|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ವೇಗಧಾರಣೆ | ‘ಅನ್ನಂ ಬ್ರಹ್ಮ’ ಪ್ರವಚನ – 7

ಅಶೋಕೆ: ‘ಅಕಾಲದಲ್ಲಿ ಹಸಿವಾದರೆ, ಯಾವಾಗಲೋ ನಿದ್ದೆ ಬಂದರೆ ದೇಹದ ಯಂತ್ರ ಕೆಟ್ಟಿದೆ ಎಂದರ್ಥ. ಆಗ ದೇಹದ ಯಂತ್ರವನ್ನು ಸರಿಪಡಿಸಿಕೊಳ್ಳಲು ಸಕಾಲ’ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.

‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಆಷಾಢ ಬಹುಳ ಷಷ್ಠಿಯಂದು (04-08-2026) ‘ಅನ್ನಂ ಬ್ರಹ್ಮ’ ಪ್ರವಚನ ನೀಡಿ,’ ಜೀವನ ಕ್ರಮವನ್ನು ಸರಿಪಡಿಸಿಕೊಳ್ಳುವುದರ ಮೂಲಕ ದೇಹದ ಯಂತ್ರವನ್ನು ಸರಿಪಡಿಸಿಕೊಳ್ಳಬೇಕು. ಶರೀರದ ಕ್ರಮದಲ್ಲಿ ಕೃತ್ರಿಮ ಹಸ್ತಕ್ಷೇಪ ಸಲ್ಲದು. ಕೃತ್ರಿಮವಾಗಿ ದೇಹವನ್ನು ಸರಿಪಡಿಸಲು ಹೊರಟಾಗ ಅದು ವಿರುದ್ಧ ಪರಿಣಾಮವನ್ನು ಉಂಟುಮಾಡುತ್ತದೆ’ ಎಂದರು.

‘ಮಲಮೂತ್ರಾದಿ ಶರೀರದ ವೇಗಗಳನ್ನು ತಡೆಹಿಡಯಬಾರದು. ತಡೆಹಿದರೆ ಅದು ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ಧಾರ್ಮಿಕವಾಗಿಯೂ ಮಲಮೂತ್ರಾದಿಗಳನ್ನು ತಡೆಹಿಡಿದು ಪೂಜೆ-ಪಾರಾಯಣಗಳನ್ನು ಮಾಡುವುದೂ ದೋಷವೇ ಆಗಿದೆ. ಆದರೆ ಮನಸ್ಸಿನ ವೇಗಗಳನ್ನು ತಡೆಹಿಡಿಯಬೇಕು. ದುರಾಸೆ, ದ್ವೇಷ, ಸಿಟ್ಟು, ದುರಭಿಮಾನ, ಲಜ್ಜೆ ಮುಂತಾದ ಮನೋವೇಗಗಳನ್ನು ಪ್ರಯತ್ನಪಟ್ಟು ತಡೆಹಿಡಿಯಬೇಕು. ಅದು ಜೀವಕ್ಕೆ ಹಿತ’ ಎಂದು ಅರಿವನ್ನಿತ್ತರು.

‘ಆಧುನಿಕ ವಿಜ್ಞಾನವೂ ಕೂಡ ನಿದ್ದೆಯ ಹೆಚ್ಚಳ ಹಾಗೂ ನಿದ್ರಾಹೀನತೆಯಿಂದ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಹೇಳುತ್ತವೆ. ಇದರಿಂದ ಜೀವಿತಾವಧಿಯ ಮೇಲು ಇದು ಪ್ರಭಾವಬೀರುತ್ತದೆ. ಹಾಗೆಯೇ ಆಯುರ್ವೇದವೂ ಕೂಡ ಹೆಚ್ಚಿನ ನಿದ್ದೆಯಿಂದ ಆಯಸ್ಸು ಕಡಿಮೆ ಹಾಗೂ ಜೀವನಕ್ಕೆ ಸುಖಲಿಲ್ಲ ಎಂದು ನಿರೂಪಿಸುತ್ತದೆ. ಸಮಪ್ರಮಾಣದ ನಿದ್ದೆ ಪರಮಾತ್ಮನ ದರ್ಶನಕ್ಕೆ ಹೆದ್ದಾರಿ ಎಂದೂ ಭಾರತೀಯ ಶಾಸ್ತ್ರಗಳು ಹೇಳಿವೆ’ ಎಂದರು.

