ಮಂಗಳೂರು: ಹಲಸಿನ ಹಣ್ಣಿನ ಪಾಯಸ, ಬೆರಟಿ ಪಾಯಸ, ಹಲಸಿನ ಬೀಜ ಪಾಯಸ, ಹಲಸಿನ ಹಣ್ಣಿನ ದೋಸೆ.. ನಿಜ ಹೇಳಿ, ಇದನ್ನು ಓದಿ ನಿಮ್ಮ ಬಾಯಲ್ಲಿ ನೀರೂರುತ್ತಿದೆಯಲ್ಲವೇ?!

ಇವು ಕೇವಲ ಕೆಲವು ಹೆಸರುಗಳಷ್ಟೇ. ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ನಡೆದ ಆಹಾರೋತ್ಸವದಲ್ಲಿ ಜನರು ಸವಿದ ಹಲವಾರು ಖಾದ್ಯಗಳಲ್ಲಿ ಇವು ಕೆಲವು ಅಷ್ಟೇ. ಇನ್ನೂ ಅನೇಕ ಪಾರಂಪರಿಕ ಆಹಾರಗಳನ್ನು ತಯಾರಿಸಿ ೧೫ ಸಾವಿರಕ್ಕೂ ಅಧಿಕ ಜನರಿಗೆ ಸಂತೃಪ್ತಿ ಉಂಟುಮಾಡಿದ, ಪಾರಂಪರಿಕ ಖಾದ್ಯಗಳ ಬಗ್ಗೆ ಜಾಗೃತಿ ಉಂಟುಮಾಡಿದ ‘ಹಲಸು ಮೇಳ – ಆಹಾರೋತ್ಸವ’ ಅಧಿಕ ಜ್ಯೇಷ್ಠ ಕೃಷ್ಣ ಷಷ್ಠಿ-ಸಪ್ತಮಿಗಳಂದು (06-06-2026, 07-06-2026) ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಉದ್ಘಾಟಿಸಿದರು. ‘ಹಲಸು ಮೌಲ್ಯವರ್ಧನೆ, ಸೇವೆಯ ಸಾಕ್ಷಾತ್ಕಾರ ಈ ಹಲಸು ಮೇಳದಲ್ಲಿ ಕಾಣಬಹುದಾಗಿದೆ. ಹಲಸಿನ ಬಿಸಿ ಬಿಸಿಯಾದ ಅತ್ಯುತ್ತಮ ಆಹಾರ ತಯಾರಿಸಿ, ಗ್ರಾಹಕರಿಗೆ ನೀಡುವುದರ ಜತೆಗೆ ಮಾವು, ತರಕಾರಿ ಇತ್ಯಾದಿಗಳನ್ನು ಒದಗಿಸುವುದು ಕೃಷಿಕರಿಗೆ ಪ್ರಯೋಜನಕಾರಿಯಾಗಿದೆ’ ಎಂದು ತಿಳಿಸಿದರು.
ಒಡಿಯೂರುಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಎ. ಸುರೇಶ್ ರೈ ಅವರು ವಿವಿಧಿ ತಿಂಡಿಗಳ ಕೌಂಟರ್ ಉದ್ಘಾಟಿಸಿ ಮಾತನಾಡಿ ‘ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ, ಕೃಷಿಕರು ಬೆಳೆಸುವ, ಬಳಸುವ ಆಹಾರ ವಸ್ತುಗಳನ್ನು ನಗರದ ಜನತೆಗೆ ತಲುಪಿಸುವ ಮತ್ತು ಸಂಘಟನೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಪ್ರತಿವರ್ಷ ಏರ್ಪಡಿಸುವ ಹಲಸು ಮೇಳ – ಆಹಾರೋತ್ಸವ ಮಾದರಿಯಾಗಿದೆ. ಇಲ್ಲಿ ಮಾತೆಯರು, ಮಹನೀಯರು ಸೇವಾ ರೂಪದಲ್ಲಿ ತಯಾರಿಸಿದ ಅತ್ಯುತ್ತಮ ಆಹಾರವನ್ನು ಆರೋಗ್ಯಪೂರ್ಣ ಜೀವನಕ್ಕಾಗಿ ಸೇವಿಸಬಹುದಾಗಿದೆ. ಇಂತಹ ಸೇವಾ ಮನೋಭಾವ ಅಪರೂಪದಲ್ಲಿ ಅಪರೂಪ’ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಮಹಾನಗರಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಶಕೀಲಾ ಕಾವ ಅವರು ಮಾತನಾಡಿ ‘ಸಂಸ್ಥೆಯ ಚಟುವಟಿಕೆಗಳೆಲ್ಲವೂ ವಿದ್ಯಾರ್ಥಿಗಳ ಮತ್ತು ಸಮಾಜಕ್ಕಾಗಿ ಸಮರ್ಪಿತವಾಗಿದೆ. ಇಲ್ಲಿ ಅಂಗಳಕ್ಕೆ ಇಂಟರ್ ಲಾಕ್ ಹಾಕಿಸಿಕೊಡಲು ಪ್ರಯತ್ನಿಸುತ್ತೇನೆ’ ಎಂದರು.
