‘ ಬದುಕಿನ ಹಾದಿಯಲ್ಲಿ ಎದುರಾಗುವ ಕಷ್ಟ-ಕಾರ್ಪಣ್ಯಗಳ ಸುಳಿಯಿಂದ ಪಾರಾಗಲು ಭಗವಂತನ ನಾಮಸ್ಮರಣೆ ಎಷ್ಟು ಮುಖ್ಯವೋ, ಗುರುವಿನ ಅನುಗ್ರಹವೂ ಅಷ್ಟೇ ಅಮೂಲ್ಯ ಎಂಬುದು ಉಪ್ಪಿನಂಗಡಿ ಮಂಡಲ ಮಾಣಿ ವಲಯದ ಕಡೆಂಗೋಡ್ಲು ಮೂಲದ, ಪ್ರಸ್ತುತ ಕಲ್ಲಡ್ಕದ ಮುಲಾರು ‘ಶಿವಾನುಗ್ರಹ’ ನಿವಾಸಿಗಳಾಗಿರುವ ಗೌರಿ ರಾಮ ಭಟ್ ಅವರ ಜೀವನದಲ್ಲಿ ಅನುಭವಕ್ಕೆ ಬಂದ ಸತ್ಯ
ಜಲ್ಲಿ ಮೂಲದ ಸವಣಾಲು ಸಮೀಪದ ಕೋಡಿಮೊಗೆರು ತಿಮ್ಮಣ್ಣ ಭಟ್ ಮತ್ತು ದೇವಕಿ ಅಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದ ಇವರು, ಕಲ್ಲಡ್ಕದ ರಾಮ ಭಟ್ ಅವರ ಪತ್ನಿ. ಪತಿ ಪತ್ನಿ ಇಬ್ಬರು ಜೀವನದಲ್ಲಿ ಗುರುಸೇವೆಗೆ ಆದ್ಯತೆ ನೀಡುವವರು.
೨೦೧೨ರಿಂದಲೇ ಶ್ರೀಮಠದ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರಿಗೆ, ಶ್ರೀಗುರುಗಳ ನುಡಿಗಳೇ ಬದುಕಿಗೆ ಮಾರ್ಗದರ್ಶಿ.
ಗೌರಿ ರಾಮ ಭಟ್ ಅವರ ಜೀವನದಲ್ಲಿ ಪ್ರತಿ ಹೆಜ್ಜೆಯೂ ಶ್ರೀಗುರುಗಳ ಅನುಗ್ರಹದಿಂದಲೇ ಮೂಡಿಬಂದಿದೆ ಎನ್ನುವುದು ಅವರ ಅಚಲ ನಂಬಿಕೆ. ಕಲ್ಲಡ್ಕದಲ್ಲಿ ಇಂದು ಅವರು ವಾಸಿಸುತ್ತಿರುವ ನಿವಾಸ ‘ಶಿವಾನುಗ್ರಹ’ ನಿರ್ಮಾಣವಾಗಲು ಶ್ರೀಗುರುಗಳ ದಿವ್ಯ ಆಶೀರ್ವಾದವೇ ಕಾರಣ ಎಂದು ಅವರು ಭಕ್ತಿಪೂರ್ವಕವಾಗಿ ಸ್ಮರಿಸುತ್ತಾರೆ.
ಬಾಲ್ಯದಲ್ಲಿ ತವರುಮನೆಯಲ್ಲಿ ಹತ್ತಾರು ಹಸುಗಳ ಒಡನಾಟದಲ್ಲಿ ಬೆಳೆದ ಗೌರಿ ಅವರಿಗೆ ಗೋವುಗಳೆಂದರೆ ತುಂಬಾ ಮಮತೆ. ತಮ್ಮ ಗೋಪ್ರೀತಿಗೆ ಸರಿಯಾಗಿ ಗೋಮಾತೆಯ ಸೇವೆಯ ಅವಕಾಶ ದೊರಕಿದ್ದು ಶ್ರೀಮಠದ ಮಾತೃತ್ವಮ್ ಯೋಜನೆಯ ಮೂಲಕ ಎಂಬುದು ಅವರ ನಂಬಿಕೆ.
