ಸ್ವರಾರ್ಪಣ ಸಂಗೀತೋತ್ಸವ

ಸುದ್ದಿ

ಕುಮಟಾ: ಹೊಳೆಗದ್ದೆಯ ಶ್ರೀಶಾಂತಿಕಾ ಪರಮೇಶ್ವರೀ ದೇವಸ್ಥಾನದಲ್ಲಿ, ದೇವಸ್ಥಾನ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸ್ವರಾತ್ಮ ಗುರುಕುಲಮ್ ಆಶ್ರಯದಲ್ಲಿ ಆಯೋಜಿಸಿದ್ದ ‘ಸ್ವರಾರ್ಪಣ ಸಂಗೀತೋತ್ಸವ’ ನಡೆಯಿತು. ನಿಜ ಜ್ಯೇಷ್ಠ ಶುಕ್ಲ ಚತುರ್ದಶಿಯಂದು (28-06-2026) ನಡೆದ ಈ ಸಂಗೀತೋತ್ಸವದಲ್ಲಿ ಭಕ್ತಿ-ಸಂಸ್ಕೃತಿ-ಶಾಸ್ತ್ರೀಯ ಸಂಗೀತಗಳ ಸಮ್ಮಿಲನ ಏರ್ಪಟ್ಟಿತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಜೈರಾಮ ಭಟ್ಟ ಗುಡಬಳ್ಳಿ, ಅನಂತರಾಮ ಭಟ್ಟ ಬೆತ್ತಗೇರಿ, ಮಂಜುನಾಥ ಭಟ್ಟ ಸುವರ್ಣಗದ್ದೆ, ಡಾ. ಹರೀಶ ಹೆಗಡೆ, ಎಸ್. ವಿ. ಹೆಗಡೆ ಭದ್ರನ್, ಶ್ರೀಧರ ಭಟ್ಟ ಗುಡಬಳ್ಳಿ, ನಾಗರಾಜ ಜೋಷಿ ಹಾಗೂ ಕೃಷ್ಣಾನಂದ ಭಟ್ಟ ಉಪಸ್ಥಿತರಿದ್ದು ಸಂಗೀತ ಸೇವೆಯ ಮಹತ್ತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಸಂಗೀತವು ಕೇವಲ ಮನರಂಜನೆಯ ಸಾಧನವಲ್ಲ, ಅದು ಮನಸ್ಸಿನ ಪರಿಶುದ್ಧತೆಗೆ, ಭಕ್ತಿ ಬೆಳವಣಿಗೆಗೆ ಹಾಗೂ ಭಾರತೀಯ ಸಂಸ್ಕೃತಿಯ ಸಂರಕ್ಷಣೆಗೆ ಪೂರಕವಾದ ದೈವಿಕ ಸಾಧನೆಯಾಗಿದೆ. ಇಂತಹ ಸಂಗೀತೋತ್ಸವಗಳು ಯುವ ಕಲಾವಿದರಿಗೆ ವೇದಿಕೆ ಒದಗಿಸುವುದರ ಜೊತೆಗೆ ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರ ಕಾರ್ಯ ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟರು.

ಬೆಳಿಗ್ಗೆ 9 ಗಂಟೆಗೆ ಆರಂಭವಾದ ಸಂಗೀತೋತ್ಸವವು ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಖ್ಯಾತ ಹಾಗೂ ಉದಯೋನ್ಮುಖ ಕಲಾವಿದರು ತಮ್ಮ ಸುಮಧುರ ಗಾಯನದ ಮೂಲಕ ಶ್ರೋತೃಗಳನ್ನು ರಂಜಿಸಿದರು. ದೇವಸ್ಥಾನದ ಭಕ್ತಿಮಯ ವಾತಾವರಣದಲ್ಲಿ ಮೂಡಿಬಂದ ಕೀರ್ತನೆಗಳು, ದಾಸಸಾಹಿತ್ಯ, ಭಕ್ತಿಗೀತೆಗಳು ಹಾಗೂ ಶಾಸ್ತ್ರೀಯ ಸಂಗೀತದ ವಿವಿಧ ಪ್ರಕಾರಗಳು ಸಂಗೀತಾಸಕ್ತರಿಗೆ ಅಪೂರ್ವ ಅನುಭವವನ್ನು ನೀಡಿದವು.

