ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ನೈತಿಕ ಮೌಲ್ಯಗಳು ಹಾಗೂ ಆದರ್ಶ ವ್ಯಕ್ತಿತ್ವವನ್ನು ಬೆಳೆಸುವ ಉದ್ದೇಶದಿಂದ ಗಿರಿನಗರದ ರಾಧಾಕೃಷ್ಣ ಫೌಂಡೇಶನ್ ವತಿಯಿಂದ ವಿಜಯನಗರದ ಶ್ರೀಭಾರತೀ ವಿದ್ಯಾಲಯದ ನಾಲ್ಕನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಭಾರತ ಸಂಸ್ಕೃತಿ ಪ್ರಕಾಶನ ಪ್ರಕಟಿಸಿರುವ ರಾಮಾಯಣ, ಮಹಾಭಾರತ, ಭಾಗವತ ಹಾಗೂ ಪುರಾಣ ಪುರುಷರ ಜೀವನ ಮತ್ತು ಆದರ್ಶಗಳನ್ನು ಪರಿಚಯಿಸುವ ಪುಸ್ತಕಗಳನ್ನು ಉಚಿತವಾಗಿ ಪ್ರದಾನ ಮಾಡಲಾಯಿತು.

ಆಷಾಢ ಬಹುಳ ಸಪ್ತಮಿಯಂದು (05-08-2026) ನಡೆದ
ಕಾರ್ಯಕ್ರಮದಲ್ಲಿ ಮಾತನಾಡಿದ ಗಿರಿನಗರದ ರಾಧಾಕೃಷ್ಣ ಆಸ್ಪತ್ರೆಯ ಮುಖ್ಯಸ್ಥ ಡಾ. ವಿಶ್ವನಾಥ್ ಭಟ್ ಅವರು, ‘ನಮ್ಮ ಗುರುಗಳಾದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ಈ ಮೌಲ್ಯಯುತ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶಗಳು, ಕುಟುಂಬದ ಮೇಲಿನ ಗೌರವ, ಸತ್ಯ, ಧರ್ಮ ಹಾಗೂ ಸೇವಾ ಮನೋಭಾವವನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪುರಾಣಗಳ ಕಥೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಲಿ ಎಂಬ ಉದ್ದೇಶದಿಂದ ಈ ಪುಸ್ತಕಗಳನ್ನು ವಿತರಿಸುತ್ತಿದ್ದೇವೆ’ ಎಂದು ಹೇಳಿದರು.
ಶಾಲೆಯ ಪ್ರಾಂಶುಪಾಲರಾದ ವರ್ಷ ಎಸ್. ಎಸ್. ಅವರು ಮಾತನಾಡಿ, ‘ಕಳೆದ ವರ್ಷವೂ ರಾಧಾಕೃಷ್ಣ ಫೌಂಡೇಶನ್ ವಿದ್ಯಾರ್ಥಿಗಳಿಗೆ ಮೌಲ್ಯಯುತ ಪುಸ್ತಕಗಳನ್ನು ನೀಡಿತ್ತು. ಆ ಪುಸ್ತಕಗಳು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಅರಿಯಲು ಸಹಕಾರಿಯಾಗಿವೆ. ಈ ವರ್ಷವೂ ವಿದ್ಯಾರ್ಥಿಗಳಿಗೆ ಅಮೂಲ್ಯ ಪುಸ್ತಕಗಳನ್ನು ನೀಡಿರುವ ರಾಧಾಕೃಷ್ಣ ಫೌಂಡೇಶನ್‌ಗೆ ಶಾಲೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ’ ಎಂದು ಹೇಳಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಕಳೆದ ವರ್ಷ ರಾಧಾಕೃಷ್ಣ ಫೌಂಡೇಶನ್ ನೀಡಿದ್ದ ಪುಸ್ತಕಗಳಲ್ಲಿ ಒಂದಾದ ಶ್ರೀರಾಮನ ಕಥೆಯನ್ನು ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಕುಮಾರ್ ಸಮರ್ಥ್ ಅವರು ಅತ್ಯಂತ ಮನೋಜ್ಞವಾಗಿ ನಿರೂಪಿಸಿ ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಭಾರತ ಸಂಸ್ಕೃತಿ ಪ್ರಕಾಶನದ ಕೇಶವ ಕುಮಾರ್, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಡಾ. ಪ್ರಭಾಕರ್ ಅಳಗೋಡು, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯೊಂದಿಗೆ ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳ ಅರಿವು ಮೂಡಿಸುವ ಈ ಕಾರ್ಯಕ್ರಮವು ನಿಜಕ್ಕೂ ‘ಪುರಾಣದ ಕಥೆ – ಬದುಕಿನ ಪಥ’ ಎಂಬ ಆಶಯವನ್ನು ಸಾರ್ಥಕಗೊಳಿಸಿತು.



