|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಭೋಜನವು ತಪಸ್ಸಾಗಬಹುದು | ‘ಅನ್ನಂ ಬ್ರಹ್ಮ’ ಪ್ರವಚನ – 11

ಅಶೋಕೆ: ‘ಊಟ ಮಾಡದೆಯೇ ಋಷಿಗಳಂತೆ ತಪಸ್ಸನ್ನು ಆಚರಿಸುವುದು ಒಂದು ವಿಧವಾದರೆ, ಸರಿಯಾದ ಕ್ರಮದಲ್ಲಿ ಊಟ ಮಾಡುವ ಮೂಲಕವೂ ತಪಸ್ಸಿನ ಫಲವನ್ನು ಪಡೆಯಬಹುದು ಎಂದು ಯೋಗಶಾಸ್ತ್ರ ಹೇಳಿದೆ. ಹಾಗಾಗಿ ಭೋಜನವೆಂಬುದು ತಪಸ್ಸು’ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.

ಹಿತವೇ ಪ್ರಿಯವಾಗಲಿ..
‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಆಷಾಢ ಬಹುಳ ದಶಮಿಯಂದು (08-08-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ‘ಪಾಪದ ದಾರಿಗಳಲ್ಲಿ ಆಹಾರವೇ ಪ್ರಧಾನವಾಗಿದ್ದು, ಪಾಪ‌ ನಮ್ಮೊಳಗೆ ಸೇರಿದ ಅನಂತರ ಬಾಧೆಯನ್ನು ನೀಡಲು ಆರಂಭಿಸುತ್ತದೆ. ಸರಿಯಾದ ಭೋಜನ ಕ್ರಮದಿಂದ ರೋಗ ಹಾಗೂ ಪಾಪ ಎರಡನ್ನೂ ನಾಶ ಮಾಡಬಹುದು. ಯಾವುದು ಒಳ್ಳೆಯದೋ ಅದು ಹಿತ ಹಾಗೂ ಯಾವುದು ಇಷ್ಟವೋ ಅದು ಪ್ರಿಯ. ಹಿತವಾದದ್ದೇ ಪ್ರಿಯವಾದರೆ ದೇಹಕ್ಕೂ ಮನಸ್ಸಿಗೂ ಹಿತ’ ಎಂದು ಬೋಧಿಸಿದರು.

ಆಹಾರಕ್ರಮ – ಪ್ರಾಣಾಯಾಮ
ದೇಹದ ಒಳಗೆ ಹೋಗುವ ಶ್ವಾಸ ಹಾಗೂ ಆಹಾರದಿಂದಲೇ ದೇಹದ ಒಳಗಿನ ಪಾಪವನ್ನು ನಾಶಮಾಡಲು ಸಾಧ್ಯ. ವಿಧಿಪೂರ್ವಕವಾದ ಪ್ರಾಣಾಯಾಮ ಹಾಗೂ ಸಮರ್ಪಕ ಆಹಾರ ಕ್ರಮದಿಂದ ದೇಹದ ಪಾಪವನ್ನು ತೊಳೆದುಕೊಳ್ಳಬಹುದು ಎಂದರು.

ಭೋಜನ – ತಪಸ್ಸು
ಹಿತಿ ~ ಮಿತ ~ ಮೇಧ್ಯಾ ಎಂಬ ಸೂತ್ರದ ಮೂಲಕ
ಭೋಜನವನ್ನು ತಪಸ್ಸೆಂದು ಹೇಳಿದ್ದು, ಆಹಾರದಲ್ಲಿ ಹಿತ ~ ಮಿತ ಎಂಬುದು ವ್ಯಕ್ತಿಗತವಾಗಿದ್ದು, ವೃತ್ತಿ ಪ್ರವೃತ್ತಿ, ಹಿನ್ನೆಲೆ ಇತ್ಯಾದಿಗಳನ್ನು ಆಧರಿಸಿ ವ್ಯಕ್ತಿಯ ಹಿತ ಮಿತಗಳು ನಿರ್ಧಾರವಾಗುತ್ತದೆ. ಯಜ್ಞಕ್ಕೆ ಯೋಗ್ಯವಾದ ಆಹಾರಕ್ಕೆ ಮೇಧ್ಯಾ ಎಂಬ ಹೆಸರಿದ್ದು, ಅಂತಹ ಉತ್ಕೃಷ್ಟ ಆಹಾರವನ್ನು ಸ್ವೀಕರಿಸುವುದರಿಂದ ನಮ್ಮೊಳಗಿನ ಅಗ್ನಿಯನ್ನು ಜಾಗೃತ ಗೊಳಿಸಬಹುದು. ದೇಹವೆಂಬ ಪೆಟ್ಟಿಗೆಯಲ್ಲಿ ಇರುವ ಎಲ್ಲಾ ಸಮಸ್ಯೆಗಳಿಗೂ ಅಗ್ನಿಜಾಗರಣ ಉತ್ತರವಾಗಿದೆ ಎಂದು ತಿಳಿಸಿದರು.