ಬಾನ್ಕುಳಿ ಮಠದಲ್ಲಿ ನಡೆದ ಶ್ರೀಗುರುಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದ ಪತಿ ರಾಮ ಭಟ್ ಅವರು, ಶ್ರೀಮಠದ ‘ಮಾತೃತ್ವಮ್’ ಯೋಜನೆಯ ಮಹತ್ವವನ್ನು ಪತ್ನಿಗೆ ವಿವರಿಸಿ,
“ನೀನೂ ಒಬ್ಬ ಮಾಸದ ಮಾತೆಯಾಗಿ ಈ ಗೋಸೇವೆಯಲ್ಲಿ ನಿರತಳಾಗು. ನಾವಿಬ್ಬರೂ ಸೇರಿ ಈ ಸೇವೆಯನ್ನು ಮುಂದುವರಿಸೋಣ” ಎಂದು ಪ್ರೋತ್ಸಾಹಿಸಿದರು. ಪತಿಯ ಈ ಮಾತನ್ನು ಸ್ವೀಕರಿಸಿದ ಗೌರಿ ಅವರು, ಅಂದಿನಿಂದ ಗೋಸೇವೆಯನ್ನು ತಮ್ಮ ಜೀವನದ ಭಾಗವನ್ನಾಗಿಸಿಕೊಂಡಿದ್ದಾರೆ.
ಗೌರಿಯವರ ಗೋಸೇವೆ ಅವರ ನಿರಂತರ ಪರಿಶ್ರಮದ ಫಲ. ತಾವು ಮನೆಯಲ್ಲಿ ಸ್ವತಃ ಹಪ್ಪಳ ತಯಾರಿಸಿ, ಅದನ್ನು ವಿಕ್ರಯಿಸಿ, ಅದರಿಂದ ಬಂದ ಮೊತ್ತವನ್ನು ಗೋಸೇವೆಯ ಪವಿತ್ರ ಕಾರ್ಯಕ್ಕೆ ಮೀಸಲಿಡುತ್ತಾರೆ. ಇವರ ಈ ಶ್ರದ್ಧೆಗೆ ಪತಿ ರಾಮ ಭಟ್ ಅವರ ಬೆಂಬಲವೂ ಅಷ್ಟೇ ದೊಡ್ಡದಿದೆ. ಸ್ವತಃ ರಾಮ ಭಟ್ ಅವರು ೫೦ ಸಾವಿರಕ್ಕೂ ಅಧಿಕ ಮೊತ್ತವನ್ನು ಗೋಸೇವೆಗಾಗಿ ಸಮರ್ಪಿಸಿದ್ದಾರೆ.
ಈ ದಂಪತಿಗಳ ಸಂಘಟಿತ ಪ್ರಯತ್ನದ ಫಲವಾಗಿ, ಮಾತೃತ್ವಮ್ ಯೋಜನೆಗೆ ಸೇರಿದ ಕೇವಲ ಒಂದು ವರ್ಷದ ಅವಧಿಯಲ್ಲಿಯೇ ಗೌರಿ ಅವರು ‘ಲಕ್ಷ ಬಾಗಿನಿ’ಯಾಗಿ ಶ್ರೀಗುರುಗಳಿಂದ ಬಾಗಿನ ಸ್ವೀಕರಿಸುವ ಸೌಭಾಗ್ಯ ಪಡೆದರು.
” ಶ್ರೀಗುರುಗಳಿಂದ ಬಾಗಿನ ಸ್ವೀಕರಿಸಿದ ಆ ಕ್ಷಣ ನನ್ನ ಜನ್ಮ ಸಾರ್ಥಕವಾಯಿತು” ಎಂದು ಅವರು ಭಾವುಕರಾಗಿ ನುಡಿಯುತ್ತಾರೆ ಗೌರಿ ರಾಮ ಭಟ್.
ಬದುಕಿನಲ್ಲಿ ಎದುರಾದ ಆರೋಗ್ಯದ ಸಂಕಷ್ಟಗಳ ಸಮಯದಲ್ಲಿ ಶ್ರೀಗುರುಗಳ ಮಂತ್ರಾಕ್ಷತೆಯೇ ಇವರಿಗೆ ಸಂಜೀವಿನಿಯಾಗಿದೆ.
ಒಮ್ಮೆ ಪತಿ ರಾಮ ಭಟ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ, ವೈದ್ಯಕೀಯ ಚಿಕಿತ್ಸೆಗಳ ಮಿತಿಯ ನಡುವೆಯೂ ಶ್ರೀಗುರುಗಳ ಮಂತ್ರಾಕ್ಷತೆಯ ಪ್ರಭಾವದಿಂದಲೇ ಅವರು ಗುಣಮುಖರಾದರು ಎಂಬುದು ಇವರ ಅನುಭವಜನ್ಯ ಸತ್ಯ. ಅಷ್ಟೇ ಅಲ್ಲದೆ, ಸ್ವತಃ ಗೌರಿ ಅವರು ಕೂಡ ಎರಡು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿ ಜೀವನದ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದರು. ಆ ಸಂದರ್ಭದಲ್ಲಿಯೂ ಅವರು ನಂಬಿದ್ದು ಶ್ರೀ ಗುರು ಚರಣಗಳನ್ನು.
