ಒಂದು ಕುಟುಂಬದ ಸದಸ್ಯರೆಲ್ಲರೂ ಸಂಪೂರ್ಣವಾಗಿ ಶ್ರೀಮಠದ ಸೇವೆಯಲ್ಲಿ ನಿರತರಾದಾಗ ಆ ಮನೆಯಲ್ಲಿ ಒಂದು ಸುಸಂಸ್ಕೃತ ವಾತಾವರಣ ನಿರ್ಮಾಣವಾಗುತ್ತದೆ. ಇಂತಹ ಸೇವಾ ಪರಂಪರೆಯ ಕೇಂದ್ರ ಬಿಂದು ಯಾವಾಗಲೂ ಮನೆಯ ಗೃಹಲಕ್ಷ್ಮಿಯೇ ಆಗಿರುತ್ತಾಳೆ.
ಶ್ರೀರಾಮಚಂದ್ರಾಪುರಮಠದ ಶಾಸನತಂತ್ರದ ಅಧ್ಯಕ್ಷರಾಗಿರುವ ಮೋಹನ ಭಾಸ್ಕರ ಹೆಗಡೆ ಅವರ ಪತ್ನಿಯಾಗಿರುವ ಉಷಾ ಹೆಗಡೆಯವರು ಈ ಸಾಲಿಗೆ ಸೇರುವ ಮಾಸದ ಮಾತೆಯರಲ್ಲೊಬ್ಬರು.
ಬೆಂಗಳೂರು ದಕ್ಷಿಣ ಮಂಡಲ ಗಿರಿನಗರ ವಲಯದ ಶ್ರೀನಿವಾಸನಗರದಲ್ಲಿರುವ ಉಷಾ ಹೆಗಡೆಯವರು ಹೊಸನಗರದ ಸಮೀಪದ ವಡ್ಡಿನಬೈಲಿನ ಗೋಪಾಲಕೃಷ್ಣ ಎಚ್. ಮತ್ತು ಕುಸುಮಾಕ್ಷಿ ದಂಪತಿಗಳ ಪುತ್ರಿ. ಇವರಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಮತ್ತು ಗೋಸೇವೆಯ ಮಹತ್ವದ ಅರಿವಿದೆ.
ತಂದೆ ಗೋಪಾಲಕೃಷ್ಣ ಅವರು ಪ್ರಸಿದ್ಧ ನಾಟಿ ವೈದ್ಯರಾಗಿದ್ದು ಗೋವುಗಳಿಗೂ ಚಿಕಿತ್ಸೆ ನೀಡುತ್ತಿದ್ದರು. ಗೋವುಗಳಿಗೆ ಕಾಡುವ ವಿವಿಧ ರೋಗಗಳಿಗೆ ಗಿಡಮೂಲಿಕೆಗಳ ಔಷಧಿಯನ್ನು ತಯಾರಿಸಿ ನೀಡುತ್ತಾ, ಅವುಗಳ ನೋವನ್ನು ನಿವಾರಿಸುತ್ತಿದ್ದ ತಂದೆಯ ಸೇವೆಯನ್ನು ಹತ್ತಿರದಿಂದ ಕಂಡ ಉಷಾ ಹೆಗಡೆಯವರಿಗೆ ಬಾಲ್ಯದಿಂದಲೇ ಗೋಮಾತೆಯ ಮೇಲೆ ಹೆಚ್ಚು ಮಮತೆ.
ಮೂಲತಃ ಕುಮಟಾ ಹೆರವಟ್ಟಾದವರಾದ ಮೋಹನ ಭಾಸ್ಕರ ಹೆಗಡೆಯವರನ್ನು ವಿವಾಹವಾದ ನಂತರ ಉಷಾ ಹೆಗಡೆಯವರಿಗೆ ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು. ಪತಿ ಶ್ರೀಮಠದ ಹೊಣೆಗಾರಿಕೆಯನ್ನು ಹೊತ್ತಿರುವಾಗ, ಅವರಿಗೆ ಸದಾ ಬೆನ್ನೆಲುಬಾಗಿ ನಿಂತು, ಮನೆಯ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ ಸೇವೆಯ ಹಾದಿಯಲ್ಲಿಯೂ ಮುಂಚೂಣಿಯಲ್ಲಿ ನಿಂತಿದ್ದಾರೆ.