ಶಾಲೆಯ ಹಾಗೂ ಹವ್ಯಕ ಮಹಾಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಏನೇನಿತ್ತು?
ಹಲಸಿನ ಹಣ್ಣಿನ ಪಾಯಸ, ಬೆರಟಿ ಪಾಯಸ, ಹಲಸಿನ ಬೀಜ ಪಾಯಸ, ಹಲಸಿನ ಕಾಯಿ ದೋಸೆ/ಶುಂಠಿ ಚಟ್ನಿ, ಸೊಳೆ ರೊಟ್ಟಿ, ಗುಜ್ಜೆ ಮಂಚೂರಿ, ಹಲಸಿನ ಬೀಜದ ಚಟ್ಟಂಬಡೆ, ಹಲಸಿನ ಕಾಯಿ ಸೋಂಟೆ, ಹಲಸಿನ ಕಾಯಿ ಬೋಂಡ, ಹಲಸಿನ ಕಾಯಿ ಹಪ್ಪಳ, ಬಾಳೆಹಣ್ಣಿನ ಹಲ್ವ, ಹಲಸಿನ ಹಣ್ಣಿನ ಹಲ್ವ, ಹಲಸಿನ ಬೀಜದ ಅದ್ದಿಹಿಟ್ಟು, ಮಾವಿನ ಹಣ್ಣಿನ ಮಾಂಬಳ, ಹಲಸಿನ ಹಣ್ಣಿನ ಸೊಳೆ, ಹಲಸಿನ ಕಾಯಿ ಸೊಳೆ, ಗುಜ್ಜೆ ಪಲಾವ್, ಹಲಸಿನ ಹಣ್ಣು ಕೊಟ್ಟಿಗೆ, ಹಲಸಿನ ಹಣ್ಣು ಗೆಣಸಲೆ, ಜಿಲೇಬಿ, ಹಲಸಿನ ಕಾಯಿ ಪೋಡಿ, ಹಲಸಿನಕಾಯಿ ಅಂಬೊಡೆ, ಹಲಸಿನ ಹಣ್ಣಿನ ಬನ್ಸ್, ಹಲಸಿನ ಹಣ್ಣಿನ ಗುಳಿಅಪ್ಪ, ಮುರುಕು, ಅತಿರಸ, ಸಕ್ಕರೆ ಬೆರಟಿ, ಮಾವಿನ ಹಣ್ಣಿನ ರಸಾಯನ, ಕಾಫಿ, ಟೀ, ಕಷಾಯ, ಮಾವಿನಹಣ್ಣಿನ ಜ್ಯೂಸ್, ಮಸಾಲೆ ಮಜ್ಜಿಗೆ, ಹೋಳಿಗೆ, ಹಲಸು ಖಾನಾವಳಿ, ಮಾವಿನಕಾಯಿ ತೊಕ್ಕು, ಬಾಳೆಕಾಯಿ ಚಿಪ್ಸ್, ವಿವಿಧ ಜಾತಿಯ ಮಾವು, ತರಕಾರಿ ಇತ್ಯಾದಿಗಳಿದ್ದವು.