” ಗುರುಗಳ ಮಾರ್ಗದರ್ಶನ ಹಾಗೂ ಗೋಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಬದುಕಿನಲ್ಲಿ ನೆಮ್ಮದಿ , ಶಾಂತಿ ಸಹಜವಾಗಿ ದೊರಕುತ್ತದೆ. ಸಾರ್ಥಕ ಬದುಕಿಗೆ ದಿವ್ಯಸಂಜೀವಿನಿ ಗುರುಸೇವೆ ” ಎನ್ನುವವರು ಹೊನ್ನಾವರ ಮಂಡಲ, ಭಟ್ಕಳ ವಲಯದ ಮುರುಡೇಶ್ವರದ ‘ ಕಲ್ಪತರು ‘ ನಿವಾಸಿಗಳಾಗಿರುವ ಪ್ರಕಾಶ್ ಆರ್. ಭಟ್ ಅವರ ಪತ್ನಿ ಜ್ಯೋತಿ ಪ್ರಕಾಶ್ ಭಟ್.
ಕುಂದಾಪುರದ ಚಂದ್ರಶೇಖರ ಉಡುಪ, ಸುಶೀಲಾ ದಂಪತಿಗಳ ಪುತ್ರಿಯಾದ ಇವರು ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವರು.
‘ ಗೋಮಾತೆಯ ಒಡನಾಟ ಮನಸ್ಸಿಗೆ ತುಂಬಾ ನೆಮ್ಮದಿಯನ್ನು ನೀಡುತ್ತದೆ. ಆದರೆ ಇಂದಿನ ಬದಲಾಗುತ್ತಿರುವ ಜೀವನಪಥದಲ್ಲಿ ನಗರಗಳಲ್ಲಿ ಹಸುಗಳನ್ನು ಸಾಕಲು ಸಾಧ್ಯವಿಲ್ಲ. ಆದರೂ ಗೋಸೇವೆಯನ್ನು ಮುಂದುವರಿಸಲು ಶ್ರೀಗುರುಗಳ ಮಹತ್ವಪೂರ್ಣವಾದ ಯೋಜನೆ ಮಾತೃತ್ವಮ್ ತುಂಬಾ ಸಹಕಾರಿಯಾಗಿದೆ. ಮಾತೃತ್ವಮ್ ಯೋಜನೆಯ ಬಗ್ಗೆ ತಿಳಿದಾಗ ಸ್ವಯಂ ಪ್ರೇರಣೆಯಿಂದ ಮಾಸದ ಮಾತೆಯಾದೆ. ಈ ಬಗ್ಗೆ ಸಮಾಜದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಅನೇಕ ಮಂದಿ ಗೋಸೇವೆಗೆ ಕೈ ಜೋಡಿಸಿದ್ದಾರೆ ” ಎನ್ನುವ ಜ್ಯೋತಿ ಪಿ. ಭಟ್ ಅವರು ಈಗಾಗಲೇ ಎರಡು ಹಸುಗಳ ಗುರಿಯನ್ನು ತಲುಪಿ, ಲಕ್ಷಬಾಗಿನಿಯಾಗಿ ಬಾಗಿನ ಸ್ವೀಕರಿಸಿ, ಗೋಸೇವೆಯನ್ನು ಈಗಲೂ ಮುಂದುವರಿಸುತ್ತಿದ್ದಾರೆ.
ಇವರ ಗೋಮಾತೆಯ ಸೇವೆಯ ಪುಣ್ಯಕಾರ್ಯಕ್ಕೆ ಪತಿ ಪ್ರಕಾಶ್ ಆರ್ ಭಟ್ ಅವರ ಸಂಪೂರ್ಣ ಬೆಂಬಲವಿದೆ. ಅಧ್ಯಾಪಕರಾಗಿರುವ ಪ್ರಕಾಶ್ ಭಟ್ ಭಟ್ಕಳ ವಲಯ ಲೇಖ ವಿಭಾಗದ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಇಬ್ಬರು ಮಕ್ಕಳು ಸಹಾ ಗೋಸೇವೆಯ ಬಗ್ಗೆ ಶ್ರದ್ಧಾಭಾವ ಹೊಂದಿದ್ದು ಶ್ರೀಮಠದ ಸಂಸ್ಕಾರಗಳನ್ನು ರೂಢಿಸಿಕೊಂಡಿದ್ದಾರೆ.
” ಶ್ರೀಮಠದ ಸೇವೆಯನ್ನು ಕೇವಲ ಕರ್ತವ್ಯವಾಗಿ ಕಾಣುವ ಬದಲು ನಮ್ಮ ಬದುಕಿನ ಒಂದು ಭಾಗವಾಗಿ ಭಾವಿಸಬೇಕು. ನನ್ನ ಎಲ್ಲಾ ಕಾರ್ಯಗಳಿಗೂ ಮನೆಯವರ ಸಂಪೂರ್ಣ ಸಹಕಾರವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರದ್ಧೆ, ಸಮರ್ಪಣಾ ಭಾವದಿಂದ ಸೇವೆ ಮುಂದುವರಿಸುವ ಇಚ್ಛೆಯಿದೆ ” ಎನ್ನುವ ಇವರಿಗೆ ಬದುಕಿನ ನೆಮ್ಮದಿಯ ಆಶಾಕಿರಣ ಗುರುಸೇವೆಯಿಂದ ದೊರಕುತ್ತದೆ ಎಂಬ ಭರವಸೆಯಿದೆ.
ಪ್ರಸನ್ನಾ ವಿ. ಚೆಕ್ಕೆಮನೆ