ಹಾಲಕ್ಕಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ :

ಪರಂಪರಾಗತವಾಗಿ ಶ್ರೀರಾಮಚಂದ್ರಾಪುರ ಮಠಕ್ಕೆ ನಡೆದುಕೊಳ್ಳುತ್ತಿರುವ ಹಾಲಕ್ಕಿ ಸಮಾಜದವರು ಸಮರ್ಪಿಸಿದ ಸ್ವರ್ಣಪಾದುಕಾ ಪೂಜೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಸಂಸ್ಥಾನದವರು, ಹಾಲಕ್ಕಿ ಸಮಾಜದವರು ಶ್ರೀಮಠದ ಕೆಕ್ಕಾರು ಶಾಖಾ ಮಠಕ್ಕೆ ಪರಂಪರೆಯಿಂದ ತಮ್ಮ ಶ್ರದ್ಧಾಭಕ್ತಿಗಳನ್ನು ಸಲ್ಲಿಸುತ್ತಾ ಬಂದಿದ್ದು. ಅದರಲ್ಲಿ ತಮ್ಮ ಹಿತವನ್ನು ಕಂಡಿದ್ದಾರೆ. ಹಾಲಕ್ಕಿ ಸಮಾಜದ ಜೊತೆ ಶ್ರೀಮಠ ಸದಾ ಜೊತೆಗಿರಲಿದ್ದು, ಸರ್ಕಾರವೂ ಕೂಡ ಈ ಸಮಾಜಕ್ಕೆ ಸಲ್ಲಬೇಕಾದ ಸೌಕರ್ಯಗಳನ್ನು ಒದಗಿಸಬೇಕು. ಅನ್ನಬ್ರಹ್ಮ ಚಾತುರ್ಮಾಸ್ಯದಲ್ಲಿ ಹಾಲಕ್ಕಿ ಸಮಾಜಕ್ಕೆ ಅಕ್ಕಿಯನ್ನು ಆಶೀರ್ವಾದ ಪೂರ್ವಕವಾಗಿ ಕೊಡಲಾಗಿದೆ. ಆ ಸಮಾಜಕ್ಕೆ ಒಳಿತಾಗಲಿ ಎಂದು ಆಶೀರ್ವಾದಿಸಿದರು.

ಹಾಲಕ್ಕಿ ಸಮಾಜದ ಪರವಾಗಿ ಮಾತನಾಡಿದ ಡಾ. ಹನುಮಂತ ಗೌಡರು, ನಾವು ತಲೆತಲಾಂತರದಿಂದ ಶ್ರೀಮಠಕ್ಕೆ ನಡೆದುಕೊಳ್ಳುತ್ತಾ ಬಂದಿದ್ದು, ಶ್ರೀಗುರು ಪರಂಪರೆಯ ಆಶೀರ್ವಾದದಿಂದ ನಮ್ಮ ಸಮಾಜ ಉತ್ತಮ ಮಾರ್ಗದಲ್ಲಿ ಸಾಗುತ್ತಿದೆ. ನಾವು ಇದರಲ್ಲಿ ನೆಮ್ಮದಿ ಕಂಡಿದ್ದೇವೆ ಎಂದರು.

ಹಾಲಕ್ಕಿ ಜಾನಪದ ಹಾಡಿನ ಮೂಲಕ ಶ್ರೀಗುರು ಪೀಠದ ಕುರಿತಾಗಿ ತಮಗಿರುವ ಭಕ್ತಿಯನ್ನು ಸಮರ್ಪಿಸಿದರು. ಬಿ.ಎಸ್. ಗೌಡರ್, ಎಸ್. ಜಿ. ಗೌಡರ್, ಮಂಜುನಾಥ ಗೌಡರ್ ಕೆಕ್ಕಾರು ಸೇರಿದಂತೆ ನೂರಾರು ಹಾಲಕ್ಕಿ ಗುರು ಬಂಧುಗಳು ಉಪಸ್ಥಿತರಿದ್ದರು.

**

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ, ಕರ್ಣಾಟಕ ಬ್ಯಾಂಕಿನ ಸಿ.ಒ.ಒ ಆದ ಬಿ. ಎಸ್. ರಾಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶ್ರೀಸಂಸ್ಥಾನದವರಿಂದ ಆಶೀರ್ವಾದ ಪಡೆದರು. ರಾಮಮೂರ್ತಿ ಕೆ. ಬಿ. ದಂಪತಿಗಳು ಶ್ರೀಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸುರೇಶ ಕಲ್ಲಬ್ಬೆ, ಉದಯ ಭಟ್, ಕಿರಣ ಹೆಗಡೆ, ದಿನ ಪ್ರಧಾನರಾದ ಗುಂಡಿ ಮಂಜಪ್ಪ ದಂಪತಿಗಳು ಉಪಸ್ಥಿತರಿದ್ದರು.