ಬೆಂಗಳೂರು: ನಾವು ಏನನ್ನು ಮಾಡುತ್ತೇವೋ ಅದು ನಮಗೆ ತಿರುಗಿ ಬರುತ್ತದೆ. ನಾವು ಯಾವುದೇ ಜೀವಿಯನ್ನು ಹಿಂಸಿಸಿದರೆ, ಆ ಹಿಂಸೆಯ ಚಿಹ್ನೆ ನಮ್ಮಲ್ಲಿ ಮೂಡುತ್ತದೆ. ಅದರಿಂದಾಗಿ ನಾವು ಆ ಪಾಪದ ಫಲವನ್ನು ಅನುಭವಿಸಲೇ ಬೇಕಾಗುತ್ತದೆ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.
ಗಿರಿನಗರದಲ್ಲಿರುವ ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಲಲಿತಾಪಂಚಮಿಯಂದು (15-10-2026) ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದ ಶ್ರೀಸಂಸ್ಥಾನದವರು, ಇಂದ್ರ ಹಾಗೂ ದೇವಗುರು ಬೃಹಸ್ಪತಿಯ ಸಂವಾದದ ಕಥಾನಕದಲ್ಲಿ ಕರ್ಮ ಸಿದ್ಧಾಂತವನ್ನು ಪ್ರಸ್ತಾಪಿಸಿ, ನಾವು ಮಾಡಿದ ಪಾಪ ಹಾಗೂ ಪುಣ್ಯಗಳೇ ನಮಗೆ ಮರಳಿ ಬರುತ್ತದೆ. ಪಾಪ ಪುಣ್ಯಗಳಿಗೆ ಅನುಗುಣವಾಗಿ ನಮ್ಮ ದೇಹದಲ್ಲಿ ಗುರುತು ಮೂಡುತ್ತದೆ. ಅದನ್ನು ಆಧರಿಸಿ ವಿಧಿಯು ಫಲಾಪಲಗಳನ್ನು ನೀಡುತ್ತದೆ. ಈ ಕಾರ್ಯದಲ್ಲಿ ಕ್ರೀಡೆಗಳಲ್ಲಿ ನಿರ್ಣಾಯಕರಿಗಿರುವ ಪಾತ್ರ ಮಾತ್ರ ದೇವರದ್ದಾಗಿರುತ್ತದೆ ಎಂದು ಹೇಳಿದರು.
ಇಂದಿನ ತಂತ್ರಜ್ಞರು ಕಪ್ಪು ಪರದೆಯ ಮೇಲೆ ಬರೆಯುವ Coding ಜನಸಾಮಾನ್ಯರಿಗೆ ಅರ್ಥವಾಗುವಂಥದ್ದಲ್ಲ. ಅದನ್ನು ಆ ತಂತ್ರಜ್ಞರು ಮಾತ್ರ ಬಲ್ಲವರಾಗಿದ್ದಾರೆ. ಹಾಗೆಯೇ ಪಾಪಗಳಿಗೂ ಕೂಡ ನಮ್ಮ ದೇಹದಲ್ಲಿ ಆ ಪಾಪಕ್ಕೆ ಸಂಬಂಧಿಸಿದ ಚಿಹ್ನೆ ಮೂಡುತ್ತದೆ. ಅದು ನಮ್ಮ ಕಣ್ಣಿಗೆ ಕಾಣುವಂತದ್ದಲ್ಲ. ಜೀವನ ಯಾತ್ರೆಯನ್ನು ಮುಗಿಸಿ ಚಿತ್ರಗುಪ್ತನ ಮುಂದೆ ನಿಂತಾಗ ಆ ಚಿಹ್ನೆಗಳನ್ನು ನೋಡಿ, ನಮ್ಮ ಪಾಪದ ಫಲವನ್ನು ನಿರ್ಧರಿಸುತ್ತಾನೆ. ಅದಕ್ಕೂ ಮೊದಲೆ ಪ್ರಾಯಶ್ಚಿತ್ತದ ಮೂಲಕ ನಮ್ಮ ಪಾಪಗಳನ್ನು ತೊಳೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಚಾಕುವಿನಿಂದ ಕೊಲೆಗಾರನು ಜೀವವನ್ನು ತೆಗೆದರೆ, ವೈದ್ಯನು ಶಸ್ತ್ರಚಿಕಿತ್ಸೆಯ ಮೂಲಕ ದೇಹಕ್ಕೆ ಪುನರ್ಜನ್ಮ ನೀಡುತ್ತಾನೆ. ಇಬ್ಬರೂ ಕೂಡ ಚಾಕುವನ್ನೇ ಬಳಸಿ ದೇಹವನ್ನು ತುಂಡರಿಸಿದ್ದರೂ, ಇಬ್ಬರ ಉದ್ದೇಶಗಳು ಬೇರೆ ಬೇರೆ. ಕೊಲೆಗಾರನ ಕಾರ್ಯ ಪಾಪವಾದರೆ, ವೈದ್ಯನ ಕಾರ್ಯ ಪುಣ್ಯಮಯ. ಪುಣ್ಯವೆಂಬ ದೊಡ್ಡ ಹಣವನ್ನು ತೆತ್ತು ನಾವು ಈ ಮನುಷ್ಯ ದೇಹವನ್ನು ಪಡೆದುಕೊಂಡಿದ್ದೇವೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.ಧರ್ಮಶಾಸ್ತ್ರ ಸೂಚಿಸುವ ಪ್ರಾಯಶ್ಚಿತ್ತ ಮಾರ್ಗಗಳು ನಮಗೆ ತಿಳಿಯದೇ ಇದ್ದರೆ, ತುಂಬು ಮನಸ್ಸಿನಿಂದ ಜಗಜ್ಜನನಿಯನ್ನು ಭಾವಿಸಿದರೂ ಸಾಕು. ಅದು ಎಲ್ಲಾ ಪ್ರಾಯಶ್ಚಿತ್ತದ ಕಾರ್ಯಗಳನ್ನೂ ಮಾಡುತ್ತದೆ ಎಂದರು.
**
ಅನ್ನಬ್ರಹ್ಮ ಸಂಕೀರ್ತನಮ್: ಊಟದ ಸಮಯದಲ್ಲಿ ಭಗವಂತನ ಸ್ಮರಣೆಯನ್ನು ಮಾಡುತ್ತಾ, ಊಟವನ್ನು ಭಗವಂತನ ಪೂಜೆಯಾಗಿಸುವ ವಿಶಿಷ್ಟ ಕಾರ್ಯಕ್ರಮ ‘ಅನ್ನಬ್ರಹ್ಮ ಸಂಕೀರ್ತನ’ವಾಗಿದ್ದು, ಜನರು ಊಟವನ್ನು ಮಾಡುವಾಗ ಅನ್ನಪೂರ್ಣೇಶ್ವರಿಯ ಮುಂದೆ ಖ್ಯಾತ ಕಲಾವಿದರು ಭಕ್ತಿಸುಧೆಯನ್ನು ಹರಿಸಿದ ವಿಭಿನ್ನ ಪ್ರಯತ್ನ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಸಿಎ. ರವೀಂದ್ರ ಭಟ್ ಟಿ. ಎಲ್., ಸಿಎ. ಗಣಪತಿ ಶೆಟ್ಟಿಸರ, ಮಂಜುನಾಥ ಹೆಗಡೆ ದಂಪತಿಗಳು ಸೇರಿದಂತೆ ಸಾವಿರಾರು ಭಕ್ತರು ಭಾಗಿಗಳಾದರು. ಶ್ರೀಲಕ್ಷ್ಮೀ ಮಂತ್ರ ಹವನ, ದುರ್ಗಾಸಪ್ತಶತಿ ಪಾರಾಯಣ, ರಾಜರಾಜೇಶ್ವರೀ ಪೂಜೆಗಳು ನಡೆದವು.