‘ ಶ್ರೀಗುರುಗಳ ಅನುಗ್ರಹ ಮತ್ತು ಮಂತ್ರಾಕ್ಷತೆಯ ಬಲದಿಂದಲೇ ಪವಾಡ ಸದೃಶವಾಗಿ ತಾನು ಮರುಜೀವ ಪಡೆದಿದ್ದೇನೆ ‘ ಎಂದು ಅವರು ಅತ್ಯಂತ ಭಾವುಕರಾಗಿ ಆ ಘಟನೆಯನ್ನು ಸ್ಮರಿಸಿಕೊಳ್ಳುತ್ತಾರೆ.
“ನಮ್ಮ ಆಯುಸ್ಸು ಮತ್ತು ಆರೋಗ್ಯವನ್ನು ಕಾಪಾಡಿದವರು ಶ್ರೀಗುರುಗಳು, ಹಾಗಾಗಿ ನಮ್ಮ ಈ ಬದುಕು ಸಂಪೂರ್ಣವಾಗಿ ಅವರ ಸೇವೆಗೆ ಮೀಸಲು” ಎನ್ನುತ್ತಾರೆ ಇವರು.
ಮಾಣಿ ಮಠಕ್ಕೆ ಶ್ರೀಗುರುಗಳು ಬಂದಾಗಲೆಲ್ಲಾ ಗೌರಿ-ರಾಮ ಭಟ್ ದಂಪತಿಗಳು ತಮ್ಮೆಲ್ಲ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಶ್ರೀಮಠದಿಂದ ಬಂದ ಪ್ರತಿಯೊಂದು ಆದೇಶವನ್ನು ಪಾಲಿಸುವುದು ಮತ್ತು ಗುರುಗಳು ನೀಡಿದ ಸ್ತೋತ್ರಗಳನ್ನು ನಿಷ್ಠೆಯಿಂದ ಪಠಿಸುವುದೇ ಇವರ ಜೀವನದ ಗುರಿ.
ಪ್ರತಿ ವರ್ಷ ಚಾತುರ್ಮಾಸ್ಯದ ಸಮಯದಲ್ಲಿ ಶ್ರೀಗುರುಗಳ ದರ್ಶನ ಪಡೆದು ಮಂತ್ರಾಕ್ಷತೆ ಪಡೆಯುವುದನ್ನು ಇವರು ಎಂದೂ ತಪ್ಪಿಸಿಲ್ಲ. ಕೃಷಿ ಚಟುವಟಿಕೆಗಳನ್ನು ಪ್ರೀತಿಸುವ ಇವರು, ಕಲ್ಲಡ್ಕದ ತಮ್ಮ ಮನೆಯಲ್ಲಿ ಗುರುಸ್ಮರಣೆಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಇವರ ಇಬ್ಬರು ಮಕ್ಕಳೂ ಕೂಡ ಶ್ರೀಮಠದ ಸೇವೆಯಲ್ಲಿ ಅಪಾರ ಶ್ರದ್ಧೆ ಹೊಂದಿದ್ದಾರೆ.
“ನಮಗೆ ಆರೋಗ್ಯ ಮತ್ತು ನೆಮ್ಮದಿಯಿದ್ದರೆ ಸಾಕು, ಆ ಶಕ್ತಿಯಿಂದ ನಾವು ನಿರಂತರವಾಗಿ ಶ್ರೀಗುರುಗಳ ಮತ್ತು ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು” ಎಂಬುದು ಇವರ ಪ್ರಾಮಾಣಿಕ ಅಭಿಲಾಷೆ.
ಗೌರಿ ರಾಮ ಭಟ್ ಅವರ ಈ ಮೌನ ಸೇವೆ ಒಂದು ದಿವ್ಯ ಯಜ್ಞದಂತೆ ಸಾಗುತ್ತಿದೆ. ‘ಗುರುಗಳನ್ನು ನಂಬಿದರೆ ಬದುಕಿನಲ್ಲಿ ಯಾವುದೇ ತೊಂದರೆ ಬರಲಾರದು. ಹಾಗಾಗಿ ನಾವು ಜೀವನದುದ್ದಕ್ಕೂ ಗುರುಸೇವೆಯನ್ನು, ಗೋಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತೇವೆ ‘ ಎನ್ನುವ ಗೌರಿ ರಾಮ ಭಟ್ ಅವರ ಬದುಕು ಎಲ್ಲರಿಗೂ ದಾರಿದೀಪವಾಗಿದೆ.
ಪ್ರಸನ್ನಾ ವಿ. ಚೆಕ್ಕೆಮನೆ