ಬೆಂಗಳೂರು: ಆಷಾಢ ಬಹುಳ ತದಿಗೆಯಂದು (01-08-2026) ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ವರ್ಧಂತಿಯನ್ನು ಶ್ರದ್ಧಾ, ಭಕ್ತಿ ಹಾಗೂ ಸಂಸ್ಕಾರಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವು ಭಜನೆಗಳೊಂದಿಗೆ ಆರಂಭಗೊಂಡಿತು. ವಿದ್ಯಾರ್ಥಿಗಳು ಗುರುಭಕ್ತಿಯನ್ನು ಸಾರುವ ಭಜನೆಗಳನ್ನು ಭಕ್ತಿಭಾವದಿಂದ ಹಾಡಿ, ಶಾಲಾ ಆವರಣವನ್ನು ಆಧ್ಯಾತ್ಮಿಕ ವಾತಾವರಣದಿಂದ ತುಂಬಿಸಿದರು. ಅನಂತರ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗುರುಚರಣಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಭಕ್ತಿಪೂರ್ವಕವಾಗಿ ನಮನ ಸಲ್ಲಿಸಿದರು. ಏಕಕಾಲದಲ್ಲಿ ಸಹಸ್ರಕ್ಕೂ ಅಧಿಕ ವಿದ್ಯಾರ್ಥಿಗಳು ಗುರುಚರಣಗಳಿಗೆ ಪುಷ್ಪಾರ್ಚನೆ ಸಲ್ಲಿಸಿದ ಅಪರೂಪದ ದೃಶ್ಯವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಈ ವಿಶೇಷ ದಿನದ ಅಂಗವಾಗಿ ಶಾಲಾ ಆವರಣವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಳಿರು ತೋರಣಗಳು ಹಾಗೂ ಸುಂದರ ರಂಗವಲ್ಲಿಗಳಿಂದ ಅಲಂಕರಿಸಿದ್ದರು. ಭಾರತೀಯ ಸಂಸ್ಕೃತಿ, ಸಂಸ್ಕಾರ ಹಾಗೂ ಪೂಜ್ಯ ಗುರುಗಳ ಸಮಾಜಮುಖಿ ಸೇವಾ ಯೋಜನೆಗಳು, ಪರಿಸರ ಸಂರಕ್ಷಣೆ, ಗೋಸೇವೆ, ಶಿಕ್ಷಣ ಮತ್ತು ಮೌಲ್ಯಾಧಾರಿತ ಜೀವನದ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾಹಿತಿಯನ್ನು ನೀಡಿದರು.
ಗುರುಗಳ ಪರಿಸರ ಪ್ರೇಮದ ಸಂದೇಶವನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಉದ್ದೇಶದಿಂದ ಕದಂಬ, ತುಳಸಿ, ದಾಸವಾಳ ಸೇರಿದಂತೆ ವಿವಿಧ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲಾಯಿತು.
ಕಾರ್ಯಕ್ರಮದ ಸಮಾರೋಪದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪ್ರಸಾದ ವಿತರಿಸಲಾಯಿತು. ಗುರುಸ್ಮರಣೆ, ಭಕ್ತಿ, ಸೇವೆ, ಸಂಸ್ಕಾರ ಮತ್ತು ಪರಿಸರ ಕಾಳಜಿಯನ್ನು ಒಗ್ಗೂಡಿಸಿದ ಈ ವರ್ಧಂತಿ ಆಚರಣೆಯು ವಿದ್ಯಾರ್ಥಿಗಳಲ್ಲಿ ಗುರುಭಕ್ತಿ ಮತ್ತು ಭಾರತೀಯ ಮೌಲ್ಯಗಳ ಬಗ್ಗೆ ಇನ್ನಷ್ಟು ಗೌರವವನ್ನು ಬೆಳೆಸಿತು.