ಗಾಯನ ವಿಭಾಗದಲ್ಲಿ ಸುಧಾಮ ಭಾಗ್ವತ್ (ಕನಕನಹಳ್ಳಿ), ಸುಸ್ವರ ಹೆಗಡೆ (ಗೋಕರ್ಣ), ಆದ್ಯಾ ನಾಯ್ಕ (ತದಡಿ), ಕವಿತಾ ಹೆಗಡೆ (ಗೋಕರ್ಣ), ಸಂಧ್ಯಾ ಹೆಗಡೆ (ಕೂಜಳ್ಳಿ), ಗೀತಾ ಭಾಗ್ವತ್, ಗಣೇಶ ವಾರದ (ಪೂಣಾ), ವಿಶಾಲ ಕಟ್ಟಿ (ವಿಜಯಪುರ), ಸಾಕ್ಷಿ ಹಿರೇಮಠ (ವಿಜಯಪುರ), ಶ್ರೀಹರಿ ಕುಲಕರ್ಣಿ (ಬೆಂಗಳೂರು), ವಿ. ವಿಶ್ವೇಶ್ವರ ಭಟ್ (ಖರ್ವಾ), ಡಾ. ಹರೀಶ ಹೆಗಡೆ (ಗೋಕರ್ಣ) ಹಾಗೂ ಸ್ಥಳೀಯ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು.

ಹಾರ್ಮೋನಿಯಂನಲ್ಲಿ ವಿ. ಶಂಭು ಭಟ್ (ಕಬ್ರೆ), ವಿ. ಶಶಿಕಿರಣ (ಮಣಿಪಾಲ್), ಡಾ. ಹರೀಶ ಹೆಗಡೆ (ಗೋಕರ್ಣ), ಶಿವರಾಮ ಭಾಗ್ವತ್ (ಕನಕನಹಳ್ಳಿ) ಹಾಗೂ ಗಣೇಶ ವಾರದ (ಪೂಣಾ) ಸಂಗತ ನೀಡಿದರೆ, ತಬಲಾದಲ್ಲಿ ವಿ. ಶೇಷಾದ್ರಿ ಅಯ್ಯಂಗಾರ್ (ಹೊನ್ನಾವರ), ವಿ. ರಾಘವೇಂದ್ರ ಭಟ್ (ಉಡುಪಿ), ಶಶಿಕಿರಣ (ಮಣಿಪಾಲ್) ಹಾಗೂ ಶ್ರೀನಿಧಿ ಕುಲಕರ್ಣಿ (ವಿಜಯಪುರ) ಲಯಬದ್ಧ ಸಹಕಾರ ನೀಡಿದರು.

ಸಂಗೀತಾಸಕ್ತರು ಹಾಗೂ ಭಕ್ತರು ದಿನವಿಡೀ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರ ಅದ್ಭುತ ಸಂಗೀತ ಸೇವೆಯನ್ನು ಮನಸಾರೆ ಆಸ್ವಾದಿಸಿದರು. ಭಾರತೀಯ ಶಾಸ್ತ್ರೀಯ ಸಂಗೀತದ ಸಂರಕ್ಷಣೆ ಮತ್ತು ಪ್ರಸಾರಕ್ಕೆ ಇಂತಹ ಕಾರ್ಯಕ್ರಮಗಳು ಮಹತ್ತ್ವದ ಕೊಡುಗೆ ನೀಡುತ್ತಿವೆ ಎಂದು ಸಾರ್ವಜನಿಕರು ಪ್ರಶಂಸಿಸಿದರು.

Leave a Reply

Your email address will not be published. Required fields are marked *