ಹೃದಯ ಕಮಲ – ನಿದ್ದೆ
ಭಾರತೀಯ ಶಾಸ್ತ್ರಗಳಲ್ಲಿ ಹೇಳುವ ಹೃದಯ ಕಮಲಕ್ಕೂ ಹಾಗೂ ದೇಹದ ಅಂಗವಾದ ಹೃದಯಕ್ಕೂ ವ್ಯತ್ಯಾಸವಿದೆ. ಎದೆಗುಂಡಿಗೆಯ ಹಿಂಭಾಗದಲ್ಲಿ ತೇಜೋಮಯವಾಗಿರುವುದೇ ಹೃದಯ ಕಮಲವಾಗಿದ್ದು, ಇದಕ್ಕೆ ಅನಾಹತ ಚಕ್ರ ಎಂದು ಯೋಗದಲ್ಲಿ ಕರೆಯಲಾಗಿದೆ. ಯೋಗದ ಜ್ಞಾನದೃಷ್ಟಿಗೆ ಮಾತ್ರ ಇದು ಕಾಣುವಂತಹದ್ದಾಗಿದ್ದು, ಉಪಕರಣಗಳಿಂದ ಇದನ್ನು ನೋಡಲು ಸಾಧ್ಯವಿಲ್ಲ. ಈ ಹೃದಯ ಕಮಲವನ್ನು ತಮಸ್ಸು ಮುಸುಕಿದಾಗ ನಿದ್ದೆ ಬರುತ್ತದೆ. ಆಗ ಹೃದಯ ಕಮಲ ಮುದುಗುತ್ತದೆ. ನಾವು ಜಾಗೃತವಾಗಿದ್ದಾಗ ರಜೋಗುಣ ಕೆಲಸ ಮಾಡುತ್ತದೆ. ಆಗ ಹೃದಯ ಕಮಲ ಅರೆ ಬಿರಿದ ಸ್ಥಿತಿಯಲ್ಲಿರುತ್ತದೆ. ಸತ್ತ್ವಗುಣ ಕೆಲಸ ಮಾಡುವಾಗ ಜ್ಞಾನಿಗಳಿಗೆ ಹೃದಯ ಕಮಲ ಪೂರ್ಣ ಅರಳುತ್ತದೆ. ಈ ಸ್ಥಿತಿಯನ್ನು ಯೋಗಿಗಳು ಮಾತ್ರ ಅನುಭವಿಸಬಹುದು’ ಎಂದರು.

ನೀರು ಎಷ್ಟು ಕುಡಿಯಬೇಕು?
‘ಇಂದು ಗೂಗಲ್ ನೋಡಿ ದೇಹ ನೀರನ್ನು ಕೇಳದೇ ಇದ್ದರೂ ದಿನಕ್ಕಿಷ್ಟು, ಗಂಟೆಗಿಷ್ಟು ಎಂಬ ಲೆಕ್ಕದಲ್ಲಿ ನೀರನ್ನು ಹೆಚ್ಚೆಚ್ಚು ಕುಡಿಯುವ ಪ್ರವೃತ್ತಿ ಬೆಳೆಯುತ್ತಿದೆ. ಆದರೆ ದೇಹಕ್ಕೆ ಎಷ್ಟು ನೀರು ಬೇಕು ಎಂಬುದು ದೇಹಕ್ಕೇ ಗೊತ್ತು. ಅದು ದೇಹದಿಂದ ದೇಹಕ್ಕೆ ನೀರಿನ ಆವಶ್ಯಕತೆಯಂತೆ ವ್ಯತ್ಯಾಸವಾಗುತ್ತದೆ. ನೀರು ಅಗತ್ಯವಿದ್ದಾಗ ದೇಹವೇ ಬಾಯಾರಿಕೆಯ ಮೂಲಕ ಸೂಚನೆ ನೀಡುತ್ತದೆ. ಆಗಷ್ಟೇ ನೀರು ಕುಡಿಯಬೇಕು. ಅತಿಯಾದ ನೀರಿನ ಸೇವನೆಯೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ’ ಎಂದು ತಿಳಿಸಿದರು.

ರಾಮಚಂದ್ರಾಪುರ ಮಂಡಲದ ಭೀಮನಕೊಣೆ, ಕಾನುಗೋಡು, ಪುರಪ್ಪೇಮನೆ, ಶಿವಮೊಗ್ಗ, ತೀರ್ಥರಾಜಪುರ ವಲಯಗಳ ಪರವಾಗಿ ಕಿರಣ್ ದಂಪತಿಗಳು ಭಿಕ್ಷಾಸೇವೆ ಸಮರ್ಪಿಸಿದರು.
ವಿವಿವಿಯ ಆಡಳಿತಾಧಿಕಾರಿ ಪ್ರಸನ್ನಕುಮಾರ್ ಟಿ.ಜಿ, ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ್, ಲಕ್ಷ್ಮೀನಾರಾಯಣ ಕೆ.ಪಿ, ಸೀತಾರಾಮ ಇಕ್ಕೇರಿ, ರಮೇಶ ಕಾನುಗೋಡು, ದಿನ ಪ್ರಧಾನರಾಗಿ ಚಂದ್ರಶೇಖರ ಹೊಸಗದ್ದೆ ದಂಪತಿಗಳು ಉಪಸ್ಥಿತರಿದ್ದರು.