‘ಸಾವಿರದ ಸುರಭಿ’ ಯೋಜನೆಯ ಮೂಲಕ ಗೋಮಾತೆಯ ಸೇವೆಗೆ ಕೈಜೋಡಿಸಿದ ಇವರು, ಪ್ರಸ್ತುತ ‘ಮಾತೃತ್ವಮ್’ ಯೋಜನೆಯ ಮೂಲಕ ಗೋಸೇವೆಯ ಪವಿತ್ರ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.
” ಶ್ರೀಮಠದ ಸೇವೆ ಮತ್ತು ಗೋಸೇವೆ ಈಗ ನಮ್ಮ ಬದುಕಿನ ಉಸಿರಾಗಿಬಿಟ್ಟಿದೆ. ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳ ಪರಿಹಾರಗಳಿಗೆ ಶ್ರೀಗುರುಗಳೇ ದಾರಿದೀಪ. ಮಗನ ಸಾಹಿತ್ಯ ಕ್ಷೇತ್ರದ ಸಾಧನೆಗಳಿಗೆ ಶ್ರೀಗುರುಗಳ ಅನುಗ್ರಹವೇ ಕಾರಣ ” ಎಂಬುದು ಉಷಾ ಹೆಗಡೆ ಅವರ ಮನದಾಳದ ಮಾತು.
ಇವರ ಪುತ್ರ ಪ್ರಮೋದ್ ಮೋಹನ ಹೆಗಡೆಯವರು ಮಹಾಮಂಡಲ ಶಿಷ್ಯ ಮಾಧ್ಯಮ ಪ್ರಧಾನರಾಗಿ ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದಾರೆ. ಪತಿ ಮತ್ತು ಪುತ್ರ ಇಬ್ಬರೂ ಮಹಾಮಂಡಲದ ವ್ಯಾಪ್ತಿಯಲ್ಲಿ ಶ್ರೀಮಠದ ಕಾರ್ಯಗಳಲ್ಲಿ ಮಗ್ನರಾದಾಗ, ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಾ, ತಾವು ಸಹಾ ಅವರ ಜೊತೆಗೂಡಿ ಶ್ರೀಮಠದ ಸೇವೆ, ಗೋಮಾತೆಯ ಸೇವೆಗಳಲ್ಲಿ ನಿರತರಾಗಿ ಸಾರ್ಥಕತೆಯನ್ನು ಪಡೆಯುತ್ತಿದ್ದಾರೆ.
” ಮಕ್ಕಳಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕವನ್ನು ಕಲ್ಪಿಸಿಕೊಡಬೇಕು ಮತ್ತು ಗೋಮಾತೆಯ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು. ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳು ದೊರಕಬೇಕೆಂದರೆ ಅವರನ್ನು ಶ್ರೀಮಠಕ್ಕೆ ಆಗಾಗ ಕರೆತರುತ್ತಿರಬೇಕು. ಅವರಿಗೆ ಶ್ರೀಮಠದ ಸಂಪರ್ಕ ಹೆಚ್ಚು ದೊರಕುವಂತೆ ಮಾಡಬೇಕು” ಎನ್ನುವುದು ಉಷಾ ಹೆಗಡೆಯವರ ಅನಿಸಿಕೆ.
ತಮ್ಮ ಎಲ್ಲಾ ಕೆಲಸ ಕಾರ್ಯಗಳನಡುವೆಯೂ ಕರಕುಶಲ ಕಲೆಗಳಲ್ಲಿ ಆಸಕ್ತಿ ಹೊಂದಿರುವ ಇವರು, ತಮ್ಮ ಹವ್ಯಾಸಗಳನ್ನು ಈಗಲೂ ಮುಂದುವರಿಸುತ್ತಿದ್ದಾರೆ..
ಪ್ರಸನ್ನಾ ವಿ. ಚೆಕ್ಕೆಮನೆ