ್ರ ರಾವ್ ಅವರು ಮೃದಂಗದ ಮೂಲಕ ಜೊತೆಯಾಗಿದ್ದಾರೆ. ಇಂತು ಸಂಗೀತ ಕಲಾ ಪ್ರೇಮಿಗಳಿಗೆ ಇದೊಂದು ಸಂಗೀತದ ರಸಪಾಕವನ್ನಾಸ್ವಾದಿಸಲು ಅಪೂರ್ವ ಅವಕಾಶವೇ ಸರಿ.
ದಿನಾಂಕ 7-2-2026 ಶನಿವಾರದಂದು ಬೆಳಿಗ್ಗೆ 8:30 ಗಂಟೆಗೆ ಉಂಛವೃತ್ತಿ ಇರಲಿದೆ. ವಿದುಷಿ ಚಾರುಲತಾ ರಾಮಾನುಜಂ ಅವರು ನೇತೃತ್ವದಲ್ಲಿ, ಸಂಗೀತ ಸಂತ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಕೃತಿ ಹಾಗೂ ದಿವ್ಯ ನಾಮ ಸಂಕೀರ್ತನೆ, ಕೀರ್ತನೆಗಳ ಗಾಯನ-ವಾದನಗಳೊಂದಿಗೆ ಕಾಂಚನ ಮನೆಯಿಂದ ಕಲಾ ಶಾಲೆಯ ವರೆಗೆ ಸಂಗೀತ ನಡಿಗೆ ಇರುವುದು. ಬೆಳಿಗ್ಗೆ 10:00 ಗಂಟೆಯಿಂದ ಪಿಳ್ಳಾರಿ ಗೀತೆಗಳು ಹಾಗೂ ಪಂಚರತ್ನ ಕೃತಿಗಳು ಗೋಷ್ಠಿ ಗಾಯನ ಕಾರ್ಯಕ್ರಮ ಜರುಗಲಿದೆ. ಮುಂದೆ 11:30 ಗಂಟೆಗೆ ಈ ಸಂಸ್ಥೆಯ ಶಿಷ್ಯರು, ಪ್ರಶಿಷ್ಯರು ಮತ್ತು ಅತಿಥಿ ಕಲಾವಿದರಿಂದ ಸಂಗೀತ ಸೇವೆ ನಡೆಯಲಿದೆ. ಸಾಯಂಕಾಲ 5:00 ಗಂಟೆಗೆ ‘God of Indian Violin’ ಎಂಬ ಬಿರುದು ಪಡೆದ ಪದ್ಮವಿಭೂಷಣದಿಂದ ಭೂಷಿತರಾದ ಡಾ. ಎಲ್ ಸುಬ್ರಹ್ಮಣ್ಯಂ ಅವರಿಗೆ ನವ ದೆಹಲಿಯ ಲೋಕಸಭಾ ಸದಸ್ಯೆಯಾದ ಸನ್ಮಾನ್ಯೆ ಬಾನ್ಸುರಿ ಸ್ವರಾಜ್ ಎಂಬವರಿಂದ “ಕಾಂಚನ ಶ್ರೀ” ಎಂಬ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತದನಂತರದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳರ ದಿವ್ಯ ಸಾನಿಧ್ಯ ಹಾಗೂ ಆಶೀರ್ವಚನ ಇರುತ್ತದೆ. ಇಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಮಾಜಿ ಮಂತ್ರಿಗಳಾದ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಡಾ. ಶ್ರೀ ಡಿ ವಿ ಸದಾನಂದ ಗೌಡರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಗಂಗಾಧರ್ ನೆಕ್ಕರಾಜೆ ಅವರ ಗೌರವ ಉಪಸ್ಥಿತಿ ಇರುವುದು. ಸಂಜೆ 6:30 ಗಂಟೆಯಿಂದ ಪದ್ಮವಿಭೂಷಣ ಡಾ. ಎಲ್ ಸುಬ್ರಹ್ಮಣ್ಯಂ ಹಾಗೂ ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಹ್ಮಣ್ಯಂ ಅವರಿಂದ ಸುರಸಂಗೀತ ಕಾರ್ಯಕ್ರಮ ಜರುಗಲಿದೆ. ಅಲ್ಲಿ ಪಂಡಿತ್ ಆದಿತ್ಯ ಓಕೆ, ಪಂಡಿತ್ ನಿನಾದ್ ಮೂಲೋಕರ್, ಪಂಡಿತ್ ಸಂದೇಶ್ ಕದಮ್, ವಿದ್ವಾನ್ ವಿ ವಿ ರಮಣಮೂರ್ತಿ, ಪ್ರಸಾದ್ ಪಧ್ಯೆ ಎಂಬಿವರು ವಿವಿಧ ವಾದ್ಯಗಳೊಂದಿಗೆ ಈ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. ಇಂತು ಸುರ ಸಂಗೀತ ಕಾರ್ಯಕ್ರಮವು ಸಂಗೀತವೆಂಬ ಸುರಲೋಕವನ್ನೇ ಇಳೆಗಿಳಿಸಲಿದೆಯೆಂದರೆ ತಪ್ಪಾಗಲಾರದೇನೋ…